ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pooja Pillai Column: ಉಡುಪಿನ ರೂಪಾಂತರವೋ, ಓಲೈಕೆಯ ರಾಜಕಾರಣವೋ ?!

ಫೆಬ್ರವರಿಯಲ್ಲಿ ಬಂದಿದ್ದಾಗ ಜೆಲೆನ್ಸ್ಕಿ ‘ಆರ್ಮಿಗ್ರೀನ್ ಸ್ವೆಟ್‌ಶರ್ಟ್’ ಮತ್ತು ‘ಕಾರ್ಗೊ ಪ್ಯಾಂಟ್’ ಧರಿಸಿ ಬಂದಿದ್ದನ್ನು ಕಂಡು ಟ್ರಂಪ್ ಕೆಂಡಗಣ್ಣೇಶ್ವರನೇ ಆಗಿ ಬಿಟ್ಟಿದ್ದರು. “ಓಹ್, ಏನ್ ಸಖತ್ತಾಗಿ ಡ್ರೆಸ್ ಮಾಡ್ಕೊಂಡು ಬಂದಿದ್ದೀರ್ರೀ...!!" ಎಂಬ ವ್ಯಂಗ್ಯದ ಧಾಟಿಯಲ್ಲೇ ಜೆಲೆನ್ಸ್ಕಿಯವರನ್ನು ಅವರು ಸ್ವಾಗತಿ ಸಿದ್ದರು. ಸದರಿ ‘ಮಿಲಿಟರಿ-ಪ್ರೇರಿತ’ ಉಡುಪಿಗೂ ಉಕ್ರೇನ್ ಅಧ್ಯಕ್ಷರಿಗೂ ನಿಕಟ ಸಂಬಂಧವಿದೆ.

ರಾಜ ರಹಸ್ಯ

ಪೂಜಾ ಪಿಳ್ಳೈ

ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ರನ್ನು ಇತ್ತೀಚೆಗೆ ಭೇಟಿ ಮಾಡಿ ಒಂದಷ್ಟು ಮಾತುಕತೆ ನಡೆಸಿದರು. ಈ ವೇಳೆ ಜೆಲೆನ್ಸ್ಕಿ ಧರಿಸಿದ್ದ ಉಡುಪು ಹಲವರ ಗಮನ ಸೆಳೆದಿದೆ. ‘ಇದು ಟ್ರಂಪ್ ಯುಗ’ ಎಂಬ ಗ್ರಹಿಕೆಯಲ್ಲಿ ಅವರು ಧರಿಸಿದ್ದ ಉಡುಗೆಯು ಓಲೈಕೆ/ತುಷ್ಟೀಕರಣದೆಡೆಗಿನ ಒಂದು ಹೆಜ್ಜೆಯಾಗಿತ್ತೇ? ಎಂದು ಕೆಲವರು ಚರ್ಚಿಸುತ್ತಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ಇತ್ತೀಚಿನ ಮಾತುಕತೆಯ ವೇಳೆ ಧರಿಸಿದ್ದ ಉಡುಪು ನಿಜಕ್ಕೂ ಒಂದು ‘ಸೂಟ್’ ಆಗಿತ್ತೇ ಅಥವಾ ಇಲ್ಲವೇ ಎಂಬುದರ ಕುರಿತು ತೀರ್ಪುಗಾರರು ಇನ್ನೂ ತೀರ್ಮಾನಿಸಿಲ್ಲ!

