ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಬುದ್ಧ ಚಿಂತನೆಗಳನ್ನು ಪ್ರೋತ್ಸಾಹಿಸುವ ಸಹೃದಯಿ

ಒಂದು ಲಾರಿಯೊಂದಿಗೆ ಆರಂಭಗೊಂಡ ವಿಆರ್‌ಎಲ್ ಸಮೂಹ ಸಂಸ್ಥೆ ಇಂದು ದೇಶದ ಯಾವುದೇ ಮೂಲೆಯಲ್ಲಾದರೂ ಕಾಣಿಸುತ್ತದೆ. ಈ ಯಶಸ್ಸಿಗೆ ವಿಆರ್‌ಎಲ್ ಸಮೂಹ ಸಂಸ್ಥೆಯ ಅಧ್ಯಕ್ಷರು, ರಾಜ್ಯಸಭಾ ಮಾಜಿ ಸದಸ್ಯರಾದ ಡಾ.ವಿಜಯ್ ಸಂಕೇಶ್ವರ ಅವರ ದೂರದೃಷ್ಟಿ ಹಾಗೂ ಕ್ರಿಯಾಶೀಲ ವ್ಯಕ್ತಿತ್ವವೇ ಕಾರಣ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಂಕೇಶ್ವರ ಅವರು ತಮ್ಮ ಸಾಧನೆ, ಸಾಹಸ ಹಾಗೂ ಶ್ರಮದಿಂದ ದೇಶದ ಬಹುದೊಡ್ಡ ಲಾಜಿಸ್ಟಿಕ್ ಸಾಮ್ರಾಜ್ಯವನ್ನು ಕಟ್ಟಿದ್ದಾರೆ.

ಶುಭಾಶೀರ್ವಾದ

ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು, ಬಾಳೆಹೊನ್ನೂರು ಪೀಠ

ಸರಕು ಸಾಗಣೆ, ಪ್ರಯಾಣಿಕರ ಬಸ್ ಸೇವೆ, ಕೊರಿಯರ್ ಸೇವೆ, ರಾಜಕಾರಣ, ಸುದ್ದಿ ಮಾಧ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿ ತಮ್ಮದೇ ಆದ ಛಾಪು ಮೂಡಿಸಿದ ಧೀಮಂತ ಉದ್ಯಮಿ ಡಾ.ವಿಜಯ ಸಂಕೇಶ್ವರರು. ಇಂದು (ಆಗಸ್ಟ್ 2) 74ನೇ ವರ್ಷಕ್ಕೆ ಕಾಲಿಡುತ್ತಿರುವ ಅವರಿಗೆ ಹೀಗೊಂದು ಶುಭಹಾರೈಕೆ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅವರಿಂದ.

ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಹೊಸ ಸಂಸ್ಥೆಯನ್ನು ಹುಟ್ಟು ಹಾಕುವುದು ದೊಡ್ಡ ವಿಷಯವೇನಲ್ಲ. ಆದರೆ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಸಣ್ಣ ಕಂಪನಿಯ ಮೂಲಕ ಸಾರಿಗೆ ಕ್ಷೇತ್ರಕ್ಕೆ ಕಾಲಿಟ್ಟು, ಇಂದು ಇಡೀ ದೇಶವೇ ಬೆರಗುಗಣ್ಣಿನಿಂದ ನೋಡುವಂತೆ ಒಂದು ಸಂಸ್ಥೆಯನ್ನು ಬೆಳೆಸುವುದು ಸಣ್ಣ ಮಾತಲ್ಲ. ದೇಶದ ಯಾವುದೇ ಭಾಗಕ್ಕೂ ಹೋದರೂ, ತಮ್ಮ ಸಂಸ್ಥೆಯ ವಾಹನವಿರಬೇಕು ಎನ್ನುವ ‘ಗುರಿ’ಯೊಂದಿಗೆ ಆರಂಭಿಸಿದ ಲಾಜಿಸ್ಟಿಕ್ ಸಂಸ್ಥೆ ಕೆಲವೇ ವರ್ಷದ ಅವಧಿಯಲ್ಲಿ ಆ ಗುರಿಯನ್ನು ಸಾಧಿಸಿದ್ದು ಸಣ್ಣ ಮಾತಲ್ಲ. ಅಂಥ ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ್ದು ವಿಜಯ್ ಸಂಕೇಶ್ವರ ಅವರು ಎಂದರೆ ತಪ್ಪಾಗುವುದಿಲ್ಲ.

