ಭರವಸೆ
ಎನ್.ಚೆಲುವರಾಯಸ್ವಾಮಿ
ಯೂರಿಯಾ ಕೊರತೆಯನ್ನು ಎದುರಿಸಲು ರಾಜ್ಯ ಸರಕಾರವು ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮಾನ್ಯ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಈಗಾಗಲೇ 1.52 ಲಕ್ಷ ಮೆ.ಟನ್ ಯೂರಿಯಾದ ಬಾಕಿ ಸರಬರಾಜಿಗೆ ಮನವಿ ಸಲ್ಲಿಸಿzರೆ. ರಾಜ್ಯದ ಕೃಷಿ ಇಲಾಖೆಯ ಅಧಿಕಾರಿ ಗಳು ಶೀಘ್ರವಾಗಿ ರಾಜ್ಯಕ್ಕೆ ಅಗತ್ಯವಿರುವ ಯೂರಿಯಾವನ್ನು ಪೂರೈಸಲು ಕ್ರಮ ಕೈಗೊಳ್ಳು ತ್ತಿದ್ದಾರೆ.
ಕರ್ನಾಟಕದ ಕೃಷಿ ಕ್ಷೇತ್ರವು ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ರೈತರ ಪರಿಶ್ರಮದಿಂದಾಗಿ ನಮ್ಮ ರಾಜ್ಯವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದೇಶದ ಮುಂಚೂಣಿಯಲ್ಲಿದೆ. 2025ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆ ವಿಸ್ತೀರ್ಣವು ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಈ ಯಶಸ್ಸಿನ ಜತೆಗೆ ಯೂರಿಯಾ ರಸಗೊಬ್ಬರದ ಬೇಡಿಕೆಯ ಹೆಚ್ಚಳವು ಸವಾಲಾಗಿ ಪರಿಣಮಿಸಿದೆ. ಈ ಲೇಖನದಲ್ಲಿ, ರಾಜ್ಯದ ಯೂರಿಯಾ ರಸಗೊಬ್ಬರದ ಪೂರೈಕೆ, ಬೇಡಿಕೆ ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ.
2025ರ ಮುಂಗಾರು ಹಂಗಾಮಿಗೆ ರಾಜ್ಯಕ್ಕೆ ಒಟ್ಟು 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರದ ಬೇಡಿಕೆಯಿದೆ. ಏಪ್ರಿಲ್‌ನಿಂದ ಜುಲೈ ೨೦೨೫ರವರೆಗೆ ಕೇಂದ್ರ ಸರಕಾರವು 6.82 ಲಕ್ಷ ಮೆ.ಟನ್ ಹಂಚಿಕೆ ಮಾಡಿದ್ದು, ಇದರಲ್ಲಿ 5.26 ಲಕ್ಷ ಮೆ. ಟನ್ ಸರಬರಾಜಾಗಿದೆ. ಆರಂಭಿಕ ದಾಸ್ತಾನು (3.46 ಲಕ್ಷ ಮೆ.ಟನ್) ಸೇರಿದಂತೆ ಒಟ್ಟು 8.73 ಲಕ್ಷ ಮೆ.ಟನ್ ಲಭ್ಯವಿದ್ದು, 7.20 ಲಕ್ಷ ಮೆ.ಟನ್ ಮಾರಾಟವಾಗಿ, 1.54 ಲಕ್ಷ ಮೆ.ಟನ್ ದಾಸ್ತಾನು ಉಳಿದಿದೆ.
ಆದರೆ, ಜುಲೈ ತಿಂಗಳಿನ 2.25 ಲಕ್ಷ ಮೆ. ಟನ್ ಬೇಡಿಕೆಗೆ 1.39 ಲಕ್ಷ ಮೆ.ಟನ್ (ಶೇ.62ರಷ್ಟು) ಮಾತ್ರ ಸರಬರಾಜಾಗಿದ್ದು, ಸುಮಾರು 87,040 ಮೆ.ಟನ್ ಕೊರತೆ ಯಿದೆ. ಏಪ್ರಿಲ್‌ನಿಂದ ಜುಲೈವರೆಗೆ ಕೇಂದ್ರ ಸರಕಾರದಿಂದ ಇನ್ನೂ 1.52 ಲಕ್ಷ ಮೆಟ್ರಿಕ್ ಟನ್ ಸರಬರಾಜು ಬಾಕಿ ಇದೆ. ಜಿಲ್ಲಾವಾರು ಯೂರಿಯಾ ವಿತರಣೆ ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳ ಯೂರಿಯಾ ರಸಗೊಬ್ಬರದ ಬೇಡಿಕೆ, ಪೂರೈಕೆ ಮತ್ತು ದಾಸ್ತಾನು ವಿವರಗಳು ಈ ಕೆಳಗಿನಂತಿವೆ: ದಾವಣಗೆರೆ ಜಿಲ್ಲೆ: 33004 ಮೆ.ಟನ್ ಬೇಡಿಕೆಗೆ 33,328 ಮೆ.ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 13,206 ಮೆ.ಟನ್), 3,914 ಮೆ.ಟನ್ ದಾಸ್ತಾನು ಉಳಿದಿದೆ. ಹಾವೇರಿ ಜಿಲ್ಲೆ: 40,601 ಮೆ.ಟನ್ ಬೇಡಿಕೆಗೆ 60,028 ಮೆ.ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 19,262 ಮೆ.ಟನ್), 6,346 ಮೆ.ಟನ್ ದಾಸ್ತಾನು ಲಭ್ಯವಿದೆ.
