ಶಿರಸಿ: ಹುತ್ತಗಾರ ಗ್ರಾಮ ಪಂಚಾಯತದ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನು ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಶಿರಸಿಯ ನೆಹರು ನಗರದ ದೀಪಕ್, ಕೆ ಎಚ್ ಬಿ ಕಾಲೋನಿಯ ಪರೀಕ್ಷಿತ್ ಹಾಗೂ ನೆಹರು ನಗರದ ಶಿವಮೂರ್ತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಮಾದಕ ವಸ್ತು ಸೇವಿಸಿರುವ ಸಂಶಯದ ಮೇಲೆ ಪೊಲೀಸರು ವಶಕ್ಕೆ ಪಡೆದು ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ ಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವಿಸಿರುವುದು ಧೃಡ ಪಟ್ಟಿದೆ. ಈ ಹಿನ್ನೆಲೆಯಲ್ಲಿ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ NDPS ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಕೃಷ್ಣಮೂರ್ತಿ, ಜಗದೀಶ್.ಎಂ, ಶಿರಸಿ ಡಿಎಸ್ಪಿ ಗೀತಾ ಪಾಟೀಲ್, ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಠಾಣೆ ಪಿಎಸ್ಐ ಸಂತೋಷ್ ಕುಮಾರ್ ಎಂ. ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪಿ ಸಿ ಅರುಣ್ ಕುಮಾರ್, ದವಲ್ ಸಾಬ್, ಮಾರುತಿ ಗೌಡ, ಗದಿಗೆಪ್ಪಾ ಚಕ್ರಸಾಲಿ ಭಾಗವಹಿಸಿದ್ದರು.
ಜುಲೈನಲ್ಲಿ ಪಿಎಸ್‌ಐ ಸಂತೋಷ್ ಕುಮಾರ್ ನೇತೃತ್ವದಲ್ಲಿ, ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿತ್ತು. ಗಿಡಮಾವಿನಕಟ್ಟೆ ಹತ್ತಿರ ಬರೂರ್ ಚೆಕ್ ಪೋಸ್ಟ್ ಬಳಿ ಪೊಲೀಸರು ಬಂಧಿಸಿ ವಶಕ್ಕೆ ವಶಕ್ಕೆ ಪಡೆದುಕೊಂಡಿದ್ದರು. ಆರೋಪಿಗಳಿಂದ ಸುಮಾರು 4,500 ರೂ ಮೌಲ್ಯದ 80 ಗ್ರಾಂ ಗಾಂಜಾ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ), 20(ಬಿ)(ii)(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.