ಶಿಶಿರಕಾಲ
shishirh@gmail.com
ಕೆಲಸವು ಯಾವುದೇ ಇರಬಹುದು, ಮುಗಿಸಿ ಮನೆಯತ್ತ ಹೊರಡುವ ಆ ಕ್ಷಣ ನಮ್ಮ ಇಡೀ ದೇಹ-ಮನಸ್ಸು ನಿರಾಳವಾಗುತ್ತದೆ. ಆದರೆ ಒಂದನ್ನು ಗ್ರಹಿಸಿದ್ದೀರಾ? ಅಷ್ಟೆ ಧಾವಂತ, ದೌಡಿನಿಂದ ಮನೆಗೆ ಬರಬೇಕೆಂದು- ಬಂದೇನೋ ತಲುಪುತ್ತೇವೆ. ಆದರೆ ತಲುಪಿದಾಗಿನ ಆ ನಿರಾಳತೆ ಅದೆಷ್ಟು ಸಮಯವಿರುತ್ತದೆ? ಬಾಗಿಲು ಮುಚ್ಚಿಕೊಳ್ಳುತ್ತಿದ್ದಂತೆ ಮೊಬೈಲ್ ಹಿಡಿದುಕೊಳ್ಳುತ್ತೇವೆ, ಅಥವಾ ಟಿವಿ. ಮನೆಯೊಳಗೆ ಬರುತ್ತಿದ್ದಂತೆ ಮನೆಯಾಚೆಗೆ ನಮ್ಮನ್ನು ತೆರೆದುಕೊಳ್ಳುತ್ತೇವೆ. ಅಥವಾ ಅಡುಗೆ, ಮನೆಗೆಲಸ, ಪಾತ್ರೆ ತೊಳೆಯುವುದು ಹೀಗೆ ಏನೋ ಒಂದು ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ.
ಅದು ಬೆಂಗಳೂರಿನ ಎರಡು ಬೆಡ್‌ರೂಮ್ ಅಪಾರ್ಟ್‌ಮೆಂಟಿನ ಬಾಗಿಲಿರಬಹುದು ಅಥವಾ ಶಿಕಾಗೋದ ಹಿಮ ತುಂಬಿದ ಮನೆಯ ಬಾಗಿಲಿರಬಹುದು. ಅಥವಾ ಅಫ್ಘಾನಿಸ್ತಾನದ ಮರಳುಗಾಡಿನ ಮನೆಯ, ಮುಂಬಯಿ ಸ್ಲಮ್ಮಿನ ಒಂಟಿಖೋಲಿಯ ಬಾಗಿಲಿರಬಹುದು. ಮನೆ ಯಾವುದೇ ಇರಬಹುದು, ಬಂಗಲೆಯಿರಬಹುದು, ಅರಮನೆಯಿರಬಹುದು, ಅಥವಾ ಖಾಲಿ ಸೈಟಿನಲ್ಲಿ ಕೆಲಸಗಾರರು ಕಟ್ಟಿಕೊಂಡ ಶೆಡ್ ಇರಬಹುದು.
ಮನೆಯನ್ನು ತಲುಪಿ ಬಾಗಿಲನ್ನು ಹಾಕಿಕೊಂಡಾಗ ‘ಮನೆಗೆ ಬಂದು ತಲುಪಿದೆವು’ ಎಂಬ ಆ ಭಾವ ವಿದೆಯಲ್ಲ, ಅದು ಸಾರ್ವತ್ರಿಕ. ಎಲ್ಲಿಗೇ ಹೋಗಲಿ, ನಾವು ಮನೆಯವರಿಗಿಂತ ಮನೆಯನ್ನು ಹೆಚ್ಚಿಗೆ ‘ಮಿಸ್’ ಮಾಡಿಕೊಳ್ಳುತ್ತೇವೆ. ಮನೆಯ ವಿರಹಬಾಧೆಯೇ ಜಾಸ್ತಿ. ನಾನು ಭಾರತದ ನಾಲ್ಕಾರು ಮೆಟ್ರೋಪಾಲಿಟನ್ ನಗರಗಳಲ್ಲಿ, ಕುಮಟಾದ ಮೂರೂರು, ಬೆಂಗಳೂರಿನಲ್ಲಿ, ದಕ್ಷಿಣ ಅಮೆರಿಕದ ಉರುಗ್ವೆ, ಅರ್ಜೆಂಟೀನಾ, ಚಿಲಿ, ಉತ್ತರ ಅಮೆರಿಕದ ನಾಲ್ಕಾರು ಊರು ಇಲ್ಲ ವಾಸವಾಗಿದ್ದೆ.
ಇದನ್ನೂ ಓದಿ: Shishir Hegde Column: ಬ್ರಹ್ಮಾಂಡ ಗುರುವಿಗೂ ಉತ್ತರ ಗೊತ್ತಿಲ್ಲದ ಪ್ರಶ್ನೆಗಳು !
