ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಮತಚೌರ್ಯ ತಿದ್ದುವ ಮಹತ್ಕಾರ್ಯವೀಗ ಅನಿವಾರ್ಯ !

ಸದ್ಯಕ್ಕೆ, ‘ಮತಚೌರ್ಯ’ ಎಂಬ ಹೆಸರು ಹೊತ್ತ ವಿಷಯ ಟ್ರೆಂಡಿಂಗ್‌ನಲ್ಲಿದೆ! ಮತಪಟ್ಟಿಯಲ್ಲಿ ಆಗಿರುವ ದೋಷಗಳು ಹಾಗೂ ಹಲವೆಡೆ ಮತದಾನವು ಪಾರದರ್ಶಕವಾಗಿ ನಡೆದಿಲ್ಲ ಎನ್ನುವ ವಿಷಯದ ಕುರಿತು ಕಾಂಗ್ರೆಸ್ ಪಕ್ಷವು ಮಾಧ್ಯಮಗಳ ಮತ್ತು ಜನರ ಗಮನವನ್ನು ತನ್ನತ್ತ ಸೆಳೆಯುವ ಪ್ರಯತ್ನ ವನ್ನು ಮಾಡುತ್ತಿದೆ.

ಮತಭೇದ

ರವೀ ಸಜಂಗದ್ದೆ

ರಾಜಕೀಯವಿಲ್ಲದ ಜಾಗವಿಲ್ಲ ಎಂಬುದೊಂದು ಮಾತಿದೆ. ಅದು ಸತ್ಯವೂ ಹೌದು. ಸಣ್ಣ ಸಂಸಾರ ದಿಂದ ರಾಷ್ಟ್ರಪತಿ ಭವನದವರೆಗೆ, ಹಳ್ಳಿಯಲ್ಲಿ ಹಾದು ಹೋಗುವ ಸಣ್ಣ ತೊರೆಗೆ ‘ಸಂಕ’ ಕಟ್ಟುವ ವಿಚಾರದಿಂದ ಹಿಡಿದು, ಅಮೆರಿಕವು ‘ಸುಂಕ’ ಹೆಚ್ಚಿಸುವವರೆಗಿನ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎಲ್ಲಾ ಕಡೆ ಹಾಸುಹೊಕ್ಕಾಗಿರುವುದು ಇದೇ ‘ರಾಜಕೀಯ’! ಇದೇ ರೀತಿಯಲ್ಲಿ ಚಲಾವಣೆಯಲ್ಲಿರುವ ಇನ್ನೊಂದು ಮಾತೆಂದರೆ, ‘ರಾಜಕೀಯದವರು ಮಾಡದ/ಮಾತನಾಡದ ವಿಷಯವಿಲ್ಲ!’ ಎಂಬುದು.

ರಾಜಕೀಯದವರು ಹೊಸ ಹೊಸ ವಿಷಯಗಳೊಂದಿಗೆ ರಾಡಿ ಎಬ್ಬಿಸುತ್ತಲೇ ಇರುತ್ತಾರಾದ್ದರಿಂದ, ಮಾಧ್ಯಮಗಳಿಗೆ ಅದು ಬಿಟ್ಟಿ ವಿಷಯ (ಕಂಟೆಂಟ್), ಜನಸಾಮಾನ್ಯರಿಗೆ ಪುಗಸಟ್ಟೆ ಮನರಂಜನೆ! ಹೀಗೆ ಈ ವಿಷಯದ ಕುರಿತಾಗಿ ಒಂದಷ್ಟು ದಿನ ‘ರಾಜಕೀಯ ಆಟಾಟೋಪ’ ನಡೆಯುತ್ತಿರುತ್ತದೆ. ಮಾಧ್ಯಮಗಳು ತಂತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಈ ವಿಚಾರಗಳನ್ನು ರಂಗುರಂಗಾಗಿ ಬಿತ್ತರಿಸುತ್ತವೆ.

