R T Vittalmurthy Column: ದೇವೇಂದ್ರ ಫಡ್ನವೀಸ್ ಎಂಟ್ರಿ ಆಗಿದ್ದೇಕೆ ?
ಯತ್ನಾಳ್ ಅವರು ಬಿಜೆಪಿಯಿಂದ ಉಚ್ಚಾಟಿತರಾದ ನಂತರದ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಮೌನಕ್ಕೆ ಜಾರಿದ್ದಾರೆ. ಹಾಗಂತ ಪರ್ಮನೆಂಟಾಗಿ ಮೌನ ಧರಿಸಲು ಸಾಧ್ಯವಿಲ್ಲವಲ್ಲ? ಹೀಗಾಗಿ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ ಅವರು, ‘ಪಕ್ಷ ನಿಷ್ಠರಾದ ಯತ್ನಾಳ್ ಪ್ರಾಮಾಣಿಕವಾಗಿ ಮಾತನಾಡಿದ್ದೇ ಅವರಿಗೆ ಮುಳುವಾಗಿದೆ. ಹೀಗಾಗಿ ಉಚ್ಚಾಟಿತ ರಾಗಿರುವ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಅಂತ ವರಿಷ್ಠರಿಗೆ ಹೇಳಿ’ ಎಂದು ಮನವಿ ಮಾಡಿಕೊಂಡಿದ್ದಾರೆ.


ಮೂರ್ತಿಪೂಜೆ
ಕೆಲ ದಿನಗಳ ಹಿಂದೆ ಬಿಜೆಪಿಯಿಂದ ಉಚ್ಚಾಟಿತರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ವರಿಷ್ಠರಿಗೆ ಒಂದು ಸಂದೇಶ ರವಾನಿಸಿದರು. ‘ಪಕ್ಷದ ಶಿಸ್ತನ್ನು ಇನ್ನು ಉಲ್ಲಂಘನೆ ಮಾಡು ವುದಿಲ್ಲ’ ಎಂಬುದು ಆ ಸಂದೇಶ. ಅರ್ಥಾತ್, ಪಕ್ಷದಿಂದ ಉಚ್ಚಾಟಿತರಾದ ಯತ್ನಾಳ್ ಅವರು ಬಿಜೆಪಿ ಪಾಳಯಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಆದರೆ ಯಡಿಯೂರಪ್ಪ ಗ್ಯಾಂಗನ್ನು ಕಂಡರೆ ಕುದಿ ಯುವ, ಎಗಾದಿಗಾ ಮಾತನಾಡುವ ಯತ್ನಾಳ್ ಹೀಗೆ ಇದ್ದಕ್ಕಿದ್ದಂತೆ ಧ್ವನಿ ಬದಲಿಸಿದ್ದೇಕೆ? ಹಾಗೆ ನೋಡಿದರೆ, ಬಿಜೆಪಿಯಿಂದ ಉಚ್ಚಾಟಿತರಾದ ಯತ್ನಾಳ್ ಹೊಸ ಪಕ್ಷ ಕಟ್ಟುತ್ತಾರೆ, ಕಟ್ಟಿ ಯಡಿಯೂ ರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ಎರಗುತ್ತಾರೆ ಅಂತ ಕೆಲವರು ನಿರೀಕ್ಷಿಸಿದ್ದರು. ಎಷ್ಟೇ ಆದರೂ ಲಿಂಗಾಯತ ಒಳಪಂಗಡಗಳಲ್ಲಿ ತುಂಬಾ ಬಲಿಷ್ಠರಾದ ಪಂಚಮಸಾಲಿ ಸಮುದಾಯ ದವರು, ಯತ್ನಾಳ್ ಅವರಿಗಾದ ಈ ಅವಮಾನ ವನ್ನು ಸಹಿಸುವುದಿಲ್ಲ ಮತ್ತು ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳಲಿರುವ ಯತ್ನಾಳ್ ತಮ್ಮ ಪವರ್ ಅನ್ನು ತೋರಿಸುತ್ತಾರೆ ಎಂಬುದು ಇಂಥವರ ಲೆಕ್ಕಾಚಾರ ಆಗಿತ್ತು.