ಆದರೆ, ಇಲ್ಲಿ ಮುಖ್ಯವಾದ ವಿಷಯವೆಂದರೆ ಟ್ರಂಪ್ ಮಹಾಶಯರು ಅದನ್ನು ಮೆಚ್ಚಿಕೊಂಡು ಬಿಟ್ಟಿದ್ದಾರೆ; ಉಕ್ರೇನ್‌ನಂಥ ಸಂಕಷ್ಟದಲ್ಲಿರುವ ದೇಶದ ಪಾಲಿಗೆ ಇದು ಸಣ್ಣ ಮಟ್ಟಿಗಿನ ಸಮಾಧಾನವನ್ನು ತಂದುಕೊಡುವ ಒಂದು ಬೆಳವಣಿಗೆ ಎಂದು ಭಾವಿಸಬೇಕೇ?! ಟ್ರಂಪ್ ಅವರನ್ನು ನಿಭಾಯಿಸುವುದು, ನಿರ್ವಹಿಸುವುದು ಒಂದೊಮ್ಮೆ ‘ರಕ್ಷಣಾತ್ಮಕ ಆಟ’ದಂಥ ಒಂದು ಕಸರತ್ತು ಎಂದಾದಲ್ಲಿ, ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲೆಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ಇತ್ತೀಚೆಗಷ್ಟೇ ಸಭೆ ಸೇರಿದ್ದ ಐರೋಪ್ಯ ಒಕ್ಕೂಟದ ನಾಯಕರು ಈ ನಿಟ್ಟಿನಲ್ಲಿ ಕೊಂಚ ಯಶಸ್ಸನ್ನು ಸಾಧಿಸಿದರು ಎನ್ನಲಡ್ಡಿಯಿಲ್ಲ!

ಟ್ರಂಪ್ ಪ್ರಸ್ತಾಪಿಸಿದ ‘ಶಾಂತಿಪಾಲನೆ’ಯ ನಿಯಮಗಳು/ಷರತ್ತುಗಳ ಬಗ್ಗೆ ಒಂದಿಷ್ಟು ಅನುಮಾನ ಗಳಿದ್ದರು ಕೂಡ, ಈ ಕುರಿತಾದ ಗುಸುಗುಸು ಮಾತುಗಳು ಸದರಿ ಶೃಂಗಸಭೆಯಲ್ಲಿ ಗುನುಗುತ್ತಿದ್ದವು, ವಿಚಾರ ವಿನಿಮಯದಲ್ಲಿ ಒಂದು ಮಟ್ಟದ ಸೌಹಾರ್ದತೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಇದನ್ನೂ ಓದಿ: Shashidhara Halady Column: ಮಕ್ಕಳೇ ಮಣ್ಣು ಹೊತ್ತ ಆಟದ ಮೈದಾನ !

ಬರೋಬ್ಬರಿ 3 ವರ್ಷಗಳಿಂದ ನಡೆಯುತ್ತಿರುವ ಈ ಸಂಘರ್ಷಕ್ಕೆ ಇತಿಶ್ರೀ ಹಾಡಲು ಆತಿಥೇಯರು ಮಾಡಿದ ಪ್ರಯತ್ನಗಳಿಗೆ ಎಲ್ಲಾ ಅತಿಥಿಗಳೂ ಸಾಕಷ್ಟು ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಎನ್ನಿ. ಎಲ್ಲಕ್ಕಿಂತ ಮುಖ್ಯವಾಗಿ ಇಂಥ ಪ್ರತಿಯೊಂದು ಬೆಳವಣಿಗೆಯನ್ನೂ ಹದ್ದಿನ ಕಣ್ಣಲ್ಲಿ ನೋಡುವ ರಾಜಕೀಯ ವೀಕ್ಷಕರ ಗಮನ ಸೆಳೆದಿದ್ದು- ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿಅವರು ಧರಿಸಿದ್ದ ‘ಸೂಟ್’ (ಅಥವಾ ಸೂಟ್ ನಂಥ ಒಂದು ಉಡುಪು; ಈ ಕುರಿತು ನಂತರ ಗಮನ ಹರಿಸೋಣ!).