ಮತ್ತೊಂದು ಹೊಸ ‘ಬ್ರೇಕಿಂಗ್ ನ್ಯೂಸ್’ ಬರುವವರೆಗೆ ಅದೇ ವಿಷಯ ಚರ್ವಿತಚರ್ವಣ. ಸದ್ಯಕ್ಕೆ, ‘ಮತಚೌರ್ಯ’ ಎಂಬ ಹೆಸರು ಹೊತ್ತ ವಿಷಯ ಟ್ರೆಂಡಿಂಗ್‌ನಲ್ಲಿದೆ! ಮತಪಟ್ಟಿಯಲ್ಲಿ ಆಗಿರುವ ದೋಷಗಳು ಹಾಗೂ ಹಲವೆಡೆ ಮತದಾನವು ಪಾರದರ್ಶಕವಾಗಿ ನಡೆದಿಲ್ಲ ಎನ್ನುವ ವಿಷಯದ ಕುರಿತು ಕಾಂಗ್ರೆಸ್ ಪಕ್ಷವು ಮಾಧ್ಯಮಗಳ ಮತ್ತು ಜನರ ಗಮನವನ್ನು ತನ್ನತ್ತ ಸೆಳೆಯುವ ಪ್ರಯತ್ನ ವನ್ನು ಮಾಡುತ್ತಿದೆ.

ಇದನ್ನೂ ಓದಿ: Ravi Sajangadde Column: ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನೇನು ದಕ್ಕಲಿದೆ ಹಸಿರು ನಿಶಾನೆ!

ಈ ವಿಚಾರವಾಗಿ ಹೇಳಿಕೆಗಳು ಹೊಮ್ಮುತ್ತಿವೆ, ಪ್ರತಿಭಟನೆಗಳು ನಡೆಯುತ್ತಿವೆ; ಕೇಂದ್ರ ಮಟ್ಟದಲ್ಲಿ ಹೆಚ್ಚಿನ ವಿಪಕ್ಷಗಳು ಕಾಂಗ್ರೆಸ್ ಜತೆಗೆ ಸೇರಿಕೊಂಡು ಇದನ್ನು ರಾಷ್ಟ್ರೀಯ ವಿಚಾರವಾಗಿ ಬಿಂಬಿಸು ತ್ತಿವೆ. ಈ ಆರೋಪಗಳಿಗೆ ಬಿಜೆಪಿ (ಎನ್‌ಡಿಎ) ಮತ್ತು ಚುನಾವಣಾ ಆಯೋಗ ಸೆಡ್ಡು ಹೊಡೆದು ಪ್ರತ್ಯಾರೋಪ ಮಾಡುತ್ತಿವೆ, ಸಾಕ್ಷಿ ಕೇಳುತ್ತಿವೆ. ಪತ್ರಿಕಾಗೋಷ್ಠಿಗಳಲ್ಲಿ, ಸುದ್ದಿವಾಹಿನಿಗಳ ‘ಪ್ಯಾನಲ್ ಡಿಸ್ಕಷನ್’ಗಳಲ್ಲಿ ಬೊಬ್ಬೆ ಹೊಡೆಯುವವರ ಪಾಲಿಗೆ ಇದು ಚಾಲ್ತಿಯಲ್ಲಿರಲು ಹೊಸ ಅವಕಾಶ!

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಅಭ್ಯರ್ಥಿಗಳು 50000 ಮತಗಳಿಗಿಂತ ಕಡಿಮೆ ಅಂತರದಲ್ಲಿ ಸೋತಿರುವ ಬಹಳಷ್ಟು ಕಡೆಗಳಲ್ಲಿ ಮತಚೌರ್ಯ/ನಕಲಿಮತದ ಹಾವಳಿ ಯಾಗಿದೆ ಎಂಬುದು ಕಾಂಗ್ರೆಸ್ ಪಕ್ಷದ ನೇರ ಆರೋಪ. “ಇಂಥ ಕಡೆಗಳಲ್ಲಿ ಮತದಾರರ ಪಟ್ಟಿ ದೋಷಪೂರಿತವಾಗಿದೆ, ಹಲವಾರು ಅಕ್ರಮ ಮತದಾರರು ಸೇರ್ಪಡೆಗೊಂಡಿದ್ದಾರೆ; ಕೆಲವು ಮತದಾರರು 2-3 ಬೂತ್‌ಗಳಲ್ಲಿ ಮತ ಚಲಾಯಿಸಿದ್ದಾರೆ;

