ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

iPhone Exports: ಐಫೋನ್ ರಫ್ತಿನಲ್ಲಿ ದಾಖಲೆ ಸ್ಥಾಪಿಸಿದ ಭಾರತ; ಕಳೆದ ವರ್ಷಗಳಿಗಿಂತ ಶೇ.75ರಷ್ಟು ಪ್ರಗತಿ

iphone Manufacturing: ಜಾಗತಿಕ ಉತ್ಪಾದನಾ ಶಕ್ತಿ ಕೇಂದ್ರವಾಗಿ ಮತ್ತು ʼಮೇಕ್‌ ಇನ್‌ ಇಂಡಿಯಾʼ ಪ್ರತೀಕವಾಗಿ ಭಾರತ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಉತ್ಪಾದನೆ ಮತ್ತು ರಫ್ತಿನಲ್ಲಿ ಸದಾ ಏರಿಕೆ ದಾಖಲಿಸುತ್ತಲೇ ಬಂದಿದೆ. 2026ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಸಾಗಣೆಗಳು ಶೇ.75ರಷ್ಟು ಏರಿಕೆಯಾಗಿದ್ದರೆ, ಉತ್ಪಾದನೆ ಹೆಚ್ಚಳದ ನಡುವೆ ಸೆಪ್ಟೆಂಬರ್‌ನಲ್ಲಿ ಶೇ.155ರಷ್ಟು ಏರಿಕೆಯಾಗಿದೆ.

ಐಫೋನ್ ರಫ್ತಿನಲ್ಲಿ ದಾಖಲೆ ಸ್ಥಾಪಿಸಿದ ಭಾರತ

-

Profile Siddalinga Swamy Oct 8, 2025 6:14 PM

ಬೆಂಗಳೂರು: ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳಲ್ಲಿ ವಿಶಿಷ್ಟ ಗುಣಮಟ್ಟದಿಂದ ಜಾಗತಿಕವಾಗಿ ಛಾಪು ಮೂಡಿಸಿರುವ ಭಾರತ, ಇದೀಗ ಐಫೋನ್‌ (iPhone) ರಫ್ತಿನಲ್ಲಿ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ. 2025-26ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲೇ ಬರೋಬ್ಬರಿ $10 ಬಿಲಿಯನ್ ಪ್ರಮಾಣದ ಐಫೋನ್ ರಫ್ತು ಮಾಡಿ ಇತಿಹಾಸ ನಿರ್ಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಿಂದ ಪ್ರತಿ ವಲಯದಲ್ಲೂ ಮುನ್ನಡೆ ಸಾಧಿಸುತ್ತಿರುವ ಭಾರತ ಐ ಫೋನ್‌ ರಫ್ತಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತದಲ್ಲಿ ಅಭೂತಪೂರ್ವ ಎನ್ನುವಂತೆ ಶೇ.75ರಷ್ಟು ಪ್ರಗತಿಗೈದಿದೆ.

ಜಾಗತಿಕ ಉತ್ಪಾದನಾ ಶಕ್ತಿ ಕೇಂದ್ರವಾಗಿ ಮತ್ತು ʼಮೇಕ್‌ ಇನ್‌ ಇಂಡಿಯಾʼ ಪ್ರತೀಕವಾಗಿ ಭಾರತ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಉತ್ಪಾದನೆ ಮತ್ತು ರಫ್ತಿನಲ್ಲಿ ಸದಾ ಏರಿಕೆ ದಾಖಲಿಸುತ್ತಲೇ ಬಂದಿದೆ. 2026ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಸಾಗಣೆಗಳು ಶೇ.75ರಷ್ಟು ಏರಿಕೆಯಾಗಿದ್ದರೆ, ಉತ್ಪಾದನೆ ಹೆಚ್ಚಳದ ನಡುವೆ ಸೆಪ್ಟೆಂಬರ್‌ನಲ್ಲಿ ಶೇ.155ರಷ್ಟು ಏರಿಕೆಯಾಗಿದೆ.

ಆಪಲ್ ದಾಖಲೆಯನ್ನು ಸಾಧಿಸಿದೆ

ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಭಾರತದಿಂದ $10 ಬಿಲಿಯನ್ (ಸುಮಾರು ₹88,730 ಕೋಟಿ) ಮೌಲ್ಯದ ಐಫೋನ್‌ಗಳು ರಫ್ತಾಗಿವೆ. ಕಳೆದ ವರ್ಷ ಇದರ ಅರ್ಧದಷ್ಟು ಅಂದರೆ $5.71 ಬಿಲಿಯನ್‌ ಮೌಲ್ಯದ ಐಫೋನ್‌ ರಫ್ತಾಗಿತ್ತು. ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಮೊಬೈಲ್‌ ಬಳಕೆದಾರರ ನಿರೀಕ್ಷೆಯಂತೆ ಕಂಪನಿಗಳು ಹೊಸ ಮಾದರಿಗಳನ್ನು ಪರಿಚಯಿಸಿದ್ದರಿಂದ ಐಫೋನ್‌ ರಫ್ತು ದ್ವಿಗುಣಗೊಂಡಿದೆ.

