ನವದೆಹಲಿ: ಬಿಗ್ ಬಾಸ್ ವಿಜೇತ, ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಯಾದವ್(Elvish Yadav) ಅವರ ನಿವಾಸದ ಹೊರಗೆ ಭಾನುವಾರ ಮುಂಜಾನೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಪೊಲೀಸರ ಪ್ರಕಾರ, ಇಂದು ಬೆಳಿಗ್ಗೆ 5.30 ರಿಂದ 6 ಗಂಟೆಯ ನಡುವೆ ಈ ಘಟನೆ ನಡೆದಿದ್ದು, ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಗುರುಗ್ರಾಮದ ಸೆಕ್ಟರ್ 57 ರಲ್ಲಿರುವ ಯಾದವ್ ಅವರ ಮನೆಯ ಮೇಲೆ ಎರಡು ಡಜನ್‌ಗೂ ಹೆಚ್ಚು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡುಗಳು ಮನೆಯ ನೆಲ ಮತ್ತು ಮೊದಲ ಮಹಡಿಗೆ ತಗುಲಿವೆ.
ಎರಡನೇ ಮತ್ತು ಮೂರನೇ ಮಹಡಿಯಲ್ಲಿ ವಾಸಿಸುವ ಯಾದವ್ ದಾಳಿ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ದಾಳಿ ನಡೆದಾಗ ಕೆಲವು ಕುಟುಂಬ ಸದಸ್ಯರು ಒಳಗೆ ಇದ್ದರು, ಆದರೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ಗುರುಗ್ರಾಮ ಪೊಲೀಸ್ ಪಿಆರ್‌ಒ ಸಂದೀಪ್ ಕುಮಾರ್ ಮಾಹಿತಿ ನೀಡಿದ್ದು, ಗುರುಗ್ರಾಮದ ಸೆಕ್ಟರ್ 57 ರಲ್ಲಿರುವ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ಅವರ ನಿವಾಸದ ಹೊರಗೆ ಮೂವರು ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಘಟನೆ ಬೆಳಿಗ್ಗೆ 5.30 ರ ಸುಮಾರಿಗೆ ನಡೆದಿದೆ. ಒಂದು ಡಜನ್‌ಗೂ ಹೆಚ್ಚು ಸುತ್ತು ಗುಂಡು ಹಾರಿಸಲಾಗಿದೆ. ಗುಂಡು ಹಾರಿಸುವ ಸಮಯದಲ್ಲಿ ಎಲ್ವಿಶ್ ಯಾದವ್ ಅವರ ನಿವಾಸದಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿ, ಪ್ರದೇಶದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಕುಟುಂಬದಿಂದ ಔಪಚಾರಿಕ ದೂರು ದಾಖಲಾದ ನಂತರ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದರು. ಯಾದವ್ ಅವರ ತಂದೆಯ ಪ್ರಕಾರ, ಘಟನೆಗೆ ಮೊದಲು ಅವರಿಗೆ ಯಾವುದೇ ಬೆದರಿಕೆಗಳು ಬಂದಿರಲಿಲ್ಲ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಬಾಸ್ ಬಳಿಯಿಂದ 1.51 ಕೋಟಿ ರೂ. ಕದ್ದು ದೇವಸ್ಥಾನಕ್ಕೆ ದೇಣಿಗೆ ನೀಡಿದ ಕಳ್ಳ; ಸಿಕ್ಕಿಬಿದ್ದಿದ್ದು ಹೇಗೆ?
"ನಾವು ಮಲಗಿದ್ದಾಗ ದಾಳಿಕೋರರು ಮೋಟಾರ್ ಸೈಕಲ್‌ನಲ್ಲಿ ಬಂದು ಗುಂಡು ಹಾರಿಸಲು ಪ್ರಾರಂಭಿಸಿದರು. ಮೂವರು ಮುಸುಕುಧಾರಿಗಳು ಇದ್ದರು. ಒಬ್ಬರು ಬೈಕ್‌ನಲ್ಲಿ ಕುಳಿತಿದ್ದರು, ಉಳಿದ ಇಬ್ಬರು ಕೆಳಗೆ ಇಳಿದು ಮನೆಯ ಮೇಲೆ ಗುಂಡು ಹಾರಿಸಿದರು. ಅವರು ಸುಮಾರು 25 ರಿಂದ 30 ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಘಟನೆಗೆ ಮೊದಲು ಎಲ್ವಿಶ್‌ಗೆ ಯಾವುದೇ ಬೆದರಿಕೆಗಳು ಬಂದಿರಲಿಲ್ಲ. ಅವರು ಪ್ರಸ್ತುತ ತಮ್ಮ ಕೆಲಸದ ನಿಮಿತ್ತ ನಗರದಿಂದ ಹೊರಗಿದ್ದಾರೆ" ಎಂದು ಯೂಟ್ಯೂಬರ್ ತಂದೆ ಹೇಳಿದರು.
27 ವರ್ಷದ ಎಲ್ವಿಶ್ ಯಾದವ್, 2023 ರಲ್ಲಿ ಬಿಗ್ ಬಾಸ್ OTT 2 ಗೆಲ್ಲುವ ಮೊದಲು ಯೂಟ್ಯೂಬರ್ ಆಗಿ ಖ್ಯಾತಿ ಗಳಿಸಿದರು. ಅವರು ಸಾಮಾಜಿಕ ಜಾಲತಾಣದಲ್ಲಿ ಅನೇಕ ಫಾಲೋವರ್ಸ್ ಹೊಂದಿದ್ದಾರೆ. ಆದಾಗ್ಯೂ, ಎಲ್ವಿಶ್ ಯಾದವ್ ವಿವಾದಗಳಿಗೆ ಹೊಸದೇನಲ್ಲ. ಕಳೆದ ವರ್ಷ, ರೇವ್ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಬಳಸಿದ ಆರೋಪದ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಅವರನ್ನು ಬಂಧಿಸಿದ್ದರು.