ಹೋಗಿ ಉಳಿದಲ್ಲೆಲ್ಲ ಒಂದೊಂದು ‘ಮನೆ’ ಎನ್ನುವ ಸ್ಥಳವಿತ್ತು. ಊರಿನ ಹಳೆಯ ಅಂಕಣದ ಮನೆ, ಹೊಸ ಆರ್‌ಸಿಸಿ ಮನೆ, ಹಾಸ್ಟೆಲ್ಲಿನ ರೂಮು, ನಗರದ ಬಾಡಿಗೆ ಮನೆ, ಅಪಾರ್ಟ್ಮೆಂಟು, ಅಮೆರಿಕದ ಕೊಂಡೋ ಮನೆ, ಸಬರ್ಬನ್ ಮನೆ ಹೀಗೆ. ಅವಕ್ಕೆಲ್ಲ ಹೆಸರು ಬೇರೆ ಬೇರೆ, ಸಾಮಾಜಿಕ ಮರ್ಯಾದೆ, ಆಕಾರ, ಸ್ವರೂಪ, ಗಾತ್ರ ಬೇರೆ ಬೇರೆ. ಆದರೆ ಒಳಹೊಕ್ಕ ಕ್ಷಣದ ಭಾವ ಮಾತ್ರ ಒಂದೇ.
ನನ್ನ ಸಹೋದ್ಯೋಗಿ ಡ್ಯಾನ್ ಮೈಲ್ಸ್. ಅಮೆರಿಕನ್. ಅವನು ನಿರಂತರ ‘ವರ್ಕ್ ಫ್ರಮ್ ಹೋಮ್’. ಮನೆಯಿಂದಲೇ ಕೆಲಸ ಮಾಡುತ್ತಾನೆ. ಶಿಕಾಗೋ, ಅಮೆರಿಕದ ಪೂರ್ವಭಾಗದ ಬಹುತೇಕ ಎಲ್ಲಾ ಮನೆಗಳಲ್ಲಿ Basement- ನೆಲಮಾಳಿಗೆಯಿರುತ್ತದೆ. ಆತ ಅಲ್ಲಿಯೇ ತನ್ನ ಗೃಹಕಚೇರಿ ಮಾಡಿಕೊಂಡಿ ದ್ದಾನೆ.
ಅವನೊಂದು ವಿಚಿತ್ರ ಅಭ್ಯಾಸ ಮಾಡಿಕೊಂಡಿದ್ದಾನೆ. ನಿತ್ಯ ಆಫೀಸ್ ಸಮಯ ಮುಗಿಯುತ್ತಿದ್ದಂತೆ ತಾನಿದ್ದ ನೆಲಮಾಳಿಗೆಯಿಂದ ಮನೆಯ ಹೊರಗೆ ನಡೆಯುತ್ತಾನೆ. ಹೋಗುವಾಗ ಮನೆಯವರು ಯಾರು ಸಿಕ್ಕರೂ ಮಾತನಾಡುವುದಿಲ್ಲ. ಹೊರ ನಡೆದವನೇ ಕಾರು ಹತ್ತಿ ಆರೇಳು ಮೈಲು ಡ್ರೈವ್ ಮಾಡುತ್ತಾನೆ.
ಅಷ್ಟು ದೂರದಲ್ಲಿರುವ ಕಾಫಿ ಶಾಪ್‌ಗೆ ಹೋಗಿ, ಅಂದು ಕಾಫಿ ಕುಡಿದು ಮನೆಗೆ ಬರುತ್ತಾನೆ. ಹಾಗೆ ಮನೆಗೆ ವಾಪಸ್ ಬಂದಾದ ಮೇಲೆಯೇ ಅವನು ಮನೆಯವರ ಜತೆ ಮಾತನಾಡುವುದು, ಸಮಯ ಕಳೆಯುವುದು ಇತ್ಯಾದಿ. ಹಾಗೆ ವಾಪಸ್ ಬಂದ ಮೇಲೆ ಜಪ್ಪಯ್ಯ ಅಂದರೂ ಆಫೀಸಿನ ಇ-ಮೇಲ್, ಫೋನ್ ಕರೆ ಯಾವುದನ್ನೂ ಸ್ವೀಕರಿಸುವುದಿಲ್ಲ.

ಖುದ್ದು ಕಂಪನಿಯ ಸಿಇಒ ಕರೆ ಮಾಡಿ ಜೀವ ಹೋಗುತ್ತಿದೆ ಎಂದರೂ ಬಿಲ್‌ಕುಲ್ ಲ್ಯಾಪ್‌ಟಾಪ್ ತೆರೆಯುವುದಿಲ್ಲ . “ಶಿಶಿರ್, ನನಗೆ ಮನೆಯೇ ಆಫೀಸ್ ಆಗಿ 12 ವರ್ಷವಾಯಿತು. ಇಷ್ಟೂ ಕಾಲ ನನಗೆ ಆಫೀಸಿಗೆ ಹೋಗುವ ಕೆಲಸ ಬೇಕು ಅನಿಸಿದ್ದೇ ಇಲ್ಲ. ನಾನೆಂದೂ ಆಫೀಸಿಗೆ ಹೋಗುವುದನ್ನು ಮಿಸ್ ಮಾಡಿಕೊಂಡಿಲ್ಲ, ನನಗೆ ‘ವರ್ಕ್ ಫ್ರಮ್ ಹೋಂ’ ಇಷ್ಟ. ಆದರೆ ನಾನು ಒಂದನ್ನು ಬಹುವಾಗಿ ಮಿಸ್ ಮಾಡಿಕೊಳ್ಳುತ್ತೇನೆ.
