ಬೆಂಗಳೂರು: ಕನ್ನಡದ ನಟ- ನಿರ್ದೇಶಕ ರಿಷಬ್ ಶೆಟ್ಟಿಯವರ ಬಹು ನಿರೀಕ್ಷಿತ ಚಿತ್ರವಾದ ‘ಕಾಂತಾರ: ಚಾಪ್ಟರ್ 1 (Kantara: Chapter 1) ಚಿತ್ರ ರಿಲೀಸ್ ಆಗಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಧನಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದು ಸಿನಿಮಾವು ಅತ್ಯದ್ಭುತ ಅನುಭವ ಕೊಟ್ಟಿದೆ ಎನ್ನುವ ರೆಸ್ಪಾನ್ಸ್ ನೀಡುತ್ತಿದ್ದಾರೆ. ಇನ್ನು ಚಿತ್ರದ ನಾಯಕರಾಗಿರುವ ರಿಷಬ್ ಶೆಟ್ಟಿ ಹಾಗೂ ನಾಯಕಿ ರುಕ್ಮಿಣಿಯವರ ಅಭಿನಯ ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ. ಅದರಲ್ಲೂ ನಟಿ ರುಕ್ಮಿಣಿ ವಸಂತ್ ಗೆ ಕಾಂತಾರಾ: ಚಾಪ್ಟರ್ 1 ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಚಾರವಾಗಿದ್ದು ರುಕ್ಮಿಣಿ ವಸಂತ್ ಅವರೇ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಮನದ ಮಾತುಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಕನ್ನಡದ ಹೆಮ್ಮೆ ಅನಿಸಿರುವ ಕಾಂತಾರ: ಚಾಪ್ಟರ್ 1 ತಂಡ ಸೇರೋ ಅವಕಾಶ ನಂಗೆ ಸಿಕ್ಕಿತು. ಈ ಚಿತ್ರದಲ್ಲಿ ಕೆಲಸ ಮಾಡುವ ಒಂದು ದೊಡ್ಡ ಜವಾಬ್ದಾರಿಯೂ ಹೌದು, ಸಾಹಸವೂ ಹೌದು. ಈ ಚಿತ್ರ ನನ್ನ ಜೀವನವನ್ನೇ ಬದಲಾಯಿಸಿದೆ! ಇದಕ್ಕಾಗಿ ತಾನು ಬಹಳಷ್ಟು ಕೃತಜ್ಞಳಾಗಿದ್ದೇನೆ. ನಮ್ಮ ತಂಡದ ನಾಯಕರೂ, ನಿರ್ದೇಶಕರೂ ಆದ ರಿಷಬ್ ಸರ್ ಅವರಿಗೆ ತುಂಬಾ ತುಂಬಾ ತುಂಬಾ ಧನ್ಯವಾದಗಳು ಎಂದು ಬರೆದು ಕೊಂಡಿದ್ದಾರೆ. ನಿಮ್ಮ ಕಠಿಣ ಪರಿಶ್ರಮ ಈ ಚಿತ್ರವನ್ನು ತುಂಬಾ ವಿಶೇಷವಾಗಿಸಿದೆ. ನನ್ನನ್ನು ಈ ಸಿನಿಮಾ ಮಾಡಲು ನಂಬಿದ್ದಕ್ಕೆ ಮತ್ತು ಅವಕಾಶಕ್ಕೆ ಧನ್ಯ ವಾದಗಳು!.. ಹೊಂಬಾಳೆ ತಂಡ, ನನ್ನನ್ನು ನಿಮ್ಮ ಕುಟುಂಬದಲ್ಲಿ ಒಬ್ಬಳನ್ನಾಗಿಸಿಕೊಂಡಿದ್ದೀರಿ. ನಿಮಗೆ ನಾನು ಸದಾ ಚಿರಋಣಿ. ವಿಜಯ್ ಸರ್, ಚಲುವೆ ಗೌಡ ಸರ್, ಆದರ್ಶ್ ಮತ್ತು ತೆರೆಮರೆ ಯಲ್ಲಿರುವ ಎಲ್ಲರಿಗೂ - ಹಾಗೂ ನಾನು ಭೇಟಿಯಾಗಲು ಸಾಧ್ಯವಾಗದ ತಂಡದ ಎಲ್ಲರಿಗೂ ಧನ್ಯವಾದಗಳು ಎಂದು ಪೋಸ್ಟ್ ನಲ್ಲಿ ಬರೆದು ಕೊಂಡಿದ್ದಾರೆ.
ಪ್ರಗತಿ ಶೆಟ್ಟಿ ಹಾಗೂ ಅರವಿಂದ್’ಗೆ ಧನ್ಯವಾದಗಳು!
