ರಸದೌತಣ
naadigru@gmail.com
ಅನಾಥಪ್ರಜ್ಞೆಯಿಂದ ಬಳಲಿ ಆತ್ಮಹತ್ಯೆಗೆ ಮುಂದಾದ ಶ್ರಮಜೀವಿಯನ್ನು ಚೌರದಂಗಡಿ ಚಂದ್ರಣ್ಣ ಆ ದುಡುಕಿನಿಂದ ಪಾರುಮಾಡುತ್ತಾನೆ. ತನ್ನ ಹೊಲವನ್ನು ಮಾರಿ ಬಂದ 1 ಲಕ್ಷ ರುಪಾಯಿಯನ್ನು ಶ್ರಮಜೀವಿಗೆ ನೀಡಿ, ಬೇರೊಂದು ಊರಿಗೆ ತೆರಳಿ ಬದುಕು ಕಟ್ಟಿಕೊಳ್ಳುವಂತೆ ಸೂಚಿಸುತ್ತಾನೆ. ಕಥೆಗಾರನ ‘ದುಡುಕಬೇಡ ಜೀವವೇ...’ ಕಥೆ ಪ್ರಕಟವಾಗಿದ್ದ ಪತ್ರಿಕೆಯೊಂದಿಗೆ ಕೆಲ ಅಗತ್ಯ ವಸ್ತು ಗಳನ್ನೆತ್ತಿಕೊಂಡು ಶ್ರಮಜೀವಿ ಊರಿಂದ ಹೊರಡುತ್ತಾನೆ. ಅವನು ಕಥೆಗಾರನಿಗೆ ತನ್ನ ವೃತ್ತಾಂತ ವನ್ನು ಮುಂದುವರಿಸಿ ಹೇಳಿದ್ದು ಹೀಗಿತ್ತು, ಒಪ್ಪಿಸಿಕೊಳ್ಳಿ....
“ಸರ್, ನೀವು ಬರೆದ ‘ದುಡುಕಬೇಡ ಜೀವವೇ...’ ಕಥೆ ನನ್ನನ್ನು ಅದೆಷ್ಟರಮಟ್ಟಿಗೆ ಪ್ರಭಾವಿಸಿ ತ್ತೆಂದರೆ, ಸವಾಲು-ಸಂಕಷ್ಟಗಳಿರಲಿ ಒಂದೊಮ್ಮೆ ಸಾವೇ ಎದುರಾದರೂ ‘ಒಂದಿಷ್ಟು ಸಾಧಿಸುವು ದಿದೆ, ಆಮೇಲೆ ಬಾ’ ಎನ್ನುವಷ್ಟರ ಮಟ್ಟಿಗೆ ನನ್ನಲ್ಲಿ ಆತ್ಮವಿಶ್ವಾಸ, ಛಲ ಮೂಡಿದ್ದವು. ಜತೆಗೆ, ಆತ್ಮಹತ್ಯೆಯ ದುಡುಕಿನಿಂದ ನನ್ನನ್ನು ಬಚಾವು ಮಾಡಿದ್ದು ಚಂದ್ರಣ್ಣನಾದರೆ, ಈ ಕಥೆಯ ಮೂಲಕ ಬದುಕನ್ನು ಮುಂದುವರಿಸುವ ಛಲ-ಬಲವನ್ನು ನನಗೆ ನೀಡಿದ್ದು ನೀವು.
