ಫಿರೋಜಾಬಾದ್: ಪ್ರಿಯಕರನ ಸಹಾಯದಿಂದ ತನ್ನ ಪತಿಗೆ ವಿಷವುಣಿಸಿ ಕೊಂದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಫಿರೋಜಾಬಾದ್‌ನ ತುಂಡ್ಲಾದಲ್ಲಿ ಘಟನೆ ನಡೆದಿದೆ. ಮೊದಲ ಪ್ರಯತ್ನದಲ್ಲಿ ಪತಿ ಸಾಯಲಿಲ್ಲ. ಎರಡನೇ ಪ್ರಯತ್ನದಲ್ಲಿ ಪ್ರಿಯಕರನ ಸಹಾಯದಿಂದ ಪತಿಯನ್ನು ಮಹಿಳೆ ಕೊಂದಿದ್ದಾಳೆ. ಇದು ಸೋನಂ ರಘುವಂಶಿ ಪ್ರಕರಣನ್ನೂ ಮೀರಿಸುವಂತಿದೆ. ವರದಿಯ ಪ್ರಕಾರ, ಮೃತಪಟ್ಟ ಸುನಿಲ್ ಯಾದವ್ ತಾಯಿ ಜುಲೈ 24 ರಂದು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಸುನಿಲ್ ಅವರ ಪತ್ನಿ ಶಶಿ ಮತ್ತು ಆಕೆಯ ಪ್ರಿಯಕರ ಯಾದವೇಂದ್ರ ಅವರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಜೋಡಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಬಂಧದಲ್ಲಿದ್ದರು. ತಮ್ಮ ಸರಸ ಸಲ್ಲಾಪಕ್ಕೆ ಅಡ್ಡಿಯಾಗಿದ್ದ ಸುನಿಲ್‍ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ವಿಷವುಣಿಸಿದ್ದರೂ ಬದುಕಿದ್ದ ಪತಿ
ಶಶಿ ಮತ್ತು ಯಾದವೇಂದ್ರ ಒಟ್ಟಾಗಿ ಕೊಲೆಗೆ ಯೋಜನೆ ರೂಪಿಸಿದ್ದರು. ಪತ್ನಿ ಶಶಿ ಸುನೀಲ್‌ಗೆ ವಿಷ ಸೇರಿಸಿದ ಮೊಸರನ್ನು ಬಡಿಸಿದ್ದರು. ಇದರಿಂದ ಸುನಿಲ್ ಆರೋಗ್ಯ ಹದಹೆಡಲು ಪ್ರಾರಂಭಿಸಿದ ಗಮನಿಸಿದ ಇತರೆ ಕುಟುಂಬ ಸದಸ್ಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಿಂದ ಶೀಘ್ರ ಗುಣಮುಖನಾಗಿ ಸುನಿಲ್ ಮನೆಗೆ ಬಂದಿದ್ದಾನೆ.
ಇದಾದ ಎರಡು ದಿನಗಳ ನಂತರ, ಪತ್ನಿ ಶಶಿ ಮತ್ತೆ ಅದೇ ಕೃತ್ಯ ಎಸಗಿದ್ದಾಳೆ. ಈ ಬಾರಿ, ಸುನೀಲ್ ಬದುಕುಳಿಯಲಿಲ್ಲ. ಏನಾಯಿತು ಎಂದು ತಿಳಿಯದ ಕಾರಣ ಅವರ ಕುಟುಂಬವು ಅಂತ್ಯಕ್ರಿಯೆಯನ್ನು ನಡೆಸಿತು.
ಇನ್ನು ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸುನಿಲ್ ತಾಯಿ, ಶಶಿ ಮತ್ತು ಆಕೆಯ ಗೆಳೆಯನ ಹೆಸರನ್ನು ಉಲ್ಲೇಖಿಸಿ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯಲ್ಲಿ ಪತ್ನಿ ಶಶಿಯು ಯಾದವೇಂದ್ರ ಸಹಾಯದಿಂದ ಆನ್‌ಲೈನ್‌ನಲ್ಲಿ ವಿಷವನ್ನು ಆರ್ಡರ್ ಮಾಡಿದ್ದಳು ಎಂದು ತಿಳಿದುಬಂದಿದೆ.
