ರಷ್ಯಾ, ಉಕ್ರೇನ್, ಟ್ರಂಪ್ ಸುಂಕ ಸಮರದ ಎಫೆಕ್ಟ್: ವಜ್ರ ಈಗ ಮೃದು, ಚಿನ್ನದ ಬೆಲೆ ಕಠಿಣ
ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ನೀವು ಅಂದುಕೊಂಡಂತೆ ವಜ್ರ ಈಗ ಅಷ್ಟೇನೂ ಕಠಿಣವಲ್ಲ. ಬದಲಾಗಿ ತುಂಬಾ ಮೃದುವಾಗಿದೆ. ಆದರೆ ಭಾರತೀಯ ಮಹಿಳೆಯರ ಇಷ್ಟದ ಹಳದಿ ಲೋಹವು ಗಗನಕುಸುಮ ವಾಗುತ್ತಿದೆ. ಈ ಎರಡೂ ಅಮೂಲ್ಯ ಆಭರಣಗಳ ದರದಲ್ಲಿ ಈಗ ಗಣನೀಯ ಪ್ರಮಾಣದ ಏರಿಳಿತಗಳು ಕಂಡುಬಂದಿದ್ದು, ಇದರಿಂದ ವಜ್ರ ಮತ್ತು ಚಿನ್ನದ ಮಾರುಕಟ್ಟೆಯಲ್ಲಿ ಕಳೆದ ಎರಡು ತಿಂಗಳಿಂದ ಭಾರೀ ಏರುಪೇರು ಕಂಡು ಬಂದಿದೆ.
ಕೆಲವು ತಿಂಗಳ ಹಿಂದೆ 0-3 ಸೆನ್ಸ್ ವಜ್ರದ ಬೆಲೆ 80 ಸಾವಿರ ರೂ.ವರೆಗೂ ಇತ್ತು. ಈಗ ಅದರ ಬೆಲೆ ಕೇವಲ 40 ಸಾವಿರ ರೂ.ಗೆ ಇಳಿದಿದೆ. ಅದರಲ್ಲೂ 50 ಸೆನ್ಸ್ ಅಳತೆಯ ವಜ್ರದ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ವಜ್ರಕ್ಕೆ ಸವಾಲು ಎಸೆಯುವಂತೆ ಚಿನ್ನದ ಧಾರಣೆ ಏರುತ್ತಲೇ ಇದೆ. ಕೆಲವೇ ತಿಂಗಳ ಹಿಂದೆ 10 ಗ್ರಾಮಿಗೆ 70 ಸಾವಿರ ರೂ.ಗೆ ಸಿಗುತ್ತಿದ್ದ ಚಿನ್ನ ಈಗ 1.25 ಲಕ್ಷ ರು. ದಾಟಿದೆ.
ವಿಶ್ವ ಸಮುದಾಯದಲ್ಲಿ ನಡೆಯುತ್ತಿರುವ ನಿರಂತರ ಯುದ್ಧಗಳು ಹಾಗೂ ಜಾಗತಿಕ ಆರ್ಥಿಕ ಕುಸಿತ ಮತ್ತು ಅಮೆರಿಕದ ವಿದೇಶಿ ಆರ್ಥಿಕ ನೀತಿಗಳು ಇದಕ್ಕೆ ಕಾರಣ ಎನ್ನುತ್ತಾರೆ ಆಭರಣಗಳ ಮಾರುಕಟ್ಟೆ ವಿಶ್ಲೇಷಕರು. ರಷ್ಯಾ ಮತ್ತು ಉಕ್ರೇನ್ ಯುದ್ಧ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಶಾಂತಿ ಒಪ್ಪಂದದ ಮಾತು ಕೇಳಿ ಬರುತ್ತಿದ್ದರೂ ಇಸ್ರೇಲ್-ಹಮಾಸ್ ಸಮರ ಈಗಲೂ ಮುಂದುವರಿದಿದೆ.