ಬಹುತೇಕರಿಗೆ ಗೊತ್ತಿರುವಂತೆ, ಕಳೆದ ಫೆಬ್ರವರಿಯಲ್ಲಿ ಟ್ರಂಪ್‌ರ ಭೇಟಿಗೆ ಶ್ವೇತಭವನಕ್ಕೆ ಆಗಮಿಸಿದ್ದ ಜೆಲೆನ್ಸ್ಕಿ, ಆ ಸಂದರ್ಭಕ್ಕೆ ತಕ್ಕಂಥ ‘ಸೂಕ್ತ’ ಉಡುಪನ್ನು ಧರಿಸಿರಲಿಲ್ಲ (ಅಥವಾ ಧರಿಸಲು ನಿರಾ ಕರಿಸಿದರು) ಎಂಬ ಕಾರಣಕ್ಕೆ ಸಾಕಷ್ಟು ಗೇಲಿಗೂ, ನಿಂದನೆಗೂ ಒಳಗಾಗಿದ್ದರು. ಹೀಗಾಗಿ ಜೆಲೆನ್ಸ್ಕಿ ಅವರ ಶ್ವೇತಭವನ ಭೇಟಿಗೆ ಒಂಥರಾ ಕರಾಳಛಾಯೆ ಆವರಿಸಿತ್ತು. ಅದಕ್ಕೆ ಹೋಲಿಸಿದಾಗ, ಇತ್ತೀಚಿನ ಅವರ ಟ್ರಂಪ್ ಭೇಟಿಯ ಸಂದರ್ಭವು ಸಾಕಷ್ಟು ಪ್ರಗತಿಯನ್ನು ಎತ್ತಿ ತೋರಿಸಿದೆ ಎನ್ನಲಡ್ಡಿಯಿಲ್ಲ!

ಫೆಬ್ರವರಿಯಲ್ಲಿ ಬಂದಿದ್ದಾಗ ಜೆಲೆನ್ಸ್ಕಿ ‘ಆರ್ಮಿಗ್ರೀನ್ ಸ್ವೆಟ್‌ಶರ್ಟ್’ ಮತ್ತು ‘ಕಾರ್ಗೊ ಪ್ಯಾಂಟ್’ ಧರಿಸಿ ಬಂದಿದ್ದನ್ನು ಕಂಡು ಟ್ರಂಪ್ ಕೆಂಡಗಣ್ಣೇಶ್ವರನೇ ಆಗಿ ಬಿಟ್ಟಿದ್ದರು. “ಓಹ್, ಏನ್ ಸಖತ್ತಾಗಿ ಡ್ರೆಸ್ ಮಾಡ್ಕೊಂಡು ಬಂದಿದ್ದೀರ್ರೀ...!!" ಎಂಬ ವ್ಯಂಗ್ಯದ ಧಾಟಿಯಲ್ಲೇ ಜೆಲೆನ್ಸ್ಕಿಯವರನ್ನು ಅವರು ಸ್ವಾಗತಿಸಿದ್ದರು. ಸದರಿ ‘ಮಿಲಿಟರಿ-ಪ್ರೇರಿತ’ ಉಡುಪಿಗೂ ಉಕ್ರೇನ್ ಅಧ್ಯಕ್ಷರಿಗೂ ನಿಕಟ ಸಂಬಂಧವಿದೆ.

Screenshot_4 R

2022ರಲ್ಲಿ ರಷ್ಯಾ ಆಕ್ರಮಣಕ್ಕೆ ಶುರುವಿಟ್ಟುಕೊಂಡಾಗಿನಿಂದಲೂ ಜೆಲೆನ್ಸ್ಕಿ ಅವರು ಅಮೆರಿಕದ ಅಂದಿನ ಅಧ್ಯಕ್ಷ ಜೋ ಬೈಡನ್‌ರನ್ನು ಐದು ಬಾರಿ ಭೇಟಿಯಾಗಿದ್ದಿದೆ. ಇಂಥ ಪ್ರತಿಬಾರಿಯೂ ಅವರು ಧರಿಸುತ್ತಿದ್ದ ದಿರಿಸಿನ ರೂಪಾಂತರ ಇದಾಗಿತ್ತು. ಆದರೆ, ಟ್ರಂಪ್ ದರ್ಬಾರು ಶುರುವಾದ ನಂತರ, ಈ ಉಡುಪು ಒಂದಿಷ್ಟು ಕಿರಿಕಿರಿಯನ್ನು ಉಂಟುಮಾಡಿತೆನ್ನಬೇಕು; ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ (MAGA) ಅಭಿಯಾನದ ಮುಖವಾಣಿಯಾಗಿರುವ ‘Real America's Voice ’ ವಾಹಿನಿಗಾಗಿ ಕಾರ್ಯನಿರ್ವಹಿಸುವ ಶ್ವೇತಭವನದ ಪತ್ರಿಕಾ ತಂಡದ ಸದಸ್ಯ ಬ್ರಿಯಾನ್ ಗ್ಲೆನ್ ಅವರಂತೂ ಜೆಲೆನ್ಸ್ಕಿ ಅವರ ಈ ವೇಷಭೂಷಣವನ್ನು “ದೇಶದ ಅತ್ಯುನ್ನತ ಹುದ್ದೆಗೆ ತೋರಿದ ಅಗೌರವವಿದು" ಎಂದೇ ಅಪಸ್ವರ ಹಾಡಿದ್ದುಂಟು.

