ಬೆಳಗಾವಿ: ಬೆಳಗಾವಿಯಲ್ಲಿ (Belagavi crime news) ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಕೋರ್ಟ್ ಆವರಣದಲ್ಲಿಯೇ ಪತಿಯೊಬ್ಬ ತನ್ನ ಪತ್ನಿ ಮತ್ತು ಅತ್ತೆಯ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ (Assault case) ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ಕೋರ್ಟ್ ಆವರಣದಲ್ಲಿ ಈ ಘಟನೆ ನಡೆದಿದೆ.
ಮಚ್ಚಿನಿಂದ ಪತ್ನಿ ಐಶ್ವರ್ಯ ಹಾಗೂ ಅತ್ತೆ ಅನಸೂಯ ಮೇಲೆ ಮುತ್ತಪ್ಪ ಗಣಾಚಾರಿ ಹಲ್ಲೆ ಮಾಡಿ ಕೊಲ್ಲಲು ಯತ್ನಿಸಿದ್ದಾನೆ. ತಕ್ಷಣವೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನ ಹಿನ್ನೆಲೆಯಲ್ಲಿ ಪತಿ ಮತ್ತು ಪತ್ನಿ ಕೋರ್ಟಿಗೆ ಹಾಜರಾಗಿದ್ದರು. ಆರೋಪಿ ಮುತ್ತಪ್ಪ ಬೈಲಹೊಂಗಲ ಪಟ್ಟಣದ ನಿವಾಸಿಯಾಗಿದ್ದು, ಐಶ್ವರ್ಯ ಮತ್ತು ಅನಸೂಯಾಗೆ ಸದ್ಯ ಧಾರವಾಡದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೈದು ಬುದ್ಧಿವಾದ ಹೇಳಿದ್ದಕ್ಕೆ ಅಣ್ಣನ ಮಗನನ್ನೇ ಕೊಂದ ಪಾಪಿ ತಮ್ಮ!
ಬಾಗಲಕೋಟೆ: ಅಣ್ಣ ಬೈದು ಬುದ್ಧಿವಾದ ಹೇಳಿದ್ದಕ್ಕೆ 3 ವರ್ಷದ ಮಗುವಿಗೆ ಜಾಕು ಇರಿದು ಸ್ವಂತ ಚಿಕ್ಕಪ್ಪನೇ ಕೊಂದಿರುವುದು (Murder Case) ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ. ಮಧುಕುಮಾರ್ ಕೊಲೆಯಾದ ಬಾಲಕ. ಭೀಮಪ್ಪ ಕೊಲೆ ಆರೋಪಿಯಾಗಿದ್ದಾನೆ. ಅಂಗನವಾಡಿಗೆ ಹೋಗಿದ್ದ ಬಾಲಕನನ್ನು ಚಿಕ್ಕಪ್ಪ ಭೀಮಪ್ಪ ನೇರವಾಗಿ ಮನೆಗೆ ಕರೆದುಕೊಂಡು ಹೋಗಿ, ಹರಿತ ಆಯುಧದಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.
ಬೆನಕನವಾಡಿ ಗ್ರಾಮದ ಮಾರುತಿ ವಾಲಿಕಾರ ಎಂಬುವರ 3 ವರ್ಷದ ಮಗ ಮಧುಕುಮಾರ್‌ನ ಪ್ರಾಣವನ್ನು ಚಿಕ್ಕಪ್ಪ ಭೀಮಪ್ಪ ತೆಗೆದಿದ್ದಾನೆ. ಮಂಗಳವಾರ ಬೆಳಗ್ಗೆ ಮಗುವಿನ ತಂದೆ-ತಾಯಿ ಹೊಲದ ಕೆಲಸಕ್ಕೆ ಹೋಗಿದ್ದರು. ಅಂಗನವಾಡಿಯಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಬಾಲಕನನ್ನು, ಪಾಪಿ ಭೀಮಪ್ಪ ಕರೆದುಕೊಂಡು ಹೋಗಿ, ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮುದ್ದಾದ ಮಗು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಬಾಲಕ ಮಧುಕುಮಾರ ತಂದೆ ಮಾರುತಿಗೆ ಆರೋಪಿ ಭೀಮಪ್ಪ ಡೊಡ್ಡಪ್ಪನ ಮಗನಾಗಿದ್ದಾನೆ. ಅಮೀನಗಢ ಪೊಲೀಸರು ಆರೋಪಿ ಭೀಮಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸಿಟ್ಟು ಬಂತು ಕೊಲೆ ಮಾಡಿದೆ ಎಂದು ಮಾತ್ರ ಹೇಳಿದ್ದಾನೆ. ಆದರೆ ಕಳೆದ ವರ್ಷ ಭೀಮಪ್ಪ ತನ್ನ ಪತ್ನಿ ಜತೆ ಜಗಳವಾಡಿ, ಕಲ್ಲಿನಿಂದ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಆಗ ಬಾಲಕ ಮಧುಕುಮಾರನ ತಂದೆ ಮಾರುತಿ ಭೀಮಪ್ಪನಿಗೆ ಬೈದು ಬುದ್ಧಿ ಹೇಳಿದ್ದನಂತೆ. ಅದೇ ಸೇಡಿನಿಂದ ಹೀಗ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Assault Case: ರಾಜೀನಾಮೆಗೆ ಒತ್ತಾಯಿಸಿ ಅರೆಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷನ ಮೇಲೆ ಹಲ್ಲೆ