ಇದನ್ನೂ ಓದಿ: Diamonds Found In Field: ಪರಿಶ್ರಮಕ್ಕೆ ಸಿಕ್ಕ ಫಲ; 5 ವರ್ಷ ಭೂಮಿ ಅಗೆದ ದಂಪತಿಗೆ ಸಿಕ್ತು 8 ವಜ್ರ
ಈ ಎರಡೂ ಯುದ್ಧಗಳು ಭಾರತದ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮಗಳನ್ನು ಉಂಟು ಮಾಡಿದೆ. ವಿಶೇಷವಾಗಿ ವಜ್ರದ ಮಾರುಕಟ್ಟೆ ಹಾಗೂ ಚಿನ್ನದ ವ್ಯಾಪಾರದ ಮೇಲೆ ವಿಭಿನ್ನ ರೀತಿಯ ಪರಿಣಾಮಗಳನ್ನು ಉಂಟು ಮಾಡಿವೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್, ಭಾರತದ ಮೇಲೆ ಹೇರಿರುವ ಶೇ.100ರ ಸುಂಕದ ಪರಿಣಾಮ ಭಾರತದಲ್ಲಿ ಸಿದ್ಧವಾಗುವ ವಜ್ರ ಉತ್ಪನ್ನಗಳ ಅಮೆರಿಕ ರಫ್ತು ಸ್ಥಗಿತಗೊಂಡಿದೆ. ಹೀಗಾಗಿ ದೇಶೀಯ ಮಾರುಕಟ್ಟೆಯಲ್ಲಿ ವಜ್ರದ ಬೆಲೆ ಕುಸಿತ ಕಂಡಿದೆ ಎನ್ನುತ್ತಾರೆ ವರ್ತಕರು.
ಯುದ್ದಕ್ಕೂ ವಜ್ರಕ್ಕೂ ಏನು ಸಂಬಂಧ ?
ವಜ್ರದ ಮೂಲ ಕಚ್ಚಾ ಪದಾರ್ಥಗಳನ್ನು ಇಡೀ ವಿಶ್ವಕ್ಕೆ ಪೂರೈಸುವುದರಲ್ಲಿ ರಷ್ಯಾ, ದಕ್ಷಿಣ ಆಫ್ರಿಕಾ, ಇಸ್ರೇಲ್ ಹಾಗೂ ಇವುಗಳಿಗೆ ಹೊಂದಿಕೊಂಡ ಕೆಲವು ರಾಷ್ಟ್ರಗಳು ಮುಂಚೂಣಿಯಲ್ಲಿವೆ. ಈ ಪೈಕಿ ದಕ್ಷಿಣ ಆಫ್ರಿಕಾದಿಂದ ಪೂರೈಕೆ ಆಗುವ ಕಚ್ಚಾ ಪದಾರ್ಥ ಗುಣಮಟ್ಟದಲ್ಲಿ ಸ್ವಲ್ಪ ಕಡಿಮೆ ಇರುತ್ತದೆ. ಆದರೆ ಫ್ರಾನ್ಸ್‌ನಿಂದ ಬರುವ ಪದಾರ್ಥಗಳು ಉತ್ತಮ ಗುಣಮಟ್ಟದಾಗಿವೆ. ಇದನ್ನು ಹೆಚ್ಚು ಆಮದು ಮಾಡಿಕೊಂಡು ಅಂತಿಮ ಉತ್ಪನ್ನವಾಗಿ ಸಿದ್ಧಪಡಿಸುವಲ್ಲಿ ಭಾರತ ಅಗ್ರಗಣ್ಯ. ಕಚ್ಚಾ ವಜ್ರವನ್ನು ಆಭರಣ ರೂಪಕ್ಕೆ ತರುವ ಕೆಲಸ ಮುಂಬೈ, ಅಹಮದಾಬಾದ್ ಮತ್ತು ಸೂರತ್ ಮಹಾನಗರಗಳಲ್ಲಿ ಹೆಚ್ಚಾಗಿ ನಡೆಯುತ್ತದೆ. ಹೀಗೆ ಸಿದ್ದವಾಗುವ ಹೆಚ್ಚಿನ ವಜ್ರದ ಉತ್ಪನ್ನಗಳು ಅಮೆರಿಕದಲ್ಲಿ ಮಾರಾಟವಾಗುತ್ತವೆ. ಅಮೆರಿಕದ ಮಾರುಕಟ್ಟೆಗೆ ಶೇ. 30ರಷ್ಟು ವಜ್ರದ ಉತ್ಪನ್ನ ಗಳನ್ನು ಭಾರತವೇ ಪೂರೈಸುತ್ತದೆ. ಆದರೆ ಟ್ರಂಪ್ ಸುಂಕದ ಕಾರಣ ಅಮೆರಿಕನ್ನರಿಗೆ ಭಾರತದ ವಜ್ರ ದುಬಾರಿಯಾಗಿದೆ.
