ರಂಜಿತ್ ಎಚ್. ಅಶ್ವತ್ಥ, ಬೆಂಗಳೂರು
ದಿನಕ್ಕೊಂದು ಗುಂಡಿ ತೋಡಿ ತೆಂಗಿನ ತೋಪು ಮಾಡುವುದು ಎಸ್‌ಐಟಿ ಉದ್ದೇಶವೇ?
ಬುರುಡೆ ಬಗ್ಗೆ ಬುರುಡೆ ಬಿಟ್ಟ ಮುಸುಕುಧಾರಿ
ಅನಾಮಿಕ ವ್ಯಕ್ತಿಯ ವಿಶ್ವಾಸಾರ್ಹತೆ ಏನು?
ಧರ್ಮಸ್ಥಳದ ಸುತ್ತಮುತ್ತ ಸರಣಿ ಕೊಲೆ ನಡೆದಿವೆ ಎನ್ನಲಾದ ಪ್ರಕರಣಕ್ಕೆ ಬೇಕಿದೆ ಬ್ರೇಕ್
ದಿಕ್ಕಿಲ್ಲದ ವ್ಯಕ್ತಿಯೊಬ್ಬನ ಹೇಳಿಕೆಯಿಂದ ಶುರುವಾದ ಗುಂಡಿ ಅಗೆಯುವ ಕಾರ್ಯ ಇದೀಗ ಬಾಹು ಬಲಿ ಬೆಟ್ಟದ ಬಳಿ ಬಂದು ನಿಂತಿದೆ. ಸಾವಿರಾರು ಹೆಣಗಳನ್ನು ಹೂತಿದ್ದೇನೆ ಎಂದು ‘ಬುರುಡೆ’ ಬಿಟ್ಟಿದ್ದ ವ್ಯಕ್ತಿ ಗುರುತಿಸಿದ್ದ ಸ್ಥಳದಲ್ಲಿ ಸಿಕ್ಕಿದ್ದು ಬರೀ ಮಣ್ಣಾದರೂ, ಎಸ್‌ಐಟಿ ಮಾತ್ರ ತನ್ನ ಅಗೆಯುವ ಕಾರ್ಯದಿಂದ ಹಿಂದೆ ಸರಿದಿಲ್ಲ.
ನಿತ್ಯ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅರ್ಥವಿಲ್ಲದ ತನಿಖೆಯನ್ನು ಕೂಡಲೇ ಸ್ಥಗಿತಗೊಳಿಸ ದಿದ್ದರೆ ವಿಶೇಷ ತನಿಖಾ ತಂಡದ ‘ಅಣಕ’ವಾಗುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಸದ್ದು ಮಾಡುತ್ತಿರುವ ‘ಮುಸುಕುಧಾರಿ ವ್ಯಕ್ತಿ’ಯ ಬುರುಡೆ ರಹಸ್ಯ ಆರಂಭದಲ್ಲಿ ರೋಚಕವಾಗಿ ಕಂಡರೂ, ‘ಗುಂಡಿ’ ತೋಡುವ ಕಾರ್ಯಾರಂಭಗೊಂಡು ನಿತ್ಯ ‘ಖಾಲಿ’ ಕೈಯಲ್ಲಿ ವಾಪಸಾಗಿದ್ದರಿಂದ ಎಸ್‌ಐಟಿಯ ತನಿಖೆಗೇ ಅರ್ಥವಿಲ್ಲದಂತಾಗಿದೆ.
ಇಷ್ಟಾದರೂ, ಆತ ತೋರಿಸಿದ ಕಡೆಯಲ್ಲ ಗುಂಡಿ ಅಗೆಯಲು ಹೋಗುತ್ತಿರುವುದು ತಂಡಕ್ಕಿರುವ ಗಾಂಭೀರ್ಯತೆಯನ್ನು ಕಡಿಮೆಗೊಳಿಸುತ್ತಿದೆ ಎನ್ನುವುದು ಸ್ಪಷ್ಟ. ಕೆಲ ತಿಂಗಳ ಹಿಂದೆ ಏಕಾಏಕಿ ಮುನ್ನೆಲೆಗೆ ಬಂದ ಈ ಮುಸುಕುಧಾರಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡುತ್ತಿದ್ದಂತೆ ರಾಜ್ಯವಷ್ಟೇ ಅಲ್ಲ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಸುದ್ದಿ ಸದ್ದಾಗಿತ್ತು.
