ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾದ ಮುಟ್ಟಿ ನಮಸ್ಕರಿಸಲಿಲ್ಲವೆಂದು 31 ವಿದ್ಯಾರ್ಥಿಗಳಿಗೆ ಮನಸೋಇಚ್ಛೆ ಬೆತ್ತದಿಂದ ಥಳಿಸಿದ ಶಿಕ್ಷಕಿ!

Viral News: ತನ್ನ ಪಾದ ಮುಟ್ಟಿ ನಮಸ್ಕರಿಸಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕಿಯೊಬ್ಬಳು 31 ವಿದ್ಯಾರ್ಥಿಗಳಿಗೆ ಬೆತ್ತದಿಂದ ಥಳಿಸಿ ಅಮಾನವೀಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಸದ್ಯ ಆಕೆಯನ್ನು ಅಮಾನತುಗೊಳಿಸಲಾಗಿದೆ. ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ಭುವನೇಶ್ವರ: ವಿದ್ಯೆ ಕಲಿಸುವ ಗುರು ದೇವರಿಗೆ ಸಮಾನ ಎನ್ನುವ ಮಾತಿದೆ. ಆದರೆ ಕೆಲವೊಮ್ಮೆ ಗುರುಗಳೇ ವಿದ್ಯಾರ್ಥಿಗಳ ಪಾಲಿಗೆ ವಿಲನ್‌ಗಳೂ ಆಗುತ್ತಾರೆ ಎನ್ನುವುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಶಿಕ್ಷಕಿಯೊಬ್ಬಳು ತನ್ನ ಪಾದ ಮುಟ್ಟಿ ನಮಸ್ಕರಿಸಿಲ್ಲ ಎನ್ನುವ ಕಾರಣಕ್ಕೆ 31 ವಿದ್ಯಾರ್ಥಿಗಳಿಗೆ ಬೆತ್ತದಿಂದ ಥಳಿಸಿ ಅಮಾನವೀಯವಾಗಿ ವರ್ತಿಸಿದ್ದಾಳೆ. ಸದ್ಯ ಆಕೆಯನ್ನು ಅಮಾನತುಗೊಳಿಸಲಾಗಿದೆ. ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯಲ್ಲಿ ನಡೆದ ಈ ಆಘಾತಕಾರಿ ಘಟನೆ (Viral News) ಸದ್ಯ ಇಂಟರ್‌ನೆಟ್‌ನಲ್ಲಿ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದೆ.

ಬೆಟ್ನೋಟಿ ಬ್ಲಾಕ್ ಪ್ರತಿಮದೀಪುರ ಕ್ಲಸ್ಟರ್ ವ್ಯಾಪ್ತಿಯ ಖಂಡದೇವುಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಪ್ರಾರ್ಥನೆಯ ಬಳಿಕ ತನ್ನ ಕಾಲು ಮುಟ್ಟಿ ನಮಸ್ಕರಿಸಿಲ್ಲ ಎನ್ನುವ ಸಿಟ್ಟಿನಿಂದ ಶಿಕ್ಷಕಿ ಈ ರೀತಿ ವರ್ತಿಸಿದ್ದಾಳೆ ಎಂದು ಮೂಲಗಳು ತಿಳಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ವಿದ್ಯಾರ್ಥಿಗಳೊಂದಿಗೆ ಕ್ರೂರವಾಗಿ ನಡೆದುಕೊಂಡ ಶಿಕ್ಷಕಿಯನ್ನು ಸುಕಂತಿ ಕರ್ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ವಿದ್ಯಾರ್ಥಿಗಳಿಗೆ ಚಿತ್ರಹಿಂಸೆ ನೀಡಿದ ಸರ್ಕಾರಿ ಶಾಲಾ ಶಿಕ್ಷಕ; ವಿಡಿಯೊ ವೈರಲ್ ಬೆನ್ನಲ್ಲೇ ಅಮಾನತು

ಘಟನೆಯ ವಿವರ

ಎಂದಿನಂತೆ ಶಾಲೆಯಲ್ಲಿ ಅಂದೂ ಬೆಳಗಿನ ಪ್ರಾರ್ಥನೆ ನಡೆಯಿತು. ಸುಕಂತಿ ಕರ್ ಆ ದಿನ ತಡವಾಗಿ ಶಾಲೆ ಆಗಮಿಸಿದ್ದಳು. 6,7 ಮತ್ತು 8ನೇ ತರಗತಿಗೆ ಪಾಠ ಮಾಡುತ್ತಿರುವಾಗ ಆಕೆ ವಿದ್ಯಾರ್ಥಿಗಳ ಬಳಿ ಪ್ರಾರ್ಥನೆ ಮಾಡುವಾಗ ಯಾಕೆ ತನ್ನ ಕಾಲಿಗೆ ಬೀಳಲಿಲ್ಲ ಎಂದು ಪ್ರಶ್ನಿಸಿದಳು. ನಂತರ ಬಿದಿರು ಕೋಲನ್ನು ತೆಗೆದುಕೊಂಡು ಕರುಣೆ ಇಲ್ಲದೆ ಸುಮಾರು 31 ವಿದ್ಯಾರ್ಥಿಗಳಿಗೆ ಥಳಿಸಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ ಕೆಲವರಿಗೆ ತುಸು ಹೆಚ್ಚೇ ಗಾಯವಾಗಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕಿ ವಿರುದ್ದ ಕಠಿಣ ಕ್ರಮ ಕೈಗೊ‍ಳ್ಳುವಂತೆ ಆಗ್ರಹಿಸಿದರು. ಇನ್ನು ಮುಖ್ಯ ಶಿಕ್ಷಕ ಈ ವಿಚಾರವನ್ನು ತಕ್ಷಣ ಬೆಟ್ನೋಟಿ ಬಿಇಒ ಬಿಪ್ಲಬ್‌ ಕರ್‌ ಮತ್ತು ಕ್ಲಸ್ಟರ್‌ ಕೋಆರ್ಡಿನೇಟರ್‌ ದೇಬಸಿಶ್‌ ಸಾಹು ಗಮನಕ್ಕೆ ತಂದಿದ್ದು, ಅವರು ಶಾಲೆಗೆ ಧಾವಿಸಿ ತನಿಖೆ ನಡೆಸುವಂತೆ ಸೂಚಿಸಿದರು. ಅದಾದ ಬಳಿಕ ಶಿಕ್ಷಕಿಯನ್ನು ಅಮಾನತುಗೊಳಿಸಲಾಯಿತು.

ಸದ್ಯ ಈ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ʼʼಪಠ್ಯದ ಕಾರಣಕ್ಕೆ, ಹೋಮ್‌ ಮಾಡದಿದ್ದರೆ ಶಿಕ್ಷಕರು ನಮಗೆಲ್ಲ ಹೊಡೆಯುತ್ತಿದ್ದರು. ಆ ಕಾರಣಕ್ಕೆ ನಮ್ಮ ಮಕ್ಕಳಿಗೆ ಸಣ್ಣ ಪುಟ್ಟ ಶಿಕ್ಷೆ ಕೊಟ್ಟರೆ ಪರವಾಗಿಲ್ಲ. ಆದರೆ ಪಾದ ಮುಟ್ಟಿ ನಮಸ್ಕರಿಸಿಲ್ಲ ಎನ್ನುವ ಕಾರಣಕ್ಕೆ ಥಳಿಸಿರುವುದನ್ನು ಕ್ಷಮಿಸಲು ಸಾಧ್ಯವಿಲ್ಲʼʼ ಎಂದು ಪೋಷಕರು ಕಿಡಿ ಕಾರಿದ್ದಾರೆ.