ಕೇಶವಪ್ರಸಾದ.ಬಿ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Stock Market) ಇವತ್ತು 677 ಅಂಕ ಏರಿಕೆಯಾಗಿ 81,273ಕ್ಕೆ ಸ್ಥಿರವಾಯಿತು. ನಿಫ್ಟಿ 245 ಅಂಕ ಏರಿಕೆಯಾಗಿ 24,876 ಕ್ಕೆ ಸ್ಥಿರವಾಯಿತು. ರಷ್ಯಾ ಮೂಲದ ಕಚ್ಚಾ ತೈಲ ಪೂರೈಕೆಯ ಆತಂಕ ಕಡಿಮೆಯಾಗಿರುವುದು, ಜಿಎಸ್‌ಟಿಯಲ್ಲಿ ಮುಂಬರಲಿರುವ ಮಹತ್ವದ ಸುಧಾರಣೆಯ ಕ್ರಮಗಳು ಸ್ಟಾಕ್ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು. 16 ಪ್ರಮುಖ ಸೆಕ್ಟರ್‌ಗಳ ಪೈಕಿ 15 ಸೆಕ್ಟರ್‌ಗಳು ಸಕಾರಾತ್ಮಕವಾಗಿತ್ತು. ಆಟೊಮೊಬೈಲ್, ಕನ್‌ಸ್ಯೂಮರ್ ಸ್ಟಾಕ್ಸ್ ಲಾಭ ಗಳಿಸಿತು. ಸರಕಾರವು ಸಣ್ಣ ಕಾರುಗಳ ಮೇಲಿನ ತೆರಿಗೆ ಇಳಿಸುವ ನಿರೀಕ್ಷೆ ಇರುವುದು ಕೂಡ ಸಕಾರಾತ್ಮಕ ಪ್ರಭಾವ ಬೀರಿತು.
ಬಿಎಸ್‌ಇ ಲಿಸ್ಟೆಡ್ ಷೇರುಗಳ ಬಂಡವಾಳ ಮಾರುಕಟ್ಟೆ ಮೌಲ್ಯವು 451 ಲಕ್ಷ ಕೋಟಿ ರುಪಾಯಿಯಿಂದ 5 ಲಕ್ಷದ 93 ಸಾವಿರ ಕೋಟಿ ರುಪಾಯಿಗೆ ಏರಿಕೆಯಾಯಿತು.
ಸೆನ್ಸೆಕ್ಸ್-ನಿಫ್ಟಿ ಚೇತರಿಕೆಗೆ 4 ಪ್ರಮುಖ ಕಾರಣಗಳು:
ಟ್ರಂಪ್-ಪುಟಿನ್ ಮಾತುಕತೆ
ಜಿಎಸ್‌ಟಿ ಸುಧಾರಣೆ
ಏಷ್ಯಾ ಮಾರಿಕಟ್ಟೆಯ ಚೇತರಿಕೆ
ಟೆಕ್ನಿಕಲ್ ಅಂಶಗಳು
ಇಂದು ಲಾಭ ಗಳಿಸಿದ ಸೆಕ್ಟರ್‌ಗಳು:
ಆಟೊಮೊಬೈಲ್
ಕನ್ ಸ್ಯೂಮರ್ ಡ್ಯೂರೆಬಲ್ಸ್
ಮಿಡ್-ಕ್ಯಾಪ್
ಸ್ಮಾಲ್ ಕ್ಯಾಪ್ ಷೇರುಗಳು
ಬ್ಯಾಂಕಿಂಗ್
ಮೆಟಲ್
ಐಟಿ
ಸೆನ್ಸೆಕ್ಸ್-ನಿಫ್ಟಿ ಏರಿಕೆಗೆ ಕಾರಣವೇನು ಎಂಬುದನ್ನು ನೋಡೋಣ.
- ಟ್ರಂಪ್-ಪುಟಿನ್ ಮಾತುಕತೆ:
ಅಲಸ್ಕಾದಲ್ಲಿ ಕಳೆದ ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ ಕದನ ವಿರಾಮಕ್ಕೆ ಸಂಬಂಧಿಸಿ ಮಾತುಕತೆ ನಡೆಸಿದರು. ಸೋಮವಾರ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕೀ ಜತೆಗೆ ಮತ್ತು ಯುರೋಪಿನ ನಾಯಕರೊಡನೆ ಕೂಡ ಮಾತುಕತೆ ನಡೆಸಲಿದ್ದಾರೆ.
