ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಸಂಪುಟ ಸರ್ಜರಿಗೆ ತೆರೆಮರೆ ಸಿದ್ಧತೆ
ಮಂತ್ರಿಗಳಲ್ಲಿ ಆತಂಕ, ಶಾಸಕರಲ್ಲಿ ಚಿಗುರಿದ ಆಸೆ
ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಸದ್ದಿಲ್ಲದೆ ಸಿದ್ಧತೆ ಶುರುವಾಗಿದ್ದು, ಇದಕ್ಕೆ ವಿರುದ್ಧವಾಗಿ ಪುನಾರಚನೆಯನ್ನು ತಾತ್ಕಾಲಿಕವಾಗಿ ಮುಂದೂಡುವ ಪ್ರಯತ್ನದ ಚಿಂತನೆಯೂ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಪುಟದ ಅನೇಕ ಹಿರಿಯ ಸಚಿವರೂ ಸೇರಿದಂತೆ ಬಹುತೇಕ ಮಂತ್ರಿಗಳಿಗೆ ಆತಂಕ ಆರಂಭವಾಗಿದೆ. ಈ ಬಾರಿ ಸಂಪುಟ ಪುನಾರಚನೆಯಲ್ಲಿ ಸುಮಾರು 12 ಮಂದಿ ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡುವ ಚಿಂತನೆ ನಡೆದಿದ್ದು, ಅವರಲ್ಲಿ ಬಹುತೇಕ ಹಿರಿಯರಿಗೇ ಕೊಕ್ ನೀಡುವ ಸಾಧ್ಯತೆ ಇದೆ.
ಮುಂಬರುವ ನವೆಂಬರ್‌ಗೆ ಸರಕಾರವು ಎರಡೂವರೆ ವರ್ಷಗಳನ್ನು ಪೂರೈಸಲಿದ್ದು, ಈಗಾಗಲೇ ನಿರ್ಧರಿಸಿದಂತೆ ಸಚಿವ ಸಂಪುಟ ಪುನಾರಚನೆ ಮಾಡಲು ಪಕ್ಷದೊಳಗೆ ಗಂಭೀರ ಚಿಂತನೆ ಶುರು ವಾಗಿದೆ. ನಿರೀಕ್ಷೆಯಂತೆ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ವೇಳೆಗೆ ಸಂಪುಟ ಪುನಾರಚನೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು ಎನ್ನುವ ಸೂಚನೆಗಳು ಪಕ್ಷದ ವರಿಷ್ಠರಿಂದ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆಯ ಚಿಂತನೆ ಆರಂಭಿಸಿದ್ದಾರೆ.
ಮುಂಬರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಪುಟ ಪುನಾರಚನೆಯ ಕಸರತ್ತನ್ನು ಪೂರ್ಣ ಗೊಳಿಸಬೇಕೆನ್ನುವ ಚಿಂತನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ ಎಂದು ಆಪ್ತಮೂಲ ಗಳು ತಿಳಿಸಿವೆ. ಪಕ್ಷ ಮತ್ತು ಸರಕಾರದೊಳಗೆ ಪುನಾರಚನೆ ಬಗ್ಗೆ ಚರ್ಚೆಗಳು ಆರಂಭವಾಗುತ್ತಿದ್ದಂತೆ ಅನೇಕ ಹಿರಿಯ ಸಚಿವರಲ್ಲಿ ಸಂಪುಟದಿಂದ ಹೊರಹೋಗಬೇಕಾದ ಆತಂಕ ಶುರುವಾಗಿದೆ, ಹಾಗೆಯೇ ಕೆಲವು ಹಿರಿಯ ಶಾಸಕರಿಗೆ ಸಂಪುಟ ಸೇರುವ ಆಸೆ ಚಿಗುರಲಾರಂಭಿಸಿದೆ.
ಈ ಬಾರಿ ಪುನಾರಚನೆಯಾಗಬಹುದಾದ ಸಂಪುಟದಲ್ಲಿ ಸರಕಾರವನ್ನು ವಿವಿಧ ರೀತಿಯ ಶಕ್ತಿ ಯೊಂದಿಗೆ ಮುನ್ನಡೆಸಲು ಸಹಕರಿಸುವ ಹಿರಿಯರಿಗೆ ಅದರಲ್ಲೂ ಜಾತಿ, ಜನಾಂಗದ ಬಲ ಇರುವವ ರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಹಾಗೆಯೇ ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟು ಕೊಂಡು ಕೆಲವು ಹೊಸ ಮುಖಗಳಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಆಲೋಚಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ
ಪುನಾರಚನೆ ಎಲ್ಲಾ ಪ್ರಶ್ನೆಗಳಿಗೂ ಉತ್ತರವೇ?
