ಹೈದರಾಬಾದ್: ತೆಲಂಗಾಣದ ಯಾದಾದ್ರಿಯಲ್ಲಿ ಶನಿವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ (Road Accident) ಅಧಿಕಾರಿಗಳು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಡಿಎಸ್ಪಿಗಳಾದ ಚಂದ್ರಕರ್ ರಾವ್ ಮತ್ತು ಶಾಂತಾ ರಾವ್, ಎಎಸ್ಪಿ ಪ್ರಸಾದ್ ಮತ್ತು ಹೆಡ್ ಕಾನ್ಸ್ಟೇಬಲ್ ನರಸಿಂಗ್ ರಾವ್ ಅವರನ್ನೊಳಗೊಂಡ ಪೊಲೀಸ್ ತಂಡವು ಕಾರಿನಲ್ಲಿ ಕೆಲಸದ ಮೇಲೆ ಹೈದರಾಬಾದ್‌ಗೆ ತೆರಳುತ್ತಿತ್ತು. ಯಾದಾದ್ರಿ ಜಿಲ್ಲೆಯ ಖೈತಪುರಂನಲ್ಲಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಪೊಲೀಸ್ ತಂಡ ವಿಜಯವಾಡದಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ವಿಜಯವಾಡ ಕಡೆಗೆ ಹೋಗುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಮತ್ತು ಎಸ್ಪಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯಲಾಗಿದೆ. ಹೈದರಾಬಾದ್‌ನ ಎಲ್‌ಬಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ವಿಚಾರಣೆ ನಡೆಸಲು ವಿಜಯವಾಡದ ಪೊಲೀಸ್ ಅಧಿಕಾರಿಗಳ ತಂಡ ನಗರಕ್ಕೆ ತಲುಪಿದೆ. ರಾಚಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ವರ್ಷದ ಮೊದಲ ಆರು ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 26,770 ಜನರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 2024ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ (ಎನ್‌ಎಚ್) 52,609 ಮಾರಕ ಅಪಘಾತಗಳು ಸಂಭವಿಸಿವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:Road Accident: ಬೆಂಗಳೂರು, ಚಿತ್ರದುರ್ಗದಲ್ಲಿ ರಸ್ತೆ ಅಪಘಾತ: ಬಸ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರ ಸಾವು
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಹೆಚ್ಚಿನ ಸಂಚಾರ ದಟ್ಟಣೆ ಇರುವ ರಾಷ್ಟ್ರೀಯ ಹೆದ್ದಾರಿ ಮತ್ತು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ, ಟ್ರಾನ್ಸ್-ಹರಿಯಾಣ, ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ, ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯಂತಹ ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ (ಎಟಿಎಂಎಸ್) ಅನ್ನು ಸ್ಥಾಪಿಸಿದೆ ಎಂದು ಗಡ್ಕರಿ ತಿಳಿಸಿದ್ದಾರೆ.