ಇದನ್ನೂ ಓದಿ: Hari Paraak Column: ಅಕ್ವೇರಿಯಂನಲ್ಲಿ ಮೀನು ಸಾಕುವವನು : ವೆಜಿಟೇರಿಯನ್
ಗದಗ ಜಿಲ್ಲೆ: 17,228 ಮೆ.ಟನ್ ಬೇಡಿಕೆಗೆ 21,410 ಮೆ.ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 6,857 ಮೆ.ಟನ್), 2,094 ಮೆ.ಟನ್ ದಾಸ್ತಾನು ಉಳಿದಿದೆ. ಧಾರವಾಡ ಜಿಲ್ಲೆ: 17,224 ಮೆ.ಟನ್ ಬೇಡಿಕೆಗೆ 23,433 ಮೆ.ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 7,212 ಮೆ.ಟನ್), 2,661 ಮೆ.ಟನ್ ದಾಸ್ತಾನು ಲಭ್ಯವಿದೆ.
ಕೊಪ್ಪಳ ಜಿಲ್ಲೆ: 31,252 ಮೆ.ಟನ್ ಬೇಡಿಕೆಗೆ 34,653 ಮೆ. ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 12,328 ಮೆ.ಟನ್), 5,379 ಮೆ.ಟನ್ ದಾಸ್ತಾನು ಉಳಿದಿದೆ. ವಿಜಯನಗರ ಜಿಲ್ಲೆ: 26,293 ಮೆ.ಟನ್ ಬೇಡಿಕೆಗೆ 35,224 ಮೆ.ಟನ್ ಸರಬರಾಜಾಗಿದ್ದು (ಆರಂಭಿಕ ದಾಸ್ತಾನು 10,845 ಮೆ.ಟನ್), 3,722 ಮೆ.ಟನ್ ದಾಸ್ತಾನು ಲಭ್ಯವಿದೆ.
ರಾಜ್ಯದಲ್ಲಿ ಯೂರಿಯಾ ಬೇಡಿಕೆಯ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಮುಂಚಿತವಾಗಿ ಆರಂಭವಾಗಿದ್ದರಿಂದ ಬಿತ್ತನೆಯ ಕಾರ್ಯವು ಶೀಘ್ರವಾಗಿ ಪ್ರಾರಂಭವಾಯಿತು. ಇದರಿಂದ ಬಿತ್ತನೆ ವಿಸ್ತೀರ್ಣವು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ, ವಿಶೇಷ ವಾಗಿ ಮುಸುಕಿನ ಜೋಳದ ವಿಸ್ತೀರ್ಣವು ಸುಮಾರು 2 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ.
ಇದರ ಜತೆಗೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಸುಮಾರು 13000 ಹೆಕ್ಟೇರ್‌ನಲ್ಲಿ ಮರುಬಿತ್ತನೆ ಕೈಗೊಳ್ಳಲಾಗಿದೆ. ತುಂಗಭದ್ರಾ, ಕೃಷ್ಣಾ ಮತ್ತು ಕಾವೇರಿ ಜಲಾಶಯಗಳಿಂದ ಮುಂಚಿತವಾಗಿ ನೀರು ಬಿಡುಗಡೆಯಾದ ಕಾರಣ, ಅಚ್ಚುಕಟ್ಟು ಪ್ರದೇಶಗಳಲ್ಲಿ ನಾಟಿಯ ಕಾರ್ಯವು ಶೀಘ್ರವಾಗಿ ನಡೆಯಿತು. ಈ ಎ ಅಂಶಗಳು ಯೂರಿಯಾ ಬೇಡಿಕೆಯನ್ನು ಹೆಚ್ಚಿಸಿವೆ.