ಆಫೀಸಿನಿಂದ ಮನೆಗೆ ಬರುವ ಆ ಪ್ರಕ್ರಿಯೆಯನ್ನು. ‘ಮನೆಗೆ ಬರುವುದು’ ಎಂಬ ನಿತ್ಯ ಸಂಭ್ರಮ ವನ್ನು. ಹಾಗಾಗಿಯೇ ಕಳೆದ 9 ವರ್ಷದಿಂದ ಆಫೀಸ್ ಕೆಲಸ ಮುಗಿಯುತ್ತಿದ್ದಂತೆ ಮನೆಯಿಂದ ಕಾರು ಹತ್ತಿ ಅದೊಂದು ಹೋಟೆಲ್ಲಿಗೆ ಹೋಗಿ ಬಿಡುತ್ತೇನೆ.
ಅಲ್ಲಿನವರಿಗೆಲ್ಲ ನನ್ನ ಪರಿಚಯವಾಗಿಹೋಗಿದೆ. ಹೋಗಿ ಕೂತರೆ ನನ್ನಿಷ್ಟದ ಕಾಫಿ ತಂದಿಟ್ಟು ಬಿಡುತ್ತಾರೆ. ಹಾಗಂತ ನಾನೇನೂ ಕಾಫಿ ಪ್ರಿಯನಲ್ಲ. ಆ ಕಾಫಿ ಶಾಪ್ ಕೂಡ ಅಷ್ಟಕ್ಕಷ್ಟೆ. ಆದರೆ ನನಗೆ ಅಲ್ಲಿಂದ ಹೊರಟು ‘ಮನೆಗೆ ಬರುವುದು’ ಇದೆಯಲ್ಲ ಅದು ಬಲು ಇಷ್ಟ. ನಾನು ಆ ಕಾರಣಕ್ಕೇ ಅದೇ ಕಾಫಿ ಶಾಪಿಗೆ ನಿತ್ಯ ಕೆಲಸ ಮುಗಿಸಿ ಹೋಗುವುದು, ಅದೇ ದಾರಿಯಲ್ಲಿ ಮನೆಗೆ ವಾಪಸ್ ಬರುವುದು. ರಜಾ ಹಾಕಿದ ದಿನ ಹೊರತುಪಡಿಸಿ ಇನ್ನೆ ವಾರದ ದಿನಗಳಲ್ಲಿ ಇದನ್ನು ಮಾತ್ರ ತಪ್ಪಿಸಿಲ್ಲ.
ಮನೆಯಲ್ಲಿ ನೆಂಟರಿರಲಿ, ಇಷ್ಟರಿರಲಿ. ನಾನು ನಿತ್ಯ ಕೆಲಸ ಮುಗಿಸಿ ಮನೆಗೆ ಹೋಗಲೇಬೇಕು. ನಾನು ಆಫೀಸಿಗೆ ಒಂದೆರಡು ವಾರದ ದೀರ್ಘರಜಾ ತೆಗೆದುಕೊಂಡರೆ ಕಾಫಿ ಶಾಪ್‌ನವರಿಗೂ ಮೊದಲೇ ಹೇಳಿರಬೇಕು!"- ಡ್ಯಾನ್ ಮೈಲ್ಸ್ ನ ಈ ಕಥೆ ಕೇಳಿ ನಾನು ಮತ್ತು ಅವನು ಏಕೋ ಹತ್ತು ನಿಮಿಷ ಹೊಟ್ಟೆ ನೋವಾಗುವಷ್ಟು ನಕ್ಕೆವು. ಆದರೆ ನನ್ನನ್ನು ಇದು ಬಹುವಾಗಿ ಕಾಡಿತು. ಕೆಲಸ ಮುಗಿಸಿ ಮನೆಗೆ ಹೋಗುವುದೆಂದರೆ ಏನೆಂಬುದನ್ನು ಕಲಿಸಿತು. ಆ ಕಥೆ ಕೇಳಿದಾಗಿನಿಂದ ಡ್ಯಾನ್ ಮೇಲಿನ ನನ್ನ ಗೌರವ ಇನ್ನಷ್ಟು ಹೆಚ್ಚಿತು.