ಒಂದು ಲಾರಿಯೊಂದಿಗೆ ಆರಂಭಗೊಂಡ ವಿಆರ್‌ಎಲ್ ಸಮೂಹ ಸಂಸ್ಥೆ ಇಂದು ದೇಶದ ಯಾವುದೇ ಮೂಲೆಯಲ್ಲಾದರೂ ಕಾಣಿಸುತ್ತದೆ. ಈ ಯಶಸ್ಸಿಗೆ ವಿಆರ್‌ಎಲ್ ಸಮೂಹ ಸಂಸ್ಥೆಯ ಅಧ್ಯಕ್ಷರು, ರಾಜ್ಯಸಭಾ ಮಾಜಿ ಸದಸ್ಯರಾದ ಡಾ.ವಿಜಯ್ ಸಂಕೇಶ್ವರ ಅವರ ದೂರ ದೃಷ್ಟಿ ಹಾಗೂ ಕ್ರಿಯಾಶೀಲ ವ್ಯಕ್ತಿತ್ವವೇ ಕಾರಣ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಂಕೇಶ್ವರ ಅವರು ತಮ್ಮ ಸಾಧನೆ, ಸಾಹಸ ಹಾಗೂ ಶ್ರಮದಿಂದ ದೇಶದ ಬಹುದೊಡ್ಡ ಲಾಜಿಸ್ಟಿಕ್ ಸಾಮ್ರಾಜ್ಯವನ್ನು ಕಟ್ಟಿದ್ದಾರೆ.

ಇದನ್ನೂ ಓದಿ: Shishir Hegde Column: ಬಿಂಜ್‌ ಟ್ಯೂಬ್‌ ಡಿಸಾರ್ಡರ್:‌ ಯೂಟ್ಯೂಬ್‌ ಎಂಬ ಸಸ್ತಾ ನಶೆ

ಸದಾ ಕ್ರಿಯಾಶೀಲ ಚಿಂತನೆಯಲ್ಲಿರುವ ಅವರು, ನುಡಿದಂತೆ ನಡೆಯುವ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಗುಣಾತ್ಮಕ ಮತ್ತು ರಚನಾತ್ಮಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯನಿರ್ವಹಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಸಾರಿಗೆ ವಲಯದಲ್ಲಿ ಸಣ್ಣದಾಗಿ ಆರಂಭಿಸಲ್ಪಟ್ಟ ಈ ಸಂಸ್ಥೆಯು ರಾಷ್ಟ್ರಾದ್ಯಂತ ವಿಸ್ತರಣೆಯಾದ ರೀತಿಯೇ ಸೋಜಿಗ. ಇದು ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದರೆ ತಪ್ಪಾಗುವುದಿಲ್ಲ.

ಸಾರಿಗೆ ಕ್ಷೇತ್ರದಲ್ಲಿ ಇಂಥ ದೊಡ್ಡ ಸಾಮ್ರಾಜ್ಯವನ್ನು ಸೃಷ್ಟಿಸಿರುವ ಅವರು, ತಮ್ಮ ಸಂಸ್ಥೆಯಲ್ಲಿ ದುಡಿಯುವ ಶ್ರಮಿಕ ವರ್ಗವನ್ನು ಹಾಗೂ ದಕ್ಷ ಸಿಬ್ಬಂದಿಗಳನ್ನು ಎಂದಿಗೂ ಮರೆಯುವುದಿಲ್ಲ. ಅಂಥ ಅರ್ಹರನ್ನು ಗುರುತಿಸಿ, ಹೆಚ್ಚಿನ ಪುರಸ್ಕಾರ ಹಾಗೂ ಪ್ರೋತ್ಸಾಹ ನೀಡುವ ಮನೋಭಾವ ವನ್ನು ಹೊಂದಿದ್ದಾರೆ. ಈ ಎಲ್ಲದರ ಪ್ರತಿಫಲವೇ ಸಾರಿಗೆ ಕ್ಷೇತ್ರದಲ್ಲಿನ ಅವರ ಇಂದಿನ ಯಶಸ್ಸು. ಸಾರಿಗೆ ಕ್ಷೇತ್ರದಲ್ಲಿದ್ದ ವಿಜಯ್ ಸಂಕೇಶ್ವರ ಅವರು ‘ವಿಜಯ ಕರ್ನಾಟಕ’ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರಕ್ಕೂ ಕಾಲಿಟ್ಟರು.

