ಚಿಕ್ಕಬಳ್ಳಾಪುರ : ವ್ಯಕ್ತಿಯೊಬ್ಬರ ತಲೆಯ ಮೇಲೆ ಸೈಜುಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೃದಯ ಭಾಗದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಇಲ್ಲಿನ ಅಂಬೇಡ್ಕರ್ ನಗರ (ಚಾಮರಾಜಪೇಟೆ) ನಿವಾಸಿ ಶ್ರೀಕಾಂತ್ (೨೯) ಎಂಬುವರೇ ದಾರುಣವಾಗಿ ಕೊಲೆಯಾದ ದುರ್ದೈವಿ. ಐದು ವರ್ಷಗಳ ಹಿಂದೆ ವಿವಾಹಿತರಾದ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು ಮೃತ ಶ್ರೀಕಾಂತ್ ವೆಲ್ಡಿಂಗ್ ಕೆಲಸ ಮಾಡುವರು.
ನಗರದ ಹೃದಯ ಭಾಗದಲ್ಲಿನ ಬಿ.ಬಿ ರಸ್ತೆಯ ಎಸ್‌ಬಿಐ ಬ್ಯಾಂಕ್ ಬಳಿ ಕೊಲೆ ಆಗಿದ್ದಿರಬಹು ದೆಂದು ಪೊಲೀಸರು ಶಂಕಿಸಿದ್ದಾರೆ. ಬಿಬಿ ರಸ್ತೆಯ ರಾಜು ಕಾಂಪ್ಲೆಕ್ಸ್ನ ನೆಲಮಹಡಿಯಲ್ಲಿ ಮೃತ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಬಿಸಾಡಿದ ಸ್ಥಿಯಲ್ಲಿ ಕಂಡು ಬಂದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಪೊಲೀಸ್ ಉಪ ಅಧಿಕ್ಷಕ ಎಸ್ ಶಿವಕುಮಾರ್ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಶವದ ಬಳಿ ರಕ್ತಸಿಕ್ತವಾದ ಕಲ್ಲು ದೊರೆತಿದೆ. ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದೀರಬಹುದು ಎಂದು ಕುಶಾಲ್ ಚೌಕ್ಸೆ ಪತ್ರಿಕಾ ಪ್ರತಿನಿಧಿಗೆ ತಿಳಿಸಿದ್ದಾರೆ. ಯಾವ ಉದ್ದೇಶಕ್ಕೆ ಕೊಲೆಯಾಗಿದೆಯೋ ಯಾರು ಮಾಡಿರಬಹುದು ಎಂಬುದು ಇನ್ನು ತಿಳಿದು ಬಂದಿಲ್ಲ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.