ಹೀಗಾಗಿ, ಕಳೆದ ಫೆಬ್ರವರಿಯಲ್ಲಿ ನಡೆದ ಈ ಪ್ರಸಂಗವು ಒಂದು ರೀತಿಯಲ್ಲಿ, ‘ಪ್ರದರ್ಶನದ ಪರಿ’ಯ ಕುರಿತು ತಮ್ಮದೇ ಆದ ಅಂತರ್ಬೋಧೆಯ ಗ್ರಹಿಕೆಯನ್ನು ಹೊಂದಿದ್ದ, ತಂತಮ್ಮ ಕಾರ್ಯಕ್ಷೇತ್ರ ಗಳನ್ನು ಉದ್ದೇಶಿಸಿ ಮಾತಾಡುವಾಗ ಎಂಥ ಉಡುಪನ್ನು ಧರಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿದ್ದ ಈ ಇಬ್ಬರು ಮಹಾಶಯರ ನಡುವಿನ ಒಂದು ಹಿತಾಸಕ್ತಿಯ ಘರ್ಷಣೆಯಾಗಿ ಬಿಟ್ಟಿತ್ತು ಎನ್ನಲಡ್ಡಿಯಿಲ್ಲ.

ಹಾಗೆ ನೋಡಿದರೆ, ಜೆಲೆನ್ಸ್ಕಿ ಮತ್ತು ಟ್ರಂಪ್ ಇಬ್ಬರಿಗೂ ಪ್ರದರ್ಶನ ಕಲೆಯ ವಿಷಯದಲ್ಲಿ ಅವರದ್ದೇ ಆದ ಇತಿಹಾಸವಿದೆ; ಜೆಲೆನ್ಸ್ಕಿ ಅವರು 2019ರಲ್ಲಿ ಉಕ್ರೇನ್ ಅಧ್ಯಕ್ಷರಾಗುವುದಕ್ಕೂ ಮುನ್ನ ಓರ್ವ ಯಶಸ್ವಿ ಹಾಸ್ಯಗಾರ ಮತ್ತು ನಟರಾಗಿದ್ದವರು, ‘ಸರ್ವೆಂಟ್ ಆಫ್ ದಿ ಪೀಪಲ್’ ಎಂಬ ಸರಣಿಯಲ್ಲಿ ವಹಿಸಿದ ಪ್ರಮುಖ ಪಾತ್ರದಿಂದಾಗಿ‌ ಹೆಸರುವಾಸಿಯಾಗಿದ್ದವರು (ರಾಜಕೀಯ ವೃತ್ತಿ ಜೀವನಕ್ಕೆ ಪದಾರ್ಪಣ ಮಾಡಲು ಇದೇ ಅವರಿಗೆ ಸ್ಪೂರ್ತಿ ನೀಡಿತು ಎನ್ನಲಾಗುತ್ತದೆ).

