ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CET 2025: ಸಿಇಟಿ 2025 ಅರ್ಜಿ ತಿದ್ದುಪಡಿಗೆ ಅವಕಾಶ ನೀಡಿದ ಕೆಇಎ

CET 2025: 2025ನೇ ಸಾಲಿನ ಸಿಇಟಿ ಅರ್ಜಿಯಲ್ಲಿ ಮೀಸಲಾತಿ, ವಿಶೇಷ ಪ್ರವರ್ಗ, ಶೈಕ್ಷಣಿಕ ವಿವರಗಳು, ಕ್ಲಾಸ್ ಕೋಡ್ ಇನ್ನಿತರ ಯಾವುದೇ ಮಾಹಿತಿ ತಪ್ಪಾಗಿದ್ದರೆ ಅದನ್ನು ತಿದ್ದುಪಡಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ.

ಸಿಇಟಿ 2025 ಅರ್ಜಿ ತಿದ್ದುಪಡಿಗೆ ಅವಕಾಶ ನೀಡಿದ ಕೆಇಎ

Profile Prabhakara R Apr 19, 2025 4:50 PM

ಬೆಂಗಳೂರು: ವಿದ್ಯಾರ್ಥಿಗಳು ಈಗಾಗಲೇ ಸಲ್ಲಿಸಿರುವ 2025ನೇ ಸಾಲಿನ ಸಿಇಟಿ ಅರ್ಜಿಯಲ್ಲಿ (CET 2025) ಇನ್ನೂ ಏನಾದರೂ ತಪ್ಪುಗಳಿದ್ದು, ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮೇ 2ರವರೆಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿದೆ. ಮೀಸಲಾತಿ, ವಿಶೇಷ ಪ್ರವರ್ಗ, ಶೈಕ್ಷಣಿಕ ವಿವರಗಳು, ಕ್ಲಾಸ್ ಕೋಡ್ ಇನ್ನಿತರ ಯಾವುದೇ ಮಾಹಿತಿ ತಪ್ಪಾಗಿದ್ದರೆ ಅವುಗಳನ್ನು ಸರಿ ಮಾಡಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.

ಅಭ್ಯರ್ಥಿಗಳ ಹೆಸರು, ತಂದೆ-ತಾಯಿ ಹೆಸರು, ಜನ್ಮ ದಿನಾಂಕ, 10ನೇ ತರಗತಿ ಹಾಗೂ 12ನೇ ತರಗತಿಯ ನೋಂದಣಿ ಸಂಖ್ಯೆ ಇತ್ಯಾದಿ ಮಾಹಿತಿಗಳು ತಪ್ಪಾಗಿ ನಮೂದು ಮಾಡಿದ್ದಲ್ಲಿ ದಾಖಲೆ ಸಮೇತ ಪ್ರಾಧಿಕಾರಕ್ಕೆ ಬಂದು ಮನವಿ ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಕೃಷಿಕರ ಕೋಟಾದಡಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಸಿಇಟಿ ಅರ್ಜಿಯಲ್ಲಿ ನಮೂದಿಸದೇ ಇದ್ದಲ್ಲಿ ನಾಳೆಯೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು. ಹೊಸದಾಗಿ ಕೃಷಿಕರ ಕೋಟಾ ನಮೂದಿಸಿದವರು ಏ.21ರಂದು ತಮ್ಮ ದಾಖಲೆಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಸಿಇಟಿ ಕೀ ಉತ್ತರ ಪ್ರಕಟ

ಬೆಂಗಳೂರು: ಯುಜಿ ಸಿಇಟಿ 2025ರ (KCET Answer Key 2025) ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಎಂಜಿನಿಯರಿಂಗ್‌, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿ ಏ.16 ಮತ್ತು 17ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಇದೀಗ ಪರೀಕ್ಷೆಯ ನಾಲ್ಕು ವಿಷಯಗಳ 16 ವರ್ಷನ್ ಗಳ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೀ ಉತ್ತರಗಳ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಏ.22ರೊಳಗೆ ಆನ್ ಲೈನ್ ಮೂಲಕ ಸಲ್ಲಿಸಬಹುದು.
ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಆನ್‌ಲೈನ್ ಪೋರ್ಟಲ್ https://cetonline.karnataka.gov.in/keaobjections/forms/login.aspx ಲಿಂಕ್ ಮೂಲಕ ಏ.22ರ ಸಂಜೆ 5:00 ರೊಳಗೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು PDF ರೂಪದಲ್ಲಿ ಸಲ್ಲಿಸಬೇಕು. ಪ್ರಶ್ನೆ ಸಂಖ್ಯೆ ಅಥವಾ ವರ್ಷನ್ ಕೋಡ್ ನಮೂದಿಸದೇ ಇರುವ ಅಥವಾ ಆಧಾರರಹಿತವಾಗಿರುವ ಆಕ್ಷೇಪಣೆಗಳನ್ನು ಪರಿಗಣಿಸಲ್ಲ. ವಿಷಯ ತಜ್ಞರ ಸಮಿತಿಯು ಪರಿಶೀಲಿಸಿ ತೀರ್ಮಾನಿಸುವ ಕೀ ಉತ್ತರಗಳು ಅಂತಿಮವಾಗಿರುತ್ತವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಕೀ ಉತ್ತರ ಹೀಗೆ ಚೆಕ್‌ ಮಾಡಿ

ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ, ಪ್ರವೇಶ (Admissions) ಕೆಟಗರಿಯಲ್ಲಿ ಯುಜಿ ಸಿಇಟಿ ಆಯ್ಕೆ ಮೇಲೆ ಕ್ಲಿಕ್‌ ಮಾಡಬೇಕು. ಬಳಿಕ ಸಿಇಟಿ ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರ ಹಾಗೂ ಆಕ್ಷೇಪಣೆ ಸಲ್ಲಿಕೆ ಸೇರಿ ವಿವಿಧ ಲಿಂಕ್‌ಗಳು ಕಾಣುತ್ತದೆ. ಕೀ ಉತ್ತರ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಕೀ ಉತ್ತರದ ಪಿಡಿಎಫ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಸಿಇಟಿ 2025 ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