ಕೆಲಸವು ಯಾವುದೇ ಇರಬಹುದು, ಮುಗಿಸಿ ಮನೆಯತ್ತ ಹೊರಡುವ ಆ ಕ್ಷಣ ನಮ್ಮ ಇಡೀ ದೇಹ-ಮನಸ್ಸು ನಿರಾಳವಾಗುತ್ತದೆ. ಆದರೆ ಒಂದನ್ನು ಗ್ರಹಿಸಿದ್ದೀರಾ? ಅಷ್ಟೆ ಧಾವಂತ, ದೌಡಿನಿಂದ ಮನೆಗೆ ಬರಬೇಕೆಂದು- ಬಂದೇನೋ ತಲುಪುತ್ತೇವೆ. ಆದರೆ ತಲುಪಿದಾಗಿನ ಆ ನಿರಾಳತೆ ಅದೆಷ್ಟು ಸಮಯ ವಿರುತ್ತದೆ? ಬಾಗಿಲು ಮುಚ್ಚಿಕೊಳ್ಳುತ್ತಿದ್ದಂತೆ ಮೊಬೈಲ್ ಹಿಡಿದುಕೊಳ್ಳುತ್ತೇವೆ, ಅಥವಾ ಟಿವಿ. ಮನೆಯೊಳಗೆ ಬರುತ್ತಿದ್ದಂತೆ ಮನೆಯಾಚೆಗೆ ನಮ್ಮನ್ನು ತೆರೆದುಕೊಳ್ಳುತ್ತೇವೆ. ಅಥವಾ ಅಡುಗೆ, ಮನೆಗೆಲಸ, ಮಗುವಿಗೆ ಹೋಂ ವರ್ಕ್, ಪಾತ್ರೆ ತೊಳೆಯುವುದು ಹೀಗೆ ಏನೋ ಒಂದು ನಮ್ಮನ್ನು ಆವರಿಸಿಕೊಂಡುಬಿಡುತ್ತದೆ.
ಇನ್ನು ಕೆಲವರಿರುತ್ತಾರೆ. ಮನೆಗೆ ಬಂದಾಕ್ಷಣ ಬಬ್ಬರ್ಯ, ಪಂಜುರ್ಲಿ ಅವತಾರ ತಾಳುತ್ತಾರೆ. ಬಂದ ಅರ್ಧಗಂಟೆ ಕಂಡವರ ಮೇಲೆಲ್ಲ ಎಗರಾಡುತ್ತಾರೆ. ಗುರ್ ಅನ್ನುತ್ತಾರೆ. ಇನ್ನು ಕೆಲವರು ಮನೆಗೆ ಬಂದಾಕ್ಷಣ ತಮ್ಮ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡುಬಿಡುತ್ತಾರೆ. ಅವರಿಗೆ ಮನೆಯೊಳಗೂ ಮನೆಯ ಭಾವ ಹುಟ್ಟುವುದು ತಮ್ಮ ಕೋಣೆಯ ನಾಲ್ಕು ಗೋಡೆಯ ಮಧ್ಯೆ. ಒಟ್ಟಾರೆ, ಹೇಗೆಲ್ಲ ಹಂಬಲಿಸಿ ಮನೆಗೆ ಬರುವುದು, ಬಂದಿದ್ದೇನೆ ಎಂದು ಕೆಲವೇ ಕ್ಷಣಗಳಲ್ಲಿ ಮರೆಯಲು!!
ನಿತ್ಯ ಮನೆಗೆ ಬಂದು ತಲುಪುವ ಪ್ರಕ್ರಿಯೆ ಬದುಕಿನ ಯಾಂತ್ರಿಕತೆಯ ಭಾಗ ಎಂದೂ ಅನಿಸಬಹುದು. ಆದರೆ ಇದರಂದು ಬ್ರಹ್ಮ ರಹಸ್ಯ ಅಡಗಿದೆ. ನಾವು ಪ್ರತಿ ಬಾರಿ ಮನೆಗೆ ಬಂದು ತಲುಪಿದಾಗಲೂ ಹೊರಜಗತ್ತಿನಲ್ಲಿ, ಬದುಕಿನಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ತಲುಪಿರು ತ್ತೇವೆ.
ಪ್ರಯಾಣ ಮುಗಿಸಿಯೇ ಮನೆಗೆ ಬಂದಿರುತ್ತೇವೆ. ಅದೆಲ್ಲಿಯೋ ಮುಟ್ಟಿರುತ್ತೇವೆ. ಕೇವಲ ಹುಟ್ಟಿದ ಹಬ್ಬ ಮಾತ್ರವಲ್ಲ, ನಿತ್ಯ ಮನೆಗೆ ಬಂದು ತಲುಪುವುದೂ ಒಂದೊಂದು ಪುಟ್ಟ ಮೈಲಿಗಲ್ಲು. ಈ ನೊಬೆಲ ಅಥವಾ ಗ್ರ್ಯಾಮಿ ಮೊದಲಾದ ಮಹೋನ್ನತವೆನಿಸಿಕೊಂಡ ಪ್ರಶಸ್ತಿ ಪಡೆದವರಿಗೆ arrived in life ಎನ್ನುತ್ತಾರೆ.