ಆದರೆ ಇಂಥ ಲೆಕ್ಕಾಚಾರಗಳನ್ನು ಹುಸಿಗೊಳಿಸಿದ ಯತ್ನಾಳ್, ಮರಳಿ ಬಿಜೆಪಿ ಪಾಳಯ ಸೇರಲು ಉತ್ಸುಕರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟ ಎಂಬುದು ನಿಜವಾದರೂ ಭವಿಷ್ಯದಲ್ಲಿ ಅದನ್ನು ನಿಜ ಮಾಡಲು ಒಬ್ಬ ನಾಯಕರು ಅಣಿಯಾಗಿದ್ದಾರೆ. ಅವರೇ- ಮಹಾರಾಷ್ಟ್ರದ ಮುಖ್ಯ ಮಂತ್ರಿ ದೇವೇಂದ್ರ ಫಡ್ನವೀಸ್. ಹೀಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮರಳಿ ಬಿಜೆಪಿ ಪಾಳಯಕ್ಕೆ ಸೇರಿಸಲು ದೇವೇಂದ್ರ ಫಡ್ನವೀಸ್ ಯಾಕೆ ಉತ್ಸುಕರಾಗಿದ್ದಾರೆ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ಕಣ್ಣಿಗೆ ಕಾಣುವ ಮತ್ತೊಬ್ಬ ನಾಯಕ, ಮಾಜಿ ಸಚಿವ ರಮೇಶ್ ಜಾರಕಿ ಹೊಳಿ.
ಅಂದ ಹಾಗೆ, ಯಡಿಯೂರಪ್ಪ-ವಿಜಯೇಂದ್ರ ಅವರ ವಿರುದ್ಧದ ಹೋರಾಟದಲ್ಲಿ ಬಸನಗೌಡ ಪಾಟೀಲ್ ಯತ್ನಾಳರಂತೆ ಮುಂಚೂಣಿಯಲ್ಲಿದ್ದವರು ರಮೇಶ್ ಜಾರಕಿಹೊಳಿ. ಆದರೆ ‘ಜಿಹ್ವಾಸ’ ಪ್ರಯೋಗದಲ್ಲಿ ಜಾರಕಿಹೊಳಿ ಅವರು ಯತ್ನಾಳರಷ್ಟು ನಿಷ್ಣಾತರಲ್ಲ. ಕೆಲವು ಸಂದರ್ಭಗಳಲ್ಲಿ ಯತ್ನಾಳ್ ಮೌನವಾಗಿರುವ ಪರಿಸ್ಥಿತಿ ಸೃಷ್ಟಿಯಾಗುತ್ತಿತ್ತಲ್ಲ? ಆಗೆಲ್ಲ ಜಾರಕಿಹೊಳಿ ರಣೋತ್ಸಾಹ ತೋರಿಸುತ್ತಿದ್ದರು.
ಇದನ್ನೂ ಓದಿ: R T Vittalmurthy Column: ಇತಿಹಾಸ ಮರೆಯದ ಕೌತುಕದ ಕ್ಷಣಗಳು...
