Vishweshwar Bhat Column: ಲೇಪಿಸ್ ಲಜುಲಿ ಕಥೆ
ಕರಾಚಿಯಲ್ಲಿರುವ ದಂತವೈದ್ಯರ ಮೂಲಕ, ಬಹಳ ಪ್ರಯಾಸಪಟ್ಟು, ನುಸ್ರತ್ ಭುಟ್ಟೋರನ್ನು ಸಿಂಗ್ ಅಧಿಕೃತವಾಗಿ ಭೇಟಿ ಮಾಡಿದರಂತೆ. “ನುಸ್ರತ್ ಭುಟ್ಟೋ ಮನೆಯ ಜಗುಲಿಯನ್ನು ಪ್ರವೇಶಿಸು ತ್ತಿದ್ದಂತೆ, ‘ಲೇಪಿಸ್ ಲಜುಲಿ’ ಕಲ್ಲಿನಲ್ಲಿ ಕೊರೆದ ಫ್ರೇಮಿನಲ್ಲಿ ಪತಿ ಝುಲಿಕರ್-ಅಲಿ-ಭುಟ್ಟೋ ಅವರ ಭಾವಚಿತ್ರ ಥಟ್ಟನೆ ವಿಶೇಷವಾಗಿ ಆಕರ್ಷಿಸಿತು
Source : Vishwavani Daily News Paper
ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ದಿವಂಗತ ರಾಜತಾಂತ್ರಿಕ ಮತ್ತು ರಾಜಕಾರಣಿ ಕೆ.ನಟವರ ಸಿಂಗ್ ತಾವು ಬರೆದ Walking With Lions: Tales from a Diplomatic Past ಎಂಬ ಪುಸ್ತಕದ ಒಂದು ಅಧ್ಯಾಯವನ್ನು ಪಾಕಿಸ್ತಾನದ ದಿವಂಗತ ಪ್ರಧಾನಿ ಝುಲಿಕರ್-ಅಲಿ-ಭುಟ್ಟೋ ಅವರ ಪತ್ನಿ ನುಸ್ರತ್ ಭುಟ್ಟೋ ಅವರ ಭೇಟಿಗಾಗಿ ಮೀಸಲಿ ಟ್ಟಿದ್ದಾರೆ.
ಕರಾಚಿಯಲ್ಲಿರುವ ದಂತವೈದ್ಯರ ಮೂಲಕ, ಬಹಳ ಪ್ರಯಾಸಪಟ್ಟು, ನುಸ್ರತ್ ಭುಟ್ಟೋರನ್ನು ಸಿಂಗ್ ಅಧಿಕೃತವಾಗಿ ಭೇಟಿ ಮಾಡಿದರಂತೆ. “ನುಸ್ರತ್ ಭುಟ್ಟೋ ಮನೆಯ ಜಗುಲಿಯನ್ನು ಪ್ರವೇಶಿಸು ತ್ತಿದ್ದಂತೆ, ‘ಲೇಪಿಸ್ ಲಜುಲಿ’ ಕಲ್ಲಿನಲ್ಲಿ ಕೊರೆದ ಫ್ರೇಮಿನಲ್ಲಿ ಪತಿ ಝುಲಿಕರ್-ಅಲಿ-ಭುಟ್ಟೋ ಅವರ ಭಾವಚಿತ್ರ ಥಟ್ಟನೆ ವಿಶೇಷವಾಗಿ ಆಕರ್ಷಿಸಿತು. ಆ ಭಾವಚಿತ್ರ ಮತ್ತು ಅದರ ಫ್ರೇಮ್ನ ಮೇಲೆ ನೆಟ್ಟ ದೃಷ್ಟಿಯನ್ನು ಬೇರೆಡೆಗೆ ಹೊರಳಿಸಲು ಸಾಧ್ಯವಾಗಲಿಲ್ಲ. ಝುಲ್ಫಿಕರ್ -ಅಲಿ-ಭುಟ್ಟೋಗೆ ಅಪರೂಪದ ಅಭಿರುಚಿ ಇತ್ತು" ಎಂದು ನಟವರ ಸಿಂಗ್ ಬರೆಯುತ್ತಾರೆ.