ಹೀಗಾಗಿ, ನೀವಿರುವ ನಗರಿಯಲ್ಲೇ ನನ್ನ ಕಸುಬನ್ನು ಶುರುಮಾಡಬೇಕು, ನಿಮ್ಮನ್ನು ಭೇಟಿಯಾಗ ಬೇಕು ಎಂಬ ಆಸೆಯೂ ಮೊಳೆತಿತ್ತು. ನಗರಿಗೆ ಬಂದವನೇ ಚಂದ್ರಣ್ಣ ಕೊಟ್ಟಿದ್ದ ದುಡ್ಡಿನಲ್ಲಿ 50 ಸಾವಿರವನ್ನು ಒಂದೆಡೆ ಮೀಸಲಾಗಿ ಎತ್ತಿಟ್ಟೆ; ವಾಣಿಜ್ಯ ಮಳಿಗೆಯ ಬದಲಿಗೆ ಬಡಾವಣೆಯಲ್ಲಿ ಪುಟ್ಟದೊಂದು ಕೊಠಡಿಯನ್ನು ಬಾಡಿಗೆಗೆ ಹಿಡಿದು ಅಲ್ಲೇ ಮಾಲೀಶ್ ಕೆಲಸವನ್ನು ಶುರುಮಾಡಿದೆ. ಸನಿಹದಲ್ಲೇ ಜೈನ ಸಮುದಾಯದವರ ಬಡಾವಣೆಯಿತ್ತು. ಅದೇನು ಅಚ್ಚರಿಯೋ, ನನ್ನ ಮಾಲೀಶ್ ಅವರಿಗೆಲ್ಲಾ ಇಷ್ಟವಾಗಿ ಬಿಟ್ಟಿತು. ದುಡಿಮೆಯೇನೋ ಚೆನ್ನಾಗಿತ್ತು, ಆದರೆ ಗಿರಾಕಿಗಳನ್ನು ಕೂರಿಸಲು ಜಾಗವೇ ಸಾಲುತ್ತಿರಲಿಲ್ಲ. ಹೀಗಾಗಿ ವಾಣಿಜ್ಯ ಮಳಿಗೆಯನ್ನು ಬಾಡಿಗೆಗೆ ಹಿಡಿವ ಆಲೋಚನೆ ಮೊಳೆತು ಅವರಿವರಲ್ಲಿ ಹೇಳಿ ಕೊಳ್ಳುತ್ತಿದ್ದೆ.
ಅದು ಗೊತ್ತಾದ ಜೈನ ಗಿರಾಕಿಯೊಬ್ಬರು ತಮ್ಮ ಬಟ್ಟೆ ಅಂಗಡಿಯ ಪಕ್ಕದಲ್ಲಿ ತಮ್ಮದೇ ಮಳಿಗೆ ಖಾಲಿಯಿರುವುದಾಗಿ ತಿಳಿಸಿ ನನ್ನನ್ನು ಅಲ್ಲಿಗೆ ಕರೆದೊಯ್ದರು. ಆದರೆ ಅದರ ವಿಸ್ತಾರ, ಒಳಾಂಗಣದ ಬೆಡಗನ್ನು ನೋಡುತ್ತಿದ್ದಂತೆ, ‘ಇದು ನನ್ನ ಕೈಗೆಟುಕದು’ ಎನಿಸಿ, ‘ಬೇಡ ಸರ್, ಇಷ್ಟೊಂದು ಭವ್ಯ ಮಳಿಗೆಯ ಬಾಡಿಗೆ ಭರಿಸಲಾರೆ; ನನ್ನ ಪುಟ್ಟ ಕೊಠಡಿ ಯಲ್ಲೇ ಸದ್ಯಕ್ಕೆ ಮುಂದುವರಿಸುವೆ ಬಿಡಿ’ ಎಂದೆ ವಿನಯಪೂರ್ವಕವಾಗಿ. ಆದರೆ ದುಡಿಮೆಯಲ್ಲಿನ ನನ್ನ ಶ್ರದ್ಧೆ-ಪ್ರೀತಿ, ಗ್ರಾಹಕರೊಂದಿಗಿನ ಆಪ್ಯಾಯವರ್ತನೆ ಇವನ್ನೆಲ್ಲಾ ಅವರು ಕಂಡಿದ್ದರು.

ಜತೆಗೆ, ಹತ್ತಾರು ವೈದ್ಯರಿಗೆ ತೋರಿಸಿದ ನಂತರವೂ ವಾಸಿಯಾಗದ ಅವರ ಬೆನ್ನುನೋವು ನನ್ನ ಮಾಲೀಶ್ ನಿಂದ ಗುಣವಾಗಿತ್ತಂತೆ! ಇದರ ಋಣಸಂದಾಯವೋ ಎಂಬಂತೆ ಅವರು, ‘ನಿನಗೆ ಅಡ್ವಾನ್ಸು-ಬಾಡಿಗೆ ಕೇಳಿದ್ಯಾರು? ವ್ಯವಹಾರ ಕುದುರುವವರೆಗೆ ನೀನೇನೂ ಕೊಡಬೇಕಿಲ್ಲ, ನಂತರ ಕೊಟ್ಟ ರಾಯ್ತು. ನಿನ್ನನ್ನು ನಂಬಬಹುದು ಅಂತ ನಮ್ಮ ತೀರ್ಥಂಕರ ವರ್ಧಮಾನ ಮಹಾವೀರರ ಪ್ರೇರಣೆಯಾಗಿದೆ ನನಗೆ’ ಎಂದರು....
