ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಗಂಡನನ್ನು ಹೇಗೆ ಕರೆಯುವುದು ?

ತಮ್ಮ ಯಜಮಾನರನ್ನು ಕರೆಯಬೇಕೆಂದರೆ ‘ರೀ’ ಎಂದು ಅಂತಾರೆ. ಕಟ್ಟುನಿಟ್ಟಾದ ಹಾಗೂ ಸಾಂಪ್ರ ದಾಯಿಕವಾದ ಕುಟುಂಬದಲ್ಲಿ ಬೆಳೆದವರು ತಮ್ಮ ಮನೆಯಲ್ಲಿ ಎಲ್ಲ ಹೆಂಗಸರು ಅವರವರ ಗಂಡನನ್ನ ‘ರೀ’ ಎಂದೇ ಕರೆಯುತ್ತಾರೆ. ಗಂಡನ ಹೆಸರು ಹೆಂಡತಿ ಬಾಯಲ್ಲಿ ಬರಬಾರದೆಂಬ ಸಂಪ್ರದಾಯವು ಇದೆ. ಅದಲ್ಲದೇ ಗಂಡ ಹೆಂಡತಿಗಿಂತ ವಯಸ್ಸಿನಲ್ಲಿ ದೊಡ್ಡವರಿರುತ್ತಾರೆ.

ಸಂಪಾದಕರ ಸದ್ಯಶೋಧನೆ

ಕನ್ನಡದಲ್ಲಿ ಹೆಂಡತಿ ತನ್ನ ಗಂಡನನ್ನು ಏನೇನು ಪದಗಳನ್ನು ಬಳಸಿ ಕರೆಯುತ್ತಾಳೆ ಎಂಬ ಪ್ರಶ್ನೆ ಯನ್ನು ‘ಕೋರಾ’ ವೆಬ್‌ಸೈಟಿನಲ್ಲಿ ಯಾರೋ ಕೇಳಿದ್ದರು. ಅದಕ್ಕೆ ಒಬ್ಬರು ಹೀಗೆ ಉತ್ತರಿಸಿದ್ದರು- “ಮನೆಯ ಹಿರಿಯರ ಮುಂದೆ ಅವರು/ಇವರು ಅಂತ, ಮಕ್ಕಳೊಂದಿಗೆ ಮಾತಾಡುವಾಗ ನಿಮ್ಮ ಅಪ್ಪ/ಚಿಕ್ಕಪ್ಪ, ಸೋದರಮಾವ ಅಂತ, ಸಂಬಂಧಗಳೊಡನೆ ‘ನಮ್ಮ ಯಜಮಾನರು’ ಎಂದು ಸಂಬೋಧಿಸುವುದು ವಾಡಿಕೆ.

ತಮ್ಮ ಯಜಮಾನರನ್ನು ಕರೆಯಬೇಕೆಂದರೆ ‘ರೀ’ ಎಂದು ಅಂತಾರೆ. ಕಟ್ಟುನಿಟ್ಟಾದ ಹಾಗೂ ಸಾಂಪ್ರದಾಯಿಕವಾದ ಕುಟುಂಬದಲ್ಲಿ ಬೆಳೆದವರು ತಮ್ಮ ಮನೆಯಲ್ಲಿ ಎಲ್ಲ ಹೆಂಗಸರು ಅವರವರ ಗಂಡನನ್ನ ‘ರೀ’ ಎಂದೇ ಕರೆಯುತ್ತಾರೆ. ಗಂಡನ ಹೆಸರು ಹೆಂಡತಿ ಬಾಯಲ್ಲಿ ಬರಬಾರದೆಂಬ ಸಂಪ್ರದಾಯವು ಇದೆ. ಅದಲ್ಲದೇ ಗಂಡ ಹೆಂಡತಿಗಿಂತ ವಯಸ್ಸಿನಲ್ಲಿ ದೊಡ್ಡವರಿರುತ್ತಾರೆ.

