ಶಿವಮೊಗ್ಗ: ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಚಿತ್ರದ ಶೂಟಿಂಗ್ ವೇಳೆ ಜಲಾಶಯದಲ್ಲಿ ಶಿಪ್ ಮಗುಚಿ, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿತ್ತು ಎಂದು ಹೇಳಲಾಗಿತ್ತು. ಘಟನೆ ಬಗ್ಗೆ ಇದೀಗ ಹೊಂಬಾಳೆ ಫಿಲ್ಮ್ಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್ ಸ್ಪಷ್ಟನೆ ನೀಡಿದ್ದಾರೆ. ಮಾಣಿ ಹಿನ್ನೀರಿನಲ್ಲಿʼಕಾಂತಾರ ಚಾಪ್ಟರ್ 1ʼ ಚಿತ್ರೀಕರಣ ನಡೆಯುತ್ತಿದೆ. ಬ್ಯಾಕ್ ಡ್ರಾಪ್ಗೋಸ್ಕರ ಶಿಪ್ ಸೆಟ್ ಅನ್ನು ಹಾಕಲಾಗಿತ್ತು. ಜೋರಾದ ಗಾಳಿ – ಮಳೆಯಿಂದ ಶಿಪ್ ಪಲ್ಟಿಯಾಗಿದೆ. ನಮ್ಮ ತಂಡದವರು ಯಾರೂ ಕೂಡ ಅದರ ಸುತ್ತಮುತ್ತ ಇರಲಿಲ್ಲ. ನಮ್ಮ ಶೂಟಿಂಗ್ ದೂರದಲ್ಲಿ ನಡೆಯುತ್ತಿತ್ತು. ಚಿತ್ರೀಕರಣ ಸಂದರ್ಭದಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಈಗ ಶೂಟಿಂಗ್ ಮುಂದುವರಿಸಿದ್ದೇವೆ ಎಂದಿದ್ದಾರೆ.
ಚಿತ್ರೀಕರಣಕ್ಕೆ ಬೇಕಾದ ಅನುಮತಿಯನ್ನು ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕೆಪಿಸಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯಿಂದಲೂ ಪಡೆಯಲಾಗಿದೆ. ನಾವು ನೀರಿನ ಭಾಗದಲ್ಲಿ ಯಾವುದೇ ರೀತಿಯ ಚಿತ್ರೀಕರಣವನ್ನು ಮಾಡುತ್ತಿಲ್ಲ. ಆದರೂ ಸುರಕ್ಷತೆ ದೃಷ್ಟಿಯಿಂದ ಸ್ಪೀಡ್ ಬೋಟ್ ಇಟ್ಟುಕೊಂಡು ಶೂಟಿಂಗ್ ಮಾಡುತ್ತಿದ್ದೇವೆ. ಕ್ಯಾಮೆರಾ ನೀರಿಗೆ ಬಿದ್ದಿದ್ದರೆ ಇಂದು ನಾವು ಚಿತ್ರೀಕರಣ ಮಾಡಲು ಆಗುತ್ತಿರಲಿಲ್ಲ. ಇಂದು ಬೆಳಗ್ಗೆ ರಿಷಬ್ ಶೆಟ್ಟಿ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿ ಹೋಗಿದ್ದಾರೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Kantara: Chapter 1: ಅನುಮತಿ ಇಲ್ಲದೇ ಶೂಟಿಂಗ್; ಕಾಂತಾರ ಚಿತ್ರತಂಡಕ್ಕೆ ಶಿವಮೊಗ್ಗ ಜಿಲ್ಲಾಡಳಿತದಿಂದ ನೋಟಿಸ್
ಸಿದ್ಧಗಂಗಾ ಮಠದ ಬಳಿ ಮಹಿಳೆಗೆ ʼಎಕ್ಕʼ ಚಿತ್ರತಂಡದ ಕಾರು ಡಿಕ್ಕಿ
ತುಮಕೂರು: ನಗರದ ಸಿದ್ಧಗಂಗಾ ಮಠಕ್ಕೆ ಯುವ ರಾಜ್‌ಕುಮಾರ್ (Yuva Rajkumar) ನಟನೆಯ ಎಕ್ಕ ಚಿತ್ರತಂಡ (Ekka Movie) ಭೇಟಿ ನೀಡಿದ್ದ ವೇಳೆ ಎಡವಟ್ಟು ನಡೆದಿದ್ದು, ನಟನ ಬೌನ್ಸರ್‌ಗಳು ಇದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿಯಾದ ಪರಿಣಾಮ ಆಕೆಯ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಹೀಗಿದ್ದರೂ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸದೇ ಅಮಾನವೀಯ ವರ್ತನೆ ತೋರಿರುವ ಆರೋಪ ಕೇಳಿ ಬಂದಿದೆ.
ಎಕ್ಕ ಚಿತ್ರತಂಡವು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಅಪಘಾತ ನಡೆದಿದೆ. ಬೌನ್ಸರ್ ಕಾರು ರಸ್ತೆ ಬದಿಯಿದ್ದ ಮಹಿಳೆಯೊಬ್ಬರಿಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಮಹಿಳೆಯ ಕಾಲಿಗೆ ಗಂಭೀರ ಪೆಟ್ಟಾಗಿದೆ. ಇದರಿಂದ ಮಹಿಳೆ ನರಳಾಡುತ್ತ ಆಸ್ಪತ್ರೆಗೆ ಸೇರಿಸುವಂತೆ ಕೋರಿದರೂ ಗಮನಸದೇ ಎಕ್ಕ ಚಿತ್ರತಂಡ ಸ್ಥಳದಿಂದ ತೆರಳಿದೆ. ಚಿತ್ರತಂಡದ ಜತೆ ನಟ ಯುವರಾಜ್ ಕುಮಾರ್ ಸಹ ಇದ್ದರು ಎಂದು ತಿಳಿದುಬಂದಿದೆ.
ಸಿದ್ಧಗಂಗಾ ಮಠದ ಶಾಲೆಗೆ ಮಗುವನ್ನು ಬಿಟ್ಟು ಹೋಗಲು ಮಹಿಳೆ ಬಂದಿದ್ದರು. ವಾಪಸ್ ತೆರಳುತ್ತಿದ್ದ ವೇಳೆ ಎಕ್ಕ ಚಿತ್ರತಂಡ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲೇ ಬೌನ್ಸರ್ ಕಾರು ಮಹಿಳೆಗೆ ಡಿಕ್ಕಿಯಾಗಿದೆ. ಈ ವೇಳೆ ಬಳ್ಳಾರಿ ಮೂಲದ ಲಿಂಗಮ್ಮ ಎಂಬುವರ ಕಾಲಿಗೆ ಪೆಟ್ಟು ಬಿದ್ದಿದ್ದು, ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Drown In River: ಗೋದಾವರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಬಾಲಕರು ಸಾವು