ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬಾಸ್‌ ಬಳಿಯಿಂದ 1.51 ಕೋಟಿ ರೂ. ಕದ್ದು ದೇವಸ್ಥಾನಕ್ಕೆ ದೇಣಿಗೆ ನೀಡಿದ ಕಳ್ಳ; ಸಿಕ್ಕಿಬಿದ್ದಿದ್ದು ಹೇಗೆ?

ಬೆಂಗಳೂರಿನಲ್ಲಿ 46 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ತನ್ನ ನಂಬಿಕಸ್ಥ ಕಾರು ಚಾಲಕನಿಗೆ 1.51 ಕೋಟಿ ರೂಪಾಯಿಗಳಿದ್ದ ಬ್ಯಾಗ್‍ ಅನ್ನು ನೀಡಿ ಕಾರಿನಲ್ಲಿ ಇಡಲು ಹೇಳಿದ್ದಾನೆ. ಆದರೆ ಡ್ರೈವರ್‌ ಅದನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಕೊನೆಗೆ ಆತ ಅದರಲ್ಲಿನ ಸ್ವಲ್ಪ ಹಣವನ್ನು ದೇವಸ್ಥಾನಕ್ಕೆ ದೇಣಿಗೆ ನೀಡಿರುವುದಾಗಿ ಪೊಲೀಸ್ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ.

ಚಾರ್ಟರ್ಡ್ ಅಕೌಂಟೆಂಟ್‌ಗೆ ಟೋಪಿ ಹಾಕಿದ ಕಾರಿನ ಡ್ರೈವರ್‌

Profile pavithra May 15, 2025 10:00 PM

ಬೆಂಗಳೂರು: ಚಾರ್ಟಡ್‌ ಅಕೌಂಟೆಂಟ್ ಒಬ್ಬರು ತನ್ನ ಕಾರಿನ ಡ್ರೈವರ್‌ ಕೈಗೆ ಹಣ ಕೊಟ್ಟು ಮೋಸ ಹೋದ ಸುದ್ದಿಯೊಂದು ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ವರದಿ ಪ್ರಕಾರ, ಬೆಂಗಳೂರಿನ ಕೋದಂಡರಾಮಪುರದ ನಿವಾಸಿ 46 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಬಳಿ ಕಳೆದ 10 ವರ್ಷಗಳಿಂದ ರಾಜೇಶ್ ಬಿಎನ್ ಎಂಬಾತ ಕಾರ್‌ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈತ ಬಹಳ ನಂಬಿಕಾಸ್ಥನಾಗಿದ್ದರಿಂದ 1.51 ಕೋಟಿ ರೂಪಾಯಿಗಳಿದ್ದ ಬ್ಯಾಗ್‍ ಅನ್ನು ನೀಡಿ ಅದನ್ನು ಬ್ಯಾಂಕಿಗೆ ಜಮಾ ಮಾಡಬೇಕಾಗಿರುವುದರಿಂದ ಕಾರಿನಲ್ಲಿ ಇಡಲು ಹೇಳಿದ್ದಾರೆ. ಆದರೆ ಆತ ಹಣದ ಬ್ಯಾಗ್‌ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಅದೂ ಅಲ್ಲದೇ ಅದರಲ್ಲಿದ್ದ ಸ್ವಲ್ಪ ಹಣವನ್ನು ದೇವರ ಹುಂಡಿಗೆ ಕೂಡ ಹಾಕಿದ್ದಾನೆ.

