ಮುನಿರಾಜು ಎಂ ಅರಿಕೆರೆ, ಚಿಕ್ಕಬಳ್ಳಾಪುರ
ಪಾಕ್ಷಿಕದ ಉದ್ದಕ್ಕೂ ಪುಷ್ಪ ಕೃಷಿಕರ ಪಾಲಿಗೆ ಸಂಕಷ್ಟ
ನವರಾತ್ರಿಯವರೆಗೂ ಶುಭ ಕಾರ್ಯಗಳಿಗೆ ಬ್ರೇಕ್
ರಾಜ್ಯದಲ್ಲಿಯೇ ಬೃಹತ್ ಹೂವಿನ ಮಾರುಕಟ್ಟೆ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯ ಮೇಲೆ ಪಿತೃಪಕ್ಷದ ಕರಿನೆರಳು ಬಿದ್ದಿರುವ ಪರಿಣಾಮ ನಿತ್ಯವೂ ಟನ್‌ಗಟ್ಟಲೆ ಬರುವ ಹೂವನ್ನು ಕೊಳ್ಳುವವರಿಲ್ಲದೆ ಬೀದಿಗೆ ಸುರಿಯುವ ಸಂದರ್ಭ ಎದುರಾಗಿದೆ.
ಹೊರ ರಾಜ್ಯದ ವ್ಯಾಪಾರಿಗಳ ಸುಳಿವಿಲ್ಲದ್ದರಿಂದ ತಂದ ಹೂವು ಬಿಕರಿಯಾಗುತ್ತಿಲ್ಲ. ಬಿಕರಿ ಯಾದರೂ ಕೂಡ ರೈತರು ಹೂವನ್ನು ಬಿಡಿಸಿ ಮಾರುಕಟ್ಟೆಗೆ ತರುವ ಕೂಲಿಯೂ ಗಿಟ್ಟದಂತಾಗಿ ತಂದ ಹೂವನ್ನು ಮಾರುಕಟ್ಟೆಯಲ್ಲಿಯೇ ಬಿಟ್ಟುಹೋಗುವ ಪರಿಸ್ಥಿತಿ ನಿರ್ಮಾಣವಾಗಿ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾದೆ. ಪ್ರತಿವರ್ಷ ಪಿತೃಪಕ್ಷ ಬಂದರೆ ಸಾಕು ರೈತರಮೊಗ ಕಪ್ಪಿಡುತ್ತದೆ. ಸ್ಥಳೀಯ ವ್ಯಾಪಾರಿಗಳ ಕಾರಣಕ್ಕಾಗಿ ಮಾರುಕಟ್ಟೆ ನಿತ್ಯವೂ ಉಸಿರಾಡುತ್ತಿದೆ ವಿನಃ ಶಕ್ತಿಯುತವಾಗಿ ಮಾತಾಡುವ ಸ್ಥಿತಿಯಲ್ಲಿಲ್ಲ ಎಂಬುದು ಇಲ್ಲಿಗೆ ಬರುವ ಯಾರಿಗಾದರೂ ಗೋಚರಿಸುವ ಸತ್ಯವಾಗಿದೆ.
1900 ಹೆಕ್ಟೇರ್‌ನಲ್ಲಿ ಬೆಳೆ: ಹೌದು. ರಾಜ್ಯದಲ್ಲಿಯೇ ಬೃಹತ್ ಹೂವಿನ ಮಾರುಕಟ್ಟೆಯಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿತ್ಯವೂ 40 ಟನ್ ಗೂ ಅಧಿಕ ಹೂವಿನ ವಹಿವಾಟು ನಡೆಯುತ್ತದೆ. ರಾಜ್ಯವಷ್ಟೇ ಅಲ್ಲದೆ ಹೊರ ರಾಜ್ಯ, ಹೊರ ದೇಶಗಳಿಗೂ ನಿಯಮಿತವಾಗಿ ಇಲ್ಲಿನ ಹೂವು ರಫ್ತಾಗುತ್ತದೆ.
ಇದನ್ನೂ ಓದಿ: Chikkaballapura: ಬರೋಬ್ಬರಿ 4 ಲಕ್ಷ ರೂ.ಗೆ ಮಾರಾಟವಾದ ಸಾರ್ವಜನಿಕ ಗಣೇಶೋತ್ಸವದ ಲಡ್ಡು!