2022ರ ಫೆಬ್ರವರಿಯಲ್ಲಿ ರಷ್ಯಾದ ಆಕ್ರಮಣ ಶುರುವಾದ ನಂತರ, ಅವರ ‘ವಾರ್ಡ್‌ರೋಬ್ ’ನಲ್ಲಿ ಬದಲಾವಣೆಯಾಯಿತು, ಯುದ್ಧಕಾಲದ ನಾಯಕನಾಗಿ ಅವರು ತಳೆದ ಹೊಸ ನಿಲುವನ್ನು ಅಥವಾ ರೂಪಾಂತರವನ್ನು ಅದು ಪ್ರತಿಬಿಂಬಿಸಿತು. ತಮ್ಮ ದೇಶದ ಸಶಸ್ತ್ರ ಪಡೆಗಳೊಂದಿಗೆ ತಮಗಿರುವ ಸಹಮತ ಮತ್ತು ಐಕಮತ್ಯವನ್ನು ತೋರಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಉಡುಪು ಅದಾಗಿತ್ತು.

ಅಷ್ಟೇಕೆ, 2022ರ ಡಿಸೆಂಬರ್‌ನಲ್ಲಿ ‘ದಿ ಫೈನಾನ್ಷಿಯಲ್ ಟೈಮ್ಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕ್ರಿಸ್ಟೋಫರ್ ಮಿಲ್ಲರ್ ಜತೆ ಜೆಲೆನ್ಸ್ಕಿ ಮಾತನಾಡುತ್ತಾ, “ರಷ್ಯಾ ಜತೆಗಿನ ಸಂಘರ್ಷದಲ್ಲಿ ಉಕ್ರೇನ್ ವಿಜಯ ಸಾಧಿಸಿದ ನಂತರವಷ್ಟೇ ನಾನು ಸೂಟ್ ಮತ್ತು ಟೈ ಧರಿಸುವೆ, ಹಾಗೂ ಗಡ್ಡವನ್ನು ಶೇವ್ ಮಾಡುವೆ" ಎಂದು ಹೇಳಿಕೊಂಡಿದ್ದುಂಟು.

ಇನ್ನು ಟ್ರಂಪ್ ವಿಷಯಕ್ಕೆ ಬರೋಣ. ಅಮೆರಿಕದ ಅಧ್ಯಕ್ಷರಾದ ಮೊದಲ ರಿಯಾಲಿಟಿ ಟಿವಿ ಸ್ಟಾರ್ ಎನಿಸಿಕೊಂಡಿರುವ ಟ್ರಂಪ್ ಕೂಡ ನಿರ್ದಿಷ್ಟ ಸಂದೇಶಗಳನ್ನು ರವಾನಿಸಲು ಹೀಗೆ ವಿಭಿನ್ನ ಉಡುಪುಗಳನ್ನು ಧರಿಸುವುದಿದೆ. ದೇಶಭಕ್ತಿಯನ್ನು ತಮ್ಮದೇ ಆದ ರೀತಿಯಲ್ಲಿ ಬಿಂಬಿಸಲೆಂದು ಅವರು ಅಮೆರಿಕದ ರಾಷ್ಟ್ರಧ್ವಜದಲ್ಲಿನ ಬಣ್ಣಗಳನ್ನು ಒಳಗೊಂಡಿರುವ ರೀತಿಯಲ್ಲಿ ನೀಲಿ ಸೂಟ್, ಕೆಂಪು ಟೈ ಮತ್ತು ಬಿಳಿ ಅಂಗಿಯನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿದೆ.