ಡ್ರೈವರ್‌ ಬಳಿ ಹಣಕೊಟ್ಟು ಸಿಎ ಬ್ಯಾಂಕಿಗೆ ಹೋಗಲು ಕಾರಿನ ಬಳಿ ಹೋದಾಗ ಡ್ರೈವರ್‌ ಹಾಗೂ ಕಾರೂ ಎರಡೂ ಇರಲಿಲ್ಲ. ಸಿಎ ಗಾಬರಿಯಾಗಿ ಆಫೀಸ್‌ಗೆ ಹೋದಾಗ ಅಲ್ಲಿ ಕಾರು ನಿಂತಿರುವುದನ್ನು ನೋಡಿದ್ದಾನೆ. ತಕ್ಷಣ ತನ್ನ ಡ್ರೈವರ್‌ಗೆ ಕರೆ ಮಾಡಿದರೆ ಆತ ಅಂಗಡಿಯಲ್ಲಿ ಔಷಧಿ ಖರೀದಿಸುತ್ತಿರುವುದಾಗಿ ಮತ್ತು 10 ನಿಮಿಷಗಳಲ್ಲಿ ಹಿಂತಿರುಗುವುದಾಗಿ ಹೇಳಿದ್ದಾನೆ. ಆದರೆ ಸ್ವಲ್ಪ ಸಮಯದ ನಂತರ ಆತ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ.

ಇದರಿಂದ ಅನುಮಾನಗೊಂಡ ಚಾರ್ಟರ್ಡ್ ಅಕೌಂಟೆಂಟ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ನಂತರ, ಪೊಲೀಸರು ರಾಜೇಶ್‌ನನ್ನು ಪತ್ತೆಹಚ್ಚಿ ನೋಟಿಸ್ ಜಾರಿ ಮಾಡಿದ್ದಾರೆ. ಆತನನ್ನು ವಿಚಾರಣೆಗೆ ಹಾಜರುಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಪೊಲೀಸ್ ತನಿಖೆಯಲ್ಲಿ ರಾಜೇಶ್ ಆ ಹಣವನ್ನು ಯಾವುದಕ್ಕೆಲ್ಲಾ ಖರ್ಚು ಮಾಡಿದ್ದಾನೆ ಎಂಬುದನ್ನು ಬಾಯ್ಬಿಟ್ಟಿದ್ದಾನೆ. ಮನೆಯವರಿಗೆ ಸುಮಾರು 1 ಲಕ್ಷ ರೂ. ನೀಡಿದ್ದಾನೆ. ಹಾಗೇ ದೇವಸ್ಥಾನದ ಕಾಣಿಕೆ ಹುಂಡಿಗೆ ಸಾವಿರಾರು ರೂಪಾಯಿಗಳನ್ನು ದೇಣಿಗೆ ನೀಡಿರುವುದಾಗಿ ತಿಳಿಸಿದ್ದಾನೆ. ಹೀಗಾಗಿ ದೇಣಿಗೆ ನೀಡಿದ ಹಣವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚು ವರದಿಯಾಗಿದ್ದು, ಈ ಹಿಂದೆ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಚಿನ್ನಾಭರಣ ಖರೀದಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು.

ಮಾಜಿ ಸಂಸದ ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ ಆರೋಪದಲ್ಲಿ ಐಶ್ವರ್ಯ ಗೌಡ, ಪತಿ‌ ಹರೀಶ್ ಕೆ.ಎನ್. ಹಾಗೂ ಸಿನಿಮಾ ನಟ ಧರ್ಮೇಂದ್ರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಆರ್‌ಆರ್ ನಗರ ನಿವಾಸಿ ಆಗಿರುವ ಐಶ್ವರ್ಯ ಗೌಡ ವಿರುದ್ಧ 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಳು ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್​ ಮಾಲೀಕರಾದ ವನಿತಾ ಐತಾಳ್‌ ದೂರು ನೀಡಿದ್ದರು.

ಈ ಸುದ್ದಿಯನ್ನೂ ಓದಿ:Viral Video: ಸ್ಕೈಡೈವಿಂಗ್ ಮಾಡಿದ ಸಿಂಹ; ವಿಡಿಯೊ ನೋಡಿ ಶಾಕ್‌ ಆದ ನೆಟ್ಟಿಗರು ಹೇಳಿದ್ದೇನು?

ಅದಕ್ಕೂ ಮುನ್ನ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ಹೇಳಿಕೊಂಡು ಮಹಿಳೆಯೊಬ್ಬರು 2.42 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ ಪ್ರಕರಣದ ಬೆನ್ನಲ್ಲೇ ಈ ಕೇಸ್‌ ರಾಜಧಾನಿಯಲ್ಲಿ ಬೆಳಕಿಗೆ ಬಂದಿತ್ತು.