ಬೆಂಗಳೂರು: ಟಾಲಿವುಡ್ ನಟ ಪವನ್ ಕಲ್ಯಾಣ್ (Pawan Kalyan) ಅವರ ಬಹುನಿರೀಕ್ಷಿತ ಚಿತ್ರ 'ದಿ ಕಾಲ್ ಹಿಮ್ ಒಜಿ' (They Call Him OG) ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತಮ್ಮ ನೆಚ್ಚಿನ ನಟನ ಚಿತ್ರ ವೀಕ್ಷಣೆಗೆ ಬಂದ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಅದರಲ್ಲೂ ಕೆಲ ಅಭಿಮಾನಿಗಳಂತೂ ಥಿಯೇಟರ್ ಬಳಿ ಲಾಂಗ್ ಹಿಡಿದು ಓಡಾಡಿ ಉದ್ಧಟತನ ಮೆರೆದಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಸಂಧ್ಯಾ ಥಿಯೇಟರ್ ಬಳಿ ಅಭಿಮಾನಿಗಳು ಲಾಂಗ್ ಹಾಗೂ ಚಾಕು ಹಿಡಿದು ಕಿರುಚಾಡುತ್ತಾ ಹುಚ್ಚಾಟ ಮೆರೆದಿದ್ದಾರೆ. ಇದರಿಂದ ಸಿನಿಮಾ ನೋಡಲೆಂದು ಬಂದ ಇತರೆ ಅಭಿಮಾನಿಗಳು ಭೀತಿಗೊಂಡ ಘಟನೆ ನಡೆದಿದೆ. ಇದರಿಂದ ಕೆಲಕಾಲ ಚಿತ್ರಮಂದಿರದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಯಿತು.
ಇನ್ನು ಯುವಕರು ಹುಚ್ಚಾಟ ಮೆರೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಪೊಲೀಸರು ಕಿಡಿಗೇಡಿಗಳ ಬಂಧನಕ್ಕೆ ಮುಂದಾಗಿದ್ದಾರೆ. ಇಂತಹ ಕಿಡಿಗೇಡಿ ಕೃತ್ಯದಿಂದಾಗಿ ಸಿನಿಮಾ ನೋಡಲು ಭಯವಾಗಿತ್ತು ಎಂದು ಹಲವಾರು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಇನ್ನೊಂದೆಡೆ ಕೆ.ಆರ್.ಪುರಂನ ಚಿತ್ರಮಂದಿರವು ಸಿನಿಮಾ ಪ್ರದರ್ಶನದ ಸಮಯದಲ್ಲಿ ಅಸಾಮಾನ್ಯ ಮತ್ತು ಅಸ್ತವ್ಯಸ್ತವಾಗಿರುವ ದೃಶ್ಯಕ್ಕೆ ಸಾಕ್ಷಿಯಾಯಿತು. ಬೆಳಗಿನ ಜಾವದ ಚಿತ್ರ ಪ್ರದರ್ಶನದ ಸಮಯದಲ್ಲಿ ಅಭಿಮಾನಿಗಳು ಕತ್ತಿಯಿಂದ ಸಿನಿಮಾ ಪರದೆಯನ್ನು ಹಾನಿಗೊಳಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ದೃಶ್ಯಗಳ ಪ್ರಕಾರ, ಚಿತ್ರವನ್ನು ವೀಕ್ಷಿಸಲು ದೊಡ್ಡ ಜನಸಮೂಹ ಸೇರಿತ್ತು. ಅತಿಯಾದ ಉತ್ಸಾಹ ತೋರುತ್ತಾ ಕಿಡಿಗೇಡಿತನ ಪ್ರದರ್ಶಿಸಿದ್ದಾರೆ. ಕೆಲವು ಅಭಿಮಾನಿಗಳು ಪರದೆಯ ಹತ್ತಿರಕ್ಕೆ ಬಂದು ಉದ್ದೇಶಪೂರ್ವಕವಾಗಿ ಕತ್ತಿಯಿಂದ ಅದನ್ನು ಹರಿದು ಹಾಕಿದರು. ಇದರಿಂದ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ರದ್ದಾಯಿತು. ಘಟನೆಯಲ್ಲಿ ಯಾರಿಗಾದರೂ ಯಾವುದೇ ಗಾಯಗಳು ಸಂಭವಿಸಿವೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ ಪರದೆಗೆ ತೀವ್ರ ಹಾನಿಯಾಗಿದ್ದು, ಉಳಿದ ಪ್ರೇಕ್ಷಕರಿಗೆ ಪ್ರದರ್ಶನವನ್ನು ಸ್ಥಗಿತಗೊಳಿಸಲಾಯಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ಕೃತ್ಯವನ್ನು ಅಜಾಗರೂಕ ಮತ್ತು ಅಪಾಯಕಾರಿ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಅಂದಹಾಗೆ, 'ದಿ ಕಾಲ್ ಹಿಮ್ ಒಜಿ' ಚಿತ್ರದ ಪ್ರಥಮ ಪ್ರದರ್ಶನವು ಈಗಾಗಲೇ ವಿವಿಧ ನಗರಗಳಲ್ಲಿ ಅಭಿಮಾನಿಗಳ ಬೃಹತ್ ಸಂಭ್ರಮಾಚರಣೆಯನ್ನು ಕಂಡಿದೆ. ಸುಜೀತ್ ನಿರ್ದೇಶನದ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆಗೆ ಇಮ್ರಾನ್ ಹಶ್ಮಿ, ಪ್ರಕಾಶ್ ರಾಜ್, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್ ಮತ್ತು ಶ್ರೀಯಾ ರೆಡ್ಡಿ ನಟಿಸಿದ್ದಾರೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳ ಹೊರತಾಗಿಯೂ, ಚಿತ್ರವು ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: Viral Video: ಇದು ಅಜ್ಜಿಯರಿಗಾಗಿಯೇ ಇರೋ ಶಾಲೆ! 60-90 ವರ್ಷದ ಮಹಿಳೆಯರಿಗೆ ಕಲಿಯಲು ಎರಡನೇ ಅವಕಾಶ