ಇದನ್ನೂ ಓದಿ: Ranjith H Ashwath Column: 'ರಾಜಕೀಯʼ ಸಂಘರ್ಷಕ್ಕೆ ಶಿಕ್ಷಣ ನಲುಗದಿರಲಿ
ಈತನ ‘ಸಾಕ್ಷ್ಯ’ವಿಲ್ಲದ ಹೇಳಿಕೆಯನ್ನೇ ನಂಬಿಕೊಂಡ ಕೆಲವೊಂದಷ್ಟು ಜನರು ಈತನ ಹೇಳಿಕೆಗೆ ಸೌಜನ್ಯಾ ಪ್ರಕರಣವನ್ನು ಸೇರಿಸಿಕೊಂಡು ‘ರೀಲ್ಸ್’ಗಳನ್ನು ಮಾಡಲು ಶುರು ಮಾಡಿದ್ದರು. ಆದರೆ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದರಿಂದ, ರಾಜ್ಯ ಸರಕಾರ ‘ನಿಷ್ಪಕ್ಷಪಾತ’ ತನಿಖೆಯ ಉದ್ದೇಶದಿಂದ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಆರಂಭದಲ್ಲಿ ಎಸ್‌ಐಟಿ ರಚನೆ ಮಾಡಿದ ಸರಕಾರದ ತೀರ್ಮಾನವನ್ನು ಯಾರೊಬ್ಬರೂ ವಿರೋಧಿ ಸಲಿಲ್ಲ. ಆದರೆ ತನಿಖಾ ತಂಡದ ಕಾರ್ಯನಿರ್ವಹಣೆ, ತನಿಖೆ ನಡೆಸುತ್ತಿರುವ ರೀತಿ ಗಮನಿಸಿ, ‘ತಟಸ್ಥ’ರಾಗಿದ್ದವರೂ ಇದೀಗ ಎಸ್‌ಐಟಿ ತನಿಖೆಯ ದಿಕ್ಕನ್ನು ಪ್ರಶ್ನಿಸುತ್ತಿದ್ದಾರೆ.
15 ಗುಂಡಿಯಲ್ಲಿ ಸಿಗದ ಬುರುಡೆ: ಪ್ರಣಬ್ ಮೊಹಂತಿ ನೇತೃತ್ವದಲ್ಲಿ ರಚನೆಯಾದ ಎಸ್‌ಐಟಿ ಧರ್ಮಸ್ಥಳಕ್ಕೆ ತೆರಳಿ ಅನಾಮಿಕ ವ್ಯಕ್ತಿ ಹೂತಿಟ್ಟಿದ್ದ ಸ್ಥಳಗಳನ್ನು ಗುರುತಿಸಿ, ನಿತ್ಯ ಒಂದೊಂದು ಸ್ಥಳದ ‘ಉತ್ಖನನ’ ನಡೆಸಿದೆ. ಈವರೆಗೆ 15 ಸ್ಥಳದಲ್ಲಿ ಗುಂಡಿ ತೋಡಿದರೂ ಸಿಕ್ಕಿದ್ದು ಮಾತ್ರ ಬರೀ ‘ಮಣ್ಣು’. ಒಂದು ಕಡೆ ಮೂಳೆ ಸಿಕ್ಕರೂ ಪ್ರಾಥಮಿಕ ತನಿಖೆಯಲ್ಲಿಯೇ ಈ ಮೂಳೆಗೂ, ಅನಾಮ ಧೇಯ ಹೂತಿಟ್ಟಿರುವ ಹೆಣಗಳ ಪ್ರಕರ ಣಕ್ಕೂ ಸಂಬಂಧವಿಲ್ಲ ಎನ್ನುವುದು ಸ್ಪಷ್ಟವಾಯಿತು.