ಜಿಲ್ಲೆಯಲ್ಲಿ ಸುಮಾರು 1900 ಹೆಕ್ಟೇರ್‌ನಲ್ಲಿ ಪುಷ್ಪಕೃಷಿಯಿದ್ದು ಇಲ್ಲಿನ ಪ್ರಯೋಗಶೀಲ ರೈತರು ನವೀನ ತಂತ್ರಜ್ಞಾನ ಬಳಸಿ ಬಗೆಬಗೆಯ ಹೂಗಳನ್ನು ಇಲ್ಲಿ ಬೆಳೆಯುತ್ತಾರೆ. ಗುಲಾಬಿಯೊಂದೇ 1700 ಹೆಕ್ಟೇರ್ ವಿಸ್ತೀರ್ಣದಲ್ಲಿ ಇಲ್ಲಿ ಬೆಳೆಯಲಾಗುತ್ತಿದೆ ಎನ್ನುವುದೇ ಪುಷ್ಪಕೃಷಿಯ ಮಹತ್ವವನ್ನು ಸಾರಿ ಹೇಳುತ್ತಿದೆ.
ಜಿಲ್ಲೆಯ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಮಂಚೇನಹಳ್ಳಿ ಗುಡಿಬಂಡೆ, ತಾಲೂಕುಗಳಲ್ಲಿ ಅತಿಹೆಚ್ಚು ಹೂಬೆಳೆಗಾರರಿದ್ದು ಗುಲಾಬಿ, ಸೇವಂತಿ, ಜರ್ಬೆರಾ,ಗ್ಲಾಡಿಯೋಲಸ್,ಇತ್ಯಾದಿ ಹೂಗಳನ್ನು ಬೆಳೆಯುತ್ತಾರೆ. ಉಳಿದಂತೆ ಬಾಗೇಪಲ್ಲಿ ಚಿಂತಾಮಣಿ ಗೌರಿಬಿದನೂರು ಚೇಳೂರಿ ತಾಲೂಕುಗಳಲ್ಲಿ ಕೂಡ ರೈತರ ಆರ್ಥಿಕ ಬಲವರ್ಧನೆಗೆ ಪುಷ್ಪಕೃಷಿ ನೆರವಾಗಿದೆ. ಪಾತಾಳಕ್ಕಿಳಿದ ಬೆಲೆ: ಕಳೆದ ಒಂದು ವಾರದಿಂದ ಮಾರುಕಟ್ಟೆಯಲ್ಲಿ ಗುಲಾಬಿ ಹೂವು ಒಂದು ಕೆಜಿಗೆ ೩೦-೪೦ರೂಗೆ ಬಿಕರಿಯಾಗುತ್ತಿದ್ದರೆ, ಸೇವಂತಿ ೫೦ ರಿಂದ ೮೦, ಚೆಂಡುಹೂವು ೫ ರಿಂದ ೧೦ ರೂಗೆ ಮಾರಾಟವಾಗುತ್ತಿದೆ.ಒಂದೊಂದು ದಿನ ಈ ಬೆಲೆಯೂ ಇಲ್ಲದೆ ತಿಪ್ಪೆಗೆ ಸುರಿಯಬೇಕಾದ ಪರಿಸ್ಥಿತಿಯನ್ನು ಪುಷ್ಪ ಕೃಷಿಕರು ಅನುಭವಿಸು ತ್ತಿದ್ದಾರೆ.
ಸೆಪ್ಟಂಬರ್ ೭ ಕ್ಕೂ ಮೊದಲು ಒಂದು ಕೆ.ಜಿ ಗುಲಾಬಿ ಹೂವು ೧೦೦ ರಿಂದ ೧೫೦ರೂ, ಸೇವಂತಿ ಹೂವು ೧೦೦ ರಿಂದ ೨೦೦,ಸೆಂಟ್‌ಯೆಲ್ಲೋ ೨೦೦,೨೫೦,೩೦೦, ಚೆಂಡು ಹೂವು ೫೦,೬೦,೮೦ ತನಕ ಮಾರಾಟವಾಗುತ್ತಿತ್ತು. ಪೌರ್ಣಮಿ ಮರು ದಿನವೇ ಪಿತೃಪಕ್ಷದ ಆಗಮನವಾದ್ದರಿಂದ ಹೂವಿನ ಬೆಲೆ ದಿಢೀರೆಂದು ಪಾತಾಳ ಮುಟ್ಟಿದೆ.
ಪರಿಣಾಮ ಹೂವನ್ನು ಕೇಳುವವರಿಲ್ಲದೆ, ಹೊರರಾಜ್ಯದ ವ್ಯಾಪಾರಿಗಳ ಆಗಮನವಿಲ್ಲದೆ, ಶುಭಕಾ ರ್ಯಗಳ ಸುಳಿವಿಲ್ಲದೆ ವ್ಯಾಪಾರಿಗಳು, ರೈತರು, ಗ್ರಾಹಕರ ಜಂಗುಳಿಯಿಂದ ಕೂಡಿದ್ದ ಮಾರುಕಟ್ಟೆ ಪರಿಸರಕ್ಕೆ ರಾಹುಬಡಿದಂತಾಗಿದೆ.