ಆರಂಭದಲ್ಲಿ, ಪತ್ರಿಕೋದ್ಯಮದಲ್ಲಿ ಇವರು ಯಾವ ರೀತಿಯಲ್ಲಿ ಮುನ್ನಡೆಯುತ್ತಾರೆ ಎನ್ನುವ ಸಂಶಯ ಅನೇಕರನ್ನು ಕಾಡಿತ್ತು. ಆದರೆ ಆರಂಭಿಸಿದ ಕೆಲವೇ ವರ್ಷದಲ್ಲಿ ‘ವಿಜಯ ಕರ್ನಾಟಕ’ ವನ್ನು ರಾಜ್ಯದ ನಂಬರ್ 1 ಪತ್ರಿಕೆಯಾಗಿ ಹೊರಹೊಮ್ಮುವಂತೆ ಮಾಡಿದ್ದರು. ಅದಾದ ಬಳಿಕ ಆರಂಭಿಸಿದ ‘ವಿಜಯವಾಣಿ’ಯನ್ನೂ ‘ನಂಬರ್ 1’ ಪತ್ರಿಕೆ ಮಾಡುವುದರಲ್ಲಿ ಸಂಕೇಶ್ವರ ಅವರ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ ಎನ್ನುವುದು ಸ್ಪಷ್ಟ.

ಸಂಕೇಶ್ವರ ಅವರ ಮುಂದಾಳತ್ವದಲ್ಲಿ ಬರುವ ಪತ್ರಿಕೆಗಳಲ್ಲಿ ಪ್ರಮುಖವಾಗಿ ಭಾರತದ ಸಂಸ್ಕೃತಿ ಯನ್ನು, ಆದರ್ಶ ಪರಂಪರೆಯನ್ನು ಜನರಿಗೆ ಮುಟ್ಟಿಸುವ ಅನೇಕ ಲೇಖನಗಳು ಬರುತ್ತವೆ. ಇದರೊಂದಿಗೆ ಸಾಮಾಜಿಕ ಚಿಂತನೆಗಳಿರುವ ಅನೇಕ ಪ್ರಬುದ್ಧ ಲೇಖನಗಳನ್ನು ಪ್ರಕಟಿಸುವ ಮೂಲಕ ನಾಡಿನ ಜನರಿಗೆ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗುವಂತೆ ಮಾಡಿದ್ದಾರೆ. ಈ ಮೂಲಕ ನಾಡಿನ ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ.

ಸಾಮಾನ್ಯವಾಗಿ ಉದ್ಯಮಿಗಳು ಲಾಭಾಂಶದ ದುಡ್ಡಿನಲ್ಲಿ ಮತ್ತೊಂದು ಉದ್ಯಮ ಆರಂಭಿಸುವು ದಕ್ಕೋ ಅಥವಾ ಇರುವ ಉದ್ಯಮವನ್ನು ಮತ್ತಷ್ಟು ವಿಸ್ತರಿಸುವುದಕ್ಕೋ ಯೋಚಿಸುತ್ತಿರುತ್ತಾರೆ. ಆದರೆ ವಿಜಯ್ ಸಂಕೇಶ್ವರ ಅವರು, ತಮ್ಮ ಶ್ರಮದ ಫಲದಿಂದ ಬಂದಂಥ ಲಾಭಾಂಶವನ್ನು ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವುದನ್ನು ನೋಡಿದ್ದೇವೆ. ಅನೇಕ ಧಾರ್ಮಿಕ ಕೇಂದ್ರಗಳು, ಮಠಗಳ ಅಭಿವೃದ್ಧಿಗೆ ಅವರು ಹೀಗೆ ಹಣವನ್ನು ವಿನಿಯೋಗಿಸಿದ್ದಾರೆ.

ಸಮಾಜದ ಉನ್ನತಿಗೆ ಪೂರಕವಾದ ವಿಚಾರಗಳನ್ನು ಜನಮನಕ್ಕೆ ಮುಟ್ಟಿಸುವ ಆದರ್ಶ ವ್ಯಕ್ತಿಯಾಗಿ ನಿಲ್ಲುತ್ತಾರೆ ಅವರು. 74ನೇ ವರ್ಷಕ್ಕೆ ಕಾಲಿಡುತ್ತಿರುವ ವಿಜಯ್ ಸಂಕೇಶ್ವರ ಅವರು ಇಂದಿಗೂ ತಮ್ಮ ಉತ್ಸಾಹವನ್ನು ಕಳೆದುಕೊಂಡಿಲ್ಲ. ಎಂದಿಗೂ ಆಲಸ್ಯಕ್ಕೆ ಒಳಗಾಗಿ ‘ನೋಡಿದರಾಯಿತು..’ ಎನ್ನುವ ಮನಸ್ಥಿತಿಯಲ್ಲಿರುವುದಿಲ್ಲ. ಒಂದು ವೇಳೆ ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸುವು ದಾಗಿ ಅವರು ಮಾತು ಕೊಟ್ಟರೆ, ಯಾವುದೇ ಕಾರಣಕ್ಕೂ ಅದನ್ನು ತಪ್ಪಿಸುವುದಿಲ್ಲ. ಶ್ರೀ ಜಗದ್ಗುರು ರಂಭಾಪುರಿ ಪೀಠದೊಂದಿಗೆ ಸದಾ ಅನ್ಯೋನ್ಯ ಸಂಬಂಧ ಹೊಂದಿರುವ ಸಂಕೇಶ್ವರ ಅವರು, ಮಠದ ಅನೇಕ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜಕ್ಕೆ, ನಾಡಿಗೆ ಸಾಕ್ಷಿ ಪ್ರಜ್ಞೆಯ ಚಿಂತನೆಗಳನ್ನು ಕೊಡಮಾಡುತ್ತಿರುವುದಕ್ಕೆ ಅವರು ಪಡೆದ ಸಂಸ್ಕಾರದ ಬಲವೇ ಕಾರಣ ಎಂದರೆ ತಪ್ಪಾಗುವುದಿಲ್ಲ.

