ಸಾಂಬಾಲ್: ವ್ಯಕ್ತಿಯೊಬ್ಬನ ಮೇಲೆ ನೆರೆ ಮನೆಯ ದಂಪತಿಯು ಭೀಕರವಾಗಿ ಹಲ್ಲೆ ನಡೆಸಿ ಕೊಂದಿರುವ (Murder Case) ಘಟನೆ ಉತ್ತರ ಪ್ರದೇಶದ (Uttar Pradesh) ಸಂಭಾಲ್‌ನಲ್ಲಿ (Sambhal) ನಡೆದಿದೆ. ಅನೀಶ್ (45) ಕೊಲೆಯಾದ ವ್ಯಕ್ತಿ. ಅನೀಶ್ ನ ಹಲ್ಲು ಕಿತ್ತು ರಾಡ್ ನಿಂದ ಹೊಡೆದು ಇಕ್ಕಳದಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಈ ಕುರಿತು ಅನೀಶ್ ಸಹೋದರ ನೀಡಿದ ದೂರಿನಂತೆ ಸಂಭಾಲ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ನೆರೆ ಮನೆಯವರಾದ ರಯೀಸ್ ಅಹ್ಮದ್ ಮತ್ತುಆತನ ಪತ್ನಿ ಸಿತಾರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಯೀಸ್ ಅಹ್ಮದ್ ಮತ್ತು ಸಿತಾರಾ ದಂಪತಿ ಶನಿವಾರ ಸ್ಕ್ರೂಡ್ರೈವರ್ ಮತ್ತು ಇಕ್ಕಳದಂತಹ ಉಪಕರಣಗಳನ್ನು ಬಳಸಿ ಅನೀಶ್ ನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅನೀಶ್ ನನ್ನು ಮನೆಗೆ ಕರೆಸಿ ಕ್ರೂರವಾಗಿ ಥಳಿಸಿದ ದಂಪತಿ ಬಳಿಕ ಇಕ್ಕಳದಿಂದ ಅವನ ಹಲ್ಲುಗಳನ್ನು ಕಿತ್ತು ಕಬ್ಬಿಣದ ರಾಡ್ ನಿಂದ ಪದೇ ಪದೇ ಹೊಡೆದು ಸಾಯಿಸಿದ್ದಾರೆ. 7 ಲಕ್ಷ ರೂ. ಸಾಲಕ್ಕಾಗಿ ಆತನ ಕೊಲೆ ಮಾಡಲಾಗಿದೆ ಎನ್ನಲಾಗಿದೆಯಾದರೂ ವಿವಾಹೇತರ ಸಂಬಂಧವೇ ಈ ಕೊಲೆಗೆ ಮುಖ್ಯ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಅನೀಶ್ ತಂದೆ ಮುಸ್ತಾಕಿಮ್ ಅವರ ಪ್ರಕಾರ, ಅನೀಶ್ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ವರ್ಷಗಳ ಹಿಂದೆ ರಯೀಸ್ ದಂಪತಿಗೆ ಸಾಲವಾಗಿ ನೀಡಿದ್ದ 7 ಲಕ್ಷ ರೂ.ಗಳನ್ನು ಕೇಳಲು ಅನೀಶ್ ಅವರ ಮನೆಗೆ ಹೋಗಿದ್ದ. ಆದರೆ ಅವರು ಕ್ರೂರವಾಗಿ ಆತನ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: India vs Pak: ಬಿದ್ದರೂ ಬುದ್ಧಿ ಕಲಿಯದ ಪಾಕ್; ಭಾರತೀಯ ರಾಜತಾಂತ್ರಿಕರಿಗೆ ನೀರು, ಗ್ಯಾಸ್, ಪೇಪರ್ ನಿರ್ಬಂಧ
ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅನೀಶ್ ಸಹೋದರನಿಗೆ ಹಲ್ಲೆಯ ಬಗ್ಗೆ ಮಾಹಿತಿ ಸಿಕ್ಕಿದೆ. ತಾನು ರಯೀಸ್ ದಂಪತಿಯ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಅನೀಶ್ ಮನೆಯ ಡ್ರಾಯಿಂಗ್ ರೂಮಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನನ್ನು ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತಾದರೂ ಆತ ಅಲ್ಲಿ ಸಾವನ್ನಪ್ಪಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಶ್ರೀವಾಸ್ತವ, ಅನೀಶ್ ಸಾವಿನ ಬಗ್ಗೆ ಭಾನುವಾರ ತಡರಾತ್ರಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ನಾವು ಕೊಲೆ ಪ್ರಕರಣ ದಾಖಲಿಸಿದ್ದೇವೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಅನೀಶ್ ಅವರನ್ನು ನೆರೆ ಮನೆಯವರಾದ ರಯೀಸ್ ಅಹ್ಮದ್ ಮತ್ತು ಅವರ ಪತ್ನಿ ಸಿತಾರಾ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಿತಾರಾ ಜೊತೆ ಅನೀಶ್ ಸಂಬಂಧ ಹೊಂದಿರುವುದು ಈ ಕೊಲೆಗೆ ಕಾರಣವೆನ್ನಲಾಗಿದೆ. ರಯೀಸ್ ಮತ್ತು ಸಿತಾರಾ ಕೊಲೆಗೆ ಸಂಚು ರೂಪಿಸಿ ಅನೀಶ್ ಮನೆಗೆ ಆಹ್ವಾನಿಸಿ ಕೊಂದಿದ್ದಾರೆ ಎಂದು ಹೇಳಿದ್ದಾರೆ.