ರಷ್ಯಾ ವಿರುದ್ಧ ಹೆಚ್ಚುವರಿ ನಿರ್ಬಂಧಗಳನ್ನು ಅಮೆರಿಕ ತಡೆ ಹಿಡಿದಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಇಳಿಯಿತು. ರಷ್ಯಾ ತೈಲವನ್ನು ಖರೀದಿಸುತ್ತಿರುವ ಚೀನಾ ವಿರುದ್ಧ ನಿರ್ಬಂಧ ಹೇರಬೇಕೆ ಎಂಬುದರ ಬಗ್ಗೆ ತಮ್ಮ ಸರಕಾರ ಇನ್ನೂ ನಿರ್ಧರಿಸಿಲ್ಲ ಎಂದೂ ಟ್ರಂಪ್ ಹೇಳಿದ್ದಾರೆ. ಭಾರತದ ಬಗ್ಗೆ ಪ್ರಸ್ತಾಪಿಸದಿದ್ದರೂ, ಒಟ್ಟಾರೆ ಪರಿಸ್ಥಿತಿ ಭಾರತಕ್ಕೆ ಈಗ ಅನುಕೂಲಕರವಾಗಿದೆ.
- ಜಿಎಸ್‌ಟಿ ಸುಧಾರಣೆ:
ಕೇಂದ್ರ ಸರಕಾರ ದೀಪಾವಳಿಯ ವೇಳೆಗೆ ಜಿಎಸ್‌ಟಿಯ ಅಡಿಯಲ್ಲಿ ಮಹತ್ವದ ತೆರಿಗೆ ಸುಧಾರಣೆ ಮಾಡುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ಅಶಯವನ್ನು ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮ ಮುಖ್ಯವಾಗಿ ಜಿಎಸ್‌ಟಿ ಅಡಿಯಲ್ಲಿ 5% ಮತ್ತು 18% ಸ್ಲ್ಯಾಬ್ ಮಾತ್ರ ಉಳಿಯುವ ನಿರೀಕ್ಷೆ ಇದೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳಿಗೆ 40% ಜಿಎಸ್‌ಟಿಯ ಸ್ಲ್ಯಾಬ್ ಬರುವ ಸಾಧ್ಯತೆ ಇದೆ. ಇದರ ಪರಿಣಾಮ ದಿನ ಬಳಕೆಯ ಹಲವಾರು ವಸ್ತುಗಳ ದರ ಇಳಿಕೆಯಾಗುವ ನಿರೀಕ್ಷೆ ಇದೆ.
ಭಾರತ ಸರಕಾರವು ಸಣ್ಣ ಕಾರುಗಳ ಮೇಲಿನ ಜಿಎಸ್‌ಟಿಯನ್ನು 28% ನಿಂದ 18% ಕ್ಕೆ ಇಳಿಕೆ ಮಾಡುವ ನಿರೀಕ್ಷೆ ಇದೆ. ಸಣ್ಣ ಕಾರು ಎಂದರೆ 4 ಮೀಟರ್ ಉದ್ದದ ಹಾಗೂ 1200 ಸಿಸಿ ಎಂಜಿನ್ ಸಾಮರ್ಥ್ಯದ ಕಾರು ಆಗಿದೆ. ಹೀಗಾಗಿ ಮಾರುತಿ ಸುಜುಕಿ, ಈಶರ್, ಮಹೀಂದ್ರಾ ಆಂಡ್ ಮಹೀಂದ್ರಾ ಕಂಪನಿಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ.
ಜೀವ ವಿಮೆ ಮತ್ತು ಆರೋಗ್ಯ ವಿಮೆ ಮೇಲಿನ 18% ಜಿಎಸ್‌ಟಿಯು 5% ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್‌ನಲ್ಲಿ ದೀಪಾವಳಿ ವೇಳೆಗೆ ಈ ಸುಧಾರಣೆಗಳು ಜಾರಿಯಾಗುವ ನಿರೀಕ್ಷೆ ಇದೆ. ಆಗ ಬಹುತೇಕ ಸರಕುಗಳು ಮತ್ತು ಸೇವೆಗಳು 5% ಮತ್ತು 18% ಬ್ರಾಕೆಟ್ ಒಳಗೆ ಬರುವ ನಿರೀಕ್ಷೆ ಇದೆ.
- ಎಸ್ & ಪಿ ಕ್ರೆಡಿಟ್ ರೇಟಿಂಗ್ ಏರಿಕೆ:
ಜಾಗತಿಕ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಎಸ್ & ಪಿ 18 ವರ್ಷಗಳ ಬಳಿಕ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ಮೈನಸ್ BBB ಯಿಂದ BBB ಕ್ಕೆ ಮೇಲ್ದರ್ಜೆಗೇರಿಸಿದೆ. ಇದರ ಪರಿಣಾಮ ಸರಕಾರದ 10 ವರ್ಷಗಳ ಬಾಂಡ್ ಬಡ್ಡಿ ದರದಲ್ಲಿ 10 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ. ಭಾರತದ ಆರ್ಥಿಕತೆಯ ಬುನಾದಿ ಸುಭದ್ರವಾಗಿದೆ. ಭಾರತದ ಆರ್ಥಿಕ ಪ್ರಗತಿಯ ಮುನ್ನೋಟವನ್ನು ಎಸ್ &ಪಿಯು ಸ್ಟೇಬಲ್‌ನಿಂದ ಪಾಸಿಟಿವ್ ಗೆ ಏರಿಸುವ ನಿರೀಕ್ಷೆ ಇದೆ.