$1.25 ಬಿಲಿಯನ್‌ಗೆ ತಲುಪಿದೆ

ದೇಶೀಯ ಬೇಡಿಕೆ ಹೊರತಾಗಿಯೂ ಐಫೋನ್‌ ರಫ್ತು ಜಾಗತಿಕವಾಗಿ ಬಹು ದೊಡ್ಡ ಪ್ರಮಾಣದಲ್ಲಿ ಪೂರೈಸಲಾಗಿದೆ. ಆಪಲ್ $1.25 ಬಿಲಿಯನ್ ಮೌಲ್ಯದ ಮಾರಾಟವನ್ನು ಮಾಡಿ ದಾಖಲೆ ನಿರ್ಮಿಸಿದೆ. ಹಬ್ಬದ ಋತುವಿನಲ್ಲಿ ಜಾಗತಿಕ ಸಾಗಣೆ ಹೆಚ್ಚಾಗುತ್ತಲೇ ಇದೆ.

$10 ಬಿಲಿಯನ್‌ನತ್ತ ದಾಪುಗಾಲು

ಪ್ರಸಕ್ತ ವರ್ಷ ಹಬ್ಬದ ಋತುವಿನಲ್ಲಿ ಶೇ.80ರಷ್ಟು ಅಂದರೆ $17.5 ಬಿಲಿಯನ್ ಮೌಲ್ಯದ ಐಫೋನ್‌ಗಳು ರಫ್ತಾಗಲು ಸಿದ್ಧವಾಗಿವೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಭಾರತದಿಂದ ರಫ್ತಾಗುವ ಪ್ರಮಾಣ ಪ್ರತಿ ವರ್ಷವೂ ದುಪ್ಪಟ್ಟು ಹೆಚ್ಚುತ್ತಲೇ ಇದೆ. 2023ರ ಏಪ್ರಿಲ್‌-ಸೆಪ್ಟೆಂಬರ್‌ನಲ್ಲಿ $1.7 ಬಿಲಿಯನ್‌, 2024ರಲ್ಲಿ $4.3 ಬಿಲಿಯನ್‌, 2025ರಲ್ಲಿ $5.7 ಬಿಲಿಯನ್‌ ಹಾಗೂ 2026ರಲ್ಲಿ $10 ಬಿಲಿಯನ್‌ ಮೌಲ್ಯದ ಐಫೋನ್‌ ಉತ್ಪಾದನೆ-ರಫ್ತಿನತ್ತ ದಾಪುಗಾಲಿಟ್ಟಿದೆ.

ಭಾರತದಲ್ಲಿನ 5 ಐಫೋನ್ ಕಾರ್ಖಾನೆಗಳು ಯುಎಸ್‌ಗೆ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ $8.43 ಬಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಪೂರೈಸಿವೆ. ಇದಲ್ಲದೇ, ಮೊಬೈಲ್‌ ಉತ್ಪಾದನಾ ಘಟಕಗಳು ದೇಶದಲ್ಲಿ 3.50 ಲಕ್ಷ ಉದ್ಯೋಗ ಸೃಷ್ಟಿಸಿವೆ. 1.20 ಲಕ್ಷ ನೇರ ಉದ್ಯೋಗಗಳನ್ನು ಒದಗಿಸಿಕೊಟ್ಟಿವೆ.

ಭಾರತೀಯ ಉತ್ಪನ್ನಕ್ಕೆ ಎಲ್ಲಿಲ್ಲದ ಬೇಡಿಕೆ

ಇದೇ ಮೊದಲ ಬಾರಿಗೆ ಪ್ರೊ, ಪ್ರೊ ಮ್ಯಾಕ್ಸ್ ಮತ್ತು ಏರ್ ಸೇರಿದಂತೆ ಎಲ್ಲಾ ಐಫೋನ್ ಮಾದರಿಗಳು ಭಾರತೀಯ ಕಾರ್ಖಾನೆಗಳಲ್ಲಿ ತಯಾರಾಗುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆ ಇಡುತ್ತಿವೆ. ಈ ಹಿಂದೆ ಭಾರತದಲ್ಲಿ ಸಿದ್ಧಪಡಿಸುವ ಪ್ರೊ ಮಾದರಿಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಕೆಲವು ತಿಂಗಳುಗಳೇ ಬೇಕಿತ್ತು. ಆದರೆ, ಆ ಕಾಲವೀಗ ಬದಲಾಗಿ ಭಾರತೀಯ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬರುತ್ತಿದೆ.‌

ಈ ಸುದ್ದಿಯನ್ನೂ ಓದಿ | CDAC Recruitment 2025: ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ನಲ್ಲಿದೆ 687 ಹುದ್ದೆ; ಡಿಪ್ಲೊಮಾ ಪಾಸಾದವರು ಅಪ್ಲೈ ಮಾಡಿ

ಆಪಲ್ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಹೊಸ ಐಫೋನ್ ಬಿಡುಗಡೆ ಮಾಡುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆಯಿಂದಾಗಿ ದೀಪಾವಳಿಯ ನಂತರ ಆಪಲ್‌ ಫೋನ್‌ ರಫ್ತು ಮತ್ತಷ್ಟು ವೇಗ ಪಡೆಯುತ್ತದೆ ಎಂಬುದು ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆ ತಜ್ಞರ ಅಭಿಪ್ರಾಯ.