ನನಗೆ ಈ ಸಾಲುಗಳನ್ನು ಓದುತ್ತಿದ್ದಂತೆ, ಆಕರ್ಷಿಸಿದ್ದು ಲೇಪಿಸ್ ಲಜುಲಿ (Lapis lazuli ) ಪದ. ರಷ್ಯಾದ ರಾಜಧಾನಿ ಮಾಸ್ಕೋದ ಕ್ರೆಮ್ಲಿನ್ನಲ್ಲಿರುವ ಅರಮನೆಯಲ್ಲಿ, ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿದ್ದರು. ಡಾ.ಕಲಾಂ ನಿಯೋಗ ದಲ್ಲಿ ನಾನೂ ಇದ್ದೆ.
ಭಾರತದ ರಾಷ್ಟ್ರಪತಿಯವರ ಗೌರವಾರ್ಥ ರಷ್ಯಾದ ಅಧ್ಯಕ್ಷರು ಔತಣಕೂಟ ಏರ್ಪಡಿಸಿದ್ದರು. ಇಬ್ಬರೂ ನಾಯಕರು ಔತಣಕೂಟಕ್ಕೆ ಆಗಮಿಸಿ ಆಸೀನರಾದರು. ಅವರ ಹಿಂದೆ ಲೆನಿನ್ ಅವರ ದೊಡ್ಡದಾದ ಭಾವಚಿತ್ರವಿತ್ತು. ಅದಕ್ಕೆ ಲೇಪಿಸ್ ಲಜುಲಿ ಕಲ್ಲಿನ ಫ್ರೇಮ್ ಅನ್ನು ತೊಡಿಸಲಾಗಿತ್ತು. ಸಹಜವಾಗಿ ಲೆನಿನ್ ಬಗ್ಗೆ ಗೊತ್ತಿದ್ದ ಡಾ.ಕಲಾಂ, ಆ ಫ್ರೇಮ್ ಬಗ್ಗೆ ಕೇಳಿದರು.
ಆಗ ಪುಟಿನ್ ಪಕ್ಕದಲ್ಲಿದ್ದ ಅಧಿಕಾರಿ ಲೇಪಿಸ್ ಲಜುಲಿ ಕಲ್ಲಿನ ಬಗ್ಗೆ ಡಾ.ಕಲಾಂ ಅವರಿಗೆ ವಿವರಿಸಿ ದರು. ಈ ಕಲ್ಲಿನ ಬಗ್ಗೆ ಖ್ಯಾತ ಪತ್ರಕರ್ತ ಮತ್ತು ಅಂಕಣಕಾರ ಸೈಮನ್ ಜಂಕಿ ಸಹ ತಮ್ಮ ಬರಹ ದಲ್ಲಿ ಪ್ರಸ್ತಾಪಿಸಿದ್ದರು. “ಬಕಿಂಗ್ ಹ್ಯಾಮ್ ಅರಮನೆಯ ಪಡಸಾಲೆಯಲ್ಲಿ ಎಲಿಜಬೆತ್ ರಾಣಿ ಗಂಭೀರವಾಗಿ ಆಸೀನರಾಗಿದ್ದರು. ಅವರ ಹಿಂದಿದ್ದ ಟೇಬಲ್ ಮೇಲಿಟ್ಟ ಲೇಪಿಸ್ ಲಜುಲಿ ಕಲ್ಲು ಅವರ ಗಾಂಭೀರ್ಯಕ್ಕೆ ಪುಟವಿಟ್ಟಂತಿತ್ತು" ಎಂದು ಜಂಕಿ ಬರೆದಿದ್ದರು.
ಲೇಪಿಸ್ ಲಜುಲಿ ಕಲ್ಲಿನ ಆಕರ್ಷಣೆಗೆ ಅದರ ಆಕರ್ಷಕ, ಕೋರೈಸುವ ಬಣ್ಣವೇ ಕಾರಣ. ದಟ್ಟ ನೀಲಿ ಬಣ್ಣದ ಲೇಪಿಸ್ ಲಜುಲಿ ಭಾಗಶಃ ಸ್ಪರ್ಶಮಣಿ ( semi-precious ). ಇದು ಮೂಲತಃ ಆಳವಾದ ನೀಲಿ ಬಣ್ಣ ಮತ್ತು ಬಂಗಾರದ ಬಣ್ಣದ ಪೈರೈಟ್ ಸೇರ್ಪಡೆಗಳಿಂದ ಜನಪ್ರಿಯವಾಗಿದೆ. ಈ ಕಲ್ಲನ್ನು ಶತಮಾನಗಳ ಹಿಂದಿನಿಂದಲೂ ಅಲಂಕಾರ ಮತ್ತು ಆಭರಣಗಳಲ್ಲಿ ಬಳಸಲಾಗುತ್ತಿದೆ.