ಸಾಧನೆಯ ಔನ್ನತ್ಯಕ್ಕೆ ‘ಬಂದು ಮುಟ್ಟಿದ್ದಾನೆ’ ಎಂಬರ್ಥದಲ್ಲಿ. ಆದರೆ ಅದು ಮಾತ್ರ ಸಾಧನೆಯಲ್ಲ, ಅದು ಅವನು ತಲುಪಿದ ಮನೆ. ಅವನ ಮನೆ. ಪ್ರತಿಯೊಬ್ಬನ ಬದುಕಿನಲ್ಲೂ ಅವನದೇ ಕೈ ಅಳತೆಯ ಸಾಧನೆಯಿರುತ್ತದೆ, ಮುಂದೆ ತಲುಪಬೇಕಾದ ಜಾಗವಿರುತ್ತದೆ. ಅದೇ ಸಮಯದಲ್ಲಿ ಬಂದು ಅಲ್ಲಿಗೆ ಮುಟ್ಟಿದ ಭಾವ ಕ್ಷಣಮಾತ್ರದಲ್ಲಿ ಮರೆತುಹೋಗಿರುತ್ತದೆ.
ಆದರೆ ಅವೆಲ್ಲವೂ ಕೇವಲ ಮುಂದಿನ ನಿಲ್ದಾಣಗಳು ಮಾತ್ರ. ಶಿಕ್ಷಕನಿಗೆ ಹೆಡ್ ಮಾಸ್ತರ್ ಆಗಬೇಕು. ಹೆಡ್ ಮಾಸ್ತರಿಗೆ ರಿಟೈರ್ ಆಗಬೇಕು. ಮ್ಯಾನೇಜರಿಗೆ ವೈಸ್ ಪ್ರೆಸಿಡೆಂಟ್ ಆಗಬೇಕು, ವಿಪಿಗೆ ಕಂಪನಿಯ ಸಿಇಒ ಆಗಬೇಕು. ಕ್ಷೌರಿಕನಿಗೆ ಇನ್ನೊಂದು ಅಂಗಡಿ ಇಡಬೇಕು, ಪೈಮರಿ ಶಾಲೆಯ ಮಗುವಿಗೆ ಹೈಸ್ಕೂಲ್ ತಲುಪುವಷ್ಟು ಬೆಳೆದುಬಿಡಬೇಕು, ಕಾಲೇಜಿನ ಯುವಕ-ಯುವತಿಗೆ ಕೆಲಸಕ್ಕೆ ಸೇರಬೇಕು, ದುಡಿಯಬೇಕು, ಸೈಟು, ಸ್ವಂತದ ಮನೆ, ಮಕ್ಕಳ ಮದುವೆಯಾಗಬೇಕು, ಮೊಮ್ಮಕ್ಕಳನ್ನು ನೋಡ ಬೇಕು ಹೀಗೆ. ಯಾವಯಾವಾಗ ಮುಂದಿನ ನಿಲ್ದಾಣ ತಲುಪುತ್ತೇವೋ, ಅಲ್ಲಿ ಬಂದು ತಲುಪುವುದು ಕೂಡ ತಲುಪಿದ್ದೇನೆ ಎಂಬುದನ್ನು ಮರೆಯಲು.
ಬೌದ್ಧ ಧರ್ಮದಲ್ಲಿ ಇದನ್ನು ‘ಭೂತದ ಹಸಿವು’ ಎನ್ನುತ್ತಾರೆ. ಸನಾತನ ಧರ್ಮದಲ್ಲಿ ‘ಮಾಯಾ’. ಯಾವುದೋ ಮಾರಣಾಂತಿಕ ರೋಗ ಬಂದಾಗ, ಬದುಕಿನ ಕೊನೆಯಲ್ಲಿ, ನಮ್ಮವರೇ ಯಾರೋ ತೀರಿಕೊಂಡಾಗ, ಸ್ಮಶಾನ ವೈರಾಗ್ಯ ಅನುಭವಕ್ಕೆ ಬಂದಾಗ ಮಾತ್ರ ನಮಗೆ ಯಾವುದು ಅವಶ್ಯಕವಿತ್ತೋ ಅದೆಲ್ಲವೂ ಇಲ್ಲಿಯೇ ನಮ್ಮೆದುರಿಗೆ, ಈ ಕ್ಷಣದಲ್ಲಿ ಇದೆ ಎಂದೆನಿಸುವುದು. ನಾನು ಇಷ್ಟೂ ಕಾಲ ಮನೆಯಲ್ಲಿಯೇ ಇದ್ದೆ, ಯಾವತ್ತೋ ಬಂದು ತಲುಪಿದ್ದೆ ಎಂಬುದು ಸ್ಪಷ್ಟವಾಗುವುದು.
ಬದುಕಿನಲ್ಲಿ ‘ಬಂದುಮುಟ್ಟುವುದು’, ಮನೆಗೆ ತಲುಪುವುದು ಎಂದರೆ ಅದು ಹಣ ಸಂಪಾದನೆಯ ಅಥವಾ ಯಾವುದೋ ಹುದ್ದೆ ಪಡೆಯುವ ವಿಷಯವಲ್ಲ. ಮನೆ ಎಂದರೇನು? ಎಲ್ಲಿ ನಾವು ನಾವಾಗಿಯೇ ಇರಬಹುದೋ ಅದುವೇ ಮನೆ. ಇಲ್ಲಿಯವರೆಗೆ ಬಂದು ಮುಟ್ಟಿದವನಿಗೆ ತಲುಪಿದ್ದೇನೆ ಅನಿಸದಿದ್ದರೆ ಅವನಿಗೆ ಅದೆಲ್ಲಿ ಹೋದರೂ ‘ಬಂದು ಮುಟ್ಟಿದ್ದೇನೆ’ ಎಂದೆನಿಸುವುದಿಲ್ಲ.