‘ಇನ್ನು ಮುಂದೆ ವಿಜಯೇಂದ್ರ ವಿರೋಧಿ ಹೋರಾಟದ ಮುಂಚೂಣಿಯಲ್ಲಿ ನಾನೇ ಇರುತ್ತೇನೆ’ ಎನ್ನುತ್ತಿದ್ದರು. ಆದರೆ ಅದೇನೇ ಮಾಡಿದರೂ ಯತ್ನಾಳ್ ಅವರಷ್ಟು ಪರಿಣಾಮಕಾರಿಯಾಗಿ ಜಿಹ್ವಾಸ್ತ್ರ ಪ್ರಯೋಗಿಸಲು ಅವರಿಗೆ ಆಗುತ್ತಿರಲಿಲ್ಲ. ಹೀಗಾಗಿ ಯತ್ನಾಳ್ ಅವರು ಬಿಜೆಪಿಯಿಂದ ಉಚ್ಚಾಟಿತರಾದ ನಂತರದ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಮೌನಕ್ಕೆ ಜಾರಿದ್ದಾರೆ. ಹಾಗಂತ ಪರ್ಮನೆಂಟಾಗಿ ಮೌನ ಧರಿಸಲು ಸಾಧ್ಯವಿಲ್ಲವಲ್ಲ? ಹೀಗಾಗಿ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ ಅವರು, ‘ಪಕ್ಷ ನಿಷ್ಠರಾದ ಯತ್ನಾಳ್ ಪ್ರಾಮಾಣಿಕವಾಗಿ ಮಾತನಾಡಿದ್ದೇ ಅವರಿಗೆ ಮುಳುವಾಗಿದೆ. ಹೀಗಾಗಿ ಉಚ್ಚಾಟಿತರಾಗಿರುವ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಅಂತ ವರಿಷ್ಠರಿಗೆ ಹೇಳಿ’ ಎಂದು ಮನವಿ ಮಾಡಿ ಕೊಂಡಿದ್ದಾರೆ. ಹಾಗೆ ನೋಡಿದರೆ, ಮೋದಿ-ಅಮಿತ್ ಶಾ ಮಾತ್ರವಲ್ಲದೆ ಸಂಘ ಪರಿವಾರದ ನಾಯಕರಿಗೂ ಫಡ್ನವೀಸ್ ಅತ್ಯಾಪ್ತರು.
ಇಂಥ ಫಡ್ನವೀಸ್ ಅವರಿಗೆ ಕರ್ನಾಟಕದ ಗಡಿಭಾಗದ ಜಿಲ್ಲೆಗಳ ರಾಜಕೀಯದಲ್ಲಿ ಆಸಕ್ತಿ ಹೆಚ್ಚು. ಅದರಲ್ಲೂ ಮುಂಬಯಿ-ಕರ್ನಾಟಕ ಭಾಗದ ರಾಜಕೀಯದಲ್ಲಿ ತುಸು ಹೆಚ್ಚೇ ಅನ್ನಿಸುವಷ್ಟು ಆಸಕ್ತಿ ಹೊಂದಿರುವ ಫಡ್ನವೀಸ್ ಅವರು ಸಹಜವಾಗಿಯೇ ಆ ಭಾಗದ ಬಿಜೆಪಿ ನಾಯಕರ ಜತೆ ಆತ್ಮೀಯತೆ ಹೊಂದಿದ್ದಾರೆ.

ಇದೇ ಕಾರಣಕ್ಕಾಗಿ ರಮೇಶ್ ಜಾರಕಿಹೊಳಿ ತಮ್ಮನ್ನು ಭೇಟಿಯಾಗಿ ಯತ್ನಾಳ್ ಪರವಾಗಿ ವಾದಿಸಿದ ನಂತರ ಫಡ್ನವೀಸ್ ಒಂದು ಉಪಾಯ ಹೇಳಿದ್ದಾರೆ. ಇನ್ನು ಮುಂದೆ ಪಕ್ಷದ ಶಿಸ್ತು ಉಲ್ಲಂಘನೆ ಮಾಡುವುದಿಲ್ಲ ಅಂತ ಯತ್ನಾಳ್ ವರಿಷ್ಠರಿಗೆ ಸಂದೇಶ ಕಳಿಸಲಿ. ಮುಂದೆ ಅವರನ್ನು ಮರಳಿ ಬಿಜೆಪಿಗೆ ಸೇರಿಸುವ ಜವಾಬ್ದಾರಿ ನನಗಿರಲಿ ಎಂಬುದು ಅವರು ಹೇಳಿದ ಉಪಾಯ. ಈಗ ಅವರು ಹೇಳಿದ ಉಪಾಯದಂತೆ ಪಾನು ಉರುಳಿದೆ. ಭಾರತ-ಪಾಕಿಸ್ತಾನದ ನಡುವಣ ಸಂಘರ್ಷಕ್ಕೆ ಬ್ರೇಕ್ ಬಿದ್ದ ನಂತರ ಯತ್ನಾಳ್ ಎಪಿಸೋಡಿಗೆ ಪುನಃ ಚಾಲನೆ ಸಿಗಲಿದೆ.