ಸಣ್ಣ ಕಟ್ಟಡದ ಮನೆಗಳ ಒಂದೇ ವಿಳಾಸದಲ್ಲಿ 80ಕ್ಕೂ ಹೆಚ್ಚು ಮತದಾರರ ವಿಳಾಸವಿದೆ; ಕೆಲವು ಮತದಾರರ ಗುರುತಿನ ಚೀಟಿಗಳಲ್ಲಿ ತಂದೆಯ ಹೆಸರು, ವಿಳಾಸ ಅಪೂರ್ಣವಾಗಿದೆ. ಇಷ್ಟೆಲ್ಲಾ ಅಕ್ರಮ ನಡೆಸಲು ಚುನಾವಣಾ ಆಯೋಗವು ಬಿಜೆಪಿಯ ಪರವಾಗಿ ಕೆಲಸ ಮಾಡಿದೆ. ಇಂಥ ಅಕ್ರಮ ಮತದಾರರ ಮತಗಳು ಬಿಜೆಪಿಗೆ ದಕ್ಕಿದ ಪರಿಣಾಮ ಆಯಾ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ" ಎನ್ನುವುದು ಕಾಂಗ್ರೆಸ್‌ನ ಆರೋಪ.

ಕರ್ನಾಟಕದ 9 ಲೋಕಸಭಾ ಕ್ಷೇತ್ರಗಳಲ್ಲಿ ಇಂಥ ಅಕ್ರಮ ನಡೆದಿದೆ ಎಂದು ಆರೋಪಿಸಲಾಯಿತು. ಅದರ ‘ಸ್ಯಾಂಪಲ್’ ಎನ್ನುವಂತೆ ಬೆಂಗಳೂರಿನ ಮಹದೇವಪುರ ಕ್ಷೇತ್ರದ ವಿವರಣೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂDiಯವರು ಮಾಧ್ಯಮದೆದುರು ಇತ್ತೀಚೆಗೆ ನೀಡಿ ಒಂದಿಷ್ಟು ಸಂಚಲನ ಮೂಡಿಸಲು ಯತ್ನಿಸಿದರು. “ಬಿಜೆಪಿಗೆ ನೆರವಾಗುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಈ ಹಗರಣದಲ್ಲಿ ಭಾಗಿಯಾಗಿದೆ" ಎಂಬುದು ಅವರ ನೇರ ಆರೋಪ.

ಹೀಗೆ ಸಣ್ಣ ಕಿಡಿಯೊಂದಿಗೆ ಆರಂಭವಾದ ಈ ವಿಚಾರವೀಗ ಹೆಚ್ಚು ಸದ್ದು ಮಾಡುತ್ತಿದೆ; ಆದರೆ, ಕಾಂಗ್ರೆಸ್‌ನ ನಿಲುವಿಗೆ ವ್ಯತಿರಿಕ್ತ ನಿಲುವು ತಳೆದು ಮಾತಾಡಿದ್ದಕ್ಕೆ ಕರ್ನಾಟಕ ಸರಕಾರದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ತಲೆದಂಡವಾಗುವಂತಾಗಿದೆ. ಯಾರೋ ಯಾರಿಗೋ ಹೊಡೆದ ಕಲ್ಲಿಗೆ ಇನ್ಯಾರೋ ಬಲಿಯಾಗಿದ್ದಾರೆ!

ಚರಿತ್ರೆಯನ್ನು ಗಮನಿಸಿದರೆ, ಈ ದೇಶದಲ್ಲಿ ಚುನಾವಣೆಗಳು ವಿಷಯಾಧಾರಿತವಾಗಿ, ನ್ಯಾಯೋಚಿತ ವಾಗಿ, ಪಾರದರ್ಶಕವಾಗಿ ನಡೆದಿಲ್ಲದ ಕ್ಷೇತ್ರಗಳ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಜಾತಿ-ಪಂಗಡ, ಸುಳ್ಳು ಆಶ್ವಾಸನೆಗಳು, ಒಳ ಒಪ್ಪಂದಗಳು, ಒಳೇಟುಗಳು, ನಾಟಕೀಯ ಸಿದ್ಧಾಂತಗಳು, ಹಣ-ಹೆಂಡ ಹಂಚಿಕೆಯ ಬಲದೊಂದಿಗೇ ಇಂಥ ಕ್ಷೇತ್ರಗಳಲ್ಲಿನ ಚುನಾವಣೆಗಳು ನಡೆದಿರುವುದನ್ನು ಅಲ್ಲಗಳೆಯಲಾಗದು.