ಅವರ ಈ ‘ವಸ ಸಂಯೋಜನೆ’ಯು ಅವರ ಆಡಳಿತವರ್ಗದ ಇತರ ಗಮನಾರ್ಹ ಸದಸ್ಯರಿಗೂ ಒಂದು ಮೇಲ್ಪಂಕ್ತಿ ಮವಸವಾಗಿದ್ದಿದೆ. ಅದರಲ್ಲೂ ನಿರ್ದಿಷ್ಟವಾಗಿ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹಾಗೂ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ವಸಸಂಹಿತೆಯನ್ನು ಅನುಸರಿಸುತ್ತಾರೆ. (ಟ್ರಂಪ್ ಮಹಾಶಯರ ಕಕ್ಷೆಯಲ್ಲಿರುವ ಮಹಿಳೆಯರಿಗೆ ಅವರದ್ದೇ ಆದ ಸಮವಸ್ತ್ರವಿದೆ- ಪರಿಪೂರ್ಣವಾಗಿ ಬಾಚಿಕೊಂಡು ಕ್ಲಿಪ್ ನಿಂದ ಬಿಗಿದುಕೊಂಡಿರುವ ತಲೆಗೂದಲು, ದೇಹವನ್ನು ಅಪ್ಪಿ ಹಿಡಿದಂತಿರುವ ಕವಚದಂಥ ಉಡುಪು ಹಾಗೂ ಕುತ್ತಿಗೆಯಲ್ಲಿ ನೇತಾಡುವ ಚಿನ್ನದ ಶಿಲುಬೆಯ ಸರ ಅದರಲ್ಲಿ ಸೇರಿವೆ ಎಂಬುದು ನಿಮ್ಮ ಗಮನಕ್ಕೆ). ಎಲ್ಲಕ್ಕಿಂತ ಮಿಗಿಲಾಗಿ ‘ರಾಜನಿಷ್ಠೆ’ಯನ್ನು ಗೌರವಿಸುವ, ಅದಕ್ಕೆ ಇನ್ನಿಲ್ಲದ ಮಹತ್ವ ನೀಡುವ ಅಧ್ಯಕ್ಷರೊಬ್ಬರ ಅಧೀನದಲ್ಲಿ ಕಾರ್ಯನಿರ್ವಹಿಸುವಾಗ ಇಂಥ ದೊಂದು ‘ವೇಷಭೂಷಣ-ನಿಷ್ಠೆ’ಯು, ಸ್ವತಃ ಆ ವ್ಯಕ್ತಿಗೆ ತೋರುವ ನಿಷ್ಠೆಯ ಮೌನಸೂಚಕವೇ ಆಗಿರುತ್ತದೆ.

ಈ ಕಾರಣದಿಂದಾಗಿಯೇ, ಟ್ರಂಪ್ ಜತೆಗಿನ ತಮ್ಮ ಎರಡನೇ ಭೇಟಿಗಾಗಿ ಶ್ವೇತಭವನಕ್ಕೆ ತೆರಳುವಾಗ ಯಥೋಚಿತ ವೇಷಭೂಷಣ ಧರಿಸುವ ಜೆಲೆನ್ಸ್ಕಿ ಅವರ ನಿರ್ಧಾರವನ್ನು ಒಂದು ‘ಶಮನಕಾರಕ’ ಅಥವಾ ‘ಓಲೈಕೆ’ಯ ವರ್ತನೆಯಾಗಿ ಕಾಣಲಾಗಿದೆ; ಇದು ಮತ್ತೊಬ್ಬರ ತುಷ್ಟೀಕರಣದ ಅಥವಾ ಅವರನ್ನು ಖುಷಿಪಡಿಸುವ ಮಹತ್ತರ ಇಚ್ಛೆಯ ಸೂಚಕವಾಗಿದೆ ಎನ್ನಬಹುದು.

ಟೈ ರಹಿತವಾಗಿರುವ, ಮಿಲಿಟರಿಯ ಗುರುತುಗಳೊಂದಿಗಿನ ಸಂಪೂರ್ಣ ಕಪ್ಪುಬಣ್ಣದ ಈ ದಿರಿಸು ಒಂದು ‘ಸೂಟ್’ ಎನಿಸಿಕೊಳ್ಳಲು ಅರ್ಹವಾಗಿದೆಯೇ ಅಥವಾ ಇಲ್ಲವೇ ಎಂಬುದು ಕೆಲವರ ಪ್ರಶ್ನೆ ಯಾಗಿತ್ತು; ಹೀಗಾಗಿ, ನ್ಯಾಟೋ ಶೃಂಗಸಭೆಗೂ ಮುನ್ನ ಹಮ್ಮಿಕೊಳ್ಳಲಾಗಿದ್ದ ಭೋಜನ ಕೂಟದಲ್ಲಿ ಉಕ್ರೇನ್ ಅಧ್ಯಕ್ಷರು ಇಂಥದೇ ಉಡುಪನ್ನು ಧರಿಸಿ ಭಾಗವಹಿಸಿದಾಗಿನಿಂದ ಈ ವಿಷಯದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದುದುಂಟು.