ಬಿಜೆಪಿಯಲ್ಲಿ ಅಸಹಕಾರ ಚಳವಳಿ
ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಅಸಹಕಾರ ಚಳವಳಿ ಆರಂಭವಾಗಿದೆ. ಇಂಥ ಚಳವಳಿಗೆ ಗ್ರೇಟರ್ ಬೆಂಗಳೂರು ವಿಷಯವೇ ಕಾರಣ. ಬಿಬಿಎಂಪಿಯನ್ನು ಐದು ಹೋಳುಗಳನ್ನಾಗಿ ಮಾಡುವ ರಾಜ್ಯ ಸರಕಾರದ ನಿರ್ಧಾರವನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪರಿಣಾಮಕಾರಿಯಾಗಿ ವಿರೋಧಿಸುತ್ತಿಲ್ಲ. ಇದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆ ಅವರಿಗಿರುವ ಆತ್ಮೀಯತೆಯೇ ಕಾರಣ ಎಂಬುದು ಬಹುತೇಕ ಬಿಜೆಪಿ ಕಾರ್ಯ ಕರ್ತರ ಸಿಟ್ಟು. ಇವತ್ತು ಇವರಿಗಿರುವ ಆಪ್ತತೆಯ ಕಾರಣಕ್ಕಾಗಿ ಬಿಬಿಎಂಪಿಯನ್ನು ಹೋಳು ಮಾಡಲು ಬಿಟ್ಟರೆ, ಅದು ಪುರಸಭೆ, ನಗರಸಭೆಗಳ ಲೆವೆಲ್ಲಿಗೆ ಇಳಿಯುತ್ತದೆ. ಹಾಗಾದ ಮೇಲೆ ಅದನ್ನು ಬಿಬಿಎಂಪಿ ಅಂತ ಕರೆಯುವುದಾದರೂ ಏಕೆ? ಎಂಬುದು ಈ ಕಾರ್ಯಕರ್ತರ ಪ್ರಶ್ನೆ.
ಹಾಗಂತಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪತ್ರ ಬರೆದಿದ್ದಾರಲ್ಲದೆ, ನಾಯಕತ್ವದ ಈ ವೈಫಲ್ಯವನ್ನು ಸರಿಪಡಿಸದಿದ್ದರೆ ಪಕ್ಷ ರೂಪಿಸುವ ಹೋರಾಟಗಳಲ್ಲಿ ನಾವು ಪಾಲ್ಗೊಳ್ಳುವುದಿಲ್ಲ ಅಂತ ನೇರವಾಗಿಯೇ ಎಚ್ಚರಿಸಿದ್ದಾರೆ.
ಅವರ ಈ ಎಚ್ಚರಿಕೆಯನ್ನು ಪಕ್ಷದ ರಾಷ್ಟ್ರೀಯ ನಾಯಕರು ತಕ್ಷಣ ಪರಿಗಣಿಸುವುದು ಕಷ್ಟವಾಗ ಬಹುದು. ಯಾಕೆಂದರೆ ಕೇಂದ್ರ ಸರಕಾರವು ಪಾಕಿಸ್ತಾನದ ಜತೆಗಿನ ಸಂಘರ್ಷದಲ್ಲಿ ಮುಳುಗಿರುವಾಗ ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಎಚ್ಚರಿಕೆಯನ್ನು ಅದ್ಯತೆಯ ಮೇಲೆ ಎತ್ತಿಕೊಳ್ಳುವುದು ಕಷ್ಟವಾಗಬಹುದು. ಆದರೆ ಅದನ್ನು ದೀರ್ಘಕಾಲ ನಿರ್ಲಕ್ಷಿಸಲು ಮಾತ್ರ ಸಾಧ್ಯವಿಲ್ಲ.