“ನನಗೆ ಅಚ್ಚರಿಯಾಯಿತು. ಕಾರಣ, ಅವರು ನಮ್ಮ ಬಂಧುವಲ್ಲ, ಜಾತಿಯವರಂತೂ ಅಲ್ಲವೇ ಅಲ್ಲ. ಇಷ್ಟಾಗಿ ಕೂಡ ಅಷ್ಟೊಂದು ವಿಶ್ವಾಸ! ಅದರಲ್ಲೂ, ಹಣವೇ ಮುಖ್ಯವಾಗಿರುವ ಈ ಕಾಲ ದಲ್ಲಿ ತಕ್ಷಣಕ್ಕೆ ಮುಂಗಡ-ಬಾಡಿಗೆಯಿಲ್ಲದೆ ಅಂಥ ಭವ್ಯ ಮಳಿಗೆ ಸಿಗುತ್ತದೆಯೆಂದರೆ? ಹಾಗೆ ನೀಡಲು ತಮಗೆ ಮಹಾವೀರರ ಪ್ರೇರಣೆಯಾಗಿದೆ ಎಂದೂ ಆ ಜೈನಬಂಧು ಹೇಳಿದರು. ಅಂದರೆ, ನಾನು ನಂಬಿದ ದೇವರು ಮತ್ತು ಅನುಗ್ರಹಿಸಿದ ಅವರ ದೇವರು ಮಾನವ ಕಲ್ಪಿತ ಸ್ವರೂಪದಲ್ಲಿ ಬೇರೆ ಆಗಿದ್ದರೂ, ಮೂಲದಲ್ಲಿ ಎರಡೂ ಒಂದೇ ಎಂದಾಯಿತಲ್ಲಾ... ದೇವನೊಬ್ಬ ನಾಮ ಹಲವು ಅನ್ನೋದು ಇದಕ್ಕೇನಾ? ಎಂಬೆಲ್ಲ ಅಧ್ಯಾತ್ಮ ಮನದಲ್ಲಿ ಸುಳಿದಾಡಿ ಹೃದಯ ತುಂಬಿ ಬಂತು. ‘ತುಂಬಾ ಥ್ಯಾಂಕ್ಸ್ ಸರ್’ ಎಂದು ಅವರ ಕೈಗಳನ್ನು ಕಣ್ಣಿಗೊತ್ತಿಕೊಂಡೆ.
ಹಾಗೇ ಒಮ್ಮೆ ಅಲ್ಲಿನ ನಾಮಫಲಕದ ಮೇಲೆ ಕಣ್ಣಾಡಿಸುತ್ತಿದ್ದಂತೆ ಅದೇನೋ ಪುಳಕವಾಯಿತು, ಆದರೆ ಅದ್ಯಾಕೆಂದು ಗೊತ್ತಾಗಲಿಲ್ಲ! ಕೊಠಡಿಗೆ ಧಾವಿಸಿದವನೇ ಸೂಟ್‌ಕೇಸ್ ನಲ್ಲಿಟ್ಟಿದ್ದ ನಿಮ್ಮ ಕಥೆಯಿದ್ದ ಪುರವಣಿ ಯನ್ನು ಎತ್ತಿಕೊಂಡು ಅದರಲ್ಲಿದ್ದ ನಿಮ್ಮ ವಿಳಾಸವನ್ನೊಮ್ಮೆ ನೋಡಿದೆ. ಅರೆ! ಆ ಜೈನಬಂಧು ನನಗೆ ನೀಡಿದ್ದ ಮಳಿಗೆ ನೀವು ವಾಸಿಸುತ್ತಿದ್ದ ಬಡಾವಣೆಯಲ್ಲೇ ಇತ್ತು. ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ....