ಮಾತ್ರವಲ್ಲ, ಬೆಟ್ಟಿಂಗ್ ಕಾರ್ಯಕ್ಕಾಗಿ ಬಳಸಲಾಗುವ ‘ಪಾಲಿಮಾರ್ಕೆಟ್’ ಎಂಬ ಒಂದು ಕ್ರಿಪ್ಟೋ ಕರೆನ್ಸಿ ವೇದಿಕೆಯಲ್ಲೂ ಇದು ಭಾರಿ ವಿವಾದವನ್ನು ಹುಟ್ಟುಹಾಕಿತು. ಎಷ್ಟರ ಮಟ್ಟಿಗೆ ಎಂದರೆ, “ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಜುಲೈಗೂ ಮೊದಲು ಸೂಟ್ ಧರಿಸುತ್ತಾರೋ ಇಲ್ಲವೋ?" ಎಂಬ ವಿಷಯದ ಮೇಲೆ ಹಣವನ್ನು ಪಣವಾಗಿ ಇಡುವಂತೆ ಪಂಟರ್‌ಗಳನ್ನು ಕೇಳಲಾಯಿತು!

200 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಹಣವನ್ನು ಪಣವಾಗಿ ಇರಿಸಿಕೊಂಡಿದ್ದ ಈ ವಿವಾದ ಅಥವಾ ಚರ್ಚಾವಿಷಯವು ಒಂದು ಹಂತದಲ್ಲಿ ಭುಗಿಲೆದ್ದಿತು. ಅಂದರೆ, ನ್ಯಾಟೋ ಭೋಜನ ಕೂಟದ ಫೋಟೋಗಳು ಹೊರಬಂದ ನಂತರ, ‘ಜೆಲೆನ್ಸ್ಕಿ ಅವರು ಸೂಟ್ ಅನ್ನು ಧರಿಸುತ್ತಾರೆ’ ಎಂಬ ಗ್ರಹಿಕೆಗೆ ವಿರುದ್ಧವಾಗಿ ಪಣವನ್ನು ಹೂಡಿದ್ದವರ ಕಡೆಗೆ ಈ ಜೂಜು ವಾಲಿಕೊಂಡಾಗ ಸದರಿ ಚರ್ಚಾವಿಷಯಕ್ಕೆ ತೀವ್ರತೆ ಒದಗಿತು.

ಹೀಗೆ ವಿರುದ್ಧ ನಿಲುವನ್ನು ತೆಗೆದುಕೊಂಡವರು, ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಈ ಚರ್ಚಾ ವಿಷಯವನ್ನು ಕುಶಲ ರೀತಿಯಲ್ಲಿ ತಿರುಚಲಾಗಿದೆ ಎಂದು ಆರೋಪಿಸಿ, ಈ ಕುರಿತಾಗಿ ಮೊಕದ್ದಮೆ ಹೂಡುವುದಾಗಿ ಬೆದರಿಸಿದರು. ಈ ವಿಷಯದ ಬಗೆಗಿನ ‘ಭರತವಾಕ್ಯ’ ಅಥವಾ ಅಂತಿಮ ಮಾತು ಹೊಮ್ಮಿದ್ದು ಪುರುಷರ ಉಡುಪುಗಳಿಗೆ ಸಂಬಂಧಿಸಿದ Put This On ಎಂಬ ಬ್ಲಾಗ್‌ನ ಸಂಪಾದಕ ಡೆರೆಕ್ ಗೈ ಅವರಿಂದ.

