ಅಮರಾವತಿ, ಅ. 22: ಆಂಧ್ರ ಪ್ರದೇಶದ ಹಿರಿಯ ದಲಿತ ನಾಯಕ, ತೆಲುಗು ದೇಶಂ ಪಾರ್ಟಿ (Telugu Desam Party) ಮುಖಂಡ ತಾಟಿಕ ನಾರಾಯಣ ರಾವ್ (Tatik Narayana Rao) ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಸಿಕ್ಕಿ ಬಿದ್ದಿದ್ದು ಪೊಲೀಸರು ಬಂಧಿಸಿದ್ದಾರೆ. 13 ವರ್ಷದ ಶಾಲಾ ಬಾಲಕಿಯ ಅಜ್ಜನೆಂದು ಪರಿಚಯಿಸಿಕೊಂಡು ಆಕೆಯನ್ನು ಶಾಲಾ ಆವರಣದಿಂದ ಹೊರಗೆ ಕರೆದುಕೊಂಡು ಬಂದು ನಾರಾಯಣ ರಾವ್ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಕಿನಾಡ ಡಿಎಸ್‌ಪಿ ಶ್ರೀಹರಿ ರಾಜು ಈ ಬಗ್ಗೆ ಮಾಹಿತಿ ನೀಡಿ, ʼʼರಾವ್ ಬಾಲಕಿಯನ್ನು ಟುನಿಯ ಹೊರವಲಯದಲ್ಲಿರುವ ಮಾವಿನ ತೋಟಕ್ಕೆ ಕರೆದೊಯ್ದು, ಅಲ್ಲಿ ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದಾನೆʼʼ ಎಂದಿದ್ದಾರೆ.
ತೋಟದಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಈ ಕೃತ್ಯ ಸೆರೆಯಾಗಿದೆ. ಕ್ಯಾಮರಾದ ವಿಚಾರ ತಿಳಿಯುತ್ತಿದ್ದಂತೆ ನಾರಾಯಣ ರಾವ್ ಬಾಲಕಿಯನ್ನು ಅಲ್ಲೇ ಬಿಟ್ಟು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಸಂಬಂಧಿಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪರಾರಿಯಾಗಿದ್ದ ನಾರಾಯಣ ರಾವ್‌ನನ್ನು ಬಂಧಿಸಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಕಠಿಣ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶ್ರೀಹರಿ ರಾಜು ತಿಳಿಸಿದ್ದಾರೆ. "ಆರೋಪಿಯು ಅಪ್ರಾಪ್ತೆಯನ್ನು ಶಾಲಾ ಆವರಣದಿಂದ ಕರೆದುಕೊಂಡು ಹೋಗಿರುವುದು ಅಪಹರಣ ಪ್ರಕರಣದ ಅಡಿಯಲ್ಲಿ ಬರುತ್ತದೆ. ಇದರೊಂದಿಗೆ ಅತ್ಯಾಚಾರದಂತಹ ಸೆಕ್ಷನ್‌ಗಳನ್ನು ಸೇರಿಸಲಾಗಿದೆ" ಎಂದು ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಸಹೋದರಿಯನ್ನು ವರಿಸಲು ನಿರಾಕರಿಸಿದ ಮೈದುನನ ಖಾಸಗಿ ಅಂಗ ಕತ್ತರಿಸಿದ ಮಹಿಳೆ; ಅತ್ತಿಗೆಯ ಸೇಡಿನ ಕಿಚ್ಚಿಗೆ ಯುವಕನ ನರಳಾಟ
ಶಾಲೆ ಮುಂದೆ ಪ್ರತಿಭಟನೆ
ತನಿಖೆಯನ್ನು ಚುರುಕುಗೊಳಿಸಲಾಗುತ್ತಿದ್ದು, ಆರೋಪಿಯನ್ನು ಆದಷ್ಟು ಬೇಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇತ್ತ ಬಾಲಕಿ ಕಲಿಯುತ್ತಿರುವ ಶಾಲೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅನುಮತಿಯಿಲ್ಲದೆ ವಿದ್ಯಾರ್ಥಿನಿಯನ್ನು ಹಾಸ್ಟೆಲ್‌ನಿಂದ ಕಳುಹಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರಕರಣವನ್ನು ರಾಜಕೀಯಗೊಳಿಸುವವರಿಗೆ ಎಚ್ಚರಿಕೆ ನೀಡಿದ ಶ್ರೀಹರಿ ರಾಜು, ಯಾವುದೇ ರಾಜಕೀಯ ಪಕ್ಷವು ಆರೋಪಿಯೊಂದಿಗೆ ಸಂಬಂಧವನ್ನು ದೃಢಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಜತೆಗೆ ಅಪ್ರಾಪ್ತೆಯ ವಿಡಿಯೊ ಮತ್ತು ಚಿತ್ರಗಳನ್ನು ಹಂಚಿಕೊಳ್ಳುವುದು ಪೋಕ್ಸೋ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದರು. ಸಾರ್ವಜನಿಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸಿದರು.
ವೈಎಸ್ಆರ್ ಕಾಂಗ್ರೆಸ್ ಪಕ್ಷದ (YSRCP) ವಿದ್ಯಾರ್ಥಿ ಘಟಕವು ಸಾಮಾಜಿಕ ಮಾಧ್ಯಮದಲ್ಲಿ ಘಟನೆಯನ್ನು ಖಂಡಿಸಿದೆ. ರಾವ್‌ನನ್ನು ನೀಚ ವೃದ್ಧ ಎಂದು ಕರೆದಿದೆ ಮತ್ತು ಆಂಧ್ರ ಪ್ರದೇಶದಲ್ಲಿ ಟಿಡಿಪಿ ಆಡಳಿತದಲ್ಲಿ ಮಹಿಳೆಯರು ಸುರಕಿತರಾಗಿಲ್ಲ ಎಂದು ದೂರಿದೆ. ಸಂತ್ರಸ್ತೆಗೆ ತ್ವರಿತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದೆ.
ʼʼ13 ವರ್ಷದ ಸಂತ್ರಸ್ತೆ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. 60 ವರ್ಷದ ಆರೋಪಿ ನಾರಾಯಣ ರಾವ್ ಆಮಿಷವೊಡ್ಡಿ ಆಕೆಯನ್ನು ಶಾಲಾ ಆವರಣದಿಂದ ಕರೆದೊಯ್ದಿದ್ದಾನೆʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಾವ್ ಮೋಸದ ಮಾತುಗಳಿಂದ ಹುಡುಗಿಯ ವಿಶ್ವಾಸವನ್ನು ಗಳಿಸಿ ಆಕೆಯನ್ನು ತನ್ನ ಅಜ್ಜನೆಂದು ನಂಬಿಸಿದ್ದನು.