ನವದೆಹಲಿ: ಬಾಲಿವುಡ್ ನ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದ ತನುಶ್ರೀ ದತ್ತಾ (Tanushree Dutta) ಅವರು ತಮ್ಮ ವಿಶೇಷ ಅಭಿನಯದ ಮೂಲಕವೇ ಜನ ಮನಗೆದ್ದಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದ ಇವರು ಬಳಿಕ ಅಷ್ಟಾಗಿ ಆಫರ್ ಸಿಗದೇ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದರು. ಬಳಿಕ ಮೀಟೂ ಆಂದೋಲನದಲ್ಲಿ ಇವರು ಕೂಡ ಖ್ಯಾತಿ ಪಡೆದಿದ್ದರು. ಇದೀಗ ಅವರು ತಮ್ಮ ಸ್ವಂತ ಮನೆಯಲ್ಲಿಯೇ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಸುಶಾಂತ್ ಸಿಂಗ್ ರಜಪೂತ್ ಅವರಂತೆಯೇ, ನನ್ನನ್ನೂ ಕೊಲ್ಲಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಶಾಕಿಂಗ್ ಹೇಳಿಕೆ ಯೊಂದನ್ನು ನೀಡಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ನಟಿ ತನುಶ್ರೀ ಅವರು 2018 ರಲ್ಲಿ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಮಾಡಿ ಮೀಟೂ ಅಭಿಯಾನಕ್ಕೆ ಕೈ ಜೋಡಿಸಿದ್ದರು. ಅದಾದ ಬಳಿಕ ಕಳೆದ 4-5 ವರ್ಷ ಗಳಿಂದ ತಮ್ಮ ಸ್ವಂತ ಮನೆಯಲ್ಲಿಯೇ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ವಿಡಿಯೋ ಒಂದನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ತನನ್ನು ಹಿಂಸಿಸಲು ಕೂಡ ಬಾಲಿವುಡ್ ಮಾಫಿಯಾ ಗ್ಯಾಂಗ್ ಪಿತೂರಿ ಮಾಡುತ್ತಿದೆ ಎಂಬ ಶಾಕಿಂಗ್ ಹೇಳಿಕೆಯೊಂದನ್ನು ಇತ್ತೀಚಿನ ಸಂದರ್ಶನ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಖಾಸಗಿ ಮಾಧ್ಯಮ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತನುಶ್ರೀ ದತ್ತಾ ಅವರು ಮಾತನಾಡಿ, ಮೀಟೂ ಅಭಿಯಾನದ ಬಳಿಕ ನನ್ನ ಸುತ್ತಾ ಅನೇಕ ಅನುಮಾನಸ್ಪದ ಘಟನೆಗಳು ನಡೆಯುತ್ತಿವೆ. ನನ್ನನ್ನು ಕೆಲವರು ನಿರಂತರವಾಗಿ ಹಿಂಬಾಲಿಸುತ್ತಿದ್ದಾರೆ. ನನಗೆ ಕಿರುಕುಳ ಕೂಡ ನೀಡುತ್ತಿದ್ದಾರೆ. ನನ್ನ ಮೇಲೆ ಕಣ್ಣಿಡಲು ನನ್ನ ಮನೆಯಲ್ಲಿ ಒಬ್ಬ ಗಾರ್ಡಿಯನ್ ಕೂಡ ಇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಾನು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸುತ್ತೇನೆ. ಇದನ್ನು ಮೀಟೂ ಪ್ರಕರಣದ ಮುಂದುವರಿಕೆಯಾಗಿ ಪರಿಗಣಿಸದೆ, ಇದನ್ನು ಹೊಸ ದೃಷ್ಟಿಕೋನದಿಂದ ನೋಡಿ ನನಗೆ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡಬೇಕೆಂದು ನಾನು ಅಧಿಕಾರಿಗಳನ್ನು ವಿನಂತಿಸುತ್ತೇನೆ. ನನಗೆ ಭದ್ರತೆ ಒದಗಿಸುವಂತೆ ನಾನು ಸರ್ಕಾರವನ್ನು ಮನವಿ ಮಾಡುತ್ತೇನೆ. ಈ ಮಾಫಿಯಾ ತುಂಬಾ ದೊಡ್ಡದು ಮತ್ತು ಅಪಾಯಕಾರಿ, ಮತ್ತು ಸುಶಾಂತ್‌ನಂತೆಯೇ ನನಗೂ ನನ್ನ ಜೀವದ ಬಗ್ಗೆ ಭಯವಿದೆ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನು ಓದಿ:Mahavatar Narsimha Movie: ‘ಮಹಾವತಾರ ನರಸಿಂಹ' ಆನಿಮೇಷನ್ ಚಿತ್ರದ ರಿಲೀಸ್ ಡೇಟ್ ಅನೌನ್ಸ್
ನಟಿ ತನುಶ್ರೀ ದತ್ತಾ ಅವರು 2008ರಲ್ಲಿ ತೆರೆಕಂಡ ಹಾರ್ನ್ ಓಕೆ ಪ್ಲೀಸ್ ಚಿತ್ರದ ಹಾಡಿನ ಚಿತ್ರೀಕರಣದ ಸಮಯದಲ್ಲಿ ಪಾಟೇಕರ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ, 2018ರಲ್ಲಿ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಇದೇ ಆರೋಪವು ಭಾರತದಲ್ಲಿ ಮೀಟೂ ಚಳುವಳಿಯನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಒಮ್ಮೆ ಸೆಟ್‌ನಲ್ಲಿ ಬಟ್ಟೆ ತೆಗೆದು ನೃತ್ಯ ಮಾಡುವಂತೆ ಒತ್ತಡ ಹೇರಿದ್ದರು ಎಂದು ಕೂಡ ತನುಶ್ರೀ ಆರೋಪಿಸಿದ್ದಾರೆ. ಆದರೆ ಇವರ ಆರೋಪವನ್ನು ನಟ ಪಾಟೇಕರ್ ಮತ್ತು ನಿರ್ದೇಶಕ ಅಗ್ನಿಹೋತ್ರಿ ಇಬ್ಬರೂ ನಿರಾಕರಿಸಿದ್ದಾರೆ. ಈ ಘಟನೆ ಬಳಿಕ ಅವರಿಗೆ ಸಿನಿಮಾ ಅವಕಾಶ ಬರುವ ಪ್ರಮಾಣವು ಕಡಿಮೆಯಾಗಿದೆ.