ಪುಷ್ಪಕೃಷಿಗೆ ಪೂರಕ ಹವಾಗುಣ: ರಾಜ್ಯದಲ್ಲಿಯೇ ಅತಿಹೆಚ್ಚು ಹೂವನ್ನು ಬೆಳೆಯುವ ರೈತರು ಇಲ್ಲಿರುವಂತೆ,ರಾಜ್ಯದ ಬೃಹತ್ ಹೂವಿನ ಮಾರುಕಟ್ಟೆಯೂ ಇಲ್ಲಿದೆ. ಕಾರಣ ಇಲ್ಲಿನ ಹವಾಗುಣ, ತುಂತುರು ನೀರಾವರಿ ವ್ಯವಸ್ಥೆ, ರೈತರ ಪ್ರಯೋಗಶೀಲ ಮನಸ್ಸು, ಹನಿನೀರಾವರಿಗೆ ಸರಕಾರದ ಪ್ರೋತ್ಸಾಹ, ತುಂಡುಭೂಮಿ ಕೃಷಿ ಇವೆಲ್ಲಾ ಕಾರಣವಾಗಿ ಇಲ್ಲಿನ ರೈತರು ಪುಷ್ಪಬೇಸಾಯದತ್ತ ಒಲಿಯುವಂತಾಗಿದೆ. ಮೇಲಾಗಿ ಮಾರುಕಟ್ಟೆಯಲ್ಲಿ ನಿತ್ಯವೂ ಬಟವಾಡೆ ಆಗುತ್ತಿರುವುದರಿಂದ ಒಂದೆಡೆ ಹೈನೋದ್ಯಮ ಮತ್ತೊಂದೆಡೆ ಪುಷ್ಪೋದ್ಯಮದ ಕಡೆ ಇಲ್ಲಿನ ರೈತರು ವಾಲಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇಲ್ಲಿನ ಹೂವುಗಳನ್ನು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳಿಗೆ ರ-ಗುತ್ತದೆ. ಅಷ್ಟೇಕೆ ಶ್ರೀಲಂಕಾ ಸೇರಿದಂತೆ ಗಲ್ ರಾಷ್ಟ್ರಕ್ಕೂ ಇಲ್ಲಿನ ಹೂವು ರಫ್ತಾಗುತ್ತಿದೆ. ಪುಷ್ಪಕೃಷಿ ಉದ್ಯಮವಾಗಿ ಬೆಳೆಯುವ ಹಂತ ಮುಟ್ಟಿದ್ದರೂ ಇಲ್ಲಿನ ಜನಪ್ರತಿನಿಧಿಗಳು ಮತ್ತು ಸರಕಾರ ಪುಷ್ಪ ಕೃಷಿ ಸಂಬಂಧಿತ ಉದ್ಯಮಕ್ಕೆ ಬೇಕಾದ ಉತ್ತೇಜನ ನೀಡದಿರುವುದು ಮಾತ್ರ ದುರಂತವೇ ಸರಿ.
ರೈತರ ಕೈಹಿಡಿಯಲಿ: ಪ್ರತಿವರ್ಷ ಪಿತೃಪಕ್ಷ ಪ್ರಾರಂಭವಾದರೆ ಸಾಕು 15 ದಿನಗಳ ಕಾಲ ರೈತರ ಬದುಕು ಮೂರಾಬಟ್ಟೆಯಾಗುವುದು ಖಚಿತ. ಪುಷ್ಪಕೃಷಿ ಲಾಭದಾಯಕ ಬೆಳೆಯೆಂಬುದು ದಿಟವಾದರೂ ಇದರ ಉಸ್ತುವಾರಿ ಅಥವಾ ನಿರ್ವಹಣೆ ಮಾತ್ರ ದುವಾರಿಯಾಗಿದೆ. ಹೂವಿನ ಬೆಳೆಗೆ ರೋಗಬಾಧೆ ವಿಪರೀತ ಇರುವುದರಿಂದ ವಾರಕ್ಕೆ ಒಮ್ಮೆಯಾದರೂ ಔಷದಿ ಸಿಂಪಡಣೆ ಮಾಡಲೇ ಬೇಕು.