“ಬಾಗಿಲು ತಟ್ಟಿದ ಸದ್ದು ಕೇಳಿಸಿತು. ಹೋಗಿ ತೆರೆದರೆ ಜೈನಬಂಧು! ‘ಸರ್, ನೀವಿಲ್ಲಿ? ಹೇಳಿ ಕಳಿಸಿ ದ್ದರೆ ನಾನೇ ಬರುತ್ತಿದ್ದೆನಲ್ಲಾ?’ ಎಂದು ಒಳಗೆ ಕರೆದೆ. ಅರೆಕ್ಷಣ ಸುಧಾರಿಸಿಕೊಂಡ ಅವರು, ತಾವು ತಂದಿದ್ದ ಚೀಲವನ್ನು ತೆರೆದು ಅದರಿಂದ ಒಂದೊಂದೇ ವಸ್ತುಗಳನ್ನು ಹೊರತೆಗೆಯ ತೊಡಗಿದರು, ಜಾದೂಗಾರನಂತೆ. ನೋಡಿದರೆ, ಜೈನ ತೀರ್ಥಂಕರ ಮಹಾವೀರರ ಮತ್ತು ಗಣಪತಿಯ ಒಂದೊಂದು ಫೋಟೋ, ಜತೆಗೊಂದು ಕ್ಯಾಷ್ ಬಾಕ್ಸ್. ‘ಹೊಸದಾಗಿ ವ್ಯವಹಾರ ಶುರು ಮಾಡೋಕ್ಕೆ ಹೊರಟಿ ರುವೆ. ನಮ್ಮ-ನಿಮ್ಮ ಎರಡೂ ನಂಬಿಕೆಗಳ ಫೋಟೋ ಇದೆ. ಜತೆಗೆ ಈ ಕ್ಯಾಷ್ ಬಾಕ್ಸ್‌ಗೆ ನಮ್ಮ ಮಂದಿರದಲ್ಲಿ ಪೂಜೆ ಮಾಡಿಸಿ ನಿನಗಾಗಿ ತಂದಿರುವೆ. ತಡ ಮಾಡಬೇಡ, ನಾಳೆಯೇ ದಿನ ಚೆನ್ನಾಗಿದೆ. ಮಳಿಗೆ ಪ್ರಾರಂಭಿಸು’ ಎಂದು ತ್ವರೆ ಮಾಡಿದರು....
“ಮಳಿಗೆಯ ಶುರುವಿಗೂ ಮುನ್ನ ನಿಮ್ಮನ್ನು ಭೇಟಿಯಾಗಬೇಕು ಅಂದುಕೊಂಡಿದ್ದೆ, ಆದರೆ ನೀವು ದೊಡ್ಡ ಸಾಹಿತಿಗಳು, ಸರಸ್ವತೀಪುತ್ರರು. ನಾವಾದರೋ ಗಮಾರರು, ಅಪರಿಚಿತರು. ಹೀಗಾಗಿ ನಿಮ್ಮ ನೇರಭೇಟಿಗೆ ಹಿಂಜರಿಯುತ್ತಿದ್ದೆ. ಸಮಯ ಹೆಚ್ಚು ಇರಲಿಲ್ಲ, ಜೈನಬಂಧುವಿನ ಆಗ್ರಹದಂತೆ ಮಳಿಗೆಗೆ ಬೋರ್ಡ್ ಬರೆಸಬೇಕಾಯಿತು. ಹೆಸರೇನಿಡಲಿ ಅಂತ ಗೊಂದಲವಾದಾಗ, ಹೇಗಿದ್ದರೂ ನಾನು ಮಾಡೋದು ಅಂಗಾಂಗದ ಮಾಲೀಶ್ ಅಲ್ಲವೇ, ಹೀಗಾಗಿ ‘ಅಂಗರಾಜ ಮರ್ದನ ಕೇಂದ್ರ’ ಎಂದು ನಿರ್ಧರಿಸಿ ಕಲಾವಿದರಿಗೆ ಅದನ್ನೇ ಹೇಳಿದೆ. ವಿಚಿತ್ರ ಪ್ರಾಣಿಯನ್ನು ನೋಡುವಂತೆ ನನ್ನನ್ನು ನೋಡಿ ನಕ್ಕ ಅವರು ನಾಮಫಲಕವನ್ನು ಸಿದ್ಧಪಡಿಸಿಕೊಟ್ಟರು. ಮರುದಿನದ ಪೂಜೆಗೆ ಹಣ್ಣು-ಹೂವು, ಅಲಂಕಾರಿಕ ವಸ್ತುಗಳನ್ನೆಲ್ಲಾ ಖರೀದಿಸಿ, ಪುರೋಹಿತರನ್ನು ಗೊತ್ತುಮಾಡಿ, ಕೊಠಡಿಗೆ ಮರಳು ವಷ್ಟರಲ್ಲಿ ರಾತ್ರಿ 12 ಗಂಟೆ. ಮುಂಜಾನೆ 5ಕ್ಕೆಲ್ಲಾ ಪೂಜೆ ಶುರುವಾಗಬೇಕಿತ್ತು.