ಕರ್ನಾಟಕದ ಮೇಲೆ ವಾರ್ ಎಫೆಕ್ಟ್
ಇನ್ನು ಭಾರತ-ಪಾಕಿಸ್ತಾನದ ಮಧ್ಯೆ ಶುರುವಾಗಿರುವ ಸಂಘರ್ಷವು ಕರ್ನಾಟಕದ ಮೇಲೆ ಬೀರುವ ಪರಿಣಾಮವೇನು? ಇಂಥದೊಂದು ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡುವುದು ಅಸಾಧ್ಯವಾದರೂ, ಯುದ್ಧದಂಥ ವಿಷಯ ಆಳವಾದ ಪರಿಣಾಮ ಬೀರುವುದು ಮಾತ್ರ ಗ್ಯಾರಂಟಿ. 1971ರಲ್ಲಿ ಪಾಕಿಸ್ತಾನದ ವಿರುದ್ಧ ಮುಗಿಬಿದ್ದ ಭಾರತ ಅದನ್ನು ಹೀನಾಯವಾಗಿ ಸದೆಬಡಿದಿದ್ದಷ್ಟೇ ಅಲ್ಲ, ಅದನ್ನು ವಿಭಜಿಸಿ ಬಾಂಗ್ಲಾದೇಶ ಸೃಷ್ಟಿಯಾಗಲು ಕಾರಣವಾಗಿತ್ತು. ಆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಪ್ರಧಾನಿ ಇಂದಿರಾ ಗಾಂಧಿಯವರನ್ನು ‘ದುರ್ಗೆ’ ಎಂದು ಹೊಗಳಿದ್ದು ಒಂದು ಕಡೆಗಾದರೆ, ಮತ್ತೊಂದು ಕಡೆ ಇಂದಿರಾ ವರ್ಚಸ್ಸು ಮುಗಿಲೆತ್ತರಕ್ಕೆ ಏರಿತು. ಹೀಗಾಗಿ ಆ ಸಂದರ್ಭ ದಲ್ಲಿ ನಡೆದ ಚುನಾವಣೆಗಳಲ್ಲಿ ಇಂದಿರಾ ನೇತೃತ್ವದ ಕಾಂಗ್ರೆಸ್ ಜಯಭೇರಿ ಬಾರಿಸುತ್ತಾ ಹೋಯಿತು. 1972ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಇಂದಿರಾ ನೇತೃತ್ವದ ಕಾಂಗ್ರೆಸ್ ಅದ್ದೂರಿ ಜಯ ಗಳಿಸಿತ್ತಲ್ಲದೆ ದೇವರಾಜ ಅರಸು ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿತ ರಾಗಿದ್ದರು.
ಹಾಗೆ ನೋಡಿದರೆ, ಲಾಲ್ ಬಹಾದುರ್ ಶಾಸ್ತ್ರೀಯವರ ನಿಧನದ ನಂತರ ಪ್ರಧಾನಿಯಾದ ಇಂದಿರಾ ವಿರುದ್ಧ ಪಕ್ಷದ ಅತಿರಥ-ಮಹಾರಥರೆಲ್ಲ ತಿರುಗಿ ಬಿದ್ದಿದ್ದರಲ್ಲದೆ, ಪಕ್ಷವನ್ನು ಹೋಳು ಮಾಡಿ ನಿಂತಿದ್ದರು. ಇಂಥ ಸಂದರ್ಭದಲ್ಲಿ ಇಂದಿರಾ ಜತೆಗಿದ್ದವರು ಎರಡನೇ ಪಂಕ್ತಿಯ ನಾಯಕರು. ಇಂಥವರನ್ನು ಜತೆಗಿಟ್ಟುಕೊಂಡು ಅವರು ಚುನಾವಣಾ ರಣರಂಗಕ್ಕಿಳಿದಿದ್ದರೆ ಯಶಸ್ಸು ಸಿಗುವುದು ಸುಲಭವಿರಲಿಲ್ಲ.