ಹೀಗಾಗಿ ಅವರನ್ನು ಬಹುವಚನ ಕೊಟ್ಟು ಮಾತಾಡಿಸುವುದು ಸಂಪ್ರದಾಯ ಮತ್ತು ರೂಢಿ. ಅದೇ ಯಜಮಾನರು ಹೆಂಡತಿಯನ್ನು ‘ಲೇಯ’ ಎಂದು ಹೆಸರು ಹೇಳದೇ ಕರೆಯುವುದುಂಟು". ಇನ್ನೊಬ್ಬರು ಈ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದರು- “ಇದು ಒಳ್ಳೆ ಪ್ರಶ್ನೆ ಆಯ್ತಲ್ಲ ಮಾರಾಯ್ರೆ, ಅವರವರ ಹೆಂಡತಿಯನ್ನು ಅವರು ಹೇಗಾದರೂ ಕರೆದುಕೊಳ್ಳಲಿ ಬಿಡಿ, ನಾವ್ಯಾಕೆ ತಲೆಬಿಸಿ ಮಾಡಿಕೊಳ್ಳಬೇಕು? ಆದರೂ ಗಂಡಂದಿರು ಹೆಂಡತಿಯರನ್ನು ಕರೆಯುವಷ್ಟು ಭಿನ್ನವಾಗಿ, ಸಲುಗೆ ಯಿಂದ, ಪ್ರೀತಿಯಿಂದ ಬೇರೆ ಯಾವ ಸಂಬಂಧಗಳ ನಡುವೆಯೂ ಸಂಬೋಧನೆಗಳು ಇರುವುದಿಲ್ಲ ಎನ್ನುವುದು ಮಾತ್ರ ಸತ್ಯ.

ಇದನ್ನೂ ಓದಿ: Vishweshwar Bhat Column: ಲ್ಯಾಂಡಿಂಗ್‌ ಗೇರ್‌ʼನ ಸುತ್ತಮುತ್ತ

ಕೆಲವರು ‘ಲೇ’ ಅಂತಾರೆ. ಕೆಲವರು ‘ಇವ್ಳೇ’ ಅಂತಾರೆ. ಮತ್ತೆ ಕೆಲವರು ‘ರೀ’ ಅನ್ನಬಹುದು. ಹೆಸರು ಹಿಡಿದು ಕರೆಯುವವರು ಮಾತ್ರ ಜಾಸ್ತಿ ಇರುವುದನ್ನು ಗಮನಿಸಬಹುದು. ಹೆಸರುಗಳನ್ನು ಸಂಕ್ಷಿಪ್ತ ಗೊಳಿಸಿ ಕರೆಯುವವರು ಅದಕ್ಕಿಂತ ಸ್ವಲ್ಪ ಜಾಸ್ತಿ. ಶಾರದಾ ಅಂತ ಇದ್ದರೆ ಶಾರಿ ಅನ್ನೋರು, ಪಾರ್ವತಿ ಅಂತ ಇದ್ರೆ ಪಾರಿ ಅನ್ನೋರು, ಪ್ರಮೀಳಾ ಅಂತ ಇದ್ರೆ ಪ್ರಮ್ಮಿ ಅನ್ನೋರು, ಹೀಗೆ ಶಾರ್ಟ್ ಮಾಡಿ ಕರೆಯುವವರು ಮಾತ್ರ ಜಾಸ್ತಿ ಇರ್ತಾರೆ.

ಇತ್ತೀಚಿನ ಪೀಳಿಗೆಯವರು ಮದುವೆಯಾದ ಹೊಸತರಲ್ಲಿ ಹೆಂಡತಿಯನ್ನು ಚಿನ್ನು, ಮುನ್ನು, ಪುಟ್ಟ, ಬೇಬಿ ಇತ್ಯಾದಿ ಕರೆಯುತ್ತಾರೆ. ಹೇಗೆ ಕರೆದರೂ ಹೆಂಡತಿ ಹೆಂಡತಿಯೇ ತಾನೇ..". ಈ ಪ್ರಶ್ನೆಗೆ ಲೀಲಾ ದೇವಿ ಎನ್ನುವವರು ಉತ್ತರಿಸಿದ್ದು ಹೀಗೆ- “ನಾನು ಕಂಡಂತೆ ಹೆಂಡತಿಯನ್ನು ಹೆಸರು ಅಥವಾ ಕಿರುಹೆಸರಿಂದ ಕರೆಯುವುದು ಸಾಮಾನ್ಯ.

