ಬೆಂಗಳೂರು: ಬಳಿ 20 ವರ್ಷದ ಯುವಕನೊಬ್ಬನನ್ನು ಆತನ ಇಬ್ಬರು ಸ್ನೇಹಿತರು ಚಲಿಸುವ ರೈಲಿನ (train) ಮುಂದೆ ತಳ್ಳಿ ಕೊಲೆ (Murder Case) ಮಾಡಿರುವ ಘಟನೆ ಭಾನುವಾರ ಬೆಳಿಗ್ಗೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನೆಕ್ಕುಂದಿಯಲ್ಲಿ (Bengaluru crime news) ನಡೆದಿದೆ. ಮೃತನನ್ನು ವಿಜಯಪುರದ ಇಸ್ಮಾಯಿಲ್ ಪಟವೇಗರ್ ಎಂದು ಗುರುತಿಸಲಾಗಿದೆ. ಚಿತ್ರದುರ್ಗದ ಪುನೀತ್ ಮತ್ತು ಪ್ರತಾಪ್ ಆರೋಪಿಗಳು. ಪೊಲೀಸರು ಪುನೀತ್ ಎಂಬಾತನನ್ನು ಬಂಧಿಸಿದ್ದು, ಪ್ರತಾಪ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮೂವರೂ ಬೈಯಪ್ಪನಹಳ್ಳಿಯಲ್ಲಿ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸಿಸುತ್ತಿದ್ದರು ಮತ್ತು ಖಾಸಗಿ ಕಂಪನಿಯೊಂದರ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪುನೀತ್ ಇತ್ತೀಚೆಗೆ ಇಸ್ಮಾಯಿಲ್‌ನನ್ನು ತನ್ನ ಗೆಳತಿಗೆ ಪರಿಚಯಿಸಿದ್ದ. ಇಸ್ಮಾಯಿಲ್ ಆಕೆಯ ಫೋನ್ ಸಂಖ್ಯೆಯನ್ನು ತೆಗೆದುಕೊಂಡು ಮಾತನಾಡಲು ಪ್ರಾರಂಭಿಸಿದ್ದ. ಇದು ಪುನೀತ್ ನನ್ನು ಕೆರಳಿಸಿತ್ತು. ತಡರಾತ್ರಿ ಮದ್ಯಪಾನದ ಪಾರ್ಟಿಯ ನಂತರ, ಬೆಳಗಿನ ಜಾವ 3.30 ರ ಸುಮಾರಿಗೆ ದೊಡ್ಡನೆಕ್ಕುಂದಿಯ ರೈಲ್ವೆ ಹಳಿಗಳ ಬಳಿ ಪುನೀತ್ ಮತ್ತು ಪ್ರತಾಪ್ ನಡುವೆ ಜಗಳವಾಗಿತ್ತು.
ಪುನೀತ್ ಮತ್ತು ಪ್ರತಾಪ್ ಸೇರಿ ಇಸ್ಮಾಯಿಲ್‌ನನ್ನು ಸಮೀಪಿಸುತ್ತಿರುವ ರೈಲಿನ ಮುಂದೆ ನೂಕಿ ಬೀಳಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಇಸ್ಮಾಯಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ, ಇಸ್ಮಾಯಿಲ್ ಶವವನ್ನು ಅಪಘಾತದಂತೆ ಬಿಂಬಿಸಲು ಹಳಿಗಳ ಮೇಲೆ ಇಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ಶವವನ್ನು ನೋಡಿದ ರೈಲ್ವೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಹಳಿಗಳಿಂದ 10 ಅಡಿ ದೂರದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದರಿಂದ ಇದು ಅಪಘಾತವಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸತ್ತ ವ್ಯಕ್ತಿಯ ಕೊನೆಯ ಫೋನ್ ಕರೆ ಆರೋಪಿಗಳಲ್ಲಿ ಒಬ್ಬನಿಗೆ ಹೋಗಿತ್ತು.
ವಶಕ್ಕೆ ಪಡೆದು ಪುನೀತ್‌ನನ್ನು ವಿಚಾರಿಸಿದಾಗ, ತನ್ನ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಕಾರಣಕ್ಕೆ ಇಸ್ಮಾಯಿಲ್‌ನನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಸಾಮಾಜಿಕ ಮಾಧ್ಯಮಕ್ಕಾಗಿ ರೀಲ್ ಮಾಡುವಾಗ ಇಸ್ಮಾಯಿಲ್ ರೈಲಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಾನು ಮತ್ತು ಪ್ರತಾಪ್ ಪೊಲೀಸರಿಗೆ ಹೇಳಲು ಯೋಜಿಸಿದ್ದೆವು ಎಂದು ಪುನೀತ್ ಒಪ್ಪಿಕೊಂಡಿದ್ದಾನೆ. ಇಸ್ಮಾಯಿಲ್, ಪುನೀತ್ ಮತ್ತು ಪ್ರತಾಪ್‌ರನ್ನು ಕೊಲ್ಲಲು ಪ್ರಯತ್ನಿಸಿದ್ದ ಎಂಬ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.