ಪಾಟ್ನಾ: ಯುವಕನೊಬ್ಬನ ಅಜ್ಜನ ನಿಧನಕ್ಕೆ ಕಳುಹಿಸಿದ ಎಮೋಜಿ (Emoji) ವ್ಯಕ್ತಿಯೊಬ್ಬನ ಕೊಲೆಗೆ (Murder case) ಕಾರಣವಾದ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಯುವಕನೊಬ್ಬ ತನ್ನ ಅಜ್ಜನ ನಿಧನದ ಬಗ್ಗೆ ಫೇಸ್ ಬುಕ್ (Facebook)ನಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಆತನ ಸ್ನೇಹಿತ ನಗುವ ಎಮೋಜಿಯನ್ನು ಕಳುಹಿಸಿದ್ದಾನೆ. ಇದು ಅವರ ಮಧ್ಯದಲ್ಲಿ ಜಗಳಕ್ಕೆ ಕಾರಣವಾಯಿತು. ಸಿಟ್ಟುಗೊಂಡ ಯುವಕ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದಿದ್ದಾನೆ. ಒಟ್ಟಿನಲ್ಲಿ ಸ್ನೇಹಿತರ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
20 ವರ್ಷದ ಕಾರ್ಖಾನೆ ಕೆಲಸಗಾರ ಪ್ರಿನ್ಸ್ ಕುಮಾರ್ ಎಂಬಾತ ತನ್ನ ಅಜ್ಜನ ಸಾವಿನ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದ. ಇದಕ್ಕೆ ಆತನ ಸ್ನೇಹಿತ ಬಿಪಿನ್ ನಗುವ ಎಮೋಜಿಯನ್ನು ಕಳುಹಿಸಿ ಅಣಕಿಸಿದ. ಇದು ಅವರಿಬ್ಬರಲ್ಲಿ ಜಗಳಕ್ಕೆ ಕಾರಣವಾಗಿದ್ದು, ಇದು ಕೊಲೆಯಲ್ಲಿ ಅಂತ್ಯವಾಗಿದೆ.
ಬಿಹಾರದ ಕೈಮೂರ್ ಜಿಲ್ಲೆಯ ಪುರುಷೋತ್ತಮಪುರ ಗ್ರಾಮದವನಾದ ಪ್ರಿನ್ಸ್ ಕುಮಾರ್ ತನ್ನ ಸೋದರಸಂಬಂಧಿಗಳೊಂದಿಗೆ ರಾಜ್‌ಕೋಟ್‌ನಲ್ಲಿ ಕೆಲಸ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆ ಅವನು ತನ್ನ ಅಜ್ಜ ರೂಪನಾರಾಯಣ್ ಭಿಂಡ್ ಅನ್ನು ಕಳೆದುಕೊಂಡಿದ್ದ. ಇದನ್ನು ಫೇಸ್‌ಬುಕ್‌ನಲ್ಲಿ ಆತ ಹಂಚಿಕೊಂಡಿದ್ದಾನೆ. ಇದಕ್ಕೆ ಆತನ ಸ್ನೇಹಿತ ಬಿಪಿನ್ ಕುಮಾರ್ ರಾಜಿಂದರ್ ಗೊಂಡ್ ನಗುವ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾನೆ. ಇದು ಅವರ ಮಧ್ಯೆ ಜಗಳಕ್ಕೆ ಕಾರಣವಾಗಿತ್ತು.
ಪೊಲೀಸ್ ವರದಿಗಳ ಪ್ರಕಾರ ಇಬ್ಬರೂ ಫೋನ್ ಮೂಲಕ ಜಗಳವಾಡಿದ್ದರು. ಅನಂತರ ಈ ವಿಷಯವು ಉಲ್ಬಣಗೊಂಡಿದ್ದು, ಸೆಪ್ಟೆಂಬರ್ 12ರಂದು ಮಧ್ಯರಾತ್ರಿಯ ಸುಮಾರಿಗೆ ಪ್ರಿನ್ಸ್ ತನ್ನ ಕಾರ್ಖಾನೆಯ ಬಳಿ ಆಟೋರಿಕ್ಷಾದಲ್ಲಿ ಕಾಯುತ್ತಿದ್ದಾಗ ಬಿಪಿನ್ ಆತನಿಗೆ ಎದುರಾಗಿದ್ದಾನೆ. ಅವರ ಜತೆ ಬ್ರಜೇಶ್ ಗೊಂಡ್ ಕೂಡ ಇದ್ದು ಇವರ ಜಗಳ ಹಿಂಸೆಗೆ ತಿರುಗಿತು. ಈ ಜಗಳದಲ್ಲಿ ಬಿಪಿನ್ ಪ್ರಿನ್ಸ್‌ಗೆ ಇರಿದಿದ್ದಾನೆ ಎನ್ನಲಾಗಿದೆ.
ಕೂಡಲೇ ಪ್ರಿನ್ಸ್‌ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತನ ಬೆನ್ನಿನ ಮೇಲೆ ಸುಮಾರು ಎರಡು ಇಂಚು ಆಳದ ಗಾಯವಾಗಿದ್ದು, ಜೀವಕ್ಕೆ ಅಪಾಯಕಾರಿಯಾಗಿ ಕಾಣಲಿಲ್ಲ. ಪೊಲೀಸರಿಗೆ ಆತ ಸಂಪೂರ್ಣ ಮಾಹಿತಿ ನೀಡಿದ್ದಾನೆ. ಬಳಿಕ ಆತನ ಆರೋಗ್ಯ ಹದಗೆಟ್ಟಿತು. ಅನಂತರ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಸೆಪ್ಟೆಂಬರ್ 22ರಂದು, ಪ್ರಿನ್ಸ್ ಬೆಳಗಿನ ಜಾವ 2.30ರ ಸುಮಾರಿಗೆ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: Crime News: ಪೋಷಕರಿಂದಲೇ ಮಗಳ ಅಪಹರಣ; ಅತ್ತೆ- ಮಾವಂದಿರ ಮೇಲೆ ಡೆಡ್ಲಿ ಅಟ್ಯಾಕ್!
ಆತನ ಸಾವಿನ ಅನಂತರ ಪೊಲೀಸರು ಬಿಪಿನ್‌ನನ್ನು ಬಂಧಿಸಲಾಗಿದೆ. ಆದರೆ ಬ್ರಜೇಶ್ ಪರಾರಿಯಾಗಿದ್ದಾನೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಪ್ರಿನ್ಸ್ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.