ಕೊನೆಯಲ್ಲಿ ಬೂದಿಯಾದಾಗ, ಮಣ್ಣುಸೇರಿದಾಗಲೇ ಅಂಥವರು ‘ಹೋಗಿಮುಟ್ಟುವುದು’. ನೀವು ಯಾವುದೋ ಒಂದು ಊರಿಗೆ ಹೋಗಿ ಅಲ್ಲಿನ ಲಾq ಒಂದರಲ್ಲಿ ಎರಡು ವಾರದಿಂದ ಉಳಿದು ಕೊಂಡಿದ್ದೀರಿ ಎಂದುಕೊಳ್ಳಿ, ನಿತ್ಯ ಹೊರಗಡೆ ಓಡಾಡಿ, ಸುಸ್ತಾಗಿ ವಾಪಸ್ ಬಂದರೆ ಆ ಲಾಡ್ಜಿನ ರೂಮು ಕೂಡ ಮನೆಗೆ ಬಂದು ತಲುಪಿದ ಭಾವ ಕೊಡಬಲ್ಲದು. ಹೆಚ್ಚಿನವರ ಬದುಕು ಲಾಡ್ಜಿನಿಂದ ಲಾಡ್ಜಿಗೆ. ಭಾರದ ಲಗೇಜ್ ಹೊತ್ತು ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ.
ಅವರೆಂದೂ ಮನೆಗೆ ಬಂದೇ ಮುಟ್ಟುವುದಿಲ್ಲ. ಹಾಗಾಗಿ ಅವರ ಭಾರ ಹೆಗಲಿನಿಂದ ಇಳಿಯುವುದೇ ಇಲ್ಲ. ಕೆಲವರಿದ್ದಾರೆ. ಅದೇನೋ ಒಂದು ಘಟಿಸಿದ ನಂತರ ನನಗೆ ಬೇಕಾದದ್ದನ್ನು ಮಾಡುತ್ತೇನೆ ಎನ್ನುತ್ತ ಬದುಕುವವರು. ಒಬ್ಬ ಪರಿಚಯದವರಿದ್ದಾರೆ. ಅವರು ಮೂರ್ನಾಲ್ಕು ವರ್ಷದ ಹಿಂದೆ ನನ್ನ ಬಳಿ ಬಂದು “ನೀವು ಲೇಖನ ಬರೆಯುತ್ತೀರಂತೆ. ನನಗೂ ಕನ್ನಡ ಓದುವುದು ಖುಷಿ.
ಆದರೆ ಪುರುಸೊತ್ತೇ ಆಗುವುದಿಲ್ಲ ನೋಡಿ. ಮುಂದಿನ ವರ್ಷ ರಿಟೈರ್ ಆಗುತ್ತಿದ್ದೇನೆ. ಆಗುತ್ತಿದ್ದಂತೆ ನಾನು ಓದಿನಲ್ಲಿ ತೊಡಗಿಸಿಕೊಳ್ಳುತ್ತೇನೆ" ಎಂದರು. ಇವರೆಲ್ಲ ರಿಟೈರ್ ಆದಮೇಲೆ ಮಡುಕುವವರು. ಅವರು ರಿಟೈರ್ ಆಗಿ ಎರಡು ವರ್ಷವಾದರೂ, ಕಾಳು ಅಕ್ಷರವನ್ನೂ ಓದಿದ ಕುರುಹುಗಳಿಲ್ಲ. ಈಗಲೂ ಅವರು ಬ್ಯುಸಿ. ‘ಮಾಡಬೇಕು’ ಎಂದೇ ಓಡಾಡಿಕೊಂಡಿದ್ದಾರೆ. ಈ ನಿರಂತರ ಪುರುಸೊತ್ತಿಲ್ಲ ದಂತೆ ಬದುಕುವವರು ಎಂದೂ ಎಲ್ಲಿಗೂ ಬಂದು ತಲುಪುವುದಿಲ್ಲ. ಅಂಥವರು ಅಲ್ಲಿಯೂ ಇರುವುದಿಲ್ಲ, ಹೊರಡುವುದೂ ಇಲ್ಲ, ಹಾಗಾಗಿ ಎಲ್ಲಿಗೂ ಹೋಗಿ ಮುಟ್ಟುವುದೂ ಇಲ್ಲ. ಹೋಗಬೇಕು ಎನ್ನುತ್ತಲೇ ಇರುತ್ತಾರೆ, ಆಮೇಲೆ ಹೋಗಿಬಿಡುತ್ತಾರೆ.