ಹೀಗಾಗಿ ನಿಮ್ಮ ಪೂರ್ವಭಾವಿ ಭೇಟಿಯಾಗದೆಯೇ ಅಂಗಡಿಯ ಪ್ರಾರಂಭೋತ್ಸವ ಮಾಡುವುದು ಅನಿವಾರ್ಯ ವಾಯಿತು. ಊರಿಗೇ ಹೊಸಬನಾಗಿದ್ದ ನನ್ನ ವ್ಯವಹಾರದ ಶುರುವಾತಿಗೆ ಹರಸಲು ಆ ಜೈನಬಂಧು ತಮ್ಮ ಬಳಗವನ್ನೆಲ್ಲ ಕರೆತಂದಿದ್ದರು! ಗೃಹಪ್ರವೇಶ ಸಂಭ್ರಮದಂತೆ ಪ್ರಾರಂಭೋತ್ಸವ ಜರುಗಿತು. ಈ ವೇಳೆ, ನನ್ನ ಆಶ್ರಯದಾತರಾಗಿದ್ದ ‘ಅಜ’, ಸಾಕುತಾಯಿ, ಪ್ರಾಣಸ್ನೇಹಿತ ಚಂದ್ರಣ್ಣ ಇದ್ದಿದ್ದರೆ ಎಷ್ಟು ಚೆನ್ನಿತ್ತು? ಕಥೆಯೊಂದರ ಮೂಲಕ ನನ್ನ ಬದುಕಿಗೆ ಛಲ-ಬಲ ತುಂಬಿದ ಕಥೆಗಾರರಾದ ನಿಮ್ಮ ಪರಿಚಯವೂ ಆಗಿ ನಿಮಗೆ ಆತಿಥ್ಯ ನೀಡುವಂತಿದ್ದರೆ ಎಷ್ಟು ಸೊಗಸಾಗಿರು ತ್ತಿತ್ತು? ಅಂದು ಕೊಳ್ಳುತ್ತಿದ್ದೆ.... “ಪ್ರಾರಂಭೋತ್ಸವಕ್ಕೆ ಬಂದಿದ್ದವರೆಲ್ಲಾ ಹರಸಿ ಉಡುಗೊರೆಯಿತ್ತು ತೆರಳಿದರು.
ಮಳಿಗೆಯಲ್ಲಿ ಒಬ್ಬಂಟಿಯಾಗಿದ್ದ ನಾನು ಗಾಜಿನ ಕಿಟಕಿಯ ಹಿಂದೆ ನಿಂತುಕೊಂಡೇ ಹೊರಗಿನ ರಸ್ತೆಯನ್ನು ಅವಲೋಕಿಸುತ್ತಿದ್ದೆ.... ರಸ್ತೆ ದಾಟಿ ನಮ್ಮ ಮಳಿಗೆಯಿದ್ದ ಭಾಗಕ್ಕೆ ಜುಬ್ಬಾ-ಪೈಜಾಮ ಧಾರಿ ಯೊಬ್ಬರು ಬರುತ್ತಿರುವುದು ಕಾಣಿಸಿತು. ಅವರು ಹತ್ತಿರವಾಗುತ್ತಿದ್ದಂತೆಯೇ ಮುಖ ಸ್ಪಷ್ಟವಾಗಿ ಗೋಚರಿಸಲಾರಂಭಿಸಿತು. ನನ್ನ ಕಣ್ಣುಗಳನ್ನು ನಾನೇ ನಂಬಲಿಲ್ಲ. ಅದು ಮತ್ತಾರೂ ಅಲ್ಲ, ನನ್ನ ಬದುಕಿಗೆ ಬೆಳಗಾಗಿ ಬಂದ ಕಥೆಗಾರರಾದ ನೀವೇ!
