ಮುಂಬೈ: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಮಕ್ಕಳ ಆಶ್ರಯದಲ್ಲಿ ಎಚ್‌ಐವಿ ಸೋಂಕಿತ ಅಪ್ರಾಪ್ತ ವಯಸ್ಕಳ ಮೇಲೆ ಎರಡು ವರ್ಷಗಳ ಕಾಲ ಅತ್ಯಾಚಾರ (Physical Assault) ನಡೆಸಲಾಗಿದ್ದು, ನಂತರ ಆಕೆ ಗರ್ಭಿಣಿಯಾದಾಗ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಧಾರಾಶಿವ್ ಜಿಲ್ಲೆಯ ಧೋಕಿ ಪೊಲೀಸ್ ಠಾಣೆಯಲ್ಲಿ 16 ವರ್ಷದ ಸಂತ್ರಸ್ತೆ ನೀಡಿರುವ ದೂರಿನಲ್ಲಿ, 2023 ರ ಜುಲೈ 13 ರಿಂದ ಈ ವರ್ಷದ ಜುಲೈ 23 ರ ನಡುವೆ ಹಸೇಗಾಂವ್‌ನಲ್ಲಿರುವ ಎಚ್‌ಐವಿ ಸೋಂಕಿತ ಮಕ್ಕಳ ಮನೆಯಾದ ಸೇವಾಲೆಯಲ್ಲಿ ಉದ್ಯೋಗಿಯೊಬ್ಬರು ಕನಿಷ್ಠ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಆಕೆ ಅನಾರೋಗ್ಯಕ್ಕೆ ಒಳಗಾದ ನಂತರ, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷೆ ನಡೆಸಿದ ಬಳಿಕ ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಆರೋಪಿಯು ವೈದ್ಯರ ಒಪ್ಪಿಗೆಯಿಲ್ಲದೆ ಗರ್ಭಪಾತ ಪ್ರಕ್ರಿಯೆಯನ್ನು ಮಾಡುವಂತೆ ಸೂಚಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಲಾಗಿದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
ಆ ಬಾಲಕಿ ಅಧಿಕಾರಿಗಳಿಗೆ ಪತ್ರ ಬರೆದು ದೂರು ಪೆಟ್ಟಿಗೆಯಲ್ಲಿ ಹಾಕಿದ್ದಾಳೆ. ಸಂಸ್ಥೆಯ ಆಡಳಿತ ಮಂಡಳಿ ಆಕೆಗೆ ಸಹಾಯ ಮಾಡಲಿಲ್ಲ ಮತ್ತು ಪತ್ರವನ್ನು ಹರಿದು ಹಾಕಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆಕೆಯ ದೂರಿನ ಪ್ರಕಾರ, ಮಗು ಕಳೆದ ಎರಡು ವರ್ಷಗಳಿಂದ ಈ ಸಂಸ್ಥೆಯಲ್ಲಿದೆ. ದೂರಿನ ಆಧಾರದ ಮೇಲೆ, ಧೋಕಿ ಪೊಲೀಸರು ಆಶ್ರಯ ಧಾಮದ ಸ್ಥಾಪಕ ಹಾಗೂ ಸೂಪರಿಂಟೆಂಡೆಂಟ್, ಆಕೆಯ ಮೇಲೆ ಅತ್ಯಾಚಾರ ಎಸಗಿದ ಉದ್ಯೋಗಿ ಮತ್ತು ಗರ್ಭಪಾತ ಪ್ರಕ್ರಿಯೆಯನ್ನು ನಡೆಸಿದ ವೈದ್ಯರು ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Assault: ಹೋಮ್‌ಗಾರ್ಡ್ ನೇಮಕಾತಿ ವೇಳೆ ಮೂರ್ಛೆ ಹೋದ ಯುವತಿ; ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್‌ನಲ್ಲೇ ಅತ್ಯಾಚಾರ
ಪ್ರಕರಣವನ್ನು ಘಟನೆ ನಡೆದ ಔಸಾ ಪೊಲೀಸ್ ಠಾಣೆಗೆ ವರ್ಗಾಯಿಸಿದ ನಂತರ, ನಾಲ್ವರನ್ನು ಬಂಧಿಸಲಾಗಿದೆ ಎಂದು ಲಾತೂರ್ ಪೊಲೀಸ್ ವರಿಷ್ಠಾಧಿಕಾರಿ ಅಮೋಲ್ ತಿಳಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಒಡಿಶಾದಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದ್ದು, ಇಬ್ಬರು ವೃದ್ಧ ಸಹೋದರರು 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆಕೆ ಗರ್ಭಿಣಿಯಾಗಿದ ಬಳಿಕ ಬಾಲಕಿಯನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಳೆದ ಒಂದು ವರ್ಷದಿಂದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಭಾಗ್ಯಧರ್ ದಾಸ್ (60) ಮತ್ತು ಪಂಚನನ್ ದಾಸ್ (58) ಎಂಬ ಆರೋಪಿ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.