ಮುಲ್ಲಾ ನಸ್ರುದ್ದೀನ್‌ನ ಈ ಕಥೆ ಜನಪ್ರಿಯ, ಕೇಳಿರಬಹುದು. ಒಮ್ಮೆ ಮುಲ್ಲಾ ನಸ್ರುದ್ದೀನ್ ಒಂದು ರಾತ್ರಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬೀದಿದೀಪದ ಬುಡದಲ್ಲಿ ಏನನ್ನೋ ಹುಡುಕುತ್ತಿದ್ದಂತೆ. ಸ್ವಲ್ಪ ಹೊತ್ತು ಅವನನ್ನು ಕಂಡ ಊರಿನ ನಾಲ್ಕಾರು ಮಂದಿ ಬಂದು, ’‘ಮುಲ್ಲಾ ಇಲ್ಲೇನು ಹುಡುಕುತ್ತಿದ್ದೀಯಾ?" ಎಂದು ಕೇಳಿದ್ದಕ್ಕೆ ಮುಲ್ಲಾ “ಏನಿಲ್ಲ, ಮನೆಯ ಬೀಗದಕೈ ಕಳೆದುಹೋಗಿದೆ, ಹುಡುಕುತ್ತಿದ್ದೇನೆ’ ಎಂದನಂತೆ.
ಮುಲ್ಲಾ, “ಎಲ್ಲಿ ಕಳೆದುಕೊಂಡೆ ಕೀಲಿಯನ್ನ? ಇಲ್ಲಿಯೇ ಅದು ಕಳೆದದ್ದು ಹೌದಾ?" ಎಂದು ಜನರು ಕೇಳಿದ್ದಕ್ಕೆ ಮು “ಇಲ್ಲ, ಕೀಲಿ ಕಳೆದಿರುವುದು ಮನೆಯೊಳಗೆ. ಆದರೆ ಮನೆಯಲ್ಲಿ ದೀಪವಿಲ್ಲವಲ್ಲ, ಇಲ್ಲಿ ಬೆಳಕಿದೆ ಹಾಗಾಗಿ ಇಲ್ಲಿ ಹುಡುಕುತ್ತಿದ್ದೇನೆ" ಎಂದನಂತೆ. ನಮ್ಮಲ್ಲಿಯೂ ಹಲವರ ಕಥೆ ಇದುವೆ. ಮನೆಯ ಕೀಲಿಯೇ ಕಳೆದಿದೆ, ಕೀಲಿ ಮನೆಯ ಇದೆ, ಹುಡುಕಾಟ ಮಾತ್ರ ಬೀದಿಯಲ್ಲಿ, ಹೊರಗೆ.
ಹಾಗಂತ ಬದುಕೆಂದರೆ ಯಾವತ್ತೂ ನಾಜೂಕಲ್ಲ. ದುಃಖ, ಅನಾರೋಗ್ಯ ಅಪ್ಪಳಿಸುತ್ತವೆ, ಸಂಬಂಧಗಳು ಒಡೆಯುತ್ತವೆ, ಕನಸುಗಳು ನುಚ್ಚು ನೂರಾಗುತ್ತವೆ. ಬಂದು ಮುಟ್ಟುವುದು ಎಂದರೆ ಇದೆಲ್ಲ ಕಷ್ಟ ಕಾರ್ಪಣ್ಯಗಳಿಲ್ಲದ ಬದುಕು ಮಾತ್ರ ಗುರಿ ಎಂದಲ್ಲ. ನೋವಿನಲ್ಲಿ ಎರಡು ವಿಧ. ಅದನ್ನು ಬುದ್ಧ ಎರಡು ಬಾಣಕ್ಕೆ ಹೊಲಿಸುತ್ತಾನೆ. ಮೊದಲನೆಯದು ಬದುಕು ಕೊಡುವ ನೋವಿನ ಬಾಣ. ಎರಡನೆಯದು ನಮಗೆ ನಾವೇ ಕೊಟ್ಟುಕೊಳ್ಳುವ ನೋವು.
ನಮ್ಮ ಅಹಂ, ನಿಂದನೆ, ಅಸಮಾಧಾನ ಇತ್ಯಾದಿಗಳಿಂದ. ಬದುಕಿನಲ್ಲಿ ಬಂದುಮುಟ್ಟುವುದೆಂದರೆ ದುಃಖವೇ ಇಲ್ಲದ ಬದುಕನ್ನು ನಡೆಸುವುದು ಎಂದಲ್ಲ. ಬದುಕು ಕೊಡುವ ದುಃಖ, ಕಷ್ಟವನ್ನು ಗುರುತಿಸುವುದು, ಗೌರವದಿಂದ ಅನುಭವಿಸುವುದು, ಆ ಕ್ಷಣವನ್ನೂ ತಲುಪಿದ್ದೇನೆ ಎಂಬ ಭಾವದಲ್ಲಿಯೇ ಸ್ವೀಕರಿಸುವುದು. ಆಂತರ್ಯದಲ್ಲಿನ ನಿಶ್ಚಲತೆ.