ಅವರೆಂದಿದ್ದು ಹೀಗೆ: “ಜೆಲೆನ್ಸ್‌ಕಿ ಧರಿಸಿದ್ದ ಸೂಟು, ಒಂದು ‘ಸೂಟ್’ನ ತಾಂತ್ರಿಕ ವ್ಯಾಖ್ಯಾನಕ್ಕೆ ತಕ್ಕಂತೆ ಇತ್ತಾದರೂ, ಅಂದರೆ ಒಂದೇ ಬಟ್ಟೆಯಿಂದ ಕತ್ತರಿಸಿ ಜಾಕೆಟ್ ಮತ್ತು ಪ್ಯಾಂಟ್ ಅನ್ನು ಹೊಲಿದು ರೂಪಿಸಿದ ದಿರಿಸನ್ನು ಅದು ಒಳಗೊಂಡಿತ್ತಾದರೂ, ಮಿಲಿಟರಿ-ಪ್ರೇರಿತ ಗುರುತುಗಳನ್ನೂ ಅದು ಒಳಗೊಂಡಿತ್ತು.

ಅಂದರೆ, ಅದರ ಕಾಲರ್‌ನ ಆಕಾರ, ಹಿಮ್ಮಡಚಿದ ಕೋಟಿನ ಎದೆಯ ಭಾಗದ ಸ್ವರೂಪ ಹಾಗೂ ನಾಲ್ಕು ‘ಪ್ಯಾಚ್ ಪಾಕೆಟ್‌ಗಳನ್ನು’ ಒಳಗೊಂಡಿದ್ದ ಆ ಉಡುಪು, ಒಂದು ಸೂಟು ಹೊಂದಿರಬೇಕಾದ ಸಾಮಾಜಿಕ ನಿರೀಕ್ಷೆಗಳಿಗೆ ತಕ್ಕಂತಿರಲಿಲ್ಲ...". ಇದೆಲ್ಲ ವ್ಯಾಖ್ಯಾನಗಳು, ವಿವರಣೆಗಳು ಏನೇ ಇರಲಿ, ಅಂತಿಮವಾಗಿ ಟ್ರಂಪ್ ಮಹಾಶಯರು ಆ ‘ಸೂಟ್’ ಅನ್ನು ಇಷ್ಟಪಟ್ಟರು ಎಂಬುದು ಮಾತ್ರ ಮುಖ್ಯವಾಗಿತ್ತು!

‘ಓವಲ್ ಕಚೇರಿ’ಯಲ್ಲಿ ಮಾಧ್ಯಮದವರ ಸಮ್ಮುಖ ಇರುವಾಗ ಮತ್ತದೇ ಇಯಾನ್ ಗ್ಲೆನ್ ಅವರು ಈ ಸಲ “ನೀವು ಅದ್ಭುತವಾಗಿ ಕಾಣಿಸುತ್ತಿದ್ದೀರಿ" ಎಂದು ಜೆಲೆನ್ಸ್ಕಿಯವರನ್ನು ಮನದುಂಬಿ ಪ್ರಶಂಸಿಸಿ ದರು. ಇದನ್ನು ಕೇಳಿಸಿಕೊಂಡ ಟ್ರಂಪ್ ಮಹಾಶಯರು ಜೆಲೆನ್ಸ್ಕಿಯವರ ಭುಜವನ್ನೊಮ್ಮೆ ಲಘು ವಾಗಿ ಅದುಮಿ, “ನಾನೂ ಅದನ್ನೇ ಹೇಳಬಯಸುವೆ" ಎಂದರು!

ಸಂಕಷ್ಟದಲ್ಲಿರುವ ಉಕ್ರೇನ್ ದೇಶದ ಅಧ್ಯಕ್ಷ ಜೆಲೆನ್ಸ್ಕಿ ಕದನವಿರಾಮವನ್ನು ಆಶಿಸಿದ್ದರು, ಆದರೆ ಅವರಿಗೆ ಪ್ರಾಯಶಃ ಸಿಗುವುದು ಇಂಥ ಮೆಚ್ಚುಗೆ ಮಾತ್ರವೇ ಅನಿಸುತ್ತದೆ!

ಲೇಖಕಿ ಹಿರಿಯ ಪತ್ರಕರ್ತೆ)

(ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್)