ಆದರೆ ಚಾಣಾಕ್ಷಮತಿ ಇಂದಿರಾ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಿದ್ದಲ್ಲದೆ, ಬಾಂಗ್ಲಾ ಪ್ರತ್ಯೇಕತೆಯ ಹೋರಾಟಗಾರರು ನೆರವು ಕೋರಿದ ಕೂಡಲೇ ಆ ಅವಕಾಶವನ್ನು ಬಳಸಿ ಕೊಂಡು ಪಾಕಿಸ್ತಾನದ ವಿರುದ್ಧ ಯುದ್ದ ಘೋಷಿಸಿದರು. ಹೀಗೆ ಯುದ್ದ ಘೋಷಿಸಿ ಪಾಕಿಸ್ತಾನವನ್ನು ಭಾರತ ಸದೆಬಡಿದಿದ್ದರಿಂದ, ಇಂದಿರಾ ವಿರೋಽ ನಾಯಕರು ಸುಸ್ತಾಗಿ ಹೋದರು. ಪರಿಣಾಮ? ಇಂದಿರಾ ಗಾಂಧಿ ತಕ್ಷಣದ ಆಪತ್ತಿನಿಂದ ಪಾರಾಿದ್ದಲ್ಲದೆ, ತಮ್ಮ ನೇತೃತ್ವದ ಪಕ್ಷ ಬಲಿಷ್ಠವಾಗುವಂತೆ ನೋಡಿಕೊಂಡರು.
ಮುಂದೆ ಇಂದಿರಾ ಗಾಂಧಿಯವರ ಈ ಬಲವು ದೇವರಾಜ ಅರಸರಂಥ ನಾಯಕ ನೆಲೆ ನಿಲ್ಲಲು, ಸಾಮಾಜಿಕ ಕ್ರಾಂತಿಯ ಹರಿಕಾರ ಎನ್ನಿಸಿಕೊಳ್ಳಲು ಮೂಲವಾಯಿತು. ಇವತ್ತು ಪಾಕಿಸ್ತಾನದ ವಿರುದ್ಧ ಭಾರತ ಮುಗಿಬಿದ್ದಿರುವ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಿತಿಯೂ ಸ್ವಲ್ಪ ಹಾಗೇ ಇದೆ. ಅವರೀಗ ಎಪ್ಪತ್ತೈದರ ಗಡಿಯಲ್ಲಿರುವುದರಿಂದ ಅವರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಿ ಯೋಗಿ ಆದಿತ್ಯನಾಥ್ ಅವರನ್ನು ತಂದು ಕೂರಿಸುವ ಲೆಕ್ಕಾಚಾರ ಸಂಘ ಪರಿವಾರ ದಲ್ಲಿದೆ.
ಇದೇ ಕಾರಣಕ್ಕಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮೋದಿ-ಅಮಿತ್ ಶಾ ಹೇಳಿದವರನ್ನು ತಂದು ಕೂರಿಸಲೂ ಪರಿವಾರ ತಯಾರಿಲ್ಲ. ಇಂಥ ‘ಐನ್ ಟೈಮ್’ನ ಪಹಲ್ಗಾಮ್ ಎಪಿಸೋಡಿನ ನಂತರ ಮೋದಿ ಪಾಕಿಸ್ತಾನದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಸಂಘರ್ಷದಲ್ಲಿ ಭಾರತದ ಸೈನ್ಯ ಪಾಕಿಸ್ತಾನವನ್ನು ಬಗ್ಗು ಬಡಿದಿದ್ದರೆ, ನೋ ಡೌಟ್, ಮೋದಿಯವರ ಗ್ರಾಫ್ ಮೇಲೇರುತ್ತಿತ್ತು ಮತ್ತು ಅವರನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತಿತ್ತು.