ಅಂದು ಪತ್ರಿಕೆಯಲ್ಲಿ ಕಥೆಯ ಕೊನೆಯಲ್ಲಿ ನಿಮ್ಮ ವಿಳಾಸದ ಜತೆಗೆ ಫೊಟೋ ಕೂಡ ಪ್ರಕಟ ಗೊಂಡಿತ್ತಲ್ಲಾ, ಅದು ನನ್ನ ಮನದಲ್ಲಿ ಕೆನೆಗಟ್ಟಿತ್ತು. ನೀವು ಈ ಕಡೆ ಬಂದವರೇ ಗೂಡಂಗಡಿಯಲ್ಲಿ ಚಹಾ ಕುಡಿದು ಕೆಲ ಕ್ಷಣ ಕಳೆದಿರಿ. ಓಡಿ ಬಂದು ನಿಮ್ಮ ಪಾದಗಳಿಗೆ ಎರಗಿಬಿಡಬೇಕು, ಇಲ್ಲವೇ ನಿಮ್ಮನ್ನೊಮ್ಮೆ ಬಳಸಿ ತಬ್ಬಿಕೊಳ್ಳಬೇಕು, ನಿಮ್ಮ ಕೈಗಳನ್ನು ಕಣ್ಣಿಗೊತ್ತಿಕೊಳ್ಳಬೇಕು ಎಂದೆಲ್ಲಾ ಕಲ್ಪನೆಗಳು ಗರಿಗೆದರಿದವು. ಆದರೆ ಮತ್ತದೇ ಹಿಂಜರಿಕೆ- ನೀವು ಸರಸ್ವತೀಪುತ್ರರು ನಾವಾದರೆ ಪಾಮರರು, ಹೇಗೋ ಏನೋ ಅಂತ. ತಕ್ಷಣವೇ ‘ದುಡುಕದಿರು ಜೀವವೇ’ ಎಂಬ ನಿಮ್ಮ ಕಥೆಯ ಶೀರ್ಷಿಕೆ ನೆನಪಾಗಿ, ‘ಹೌದು, ಭಾವಾತಿರೇಕ ಸಲ್ಲ.
ಹೇಗೂ ನನ್ನ ನೆಚ್ಚಿನ ಕಥೆಗಾರನ ದರ್ಶನವಾಯಿತಲ್ಲಾ, ಸ್ವಲ್ಪ ಸಮಯದ ನಂತರ ಅನುಕೂಲ ನೋಡಿಕೊಂಡು ಭೇಟಿಯಾಗೋಣ ಅಂದುಕೊಂಡೆ. ನನ್ನ ಆಲೋಚನಾ ಸರಣಿ ಸಾಗುತ್ತಿರು ವಾಗಲೇ, ಚಹಾ ಹೀರಿ ಮನೆಗೆ ಮರಳಲು ಉದ್ಯುಕ್ತರಾಗಿ ನಮ್ಮ ಮಳಿಗೆಗೆ ಬೆನ್ನು ಹಾಕಿದ ನೀವು ಅಪ್ರಯತವಾಗಿ ಒಮ್ಮೆ ತಿರುಗಿ ನೋಡಿದಿರಿ...! ಅಷ್ಟೇ...! ‘ಅಂಗರಾಜ ಮರ್ದನ ಕೇಂದ್ರ’ ಎಂಬ ನನ್ನ ಮಳಿಗೆಯ ನಾಮ ಫಲಕವನ್ನೊಮ್ಮೆ ಓದಿಕೊಂಡಿರಿ, ಮನದಲ್ಲೇ ಅದೇನೋ ಗೊಣಗಿಕೊಂಡಿರಿ... ನಂತರ ನಮ್ಮ ಅಂಗಡಿಯನ್ನು ಪ್ರವೇಶಿಸಿಬಿಟ್ಟಿರಿ. ಆಗ ನಾನು, ‘ಓಹೋ, ಬಡವರ ಮನೆಗೆ ಭಾಗ್ಯಲಕ್ಷ್ಮಿ ಬಂದಂಗೆ ಆಯ್ತು.... ಬರಬೇಕು ಸರ್’ ಎಂದು ನಿಮ್ಮ ಬೆನ್ನ ಹಿಂದಿನಿಂದ ಹೇಳುತ್ತಾ ಬಂದೆ. ನಂತರದ್ದು ನಿಮಗೆ ಗೊತ್ತೇ ಇದೆ. ಹೀಗಿದೆ ಸರ್ ನನ್ನ ಪೂರ್ವವೃತ್ತಾಂತ. ನೋಡಿ ಕಥೆಯೂ ಮುಗಿಯಿತು, ನಿಮ್ಮ ಮಾಲೀಶೂ ಮುಗಿಯಿತು. ನೀವಿನ್ನು ಬಟ್ಟೆ ಹಾಕಿಕೊಳ್ಳಬಹುದು" ಎಂದು ಹೇಳಿ ಆ ಶ್ರಮಜೀವಿ ತನ್ನ ಕಥನಕ್ಕೆ ವಿರಾಮ ಹಾಕಿದ.