ಉತ್ಖನನ ಪ್ರಕ್ರಿಯೆ ಆರಂಭಗೊಂಡ ಮೂರೇ ದಿನಕ್ಕೆ ಅನಾಮಧೇಯ ವ್ಯಕ್ತಿಯ ಬುರುಡೆ ಆರೋಪ ದಲ್ಲಿ ಹುರುಳಿಲ್ಲ ಎನ್ನುವುದು ಖಚಿತವಾಗಿದೆ. ಆದರೂ ಎಸ್‌ಐಟಿ ಅಧಿಕಾರಿಗಳು ಆತ ತೋರಿದ ಎಲ್ಲ ಸ್ಥಳಗಳಲ್ಲೂ ಉತ್ಖನನ ಮಾಡುತ್ತಿರುವುದು ಏಕೆ? 15 ಸ್ಥಳಗಳಲ್ಲಿ ಏನೂ ಸಿಗಲಿಲ್ಲವೆಂದ ಮೇಲೆ, ಆತನ ಪೂರ್ವಾಪರದ ಬಗ್ಗೆ ಕನಿಷ್ಠ ವಿಚಾರಣೆ ಮಾಡಬೇಕೆಂದು ಎಸ್‌ಐಟಿ ಅಧಿಕಾರಿಗಳಿಗೆ ಅನಿಸಲೇ ಇಲ್ಲವೇ? ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.
ಅನಾಮಧೇಯ ವ್ಯಕ್ತಿ ತೋರಿಸಿರುವ ಜಾಗವೆಲ್ಲ ಖಾಲಿಯಾಗಿದ್ದರೂ, ಇದೀಗ ಅಲ್ಲೊಂದು ಇಲ್ಲೊಂದು ಎಂದು ಜಾಗ ಗುರುತಿಸುವ ಕಾರ್ಯ ಮುಂದುವರಿದೇ ಇದೆ. ಸೋಮವಾರ ಬಾಹುಬಲಿ ಬೆಟ್ಟದ ಸುತ್ತ ಮುತ್ತಲೂ ‘ಬುರುಡೆ’ ಹುಡುಕಾಟ ಮುಂದು ವರಿದಿರುವುದು ನಿಜಕ್ಕೂ ಹಾಸ್ಯಾಸ್ಪದ. ಎಸ್ ಐಟಿಯ ಈ ತನಿಖಾ ಪ್ರಕ್ರಿಯೆಯನ್ನು ಬದಲಾಯಿಸಿಕೊಳ್ಳದಿದ್ದರೆ, ಮುಂದಿನ ಆರು ತಿಂಗಳಲ್ಲಿ ಧರ್ಮಸ್ಥಳದ ಸುತ್ತಮುತ್ತ ಸೃಷ್ಟಿಯಾಗಿರುವ ಗುಂಡಿಗಳಲ್ಲಿ ‘ತೆಂಗಿನ ತೋಪು’ ಮಾಡಬೇಕಾಗುತ್ತದೆ.
ಆದ್ದರಿಂದ ದಿಕ್ಕುದೆಸೆಯಿಲ್ಲದಂತೆ ನಡೆಯುತ್ತಿರುವ ಈ ತನಿಖೆಯ ವಿಷಯದಲ್ಲಿ ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಸ್ಥಗಿತಗೊಳಿಸಬೇಕು ಎನ್ನುವುದು ಹಲವರ ಆಗ್ರಹವಾಗಿದೆ.
ಕೇವಲ ಬಾಯಿ ಮಾತಿನ ಆರೋಪಕ್ಕೆ ತಿಂಗಳುಗಟ್ಟಲೇ ಇಡೀ ವ್ಯವಸ್ಥೆಯೇ ಗುಂಡಿ ತೋಡುವ ಕಾರ್ಯದಲ್ಲಿ ಮುಳುಗಿದೆ. ಈಗಾಗಲೇ ಇನ್ನೊಬ್ಬ ವ್ಯಕ್ತಿ ಇದೇ ರೀತಿಯ ಆರೋಪವನ್ನು ಮಾಡಿ ನಾನೂ ಮೂರು ಗುಂಡಿ ತೋಡಿಸುವುದಾಗಿ ಹೇಳಿದ್ದಾನೆ.