ಆದರೆ ಈಗ ಕದನವಿರಾಮದ ಮಾತು ಕೇಳಿಬಂದಿರುವುದರಿಂದ ಬಿಗ್ ಇಂಪ್ಯಾಕ್ಟ್ ಆಗದೇ ಹೋಗ ಬಹುದು. ಇಷ್ಟಾದರೂ ಭಾರತದ ಸೈನ್ಯವು ಪಾಕಿಸ್ತಾನವನ್ನು ಬೆದರಿಸುವಲ್ಲಿ ಸಫಲವಾಗಿರುವು ದರಿಂದ ಮೋದಿ ಪವರ್ ಮುಂಚೆಗಿಂತ ಹೆಚ್ಚಾಗಿರುವುದು ನಿಜ ಮತ್ತು ಇದನ್ನು ಎನ್ ಕ್ಯಾಶ್ ಮಾಡಿಕೊಂಡರೆ ಅವರು ಬಲಿಷ್ಠರಾಗುವುದೂ ನಿಜ.
ಹೀಗೆ ಮೋದಿ ಬಲಿಷ್ಠ ನೆಲೆಯ ಮೇಲೆ ನಿಂತರೆ ಕರ್ನಾಟಕದ ರಾಜಕಾರಣದ ಮೇಲೆ ಯಾವ ಪರಿಣಾಮವಾಗುತ್ತದೆ ಅಂತ ಈಗಲೇ ಹೇಳುವುದು ಕಷ್ಟ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಅದನ್ನು ಅಲುಗಾಡಿಸುವ ಯತ್ನ ನಡೆದಿತ್ತಲ್ಲ? ಅಂಥ ಯತ್ನಕ್ಕೆ ಮರುಚಾಲನೆ ದೊರೆಯುವುದು ಅಸಂಭವವಲ್ಲ.
ಲಾಸ್ಟ್ ಸಿಪ್: ಇನ್ನು ಭಾರತ-ಪಾಕಿಸ್ತಾನದ ನಡುವಣ ಸಂಘರ್ಷ ಪ್ರಧಾನಿ ಮೋದಿಯವರ ಬಲವನ್ನು ಹೆಚ್ಚಿಸಿದರೆ, ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಅದು ಗಟ್ಟಿಗೊಳಿಸ ಲಿದೆ ಎಂಬುದು ರಾಜಕೀಯ ವಲಯಗಳ ಮಾತು. ಕಾರಣ? ದಿಲ್ಲಿಯಲ್ಲಿ ಮೋದಿ ಪವರ್ ಹೆಚ್ಚಿದರೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಕಿರಿಕಿರಿ ಗ್ಯಾರಂಟಿ. ಇಂಥ ಪರಿಸ್ಥಿತಿ ಯಲ್ಲಿ ಸರಕಾರ ಅಲುಗಾಡದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ವರಿಷ್ಠರಿಗೆ ಸವಾಲು. ಇಂಥ ಸವಾಲಿನ ಸಂದರ್ಭ ದಲ್ಲಿ ಅವರು ಸಿಎಂ ಸಿದ್ದರಾಮಯ್ಯ ಅವರ ಜತೆ ಗಟ್ಟಿಯಾಗಿ ನಿಲ್ಲುವುದಷ್ಟೇ ಅಲ್ಲ, ನಾಯಕತ್ವ ಬದಲಾವಣೆಯಂಥ ಕೂಗಿಗೆ ತಪ್ಪಿಯೂ ಕಿವಿ ಕೊಡುವುದಿಲ್ಲ. ಆ ದೃಷ್ಟಿಯಿಂದ, ಸದ್ಯದ ಭಾರತ-ಪಾಕಿಸ್ತಾನದ ನಡುವಣ ಸಂಘರ್ಷ ಕೂಡಾ ಸಿದ್ದುಗೆ ಟಾನಿಕ್ ಎಂಬುದು ರಾಜಕೀಯ ವಲಯಗಳ ಮಾತು.