ಇಂಥ ಆದರ್ಶ ವ್ಯಕ್ತಿಗೆ ಜಗದ್ಗುರು ರಂಭಾಪುರಿ ಪೀಠ ದಿಂದ ನೀಡುವ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಮರೆಯಲಾರದ ಅಪೂರ್ವ ಗಳಿಗೆ. ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ಅವರು ಶಿಸ್ತಿನ ಸಿಪಾಯಿ ಹಾಗೂ ಸಮಯ ಪಾಲನೆಗೆ ಅತಿ ಹೆಚ್ಚು ಒತ್ತುನೀಡುತ್ತಾರೆ.

ಉದಾಹರಣೆಗೆ, ಯಾವು ದಾದರೂ ಕಾರ್ಯಕ್ರಮಕ್ಕೆ 11 ಗಂಟೆಗೆ ಆಗಮಿಸುವುದಾಗಿ ಅವರು ಮಾತು ಕೊಟ್ಟಿದ್ದರೆ, ಏನಾದರೂ ಸರಿ 11 ಗಂಟೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿರುತ್ತಾರೆ. ಅವರು ಉದ್ಯಮ ಕ್ಷೇತ್ರದೊಂದಿಗೆ ರಾಜಕೀಯವಾಗಿಯೂ ಸಕ್ರಿಯರಾಗಿದ್ದರು, ರಾಜ್ಯಸಭಾ ಸದಸ್ಯರಾಗಿ ದ್ದರು, ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಆದರೆ ರಾಜಕೀಯದ ‘ವ್ಯವಸ್ಥೆ’ ಅವರಿಗೆ ಹಿಡಿಸದೇ ಇದ್ದುದರಿಂದ ಅಲ್ಲಿಂದ ಹೊರ ಬಂದು ವಿಆರ್‌ಎಲ್‌ನಂಥ ಅದ್ಭುತ ಸಂಸ್ಥೆ ಯನ್ನು ಹುಟ್ಟು ಹಾಕಿದ್ದಾರೆ.

ಅವರಲ್ಲಿರುವ ಒಂದು ವಿಶೇಷ ಗುಣವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಅದೇನೆಂದರೆ, ವಿಜಯ್ ಸಂಕೇಶ್ವರ ಅವರಲ್ಲಿ ಜಾತಿಯ ಸೋಂಕಿಲ್ಲ. ಸಂಕುಚಿತ ಭಾವನೆಗಳಿಲ್ಲ. ಆದರ್ಶ ಹಾಗೂ ಪ್ರಬುದ್ಧ ಚಿಂತನೆಗಳಿಗಷ್ಟೇ ಆದ್ಯತೆ ನೀಡಿ ಪ್ರೋತ್ಸಾಹಿಸುವ ಸಹೃದಯ ಅವರಿಗಿದೆ. ಅವರ ಕ್ರಿಯಾಶಕ್ತಿಯ ಬಗ್ಗೆ ಹೇಳುತ್ತಾ ಹೋದರೆ ಅದು ದೊಡ್ಡ ಗ್ರಂಥವಾಗುತ್ತದೆ ಎನ್ನುವ ಭಾವನೆ ನಮ್ಮದಾಗಿದೆ. ಅವರಿಗೆ ಭಗವಂತ ನೂರಾರು ವರ್ಷ ಆರೋಗ್ಯ ಆಯುಷ್ಯವನ್ನು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ನೀಡಿ ಕಾಪಾಡಲಿ. ಅವರಿಂದ ನಾಡು ನುಡಿಗೆ, ಧರ್ಮ ಸಂಸ್ಕೃತಿಗೆ ಇನ್ನಷ್ಟು ಅಮೂಲ್ಯವಾದ ಕೊಡುಗೆ ಸಿಗಲಿ ಎಂದು ಹಾರೈಸುತ್ತೇವೆ.