ಹೀಗಿರುವಾಗ ‘ಆರೋಪ’ಕ್ಕೆ ಸರಿಯಾದ ಮಾಹಿತಿ ಕೇಳದೇ, ಈ ರೀತಿ ಎಸ್‌ಐಟಿ ರಚಿಸುತ್ತಾ ಹೋದರೆ, ಮುಂದೊಂದು ದಿನ ವಿಧಾನ ಸೌಧದ ಬಳಿಕ ಶವ ಹೂತಿದ್ದೆ ಎಂದರೆ ಅಥವಾ ಸಚಿವರೊಬ್ಬರು ೧೦ ಹೆಣಗಳನ್ನು ಹೂತ್ತಿಟ್ಟಿದ್ದಾರೆಂದು ಬಂದು ಹೇಳಿಕೆ ನೀಡಿದ ಮಾತ್ರಕ್ಕೆ ವಿಶೇಷ ತನಿಖಾ ತಂಡ ರಚಿಸಿ ಗುದ್ದಲಿ, ಹಾರೆ ಹಿಡಿದು ಗುಂಡಿ ಅಗೆಯಲು ಸಾಧ್ಯವೇ?
ಗೌಪ್ಯತೆ ಕಾಪಾಡಿದ್ದು ತಪ್ಪು
ನೂರಾರು ಶವಗಳನ್ನು ಹೂತಿದ್ದೇನೆ ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ವ್ಯಕ್ತಿಯ ಗೌಪ್ಯತೆಯನ್ನು ಆರಂಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಕಾಪಾಡಲಾಗಿತ್ತು. ಆದರೆ ನಿಜಕ್ಕೂ ಆ ವ್ಯಕ್ತಿಯ ವಿಶ್ವಾಸಾರ್ಹತೆ ಏನು? ಆತನ ಪೂರ್ವಾಪರವೇನು? ನಿಜಕ್ಕೂ ಮಾನಸಿಕವಾಗಿ ಸ್ಥಿಮಿತ ವಾಗಿದ್ದಾನೆಯೇ? ಎನ್ನುವ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸಬೇಕು. ಇನ್ನೊಂದು ಆರು ತಿಂಗಳು ತನಿಖೆ ನಡೆಸಿದ ಬಳಿಕ ಆತನ ಮಾನಸಿಕ ಸ್ಥಿತಿ ಸರಿಯಿಲ್ಲವೆಂದರೆ ಇಷ್ಟು ದಿನಗಳ ಕಾಲ ಆತನ ಮಾತು ನಂಬಿ ತೋಡಿದ ಗುಂಡಿಗಳು, ಇದಕ್ಕಾಗಿ ಸರಕಾರ ವ್ಯಯಿಸಿದ ಲಕ್ಷಾಂತರ ರುಪಾಯಿ ತೆರಿಗೆ ಹಣ ಈ ಗುಂಡಿಗೆ ಹಾಕಿದಂತಾಗುವುದಿಲ್ಲವೇ? ಹೇಳಿಕೆ ನೀಡಿ ಇಷ್ಟು ದಿನವಾದರೂ ಆತನ ಮಾಹಿತಿಯನ್ನು ಬಹಿರಂಗಪಡಿಸದಿರುವುದೇ ಮೊದಲ ತಪ್ಪು ಎನ್ನುವುದು ಸ್ಪಷ್ಟ.
*
ಜನರ ಪ್ರಶ್ನೆಗಳೇನು?
ಆತನ ಬಗ್ಗೆ ಈ ಪ್ರಮಾಣದಲ್ಲಿ ರಹಸ್ಯ ಕಾಪಾಡಿಕೊಳ್ಳುವ ಅಗತ್ಯವೇನಿದೆ?
ಅನಾಮಿಕ ವ್ಯಕ್ತಿಯು ತೋರಿಸಿದ ಜಾಗಗಳಲ್ಲೆಲ್ಲಾ ಅಗೆಯುತ್ತಿರುವುದೇಕೆ?
ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಬಂದು ದೂರು ನೀಡಿದರೆ ಆಗಲೂ ಅಗೆಯುವರೇ?
ಯಾರೇ ಆರೋಪ ಮಾಡಿದರೂ ಈ ರೀತಿ ಎಸ್‌ಐಟಿ ರಚಿಸಿ, ಗುಂಡಿ ತೋಡಲು ಸಾಧ್ಯವೇ?
ಅನಾಮಿಕ ತೋರಿದ ಕಡೆಯೆಲ್ಲಾ ಅಗೆಯಲು ಬಳಕೆಯಾದ ತೆರಿಗೆ ಹಣದ ನಷ್ಟಕ್ಕೆ ಹೊಣೆ ಯಾರು?