ಚುನಾವಣಾ ವ್ಯವಸ್ಥೆಯು ಹೀಗಾಗುವಲ್ಲಿ ಎಲ್ಲಾ ಪಕ್ಷಗಳ ಪಾಲೂ ಇದೆ. ಹಣದ ಸಾಮರ್ಥ್ಯ, ರಾಜಕೀಯ ಪಕ್ಷಗಳ ಕೃಪಾಕಟಾಕ್ಷ ಇಲ್ಲದ ಸಭ್ಯರು ಚುನಾವಣೆಯನ್ನು ಗೆಲ್ಲುವುದು ಕನಸಿನ ಮಾತು ಎಂಬಂತಾಗಿದೆ (ಇದಕ್ಕೆ ಅಪವಾದವೆಂಬಂತೆ ಬೆರಳೆಣಿಕೆಯಷ್ಟು ಕ್ಷೇತ್ರಗಳಲ್ಲಿ ಒಳ್ಳೆಯವರು ಗೆದ್ದಿರುವ ನಿದರ್ಶನಗಳೂ ಇವೆ, ಇರಲಿ).

ರಾಜಕೀಯವೆಂಬುದು ‘ಸಮಾಜಸೇವೆ’ಯ ಹೆಸರಿನಲ್ಲಿ ಕೆಲವರು ದುಡ್ಡು ಮಾಡುವ, ಸಾಮ್ರಾಜ್ಯ ವಿಸ್ತರಿಸುವ, ಕೋಟಿಗಳ ಲೆಕ್ಕದಲ್ಲಿ ಆಸ್ತಿಪಾಸ್ತಿಯನ್ನು ಹೆಚ್ಚಿಸಿಕೊಳ್ಳುವ ದಂಧೆಯಾಗಿ ಮಾರ್ಪಟ್ಟು ಸಾಕಷ್ಟು ವರ್ಷಗಳೇ ಆಗಿವೆ! ಹೀಗಾಗಿ ರಾಜಕೀಯವು ಶುದ್ಧಹಸ್ತರಿಗೆ ಹೇಳಿಮಾಡಿಸಿದ್ದಲ್ಲ ಎಂಬುದು ಸರ್ವವಿದಿತ.

ಇನ್ನು, ರಾಹುಲರು ಗುಲ್ಲೆಬ್ಬಿಸಿರುವ ಮತಚೌರ್ಯದ ವಿಷಯಕ್ಕೆ ಬರುವುದಾದರೆ, ತಂತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಕಷ್ಟು ರಾಜಕೀಯ ಪಕ್ಷಗಳು ಮತ್ತು ಅವುಗಳ ಒಡನಾಡಿಗಳು ತಮ್ಮ ಮತಬ್ಯಾಂಕ್ ಹೆಚ್ಚಿಸಿಕೊಳ್ಳಲು ಅನ್ಯಾನ್ಯ ಕಳ್ಳದಾರಿಗಳನ್ನು ನೆಚ್ಚಿರುತ್ತಾರೆ ಮತ್ತು ಇದಕ್ಕೆ ಆಯಾ ವ್ಯಾಪ್ತಿಯ ಸರಕಾರಿ ನೌಕರರು, ಚುನಾವಣಾ ಆಯೋಗದ ಸಿಬ್ಬಂದಿ ಸಾಥ್ ನೀಡುತ್ತಲೇ ಬಂದಿದ್ದಾರೆ ಎನ್ನಲಾಗುತ್ತದೆ.

ಅಸಲಿ/ಸಮರ್ಪಕ ದಾಖಲೆಗಳು ಇಲ್ಲದಿದ್ದರೂ ಮತದಾರರ ಗುರುತಿನ ಚೀಟಿ ಪಡೆಯಲಿಕ್ಕೆ ಸಾಧ್ಯ ಎಂಬುದಕ್ಕೆ ಬಾಂಗ್ಲಾದೇಶದ ಗಣನೀಯ ಸಂಖ್ಯೆಯ ಪ್ರಜೆಗಳು ಪಶ್ಚಿಮ ಬಂಗಾಳದಲ್ಲಿ ಗುರುತಿನ ಚೀಟಿ ಪಡೆದಿರುವುದೇ ಸಾಕ್ಷಿ ಎನ್ನಲಾಗುತ್ತದೆ. ಭಾರತದ ಮತದಾರನೊಬ್ಬ ಎಷ್ಟು ಕಡೆಗಳ ಮತದಾರರ ಪಟ್ಟಿಯಲ್ಲಿ ಇದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುವ ಯಾವುದೇ ಮಾನದಂಡ/ ತಂತ್ರಜ್ಞಾನವು ಚುನಾವಣಾ ಆಯೋಗದ ಬಳಿ ಸದ್ಯಕ್ಕೆ ಇಲ್ಲ.

