ಶಿವಮೊಗ್ಗ: ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪನವರ ((Madhu Bangarappa) ಹೆಸರು ದುರ್ಬಳಕೆ ಮಾಡಿಕೊಂಡು, ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಮೈಸೂರಿನ ರಘುನಾಥ್ ಎಂಬಾತನನ್ನು ಶಿವಮೊಗ್ಗದ ಜಯನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಕಳೆದ ಆರು ತಿಂಗಳಿಂದ ತಾನು ಮಧು ಬಂಗಾರಪ್ಪನವರ ಅವರ ಆಪ್ತ ಸಹಾಯಕ (ಪಿ.ಎ.) ಎಂದು ಹೇಳಿಕೊಂಡು ಸರ್ಕಾರಿ ನೌಕರರ ವರ್ಗಾವಣೆ ಹಾಗೂ ಸಾರ್ವಜನಿಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಣ ವಸೂಲಿ ಮಾಡುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ತಾನು ಎನ್ಎಸ್ಯುಐ ಮುಖಂಡ. ಸಚಿವರ ಪಿ.ಎ. ಕೂಡಾ ಆಗಿದ್ದೇನೆ. ಸರ್ಕಾರಿ ನೌಕರರು ಹಾಗೂ ವರ್ಗಾವಣೆ ಆದವರಿಗೆ ಹಣ ನೀಡಿದರೆ ವರ್ಗಾವಣೆ ರದ್ದು ಮಾಡಿಸುತ್ತೇನೆ ಎಂದೆಲ್ಲಾ ನಂಬಿಸಿ ಅವರಿಂದ ತನ್ನ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತನ ಬಗ್ಗೆ ಮೊದಲು ಸಚಿವರ ವಿಶೇಷ ಅಧಿಕಾರಿ ಶ್ರೀಪತಿ ಅವರಿಗೆ ಮಾಹಿತಿ ದೊರೆತಿತ್ತು. ಅವರು ವಿಚಾರಿಸುತ್ತಿರುವಾಗಲೇ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಭಾರತಿ ಅವರಿಗೆ ಆರೋಪಿ ಕರೆ ಮಾಡಿ ನಿಮಗೆ ವರ್ಗಾವಣೆಯಾಗಿದ್ದು ಸ್ಥಳ ತೋರಿಸಿಲ್ಲ. ನಾನು ಸಚಿವರ ಜೊತೆ ಮಾತನಾಡಿದ್ದು, ನಿಮ್ಮ ಕೆಲಸ ಮಾಡಿಕೊಡುವುದಾಗಿ ಹೇಳಿದ್ದಾನೆ.
ಅಧಿಕಾರಿಗೆ ಅನುಮಾನ ಬಂದು ಸಚಿವರ ಆಪ್ತರಿಗೆ ತಿಳಿಸಿದ್ದಾರೆ. ರಘುನಾಥ್ ಸಚಿವರ ಪಿ.ಎ. ಅಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಕಾಂಗ್ರೆಸ್ ಮುಖಂಡ ಗಿರೀಶ್ ಅವರ ಮೂಲಕ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಕುರಿತು ಮಾಹಿತಿ ನೀಡಿರುವ ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ರಘುನಾಥ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈತ ಮೈಸೂರಿನವ. ತಂದೆ ನಿವೃತ್ತ ತಹಶೀಲ್ದಾರ್. ಇದೇ ಲಿಂಕ್ ಇಟ್ಟುಕೊಂಡು ಬಹಳಷ್ಟು ಜನ ನನಗೆ ಮಂತ್ರಿಗಳು, ಶಾಸಕರುಗಳು ಗೊತ್ತಿದ್ದಾರೆಂದು ಹೇಳಿ, ವರ್ಗಾವಣೆ ಹಾಗೂ ಕೆಲಸ ಕೊಡಿಸುವುದಾಗಿ ಜನರಿಗೆ ಮೋಸ ಮಾಡಿದ್ದಾನೆ.
ಈ ಸುದ್ದಿಯನ್ನೂ ಓದಿ: Anil Ambani: 2,000 ಕೋಟಿ ರೂ. ಬ್ಯಾಂಕ್ ವಂಚನೆ ಆರೋಪ; ಅನಿಲ್ ಅಂಬಾನಿ ಕಂಪನಿ ಮೇಲೆ ಸಿಬಿಐ ದಾಳಿ
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರ ಪಿ.ಎ. ಎಂದು ಹೇಳಿಕೊಂಡು ಮೂರುನಾಲ್ಕು ಜನರಿಗೆ ಮೋಸ ಮಾಡಿದ್ದಾನೆ. ಮೊದಲು ವರ್ಗಾವಣೆ ಲಿಸ್ಟ್ ತೆಗೆದುಕೊಂಡು, ವರ್ಗಾವಣೆ ಆದವರಿಗೆ ಹಾಗೂ ಪೋಸ್ಟಿಂಗ್ ಆಗದೇ ಇದ್ದವರಿಗೆ ಫೋನ್ ಮಾಡಿ, ನಾನು ಸಚಿವರಿಗೆ ಹೇಳಿ ಲೆಟರ್ ಮಾಡಿಸಿದ್ದೇನೆ ಎಂದು ಹೇಳಿ, ತನ್ನ ಖಾತೆಗೆ ಹಣ ಹಾಕಿಸಿಕೊಂಡು ನಂತರ ಸಿಮ್ ಚೇಂಜ್ ಮಾಡಿಕೊಂಡು ಯಾರ ಕೈಗೂ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಇದೀಗ ಈತನನ್ನು ಬಂಧಿಸಿದ್ದೇವೆ ಎಂದು ಅವರು ಹೇಳಿದರು.