ನಾವು ಸಾಮಾನ್ಯವಾಗಿ ಇವತ್ತೇನು ಮಾಡಲಾಗಲಿಲ್ಲ? ನಾಳೆ, ಮುಂದೆ ಏನು ಮಾಡಬೇಕು? ಎಂಬ ಪ್ರಶ್ನೆಗಳನ್ನೇ ಕೇಳಿಕೊಳ್ಳುತ್ತಿರುತ್ತೇವೆ. ಏನೇ ಮಾಡಿದರೂ ಮುಂದೇನೆಂಬ ಪ್ರಶ್ನೆ. ಬದಲು ‘ಇವತ್ತು ಎಲ್ಲಿಗೆ ಬಂದು ತಲುಪಿದೆ’ ಎಂದು ಪ್ರಶ್ನಿಸಿಕೊಳ್ಳುವುದೇ ಇಲ್ಲ. ಆದರೆ ಆಗೀಗ ಈ ಪ್ರಶ್ನೆಯನ್ನು ಕೇಳಿಕೊಂಡಾಗ ಮಾತ್ರ ‘ನಾವು ಎಲ್ಲಿಗೆ ಬಂದು ಮುಟ್ಟಿದ್ದೇವೆ’ ಎಂಬುದರ ಅನುಭವವಾಗುವುದು.
ಬಂದು ಮುಟ್ಟಿರುವುದು ಅಸಲಿ ಮನೆಗೇ ಇರಬಹುದು, ಅಥವಾ ಬದುಕಿನ ಮುಂದಿನ ನಿಲ್ದಾಣಕ್ಕಿರಬಹುದು. ಮುಂದೆಲ್ಲಿ ಎಂಬ ಪ್ರಶ್ನೆ ನಿರಂತರ ಇರಬೇಕು, ಅದು ಇದ್ದೇ ಇರುತ್ತದೆ. ಆದರೆ ಇದೆಲ್ಲದರ ನಡುವೆ ‘ಈಗ ಎಲ್ಲಿಗೆ ಬಂದು ಮುಟ್ಟಿದೆ’ ಎಂಬ ಪ್ರಶ್ನೆ ಮಾತ್ರ ಬದುಕಿನಲ್ಲಿ ಸಮಾಧಾನ ಕೊಡಬಲ್ಲದು. ಆ ಪ್ರಶ್ನೆಯನ್ನು ನಿರಂತರ ನಮಗೆ ನಾವೇ ಕೇಳುತ್ತಿದ್ದರೆ ಕ್ರಮೇಣ ಮನೆಗೆ ಬಂದ ಭಾವ ನಮ್ಮೊಳಗೆ ನಿರಂತರ ಜಾಗೃತವಾಗಿರುತ್ತದೆ.
ನಾವಿದ್ದಲ್ಲಿಯೇ, ನಾವಿದ್ದ ಸ್ಥಿತಿಯೇ ಮನೆಯಾಗಿ ನಮ್ಮೊಳಗೇ ಮನೆ ಸಂಭವಿಸುತ್ತದೆ. ಎನ್ನ ಕಾಲೇ ಕಂಬ, ದೇಹವೇ ದೇಗುಲ ಅದಾಗುವುದು ಆಗ. ಹಮ, ಅಂದಹಾಗೆ ನೀವು ಎಲ್ಲಿಗೆ ಬಂದು ಮುಟ್ಟಿದ್ದೀರಿ? ಮನೆಗೆ ಬಂದು ತಲುಪಿದಿರೋ? ಅಥವಾ ಮನೆಯ ಇದ್ದೀರೋ? ಮನೆ ಮುಟ್ಟಿದಾಗ ಮಾತ್ರ ಹೊರಜಗತ್ತಿನ ಗದ್ದಲಗಳೆಲ್ಲ ಗೌಣವಾಗುವುದು, ಶಾಂತವಾಗುವುದು.
ಮನೆಗೆ ಬಂದು ಮುಟ್ಟಿದಾಗ ಮಾತ್ರ ಬೆನ್ನ ಮೇಲಿನ ಎಲ್ಲ ಭಾರವನ್ನು ಕೆಳಕ್ಕಿಳಿಸಲಾಗುವುದು. ಮನೆಗೆ ಬಂದು ಮುಟ್ಟಿದ ಮೇಲೆ ಮಾತ್ರ ಮನೆಯಲ್ಲಿದ್ದೇನೆ ಎಂದೆನಿಸುವುದು. ಯಾರದೋ ಮನೆಯಲ್ಲ, ನಮ್ಮ ಮನೆ ಮಾತ್ರ ನಮ್ಮ ಮನೆ. ಅದು ಮಾತ್ರ ಸ್ವಂತದ್ದು. ಸ್ನೇಹಿತನ, ಸಹವರ್ತಿಯ, ಸಂಬಂಧಿಯ ಮನೆ ನಮ್ಮದಲ್ಲ, ಅವನು ನಮ್ಮ ಮನೆಗೆ ಬಂದರೆ ಅದು ಅವನ ಮನೆಯಾಗುವು ದಿಲ್ಲ. ಎಲ್ಲರೂ ಹೋಗಬೇಕಾಗಿರುವುದು, ತಲುಪಬೇಕಾಗಿರುವುದು, ಈಗಾಗಲೇ ತಲುಪಿರುವುದು ಅವರವರ ಸ್ವಂತದ ಮನೆಗೆ. ಮನೆಯ ಇದ್ದೀರಿ.