ಕೆಲವು ತಥಾಕಥಿತ ಜನನಾಯಕರು ಜನರಿಗೆ ಗುರುತಿನ ಚೀಟಿ ಮಾಡಿಸಿಕೊಟ್ಟು, ಅವನ್ನು ತಮ್ಮ ಸ್ವಾಧೀನದಲ್ಲೇ ಇರಿಸಿಕೊಂಡು, ಅಂಥವರ ವೋಟು ತಮಗೇ ಬೀಳುವಂತೆ ಮಾಡಿಕೊಂಡು, ತನ್ಮೂಲಕ ಚುನಾವಣೆಯನ್ನು ಗೆಲ್ಲುವ ಸಜ್ಜಿಕೆಯನ್ನು ರೂಪಿಸಿಕೊಂಡಿರುವುದಿದೆ. ಮತ್ತೆ ಕೆಲವರು, ಒಂದಷ್ಟು ಜನರನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡು (ಅವರಿಗೆ ಆರ್ಥಿಕ ಸಹಾಯ ನೀಡುತ್ತಾ), ತಮಗೆ ಬೇಕಾದಂತೆ ಮತದಾನ ಮಾಡಿಸಿಕೊಂಡು ಗೆಲ್ಲುವುದಿದೆ. ತಮ್ಮ ಪಟಾಲಂ ಮೂಲಕ ಹಣ-ಹೆಂಡ ಹಂಚಿ ವೋಟು ಪಡೆದು ಗೆಲ್ಲುವವರು ಸಾಕಷ್ಟು ಕಡೆ ಸಿಗುತ್ತಾರೆ.

ಹೀಗಾಗಿ ‘ವೋಟಿಗಾಗಿ ನೋಟು’ ಎಂಬುದು ಇಂಥ ಕೆಲವರ ಅಘೋಷಿತ ಚುನಾವಣಾ ಧ್ಯೇಯ ವಾಕ್ಯವೇ ಆಗಿಬಿಟ್ಟಿದೆ! ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲೂ, ಅಭಿವೃದ್ಧಿ ವಿಚಾರಕ್ಕಿಂತ ಹೆಚ್ಚಾಗಿ ಮತದಾರರ ಕರಡುಪಟ್ಟಿಯ ಕುರಿತಾದ ಆರೋಪ-ಪ್ರತ್ಯಾ ರೋಪಗಳೇ, ಪರಸ್ಪರ ಕೆಸರೆರಚಾಟಗಳೇ ಕಾಣಬರುತ್ತಿವೆ.

ಪ್ರತಿ ಬಾರಿ ಮತದಾನದ ಮೊದಲು, ಮತದಾರರ ಕರಡುಪ್ರತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದಾಗ, ರಾಜಕೀಯ ಪಕ್ಷಗಳು ನೋಡುವುದು ತಮಗೆ ಮತನೀಡುವವರ ವಿವರಗಳನ್ನು. ಇಂಥ ವೇಳೆ, ಪ್ರತಿಸ್ಪರ್ಧಿಗಳನ್ನು ಬೆಂಬಲಿಸುವ ಮತದಾರರ ಸಂಖ್ಯೆ ಜಾಸ್ತಿಯಿದ್ದಾಗ, ಒಂದಷ್ಟು ಹುಯಿಲು ಮಾಮೂಲು. ಬಿಹಾರದಲ್ಲಿ ಈಗ ನಡೆಯುತ್ತಿರುವುದೂ ಇದೇ!

ಮತಚೌರ್ಯವು ನಾನಾ ಹಂತಗಳಲ್ಲಿ, ವಿವಿಧ ರೀತಿಯಲ್ಲಿ ನಡೆದುಕೊಂಡೇ ಬರುತ್ತಿದೆ. ಇಂಥ ‘ಓಪನ್ ಸೀಕ್ರೆಟ್’ ವಿಷಯವನ್ನು ರಾಹುಲ್ ಗಾಂಧಿಯವರು ಈಗಲಾದರೂ ಎತ್ತಿರುವುದು ಸಮಂಜಸವಾಗಿದೆ. ಹಾಗಂತ, ಕಾಂಗ್ರೆಸ್ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋತಿರುವ ಕ್ಷೇತ್ರ ಗಳಲ್ಲಿ ಮಾತ್ರವೇ ಇದು ನಡೆದಿದೆ ಎನ್ನುವುದು ಹಾಸ್ಯಾಸ್ಪದವಾದೀತು. ಈ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳು ಚುನಾವಣಾ ಆಯೋಗದ ಜತೆ ಚರ್ಚಿಸಿ, ದೇಶದೆಲ್ಲೆಡೆಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಇದು ಸಕಾಲ.

