ನವದೆಹಲಿ: ಕಾಂಗ್ರೆಸ್ ಸಂಸದೆ ಸುಧಾ ರಾಮಕೃಷ್ಣನ್ (Sudha Ramakrishnan) ಅವರು ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಚಿನ್ನದ ಸರ ದೋಚಿದ ಘಟನೆ ನಡೆದಿದೆ. ಈ ಕುರಿತು ಸಂಸದೆ ಸುಧಾ ರಾಮಕೃಷ್ಣನ್ ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾರೆ. ತಮಿಳುನಾಡಿನ ಸಂಸದೆಯಾಗಿರುವ ಇವರು, ಚಾಣಕ್ಯಪುರಿಯ ರಾಜತಾಂತ್ರಿಕ ಪ್ರದೇಶದಲ್ಲಿರುವ ಪೋಲೆಂಡ್ ರಾಯಭಾರ ಕಚೇರಿಯ ಬಳಿ ಡಿಎಂಕೆಯ ರಾಜತಿ ಅವರೊಂದಿಗೆ ವಾಕಿಂಗ್ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದಿರುವ ಸುಧಾ, ಹೆಲ್ಮೆಟ್ ಧರಿಸಿದ ವ್ಯಕ್ತಿ ನನ್ನ ಸರ ದೋಚಿದ್ದಾನೆ ಎಂದು ತಿಳಿಸಿದರು.
ದೆಹಲಿಯ ಕಾನೂನು ವ್ಯವಸ್ಥೆ ಕುರಿತು ಕಳವಳ ವ್ಯಕ್ತ ಪಡಿಸಿದ ಸುಧಾ, ಬೆಳಿಗ್ಗೆ 6.15 ರಿಂದ 6.20 ರ ಸುಮಾರಿಗೆ, ನಾವು ಪೋಲೆಂಡ್ ರಾಯಭಾರ ಕಚೇರಿಯ ಗೇಟ್ -3 ಮತ್ತು ಗೇಟ್ -4 ರ ಬಳಿ ಇದ್ದಾಗ, ಒಬ್ಬ ವ್ಯಕ್ತಿ ಪೂರ್ಣ ಹೆಲ್ಮೆಟ್ ಧರಿಸಿ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಸ್ಕೂಟಿಯಲ್ಲಿ ಬಂದಿದ್ದಾನೆ. ತಕ್ಷಣವೇ ಆತ ನನ್ನ ಕುತ್ತಿಗೆಯಲ್ಲಿದ್ದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ. ಅವನು ವಿರುದ್ಧ ದಿಕ್ಕಿನಲ್ಲಿ ನಿಧಾನವಾಗಿ ಬರುತ್ತಿದ್ದರಿಂದ, ಅವನು ಸರಗಳ್ಳನಾಗಿರಬಹುದು ಎಂಬ ಅನುಮಾನ ನನಗೆ ಬರಲಿಲ್ಲ. ಅವನು ನನ್ನ ಕುತ್ತಿಗೆಯಿಂದ ಸರ ಎಳೆದ, ನನಗೆ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ.
ನಾನು ಕೂಗಿಕೊಂಡೆ, ಅವನು ನನ್ನನ್ನು ನೂಕಿದ, ಘಟನೆಯಲ್ಲಿ ನನ್ನ ಚೂಡಿದಾರ ಹರಿದಿದೆ. ತಕ್ಷಣವೇ ದೆಹಲಿ ಪೊಲೀಸರ ಮೊಬೈಲ್ ಗಸ್ತು ವಾಹನವನ್ನು ಗಮನಿಸಿ ಅವರಿಗೆ ದೂರು ನೀಡಿದೆ ಎಂದು ಹೇಳಿದ್ದಾರೆ. ರಾಯಭಾರ ಕಚೇರಿಗಳು ಮತ್ತು ಸಂರಕ್ಷಿತ ಸಂಸ್ಥೆಗಳಿಂದ ತುಂಬಿರುವ ಚಾಣಕ್ಯಪುರಿಯಂತಹ ಉನ್ನತ ಭದ್ರತಾ ವಲಯದಲ್ಲಿ ಸಂಸತ್ ಸದಸ್ಯೆಯಾಗಿರುವ ಮಹಿಳೆಯ ಮೇಲೆ ಈ ರೀತಿಯ ದಾಳಿ ನಡೆದಿದೆ ಎಂದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನಿರಬಹುದು ಎಂದು ಅವರು ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Chikkaballapur Crime: ಸರಗಳ್ಳನ ಬಂಧನ 5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
ರಾಷ್ಟ್ರ ರಾಜಧಾನಿಯಲ್ಲಿರುವ ಸುರಕ್ಷಿತ ವಲಯದಲ್ಲಿಯೇ ಹೀಗಾದರೆ, ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ? ಬೆಲೆ ಬಾಳುವ ವಸ್ತುಗಳು, ಮೊಬೈಲ್ ಹೋದರೆ ತೆಗೆದುಕೊಳ್ಳಬಹುದು. ಆದರೆ ಜೀವ ಹೋದರೆ ಮತ್ತೆ ಬರುವುದಿಲ್ಲ, ಹೀಗಾಗಿ ದೆಹಲಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಅಮಿತ್ ಶಾ ಅವರಿಗೆ ಸುಧಾ ರಾಮಕೃಷ್ಣ ಅವರು ಮನವಿ ಮಾಡಿದ್ದಾರೆ.