ಭುವನೇಶ್ವರ: ಒಡಿಶಾದಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದ್ದು, ಇಬ್ಬರು ವೃದ್ಧ ಸಹೋದರರು 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆಕೆ ಗರ್ಭಿಣಿಯಾಗಿದ ಬಳಿಕ ಬಾಲಕಿಯನ್ನು ಜೀವಂತವಾಗಿ (Physical Assault) ಹೂಳಲು ಯತ್ನಿಸಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಳೆದ ಒಂದು ವರ್ಷದಿಂದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಭಾಗ್ಯಧರ್ ದಾಸ್ (60) ಮತ್ತು ಪಂಚನನ್ ದಾಸ್ (58) ಎಂಬ ಆರೋಪಿ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಏತನ್ಮಧ್ಯೆ, ಮೂರನೇ ಶಂಕಿತ ತುಳು ನಾಪತ್ತೆಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.
ಸಂತ್ರಸ್ತೆಯ ತಂದೆ ಕುಜಾಂಗ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ಇಬ್ಬರು ಸಹೋದರರು ಅಪ್ರಾಪ್ತ ವಯಸ್ಕಳ ಮೇಲೆ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಈಗ ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. ದೂರಿನ ಪ್ರಕಾರ, ಆರೋಪಿ ಸಹೋದರರು ಒಂದು ಮಠದಲ್ಲಿ (ಆಶ್ರಮ) ಕೆಲಸ ಮಾಡುತ್ತಿದ್ದರು, ಬಾಲಕಿ ಆಗಾಗ ಮಠಕ್ಕೆ ಭೇಟಿ ನೀಡುತ್ತಿದ್ದಳು. ಇಬ್ಬರು ಪುರುಷರು ದೀರ್ಘಕಾಲದವರೆಗೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಆಕೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದಾಗ ತಮ್ಮ ಅಪರಾಧವನ್ನು ಮರೆಮಾಡಲು ಅವರು ಆಕೆಯನ್ನು ಜೀವಂತವಾಗಿ ಹೂಳಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆಯ ತಂದೆ, ಆರಂಭದಲ್ಲಿ ಈ ವಿಷಯವನ್ನು ಸ್ಥಳೀಯ ಪಂಚಾಯತ್ ಕಾರ್ಯಕಾರಿಣಿಯೊಬ್ಬರಿಗೆ ವರದಿ ಮಾಡಿದ್ದಾಗಿ ಹೇಳಿಕೊಂಡಿದ್ದು, ಘಟನೆಯನ್ನು ಮುಚ್ಚಿಹಾಕಲು ಹಣ ನೀಡುವುದಾಗಿ ಆಮಿಷ ಒಡ್ಡಿದ್ದರು. ಅಷ್ಟೇ ಅಲ್ಲದೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಜೀವಕ್ಕೆ ಕುತ್ತು ತರುತ್ತೇವೆಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆರೋಪಿ ಸಹೋದರರು ಸಂತ್ರಸ್ತೆಯನ್ನು ಬಲೆಗೆ ಬೀಳಿಸಿ ಗರ್ಭಪಾತಕ್ಕೆ ಹಣ ನೀಡುವ ಮತ್ತು ಅನುಕೂಲ ಮಾಡಿಕೊಡುವ ಆಮಿಷ ಒಡ್ಡಿದರು. ಆಕೆ ಸ್ಥಳವನ್ನು ತಲುಪಿದಾಗ ಅಲ್ಲಿ ಒಂದು ದೊಡ್ಡ ಕಂದಕವನ್ನು ತೆಗೆಯಲಾಗಿತ್ತು. ಗರ್ಭಪಾತ ಮಾಡಿಸಿಕೊಳ್ಳದಿದ್ದರೆ, ಆಕೆಯನ್ನು ಜೀವಂತವಾಗಿ ಆ ಕಂದಕದಲ್ಲಿ ಹೂತುಹಾಕುವುದಾಗಿ ಬೆದರಿಕೆ ಹಾಕಿದರು. ಅದೃಷ್ಟವಶಾತ್, ಸಂತ್ರಸ್ತೆ ಆರೋಪಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು ಮತ್ತು ತನ್ನ ತಂದೆಗೆ ನಡೆದ ಭೀಕರ ಘಟನೆಯನ್ನು ವಿವರಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ: Prajwal Revanna: ಅತ್ಯಾಚಾರ ಪ್ರಕರಣ; 2ನೇ ಬಾರಿಯೂ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ
ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗುರುವಾರ ಇಬ್ಬರು ಸಹೋದರರನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿ ಪರಾರಿಯಾಗಿದ್ದಾನೆ ಎಂದು ತಿರ್ಟೋಲ್ ಎಸ್‌ಡಿಪಿಒ ಚಿನ್ಮಯ್ ರಾವುತ್ ತಿಳಿಸಿದ್ದಾರೆ.