ನಮ್ಮ ಸೂಪರ್ ಕೂಲ್ ಕ್ಯಾಮೆರಾ ಮ್ಯಾನ್ ಅರವಿಂದ್ ಮತ್ತು ಬೆಸ್ಟ್ ಆಫ್ ದಿ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪ್ರಗತಿ, ನೀವು ತನ್ನ ಲುಕ್ ಅನ್ನು ಪೂರ್ಣ ಮಾಡಿದ್ದೀರಿ. ಮತ್ತು ನಾನು ಸುಂದರವಾಗಿ ಅದಕ್ಕೆ ಪ್ರಮುಖ ಕಾರಣ ನೀವೇ. ನಿಮಗೆ ವಿಶೇಷವಾದ ಧನ್ಯವಾದಗಳು. ಕಾಂತಾರದ ಅತ್ಯದ್ಭುತ ಲೋಕವನ್ನು ಸೃಷ್ಟಿ ಮಾಡಿ, ನನ್ನನ್ನು ಅದರ ಒಂದು ನೈಜ್ಯ ಭಾಗವಾಗಿರುವಂತೆ ನೋಡಿಕೊಂಡ ಕಲಾ ನಿರ್ದೇಶಕರಾದ ಬಾಂಗ್ಲಾನ್ ಅವರಿಗೆ ವಿಶೇಷ ಧನ್ಯವಾದಗಳು ಎಂದಿದ್ದಾರೆ.
ಇದನ್ನೂ ಓದಿ:Devara 2 Movie: ಜೂ. ಎನ್‌ಟಿಆರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್: 'ದೇವರʼ ಸೀಕ್ವೆಲ್ ಘೋಷಣೆ
ಅದ್ಭುತ ಸಂಗೀತ ನೀಡಿದ ಅಜನೀಶ್ ಅವರಿಗೆ, ನಿರ್ದೇಶನ ತಂಡದವರಿಗೆ, ನೃತ್ಯ ಸಂಯೋಜಕರು ಭೂಷಣ್ ಮಾಸ್ಟರ್, ಫೈಟ್ ಮಾಸ್ಟರ್ಸ್ ಆದ ಜೂಜಿ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸೇರಿದಂತೆ ಎಲ್ಲರಿಗೂ ಚಿರ ಋಣಿ ಎಂದು ನಟಿ ಬರೆದುಕೊಂಡಿದ್ದಾರೆ.ಶೂಟಿಂಗ್ ಸಂದರ್ಭದಲ್ಲಿ ರುಚಿ ಹಾಗೂ ಶುಚಿಕರವಾದ ಆಹಾರ ನೀಡಿದ ಕೇಟರಿಂಗ್ ತಂಡಕ್ಕೆ, ಹೇರ್ ಅಂಡ್ ಮೇಕಪ್ ತಂಡಕ್ಕೆ ಹಾಗೂ ವಿಶೇಷವಾಗಿ ನನ್ನನ್ನು ಬೆಂಬಲಿಸುವ ಎಲ್ಲಾ ಕನ್ನಡ ಚಲನಚಿತ್ರ ಅಭಿಮಾನಿ ಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ರುಕ್ಮಿಣಿ ವಸಂತ್ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಬರೆದುಕೊಂಡಿದ್ದಾರೆ.
ಸದ್ಯ ಕಾಂತಾರ ಸಿನಿಮಾದ ಮೊದಲ ಭಾಗಕ್ಕೆ ಸಿಕ್ಕ, ಅಭೂತಪೂರ್ವ ಬೆಂಬಲ ಇದೀಗ ಕಾಂತಾರಾ: ಚಾಪ್ಟರ್ 1 ಗೂ ಸಿಗುತ್ತಿದೆ. ಕನಕವತಿಯಾಗಿ ರುಕ್ಮಿಣಿ ವಸಂತ್ ಮಿಂಚಿದ್ದು ಬಹಳಷ್ಟು ಇಷ್ಟ ವಾಗುತ್ತಾರೆ. ಬೀರ್‌ಬಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರುಕ್ಮಿಣಿ ''ಸಪ್ತ ಸಾಗರದಾಚೆ ಎಲ್ಲೋ" ಸಿನಿಮಾ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದರು. ಸದ್ಯ ಕಾಂತಾರ ಚಾಪ್ಟರ್ 1 ಮೂಲಕ ಮತ್ತಷ್ಟು ಹೆಸರು ಗಳಿಕೆಯ ನಿರೀಕ್ಷೆಯಲ್ಲಿ ಇದ್ದಾರೆ.