ಯೂರಿಯಾ ಕೊರತೆಯನ್ನು ಎದುರಿಸಲು ರಾಜ್ಯ ಸರಕಾರವು ಕೇಂದ್ರ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮಾನ್ಯ ಮುಖ್ಯಮಂತ್ರಿಗಳು ಕೇಂದ್ರ ಸರಕಾರಕ್ಕೆ ಈಗಾಗಲೇ 1.52 ಲಕ್ಷ ಮೆ.ಟನ್ ಯೂರಿಯಾದ ಬಾಕಿ ಸರಬರಾಜಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಕೃಷಿ ಇಲಾಖೆಯ ಅಧಿಕಾರಿಗಳು ಕೇಂದ್ರದ ರಸಗೊಬ್ಬರ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶೀಘ್ರವಾಗಿ ರಾಜ್ಯಕ್ಕೆ ಅಗತ್ಯವಿರುವ ಯೂರಿಯಾವನ್ನು ಪೂರೈಸಲು ಕ್ರಮ ಕೈಗೊಳ್ಳುತ್ತಿದ್ದಾರೆ.
ರಾಜ್ಯದಿಂದ ಆಯ್ಕೆಯಾದ ಸಂಸದರು ಹಾಗೂ ಕೇಂದ್ರ ಸಚಿವರು ರಾಜ್ಯಕ್ಕೆ ಅಗತ್ಯವಿರುವ ಯೂರಿಯಾವನ್ನು ತ್ವರಿತವಾಗಿ ಬಿಡುಗಡೆ ಮಾಡಿಸುವ ದಿಸೆಯಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸುವಂತೆ ನಾನು ಪತ್ರ ಮುಖೇನ ಮನವಿ ಮಾಡಿದ್ದೇನೆ. ಇದರ ಜತೆಗೆ, ಡಿಎಪಿ ರಸಗೊಬ್ಬರ ಕೊರತೆಯ ಸಂದರ್ಭದಲ್ಲಿ ಕಾಂಪ್ಲೆಕ್ಟ್ ರಸಗೊಬ್ಬರವನ್ನು ಪರ್ಯಾಯವಾಗಿ ಬಳಸುವ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗಿದೆ.
ಅತಿಯಾದ ಯೂರಿಯಾ ಬಳಕೆಯು ಮಣ್ಣಿನ ಫಲವತ್ತತೆ, ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಬೆಳೆಗಳು ಕೀಟಬಾಧೆಗೆ ಮತ್ತು ರೋಗಗಳಿಗೆ ಒಳಗಾಗುವ ಸಾಧ್ಯತೆಯೂ ಇದೆ. ಆದ್ದರಿಂದ, ರೈತರು ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಯೂರಿಯಾವನ್ನು ಬಳಸಬೇಕು. ಲಭ್ಯವಿರುವ ಯೂರಿಯಾವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕೊರತೆಯನ್ನು ಎದುರಿಸಬಹುದು.
ಇದರ ಜತೆಗೆ, ರಸಗೊಬ್ಬರ ಕೊರತೆಯನ್ನು ಎದುರಿಸಲು ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ನ್ಯಾನೊ ಯೂರಿಯಾವನ್ನು ಬಳಸುವಂತೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ನ್ಯಾನೊ ಯೂರಿಯಾವು ಸಾಂಪ್ರದಾಯಿಕ ಯೂರಿಯಾ ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುವುದರಿಂದ, ಇದು ಬೆಳೆಗಳಿಗೆ ಸಾರಜನಕವನ್ನು ತ್ವರಿತ ವಾಗಿ ಮತ್ತು ಪರಿಣಾಮಕಾರಿಯಾಗಿ ಒದಗಿಸುತ್ತದೆ.
ಇದನ್ನು ಡ್ರೋನ್‌ಗಳ ಮೂಲಕ ಸಿಂಪಡಿಸುವುದರಿಂದ ಶ್ರಮ ಮತ್ತು ವೆಚ್ಚ ಎರಡೂ ಕಡಿಮೆ ಯಾಗುತ್ತದೆ. ಕೆಲವೆಡೆ ನಾನು ಸ್ವತಃ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ರೈತರಿಗೆ ನ್ಯಾನೊ ಯೂರಿಯಾದಿಂದ ಆಗುವ ಲಾಭಗಳ ಬಗ್ಗೆ ವಿವರಿಸಿದ್ದೇನೆ. ಈ ತಂತ್ರಜ್ಞಾನವು ರಾಸಾಯನಿಕ ಗೊಬ್ಬರಗಳಿಂದ ಉಂಟಾಗುವ ಮಣ್ಣಿನ ದೂಷಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದರಿಂದ ಮಣ್ಣಿನ ಫಲವತ್ತತೆಯನ್ನು ದೀರ್ಘಕಾಲೀನವಾಗಿ ಕಾಪಾಡಿಕೊಳ್ಳಬಹುದು.