ವಜ್ರದ ಉತ್ಪನ್ನಗಳ ಮರುಮಾರಾಟ ಮೌಲ್ಯ ಕುಸಿದ ಹಿನ್ನೆಲೆಯಲ್ಲಿ ಜನರು ಈಗ ವಜ್ರದ ಬದಲು ಚಿನ್ನ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಚಿನ್ನದ ಬೆಲೆ ಈಗ 10 ಗ್ರಾಮಿಗೆ 1.30 ಲಕ್ಷ ರೂ. ವರೆಗೂ ಇದೆ. ಮುಂದಿನ ದಿನಗಳಲ್ಲಿ 2 ಲಕ್ಷ ಮುಟ್ಟಿದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಆಭರಣ ವ್ಯಾಪಾರಿಗಳ ಸಂಘದ ರಾಷ್ಟ್ರೀಯ ಮುಖಂಡರಾದ ಚೇತನ್ ಕುಮಾರ್ ಮೆಹ್ತಾ.
ನಕಲಿ ವಜ್ರಗಳ ಹಾವಳಿ
ಇತ್ತೀಚೆಗೆ ಲ್ಯಾಬ್ ಗ್ರೋನ್ ಡೈಮಂಡ್, ಅಂದರೆ ವಜ್ರ ಸಂಬಂಧಿ ಉತ್ಪನ್ನಗಳಿಂದ ಕೃತಕ ವಜ್ರದ ಆಭರಣಗಳನ್ನು ತಯಾರಿಸುವ ಪರಿಪಾಠ ಹೆಚ್ಚಾಗಿದೆ. ಇವು ಉತ್ತಮ ಗುಣಮಟ್ಟದ ವಜ್ರದ ಬೆಲೆಯ ಕೇವಲ ಶೇ.10ರಷ್ಟು ಕಡಿಮೆ ಬೆಲೆಗೆ ಸಿಗುತ್ತದೆ. ಇದನ್ನು ನಕಲಿ ವಜ್ರ ಎಂದೂ ಕರೆಯುವುದುಂಟು. ಇದಕ್ಕೆ ಲ್ಯಾಬ್ ಗಳೂ ನಕಲಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವುದರಿಂದ ಈ ವಜ್ರದ ಉತ್ಪನ್ನ ಗಳು ಹೆಚ್ಚಾಗುತ್ತಿವೆ. ಅನೇಕ ಗ್ರಾಹಕರು ಇದನ್ನೇ ಅಸಲಿ ವಜ್ರ ಎಂದು ಮೋಸ ಹೋಗುತ್ತಿದ್ದಾರೆ. ಹೀಗಾಗಿ ಚಿನ್ನ ದುಬಾರಿ ಅಥವಾ ವಜ್ರದ ಬೆಲೆ ಕಡಿಮೆ ಎಂದು ವಜ್ರದ ಉತ್ಪನ್ನ ಗಳನ್ನು ಕೊಳ್ಳಲು ಹೋಗಿ ವಂಚನೆಗೆ ಒಳಗಾಗುತ್ತಿರುವ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ವಜ್ರದ ವ್ಯಾಪಾರಿಗಳು ಹೇಳುತ್ತಿದ್ದಾರೆ.