ಸಚಿವ ಪುನಾರಚನೆ ಸರಕಾರಕ್ಕೆ ೨ವರ್ಷ ಪೂರ್ಣವಾದಾಗಲೇ ಆಗಬೇಕಿತ್ತು, ಆದರೆ ಮುಡಾ ಸೈಟು ಹಂಚಿಕೆ ಆರೋಪ ಹಾಗೂ ನಂತರ ಪಕ್ಷದ ಆಂತರಿಕ ಸಮಸ್ಯೆಗಳಿಂದ ಆ ವಿಷಯ ಮುಂದೆ ಹೋಗಿತ್ತು. ಈಗ ಎರಡೂವರೆ ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಪುನಾರಚನೆ ಅನಿವಾರ್ಯ ವಾಗಿದೆ, ಕಾರಣ ಸಚಿವ ಆಕಾಂಕ್ಷಿಗಳು ಅಪಾರ. ಸಂಪುಟ ಪುನಾರಚನೆ ನಡೆದು ಬಿಟ್ಟರೆ ಕೆಲವು ಶಾಸಕರು ಆಗಾಗ ಪ್ರಸ್ತಾಪಿಸುತ್ತಿರುವ ನಾಯಕತ್ವ ಬದಲಾವಣೆ ಪ್ರಶ್ನೆಯೇ ಸದ್ಯಕ್ಕೆ ಉದ್ಭವಿಸುವು ದಿಲ್ಲ, ಹಾಗೆಯೇ ಮುಂದೇನು ಎನ್ನುವ ಪ್ರಶ್ನೆಗಳಿಗೆ ಇದರಿಂದಲೇ ಉತ್ತರ ಸಿಕ್ಕಿ ಬಿಡುತ್ತದೆ ಎನ್ನುವ ವಾದವೂ ಇದೆ. ಹೀಗಾಗಿ ಸದ್ಯಕ್ಕೆ ಸಂಪುಟ ಪುನಾರಚನೆ ಬೇಡ ಎನ್ನುವ ಪ್ರಯತ್ನಗಳೂ ನಡೆಯುತ್ತಿವೆ ಎನ್ನಲಾಗಿದೆ.
ಸಂಪುಟದಿಂದ ಯಾರಿಗೆ ಕೊಕ್?
ಒಟ್ಟು 33 ಮಂದಿಯ ಸಚಿವ ಸಂಪುಟದಲ್ಲಿ ನಾಗೇಂದ್ರ ಮತ್ತು ರಾಜಣ್ಣ ರಾಜೀನಾಮೆ ನಂತರ 31 ಮಂದಿ ಮಂತ್ರಿಗಳಿದ್ದು, ಇವರಲ್ಲಿ 12 ಮಂದಿಗೆ ಕೊಕ್ ನೀಡುವ ಲೆಕ್ಕಾಚಾರವಿದೆ. ಈ ಲೆಕ್ಕಾಚಾರದ ಪಟ್ಟಿಯಲ್ಲಿ ಸಚಿವರಾದ ಡಿ. ಸುಧಾಕರ್ (ಯೋಜನಾ ಮತ್ತು ಸಾಂಖಿಕ ಇಲಾಖೆ) ಉನ್ನತ ಶಿಕ್ಷಣ ಸಚಿವ ಸಿ. ಸುಧಾಕರ್, ಸಚಿವರಾದ ಭೋಸರಾಜ್, ಮಂಕಾಳ ವೈದ್ಯ, ಶರಣಪ್ಪ ದರ್ಶನಾಪುರ, ವೆಂಕಟೇಶ್, ಜಮೀರ್ ಅಹಮ್ಮದ್ ಖಾನ್, ಎಚ್.ಕೆ.ಪಾಟೀಲ್, ಮಧು ಬಂಗಾರಪ್ಪ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಭೈರತಿ ಸುರೇಶ್, ರಹೀಮ್ ಖಾನ್ ಅವರಿದ್ದಾರೆ. ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದ ಸಚಿವರಲ್ಲಿ ಯಾರನ್ನು ತೆಗೆಯಬೇಕು., ಯಾರಿಗೆ ಅವಕಾಶ ನೀಡಬೇಕೆನ್ನುವ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ. ಒಳ ಮೀಸಲಾತಿ ಬಗ್ಗೆ ಸರಕಾರದ ತೀರ್ಮಾನದ ನಂತರವೂ ಅನೇಕ ಸಮಸ್ಯೆಗಳು ಹೊತ್ತಿ ಉರಿಯುತ್ತಿದ್ದು, ಅದರ ಪರಿಣಾಮಗಳನ್ನು ನೋಡಿ ಆ ವಿಚಾರಕ್ಕೆ ಕೈ ಹಾಕಲು ಸಿದ್ದರಾಮಯ್ಯ ಆಲೋಚಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.