ಭಾರತದ ರಿಯಲ್ ಜಿಡಿಪಿಯು 2022-2024ರ ಅವಧಿಯಲ್ಲಿ ಸರಾಸರಿ 8.8% ರಷ್ಟು ಬೆಳವಣಿಗೆ ದಾಖಲಿಸಿತ್ತು. ಇದು ಏಷ್ಯಾ ಪೆಸಿಫಿಕ ವಲಯದಲ್ಲಿಯೇ ಹೆಚ್ಚು. ಮುಂದಿನ ಮೂರು ವರ್ಷಗಳಲ್ಲೂ ಸರಾಸರಿ 6.3% ರ ಸರಾಸರಿ ಬೆಳವಣಿಗೆ ನಿರೀಕ್ಷಿಸಲಾಗಿದೆ.
ಎರಡನೆಯದಾಗಿ ಭಾರತದ ಸಾಲ ಕೂಡ 2029ರ ವೇಳೆಗೆ ಇಳಿಯಲಿದೆ. ಜಿಡಿಪಿಯ 78% ಕ್ಕೆ ತಗ್ಗಲಿದೆ ಎಂದು ಎಸ್ & ಪಿ ಹೇಳಿದೆ. 2025ರಲ್ಲಿ ಇದು 83% ಇದೆ.
ವರದಿಗಳ ಪ್ರಕಾರ 2025 ಮತ್ತು 2028ರ ಅವಧಿಯಲ್ಲಿ ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಚೀನಾ 22.6%, ಭಾರತವು 12.9% ಮತ್ತು ಅಮೆರಿಕವು 11.3% ಪ್ರಗತಿಯನ್ನು ದಾಖಲಿಸಲಿದೆ.
- ಏಷ್ಯಾದ ಮಾರುಕಟ್ಟೆಯಲ್ಲೂ ಸೂಚ್ಯಂಕಗಳ ಜಿಗಿತ:
ಅಮೆರಿಕದ ಫೆಡರಲ್ ರಿಸರ್ವ್ ಈ ವರ್ಷ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಇದ್ದು, ಏಷ್ಯಾದ ಮಾರುಕಟ್ಟೆಯನ್ನು ಸಕಾರಾತ್ಮಕಗೊಳಿಸಿತು. ಸಾಮಾನ್ಯವಾಗಿ ಬಡ್ಡಿ ದರ ಇಳಿಕೆಯು ಬೆಳವಣಿಗೆಯನ್ನು ಉತ್ತೇಜಿಸುವುದರಿಂದ ಮಾರುಕಟ್ಟೆಗಳು ಪಾಸಿಟಿವ್ ಆಗಿ ಸ್ಪಂದಿಸುತ್ತವೆ.
- ಟೆಕ್ನಿಕಲ್ ದೃಷ್ಟಿಯಿಂದಲೂ ಇಂಟ್ರಾ ಡೇ ಚಾರ್ಟ್‌ಗಳು ಇವತ್ತು ಪಾಸಿಟಿವ್ ರಿವರ್ಸಲ್ ಪ್ಯಾಟರ್ನ್‌ನಲ್ಲಿ ಇತ್ತು. ವೀಕ್ಲಿ ಚಾರ್ಟ್‌ನಲ್ಲಿ ಬುಲ್ಲಿಶ್ ಕ್ಯಾಂಡರ್ ರಚನೆಯಾಗಿತ್ತು. ಶಾರ್ಟ್ ಟರ್ಮ್ ಟ್ರೇಡರ್ಸ್‌ಗೆ 24,450 ಮತ್ತು 80,000 ಅಂಕಗಳಲ್ಲಿ ಕೀ ಸಪೋರ್ಟ್ ಝೋನ್ ಇದೆ ಎಂದು ತಜ್ಞರು ವಿಶ್ವಾಸ ವ್ಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Keshava Prasad B Column: ಕಸ ಗುಡಿಸುವವರಿಗೂ ಕಂಪನಿಯ ಷೇರು ಕೊಟ್ಟ ಆನಂದ್ ಮಹೀಂದ್ರಾ!
ನಿಫ್ಟಿ 50ಯಲ್ಲಿ ಇಂದು ಲಾಭ ಗಳಿಸಿದ ಷೇರುಗಳು:
ಮಾರುತಿ ಸುಜುಕಿ: 14,091/-
ನೆಸ್ಲೆ ಇಂಡಿಯಾ: 1,168/-
ಬಜಾಜ್ ಫೈನಾನ್ಸ್: 915/-
ಹೀರೊ ಮೋಟೊಕಾರ್ಪ್: 5,006/-
ಎಂ&ಎಂ: 3,418/-
ಟ್ರೆಂಟ್: 5,616/-
ಎಚ್‌ಯುಎಲ್: 2,593/-