ಕೆಲ ಗಂಡಂದಿರು ಪ್ರೀತಿಯಿಂದ ‘ಚಿನ್ನ, ಪುಟ್ಟಿ, ರಾಣಿ’ ಎಂದು ಕರೆಯುತ್ತಾರೆ. ಕೆಲ ಹಿರಿಯರು ‘ಏನಮ್ಮ/ನೋಡಮ್ಮ’ ಅಂತಾರೆ. ಆದರೆ ನಮ್ಮ ಯಜಮಾನರಿಗೆ ಈ ವಿಧಾನಗಳು ಅನ್ವಯಿಸಲ್ಲ. ನನ್ನ ಹೆಸರು ಲೀಲಾದೇವಿ. ಮನೆಯವರೆಲ್ಲ ಸಾಮಾನ್ಯವಾಗಿ ನನ್ನನ್ನು ‘ಲೀಲಾ’ ಎಂದು ಕರೆಯು ತ್ತಾರೆ.

ನನ್ನ ಯಜಮಾನರ ವಿಧಾನ ಮಾತ್ರ ಬೇರೆ. ರಾಯರು ನನ್ನ ಕಳೆದ 21 ವರುಷಗಳ ವೈವಾಹಿಕ ಜೀವನದಲ್ಲಿ ಸದಾ ‘ಲೇ’ ಎಂದೇ ಕರೆದಿದ್ದಾರೆ. ಪ್ರಣಯ, ಮೋಹ, ವಾತ್ಸಲ್ಯ ತೋರುವಾಗ ‘ಲೇ ರಾಣಿ’ ಅಂತಾರೆ. ಕೆಲವೊಮ್ಮೆ ಸಿಟ್ಟಿಗೆದ್ದು ಏನ್ರೀ? ನನ್ನ ಹೆಸರಾದರು ನೆನಪುಂಟಾ? ಎಂದು ಕೇಳಿದ್ದೇನೆ. ‘ಲೇ, ಟೆನ್ಶನ್ ತಗೋಬೇಡ ಕಣೆ ಲೇ’ ಎಂದು ಉತ್ತರಿಸಿ ನಗುತ್ತ ಹೋಗುತ್ತಾರೆ".

ಇತ್ತೀಚಿನ ದಿನಗಳಲ್ಲಿ ಹೆಂಡತಿ ತನ್ನ ಗಂಡನನ್ನು ಏಕವಚನದಲ್ಲಿ ಸಂಬೋಧಿಸುವುದನ್ನು ಗಮನಿಸಬಹುದು. ಕೆಲವರಂತೂ ಗಂಡನನ್ನು ಹೋಗಲೋ, ಬಾರಲೋ ಅಂತ ಕರೆಯುತ್ತಾರೆ. ಇದು ಅಗೌರವ ಸೂಚಕವಲ್ಲ. ಅವರ ಪಾಲಿಗೆ ಇದು ಸಲುಗೆ. ಗಂಡನನ್ನು ಸರೀಕನಂತೆ, ಆಪ್ತವಾಗಿ ಕರೆಯುವುದರ ಸಂಕೇತ. ಗಂಡ ಹೆಂಡತಿಯ ಹೆಸರನ್ನು ಸಂಬೋಧಿಸುವುದಾದರೆ, ಹೆಂಡತಿಯೇಕೆ ಗಂಡನ ಹೆಸರು ಹೇಳಿ ಕರೆಯಬಾರದು ಎಂಬುದು ವಾದ.

ಇದರಲ್ಲಿ ತಪ್ಪೇನೂ ಇಲ್ಲ. ಇದು ಗಂಡ-ಹೆಂಡಿರ ನಡುವಿನ ಒಡಂಬಡಿಕೆ. ಗಂಡನ ಜತೆ ಆತನ ತಂದೆ-ತಾಯಿ ವಾಸವಾಗಿರುವ ಮನೆಯಲ್ಲಿ ಹೆಂಡತಿ ತನ್ನ ಗಂಡನ ಹೆಸರು ಹೇಳಿ ಸಂಬೋಧಿಸುವ ಧೈರ್ಯ ತೋರದಿರಬಹುದು. ಆಗ ‘ರೀ’ ಸಹಾಯಕಾರಿ. ಇನ್ನು ಕೆಲವರು ಗಂಡನನ್ನು ‘ಏನೂಂದ್ರೆ’ ಎನ್ನುವುದನ್ನು ಕೇಳಿದ್ದೇನೆ.

ವಿಶ್ವೇಶ್ವರ ಭಟ್‌

View all posts by this author