ರಾಜ್ಯ ಸರಕಾರವು ಈ ತಂತ್ರಜ್ಞಾನವನ್ನು ರೈತರಿಗೆ ಒದಗಿಸಲು ಸಬ್ಸಿಡಿಗಳನ್ನು ನೀಡುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ನ್ಯಾನೊ ಯೂರಿಯಾದ ಬಳಕೆ ಜನಪ್ರಿಯವಾಗುತ್ತಿದೆ. ಡ್ರೋನ್ ತಂತ್ರeನದ ಬಳಕೆಯನ್ನು ಉತ್ತೇಜಿಸಲು ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತಿದೆ, ಇದರಿಂದ ಆಧುನಿಕ ಕೃಷಿಯಲ್ಲಿ ರೈತರು ಮುಂಚೂಣಿಯಲ್ಲಿರುವಂತೆ ಮಾಡಲಾಗಿದೆ.
ರಾಸಾಯನಿಕ ಗೊಬ್ಬರಗಳಾದ ಡಿಎಪಿ ಮತ್ತು ಯೂರಿಯಾದ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಈ ಸಂದರ್ಭದಲ್ಲಿ, ಕರ್ನಾಟಕ ಸರಕಾರವು ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಮೂಲಕ ರೈತರಿಗೆ ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. ಸಾವಯವ ಕೃಷಿಯು ರಾಸಾಯನಿಕ ಗೊಬ್ಬರಗಳ ಬದಲಿಗೆ ಜೈವಿಕ ಗೊಬ್ಬರ, ಎರೆಗೊಬ್ಬರ ಮತ್ತು ಕೀಟನಾಶಕಗಳಿಗೆ ಬದಲಾಗಿ ನೈಸರ್ಗಿಕ ಕೀಟ ನಿಯಂತ್ರಣ ವಿಧಾನಗಳನ್ನು ಬಳಸುತ್ತದೆ.
ಕರ್ನಾಟಕದಲ್ಲಿ ಹಂತ ಹಂತವಾಗಿ ನೈಸರ್ಗಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವ ದಿಸೆಯಲ್ಲಿ ಸುಭಾಶ್ ಪಾಳೇಕರ್ ಅವರೊಂದಿಗೆ ವಿವಿಧ ಹಂತದಲ್ಲಿ ಚರ್ಚೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾವನ್ನು ಸಾವಯವ ತಾಲೂಕನ್ನಾಗಿ ಘೋಷಣೆ ಮಾಡಲಾಗಿದ್ದು, ಸಾವಯವ ಕೃಷಿಗೆ ಅಗತ್ಯವಾದ ನೆರವನ್ನು ನೀಡುವುದರ ಜತೆಗೆ ಮಾರುಕಟ್ಟೆ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಹೆಚ್ಚಿನ ಬೇಡಿಕೆಯಿರುವ ಜಿಲ್ಲೆಗಳಿಗೆ ಆದ್ಯತೆಯ ಮೇರೆಗೆ ಯೂರಿಯಾ ಸರಬರಾಜು ಮಾಡಲು ಇಲಾಖೆಯು ಯೋಜನೆ ರೂಪಿಸಿದೆ. ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರದ ವಿತರಣೆ ಯನ್ನು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ನಡೆಸಲಾಗುವುದು. ಈ ಬಾರಿಯ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ನಮ್ಮ ಸರಕಾರ ಶಕ್ತಿ ಮೀರಿ ಪ್ರಯತ್ನಿಸಲಿದೆ. ಗುಣಮಟ್ಟದ ಬಿತ್ತನೆ ಬೀಜ, ಸಕಾಲಕ್ಕೆ ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ರೈತ ಬಾಂಧವರಿಗೆ ವಿತರಿಸಿ, ರಾಜ್ಯದ ಕೃಷಿ ಇಲಾಖೆಯು ರೈತರ ಜತೆಗೆ ಭುಜಕ್ಕೆ ಭುಜವಾಗಿ ನಿಂತು, ಈ ಮುಂಗಾರು ಹಂಗಾಮನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬದ್ಧವಾಗಿದೆ.
(ಲೇಖಕರು ಕೃಷಿ ಸಚಿವರು, ಕರ್ನಾಟಕ ಸರಕಾರ)