ಒಮ್ಮೆ ಔಷಧಿ ಸಿಂಪಡಣೆ ಮಾಡಲು ಸಾವಿರಾರು ರೂಪಾಯಿ ಖರ್ಚುಮಾಡಲೇಬೇಕು. ಹಗಲಿರು ಳೆನ್ನದೆ ಬಿಸಿಲು ಮಳೆ ಗಾಳಿ ಚಳಿಯೆನ್ನದೆ ಮಗುವನ್ನು ನೋಡಿಕೊಂಡಷ್ಟೇ ಮುತುವರ್ಜಿ ಯಿಂದ ಹೂ ಬೆಳೆಯ ಆರೈಕೆ ಮಾಡಬೇಕು. ಇಲ್ಲವಾದಲ್ಲಿ ಬೆಳೆ ಕೈಹಿಡಿಯುವುದು ಕಷ್ಟ. ಇಷ್ಟೆಲ್ಲಾ ಪಾಡುಪಟ್ಟು ಬೆಳೆಬೆಳೆಯುವ ರೈತರ ಬದುಕಿನಲ್ಲಿ ಪಿತೃಪಕ್ಷ ತಂದೊಡ್ಡುವ ಅಪಾಯವನ್ನು ಪಾರು ಮಾಡಲು ಜಿಲ್ಲಾಡಳಿತ ಸರಕಾರ ತೋಟಗಾರಿಕೆ ಇಲಾಖೆ ಮುಂದಾಗಬೇಕು.
ಸಂಘಸಂಸ್ಥೆಗಳೂ ಕೂಡ ಮೌಡ್ಯಕ್ಕೆ ಸೆಡ್ಡುಹೊಡೆದು ಹೂವನ್ನು ಕೊಳ್ಳುವ ಮೂಲಕ ರೈತರ ನೆರವಿಗೆ ಧಾವಿಸುವುದನ್ನು ರೂಢಿಸಿಕೊಂಡಾಗ ಮಾತ್ರ ಪಿತೃಪಕ್ಷದ ಪಾಕ್ಷಿಕದಲ್ಲಿ ರೈತರಿಗೆ ಆಗುವ ನಷ್ಟವನ್ನು ಕೊಂಚ ಮಟ್ಟಿಗಾದರೂ ತಪ್ಪಿಸಲು ಸಾಧ್ಯ ಎನ್ನುವುದು ವಿಚಾರವಂತರ ಮಾತಾಗಿದೆ.
ಎಪಿಎಂಸಿ ಸೇರಿ ಹೊರವಲಯದ ತಾತ್ಕಾಲಿಕ ಹೂವಿನ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಗೆ ಬ್ರೇಕ್ ಹಾಕಬೇಕು. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಪ್ರಾಕೃತಿಕ ವಿಕೋಪಗಳು, ಪಿತೃಪಕ್ಷ ಮೊದಲಾದ ಸಂದರ್ಭದಲ್ಲಿ ರೈತರ ಕೈಹಿಡಿಯುವ ಕೆಲಸವನ್ನು ಸರಕಾರಗಳು ಮಾಡಬೇಕು. ತೋಟಗಾರಿಕೆ ಇಲಾಖೆ ಕೂಡ ಯಾವ ತಿಂಗಳಲ್ಲಿ ರೈತರು ಎಷ್ಟು ಪ್ರಮಾಣದಲ್ಲಿ ಯಾವ ಬೆಳೆ ಬೆಳೆಯಬೇಕು. ಇದಕ್ಕೆ ಬೇಕಾದ ಮಾರುಕಟ್ಟೆ ವ್ಯವಸ್ಥೆ ರೂಪಿಸಿದರೆ ಯಾರೂ ನಷ್ಟಕ್ಕೆ ಒಳಗಾಗುವುದಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯರೆಡ್ಡಿ ಅವರ ಮಾತಾಗಿದೆ
*
ರಾಜ್ಯದಲ್ಲಿಯೇ ಅತಿ ಹೆಚ್ಚು ಹೂ ಬೆಳೆಯುವ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಪುಷ್ಪ ಕೃಷಿಕರ ಸಂಕಷ್ಟ ಹೇಳತೀರದು.ದಿಢೀರ್ ಬೆಲೆ ಇಳಿಕೆಯನ್ನು ನಿಭಾಯಿಸುವ ಉಪಕ್ರಮಗಳ ಬಗ್ಗೆಯೂ ಅರಿವು ಮೂಡಿಸುವ ಅಗತ್ಯವಿದೆ. ಅಂತರ್ಜಲವನ್ನು ನಂಬಿಕೊಂಡಿರುವ ಜಿಲ್ಲೆಯ ರೈತರಿಗೆ ಸರಕಾರ ವಿಶೇಷ ಯೋಜನೆ ರೂಪಿಸಿದರೆ ತುಂಬಾ ಉತ್ತಮ.ಇವೆಲ್ಲಾ ಆದಲ್ಲಿ ಮಾತ್ರ ಆಷಾಢ ಮಾಸದ ಹೊಡೆತವನ್ನು ರೈತ ಸಹಿಸಿಕೊಳ್ಳಲು ಸಾಧ್ಯ,
-ಅನಿಲ್ ಪುಷ್ಪಕೃಷಿಕ ಚೀಮಂಗಲ.