ಲೇಪಿಸ್ ಲಜುಲಿ ಸಾಮಾನ್ಯವಾಗಿ ಅಫ್ಘಾನಿಸ್ತಾನ, ಚಿಲಿ ಮತ್ತು ರಷ್ಯಾದಂಥ ದೇಶಗಳಲ್ಲಿ ಕಂಡು ಬರುತ್ತದೆ. ಈ ಕಲ್ಲಿನ ನಿಕ್ಷೇಪ ಮೊದಲು ಇಂಡಸ್ ಕಣಿವೆ ನಾಗರಿಕತೆಯ ಭೀರ್ರಾನದಲ್ಲಿ ಕಂಡು ಬಂದಿತೆಂದು ಹೇಳುತ್ತಾರೆ.
ಈ ಕಲ್ಲನ್ನು ಆಭರಣಗಳಲ್ಲಿ, ಮೂರ್ತಿಗಳನ್ನು ಮಾಡಲು ಮತ್ತು ಕಟ್ಟಡಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಪ್ರಾಚೀನ ಈಜಿಪ್ಟ್ ನಲ್ಲಿ ಇದನ್ನು ರಾಜರ ಸಮಾಧಿಗಳನ್ನು ಅಲಂಕರಿಸಲು ವ್ಯಾಪಕವಾಗಿ ಬಳಸಲಾಗುತ್ತಿತ್ತು. ವಿವಿಧ ಸಂಸ್ಕೃತಿಗಳಲ್ಲಿ ಲೇಪಿಸ್ ಲಜುಲಿಗೆ ವಿವಿಧ ಅರ್ಥಗಳನ್ನು ನೀಡಲಾಗಿದೆ. ಇದನ್ನು ಸತ್ಯ, ಜ್ಞಾನ ಮತ್ತು ಆಕಾಶದೊಂದಿಗೆ ಸಂಬಂಧಿಸಲಾಗಿದೆ.
ಹೀಗಾಗಿ ಗಣ್ಯರ ಮನೆಗಳಲ್ಲಿ ಇದಕ್ಕೆ ಅಲಂಕಾರಿಕ ಮಹತ್ವ ಪ್ರಾಪ್ತವಾಗಿದೆ. ಇದನ್ನು ಷೋಪೀಸ್ ಆಗಿಯೂ ಟೇಬಲ್ಲಿನ ಮೇಲೆ ಇಡುವುದುಂಟು. ಇದರ ಬೆಲೆಯನ್ನು ನಿಗದಿಪಡಿಸುವುದು ಕಷ್ಟ. ಬಹುತೇಕ ಸಂದರ್ಭಗಳಲ್ಲಿ ಹೇಳಿದ ಬೆಲೆಗೆ ಖರೀದಿಸುವುದುಂಟು. ಲೇಪಿಸ್ ಲಜುಲಿ ಗಟ್ಟಿಯಾದ ಕದರೂ ಅದರ ವೈಶಿಷ್ಟ್ಯವೆಂದರೆ ಕೆತ್ತನೆಗೆ ಸುಲಭ. ಇಂದಿನ ದಿನಗಳಲ್ಲಿ ಲೇಪಿಸ್ ಲಜುಲಿಗೆ ಭಾರಿ ಬೇಡಿಕೆ. ವಿವಿಧ ರೀತಿಯ ಆಭರಣಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಕಡಗ, ಕಿವಿಯೋಲೆ ಮತ್ತು ಗೊಂಚಲುಗಳಂಥ ಆಭರಣಗಳಲ್ಲಿ ಲೇಪಿಸ್ ಲಜುಲಿಯನ್ನು ಕಾಣಬಹುದು.
ಇದನ್ನೂ ಓದಿ: Vishweshwar Bhat Column: ಸೀತಾಪತಿ ಮನೋಭಾವದವರು