-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಮ್ಮೆಲ್ಲರ ಊಹೆಗೂ ನಿಲುಕದ ಡಿಸೈನ್‌ನಲ್ಲಿ ಪ್ರತಿಷ್ಠಿತ ಲೂಯಿಸ್ ವ್ಯುಟನ್ ಕಂಪನಿ ಆಟೋರಿಕ್ಷಾ ರೂಪದಲ್ಲಿ ಹ್ಯಾಂಡ್‌ಬ್ಯಾಗ್ (LV Autorikshaw Handbag 2025) ಬಿಡುಗಡೆಗೊಳಿಸಿದೆ. ಹೌದು, ಹೈ ಫ್ಯಾಷನ್ ಹಾಗೂ ಶ್ರೀಮಂತರ ಫ್ಯಾಷನ್ ಬ್ರ್ಯಾಂಡ್ ಎಂದೇ ಖ್ಯಾತಿಗಳಿಸಿರುವ ಅಂತಾರಾಷ್ಟ್ರೀಯ ಮಟ್ಟದ ಲೂಯಿಸ್ ವ್ಯುಟನ್ (LOUIS VUITTON ) ಇದೀಗ ಅಚ್ಚರಿ ಎಂಬಂತೆ, ಆಟೋರಿಕ್ಷಾ ಪ್ರತಿರೂಪದ ಡಿಸೈನರ್ ಹ್ಯಾಂಡ್‌ಬ್ಯಾಗನ್ನು ಮೆನ್ಸ್ ಫ್ಯಾಷನ್ ಶೋನಲ್ಲಿ ಅನಾವರಣಗೊಳಿಸಿದೆ. ಮಾಡೆಲ್‌ಗಳು ಇದನ್ನು ಹಿಡಿದು ವಾಕ್ ಮಾಡಿದ್ದು, ಸದ್ಯ ಫ್ಯಾಷನ್ ಲೋಕದಲ್ಲಿ ಸುದ್ದಿಯಾಗಿದೆ ಮಾತ್ರವಲ್ಲ, ಬ್ಯಾಗ್ ಪ್ರಿಯರನ್ನು ನಿಬ್ಬೆರಗಾಗಿಸಿದೆ.
ಸಮ್ಮರ್ ಸ್ಪ್ರಿಂಗ್ ಫ್ಯಾಷನ್ ಶೋನಲ್ಲಿ ಆಟೋರಿಕ್ಷಾ ಹ್ಯಾಂಡ್‌ಬ್ಯಾಗ್
ಅಂದಹಾಗೆ, ವಿದೇಶದಲ್ಲಿ ನಡೆದ ಸಮ್ಮರ್ ಸ್ಪ್ರಿಂಗ್ 2026 ಮೆನ್ಸ್ ಫ್ಯಾಷನ್ ಶೋನಲ್ಲಿ ಈ ಬ್ಯಾಗ್ ಅನಾವರಣಗೊಂಡಿತು. (ವಿದೇಶಗಳಲ್ಲಿ ಏಳೆಂಟು ತಿಂಗಳು ಮುನ್ನವೇ ಮುಂಬರುವ ಸೀಸನ್‌ನ ಫ್ಯಾಷನ್‌ವೇರ್‌ಗಳ ಫ್ಯಾಷನ್ ಶೋಗಳು ನಡೆಯುತ್ತವೆ) ವಾಕ್ ಮಾಡುವ ಮಾಡೆಲ್‌ಗಳ ಕೈಯಲ್ಲಿದ್ದ ಈ ಅಚ್ಚರಿ ಮೂಡಿಸುವ ಹ್ಯಾಂಡ್‌ಬ್ಯಾಗ್ ಅಲ್ಲಿಯವರನ್ನು ಮಾತ್ರವಲ್ಲ, ಸೋಷಿಯಲ್ ಮೀಡಿಯಾ ಫ್ಯಾಷನ್ ಇನ್‌ಫ್ಲೂಯೆನ್ಸರ್ಸ್ ಹಾಗೂ ಬ್ಲಾಗರ್‌ಗಳನ್ನು ಸೆಳೆಯಿತು. ಸದ್ಯ, ಈ ಬ್ಯಾಗ್‌ನ ವಿಡಿಯೋಗಳು ಸಾಕಷ್ಟು ವೈರಲ್ ಆಗಿದೆ.
35 ಲಕ್ಷ ರೂ.ಗಳ ಹ್ಯಾಂಡ್‌ಬ್ಯಾಗ್ ಅಂತೆ!
ಎಲ್ಲದಕ್ಕಿಂತ ಹೆಚ್ಚಾಗಿ ಲೂಯಿಸ್ ವ್ಯುಟನ್ ಬ್ರಾಂಡ್ ಭಾರತದ ಶ್ರೀ ಸಾಮಾನ್ಯರು ಓಡಾಡುವಂತಹ 3 ಚಕ್ರದ ಆಟೋರಿಕ್ಷಾ ಪ್ರತಿರೂಪವನ್ನು ಡಿಸೈನ್ ಮಾಡಿ ಹ್ಯಾಂಡ್‌ಬ್ಯಾಗ್ ಮಾಡಿರುವುದು ಫ್ಯಾಷನಿಸ್ಟಾಗಳಿಗೂ ಅಚ್ಚರಿ ಮೂಡಿಸಿದೆ.
ಹಾಗೆಂದು, ನೀವಂದು ಕೊಂಡಂತೆ ಈ ಬ್ಯಾಗ್ ಕೈಗೆಟಕುವ ದರದಲ್ಲಿ ದೊರೆಯುವುದಿಲ್ಲ! 35 ಲಕ್ಷ ರೂ.ಗಳೆಂದು ಮಾರ್ಕೆಟಿಂಗ್ ಇನ್ಸ್ಟಾ ಪೇಜ್ ಸೋಷಿಯಲ್ ಮೀಡಿಯಾದಲ್ಲಿ ವರದಿ ಮಾಡಿದೆ. ಸದ್ಯಕ್ಕೆ ನಿಖರವಾದ ಬೆಲೆ ಇನ್ನೂ ಖಚಿತಗೊಂಡಿಲ್ಲ! ಒಟ್ಟಿನಲ್ಲಿ, ಈ ಬ್ಯಾಗ್‌ಗೆ ಕೊಡುವ ಬೆಲೆಯಲ್ಲಿ, ಒಂದಿಪ್ಪತ್ತು ಒರಿಜಿನಲ್ ಆಟೋರಿಕ್ಷಾಗಳನ್ನೇ ಕೊಳ್ಳಬಹುದಾಗಿದೆ ಎಂದು ನಗುತ್ತಲೇ ವಿಶ್ಲೇಷಣೆ ಮಾಡಿದ್ದಾರೆ ಫ್ಯಾಷನ್ ವಿಶ್ಲೇಷಕರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Dupatta Fashion 2025: ಹುಡುಗಿಯರ ಆಕರ್ಷಕ ಲುಕ್‌ಗಾಗಿ ಶೀರ್ ದುಪಟ್ಟಾ ಫ್ಯಾಷನ್