ಜಾಹೀರಾತುಗಳ ಜಂಜಾಟವಿಲ್ಲದೆ ಒಂದು ಅಪ್ಪಟ ಕಮರ್ಷಿಯಲ್ ಚಿತ್ರವನ್ನು ‘ಒಳಗಣ್ಣುಗಳಿಂದ’ ನೋಡಿದ ಅನುಭವ ಕಥೆಗಾರನಿಗಾಗಿತ್ತು. ಅದಕ್ಕೆ ಕಾರಣವಾಗಿದ್ದು ಕಥೆಗಾರನಾಗಿ ತನಗಿದ್ದ ಗ್ರಹಿಕಾ ಸಾಮರ್ಥ್ಯವೋ ಅಥವಾ ಆ ಶ್ರಮಜೀವಿಯ ನಿರೂಪಣಾ ಪರಿಣತಿಯೋ ಎಂಬುದನ್ನು ವಿಶ್ಲೇಷಿಸಲು ಹರಸಾಹಸ ಪಡುತ್ತಿದ್ದ ಕಥೆಗಾರ.
ಬಟ್ಟೆ ಧರಿಸಿದ ನಂತರ, “ಎಷ್ಟಾಯ್ತು?" ಎಂದು ಕೇಳಿದ. “ಛೇ, ದುಡ್ಡೆಲ್ಲಾ ಬೇಡ ಸರ್" ಎಂದ ಶ್ರಮಜೀವಿ. ಅದಕ್ಕೆ ಕಥೆಗಾರ, “ನಿಮ್ಮ ವೃತ್ತಾಂತವನ್ನು ಹೇಳಬೇಕು, ಮಾಲೀಶಿಗೆ ದುಡ್ಡನ್ನೂ ತಗೋಬೇಕು ಅಂತ ಮೊದಲೇ ನಿಮಗೆ ಷರತ್ತು ಹಾಕಿದ್ದೆ. ಅದರಂತೆ ಈಗ ನಿಮಗೆ ಪ್ರತಿಫಲ ನೀಡೋ ಸಮಯ" ಎಂದ. ಅದಕ್ಕೆ ವಿನಯಪೂರ್ವಕವಾಗಿ ಗೋಣುಹಾಕಿ ಹಣ ಪಡೆದ ಶ್ರಮಜೀವಿ, ಹೊರಟು ನಿಂತ ಕಥೆಗಾರನನ್ನು ಬೀಳ್ಕೊಡುವುದಕ್ಕೂ ಮುನ್ನ ಕಾಗದದಲ್ಲಿ ತನ್ನ ಮೊಬೈಲ್ ನಂಬರ್ ಬರೆದುಕೊಟ್ಟ. ಅದನ್ನು ಕಥೆಗಾರ ಜೇಬಿಗಿಳಿಸು ತ್ತಿದ್ದಂತೆಯೇ ಆತನ ಫೋನ್ ರಿಂಗಣಿಸಿತು... ಯಾರೆಂದು ನೋಡಿದರೆ, ಪತ್ರಿಕೆಯ ಸಂಪಾದಕರು!
“ಏನು ಕಥೆಗಾರರೇ? ಎಲ್ಲಿಗೆ ಬಂತು ನಿಮ್ ಕಥೆ? ನೀವು ‘ಯುಗಾದಿ’ ವಿಶೇಷಾಂಕಕ್ಕೆ ಕಥೆ ಕೊಡೋ ದ್ರೊಳಗೆ ‘ದೀಪಾವಳಿ’ ಬಂದ್‌ಬಿಡುತ್ತೆ ಕಣ್ರಪ್ಪಾ... ಸ್ವಲ್ಪ ಕರುಣೆ ತೋರಿಸಿ" ಎಂದು ಆ ಸಂಪಾ ದಕರು ಮತ್ತೊಮ್ಮೆ ‘ತಾಂಬೂಲ-ಭರಿತ’ ನಗೆ ನಕ್ಕರು.. ಕಥೆಗಾರ ವಾಡಿಕೆಯಂತೆ ಈ ಕಡೆಯಿಂದ ಮುಖ ಒರೆಸಿಕೊಂಡ...!
(ಮುಂದುವರಿಯುವುದು)