ಆಧಾರ್ ಕಾರ್ಡ್‌ನೊಂದಿಗೆ ಮತದಾರರ ಗುರುತಿನ ಚೀಟಿಯನ್ನು ಲಿಂಕ್ ಮಾಡುವ ಕೇಂದ್ರ ಸರಕಾರ/ ಚುನಾವಣಾ ಆಯೋಗದ ಯೋಜನೆಯನ್ನು ಸರ್ವೋಚ್ಛ ನ್ಯಾಯಾಲಯವು ಹಲವು ಕಾರಣಗಳನ್ನು ಮುಂದಿಟ್ಟು ತಡೆ ಹಿಡಿದಿದೆ. ಅನುಭವಿ ವಕೀಲರ ತಂಡವೊಂದನ್ನು ಕಟ್ಟಿ, ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಅದನ್ನು ಆಧಾರ್ ಸಂಖ್ಯೆಗೆ ಜೋಡಿಸಬೇಕಿರುವುದರ ಅಗತ್ಯತೆಯ ಕುರಿತು ನ್ಯಾಯಾಂಗಕ್ಕೆ ಮನದಟ್ಟು ಮಾಡಿಕೊಟ್ಟು, ಆ ಪ್ರಕ್ರಿಯೆಗೆ ಹಸಿರು ನಿಶಾನೆ ಯನ್ನು ಪಡೆಯುವಂತಾದರೆ, ಮತಚೌರ್ಯದಂಥ ಸಮಸ್ಯೆ ಅರ್ಧ ಪರಿಹಾರವಾದಂತೆ. ಆದರೆ, ಇಂಥ ನ್ಯಾಯಯುತ ಪರಿಹಾರ ಬಹುತೇಕ ಪುಢಾರಿಗಳಿಗೆ ಬೇಡ! ಹೀಗಾಗಿ ‘ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?’ ಎಂಬ ಪ್ರಶ್ನೆ ಹಾಗೇ ಉಳಿದುಬಿಡಬಹುದು.

‘ಸತ್ಯವನ್ನು ಹೇಳಬೇಕು, ಪ್ರಿಯವಾದುದನ್ನು ಹೇಳಬೇಕು; ಆದರೆ ಅಪ್ರಿಯ ಸತ್ಯವನ್ನು ಹೇಳಬಾ ರದು’ ಎಂಬ ಮಾತಿದೆ. ರಾಜಕೀಯದಲ್ಲಿ ಸತ್ಯವನ್ನು ‘ಸತ್ಯ’ ಎಂದು ಹೇಳಿದರೆ ಪರಿಣಾಮ ನೆಟ್ಟಗಿರ ಲಾರದು ಎಂಬುದಕ್ಕೆ ಸಚಿವ ರಾಜಣ್ಣ ಅವರ ತಲೆದಂಡ ಪ್ರತ್ಯಕ್ಷ ಸಾಕ್ಷಿ.

ಮತಚೌರ್ಯ ಎಂಬ ಚರ್ಚಾ ವಿಷಯವು ಕೇವಲ ಒಣಹರಟೆಗೆ, ರಾಜಕೀಯ ಮೇಲಾಟಕ್ಕೆ ಸೀಮಿತ ವಾಗದೆ ಒಂದು ಆಂದೋಲನವಾಗಬೇಕು. ದೇಶದೆಲ್ಲೆಡೆಯ ಮತದಾರರ ಪಟ್ಟಿಗಳ ಎಲ್ಲಾ ಅವಾಂತರಗಳು, ಅಪಭ್ರಂಶಗಳು ನಿವಾರಣೆಯಾಗಿ, ನಮ್ಮ ರಾಜಕೀಯ ವ್ಯವಸ್ಥೆ ಒಂದಿಷ್ಟು ಸ್ವಚ್ಛವಾಗಬೇಕು. ಹಾಗಾದೀತೇ? ಕಾದು ನೋಡೋಣ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)