ಸೋನಂ ರಘುವಂಶಿ ಪ್ರಕರಣದಿಂದ ಸ್ಫೂರ್ತಿ
ಪೊಲೀಸರ ಪ್ರಕಾರ, ಶಶಿ ಸೋನಂ ರಘುವಂಶಿ ಪ್ರಕರಣದಿಂದ ಪ್ರಭಾವಿರಾಗಿರಬಹುದು ಎಂದು ಹೇಳಲಾಗಿದೆ. ಸೋನಂ ಮತ್ತು ಆಕೆಯ ಗೆಳೆಯ ಎಂದು ಹೇಳಲಾಗುವ ರಾಜ್ ಕುಶ್ವಾಹ, ಮೇಘಾಲಯದಲ್ಲಿ ತಮ್ಮ ಹನಿಮೂನ್ ವೇಳೆ ಆಕೆಯ ಪತಿ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರನ್ನು ಕೊಲೆ ಮಾಡಿದ್ದರು. ಮೂರು ವಿಫಲ ಪ್ರಯತ್ನಗಳ ನಂತರ ಆತನನ್ನು ಕೊಲ್ಲಲಾಗಿತ್ತು. ಸುನಿಲ್ ಪ್ರಕರಣದಲ್ಲಿಯೂ ಎರಡನೇ ಪ್ರಯತ್ನದಲ್ಲಿ ಕೊಲ್ಲಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Honeymoon Murder Case: ಹನಿಮೂನ್ ಕೊಲೆಗೆ ಹೊಸ ಟ್ವಿಸ್ಟ್- ಸಂಜಯ್ ವರ್ಮಗೆ 234 ಬಾರಿ ಕರೆ ಮಾಡಿದ್ದ ಸೋನಂ-ಅಷ್ಟಕ್ಕೂ ಯಾರೀತಾ?
ಇನ್ನು ಶವವನ್ನು ಮರಣೋತ್ತರ ಪರೀಕ್ಷೆ ನಡೆಸದಿರುವುದು ತನಿಖೆಗೆ ಸವಾಲಾಗಿ ಪರಿಣಮಿಸಿದೆ. ಸುನಿಲ್ ಅವರ ಕುಟುಂಬಕ್ಕೆ ಯಾವುದೇ ರೀತಿಯ ಅನುಮಾನವಿರದ ಕಾರಣ, ಶವವನ್ನು ಅಂತ್ಯಸಂಸ್ಕಾರ ಮಾಡಲಾಯಿತು. ಆದರೆ ವರದಿಯ ಪ್ರಕಾರ, ಪೊಲೀಸರು ನ್ಯಾಯಾಲಯದಲ್ಲಿ ತಮ್ಮ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಸುನಿಲ್ ಅವರ ಬಟ್ಟೆ, ಬೆಡ್‌ಶೀಟ್ ಮತ್ತು ಫೋನ್ ಕರೆ ದಾಖಲೆಗಳಂತಹ ಇತರ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.
ಸುನಿಲ್ ಮತ್ತು ಶಶಿ ಮದುವೆಯಾಗಿ 12 ವರ್ಷಗಳು ಕಳೆದಿವೆ. ಇವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದರು. 10 ವರ್ಷದ ಅಂಶು ಮತ್ತು 6 ವರ್ಷದ ದೀಪಾಂಶಿ ಎಂಬ ಮಕ್ಕಳನ್ನು ಈ ದಂಪತಿ ಹೊಂದಿದ್ದಾರೆ. ಸುನೀಲ್ ಫಿರೋಜಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದರು ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದರು ಎನ್ನಲಾಗಿದೆ.