ಬ್ಯಾಂಕಾಕ್: ಥೈಲ್ಯಾಂಡ್ ಹಾಗೂ ಕಾಂಬೋಡಿಯಾ (Thailand-Cambodia War) ಮಧ್ಯೆ ಯುದ್ಧ ನಡೆಯುತ್ತಿದೆ. ಈಗಾಗಲೇ ಹಲವರು ಮೃತಪಟ್ಟಿದ್ದು, ಗಡಿ ಪ್ರದೇಶದಲ್ಲಿನ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಂಬೋಡಿಯಾಕ್ಕೆ ಪ್ರಯಾಣಿಸುವ ಭಾರತೀಯ ಪ್ರಜೆಗಳಿಗೆ ಗಡಿ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ ಎಂದು ಭಾರತೀಯ ರಾಯಭಾರ ಕಚೇರಿ ಸೂಚನೆಯನ್ನು ನೀಡಿದೆ. ಕಾಂಬೋಡಿಯಾ-ಥೈಲ್ಯಾಂಡ್ ಗಡಿಯಲ್ಲಿ ನಡೆಯುತ್ತಿರುವ ಘರ್ಷಣೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಪ್ರಜೆಗಳು ಗಡಿ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಲು ಸೂಚಿಸಲಾಗಿದೆ" ಎಂದು ಸಲಹೆಯಲ್ಲಿ ತಿಳಿಸಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತೀಯ ಪ್ರಜೆಗಳು ನೋಮ್ ಪೆನ್‌ನಲ್ಲಿರುವ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚನೆಯಲ್ಲಿ ತಿಳಿಸಲಾಗಿದೆ. ರಾಯಭಾರ ಕಚೇರಿಯು ಅದಕ್ಕಾಗಿ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಸಹ ನೀಡಿದೆ. "ಯಾವುದೇ ತುರ್ತು ಪರಿಸ್ಥಿತಿಯಲ್ಲಿ, ಭಾರತೀಯ ಪ್ರಜೆಗಳು ಫ್ನೋಮ್ ಪೆನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು +855 92881676 ಗೆ ಕರೆ ಮಾಡಿ ಅಥವಾ cons.phnompenh@mea.gov.in ಗೆ ಇಮೇಲ್ ಮಾಡಿ ಸಂಪರ್ಕಿಸಬಹುದು.
ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಗಡಿಯಲ್ಲಿ ಇತ್ತೀಚಿನ ಉದ್ವಿಗ್ನತೆ ಮತ್ತು ಸಂಘರ್ಷದ ಮಧ್ಯೆ ಈ ಸಲಹೆ ಬಂದಿದೆ. ಸಂಘರ್ಷದ ಹಿನ್ನೆಲೆಯಲ್ಲಿ, ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಹಿಂದೆ ಪ್ರಯಾಣ ಸಲಹೆಯನ್ನು ನೀಡಿತ್ತು, ಭಾರತೀಯ ಪ್ರಜೆಗಳು ಥೈಲ್ಯಾಂಡ್-ಕಾಂಬೋಡಿಯಾ ಗಡಿಯ ಸಮೀಪವಿರುವ ಕೆಲವು ಪ್ರದೇಶಗಳನ್ನು ತಪ್ಪಿಸುವಂತೆ ಒತ್ತಾಯಿಸಿತ್ತು. ಥೈಲ್ಯಾಂಡ್-ಕಾಂಬೋಡಿಯಾ ಗಡಿಯ ಸಮೀಪವಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಥೈಲ್ಯಾಂಡ್‌ಗೆ ಹೋಗುವ ಎಲ್ಲಾ ಭಾರತೀಯ ಪ್ರಯಾಣಿಕರು TAT ನ್ಯೂಸ್‌ರೂಮ್ ಸೇರಿದಂತೆ ಥಾಯ್ ಅಧಿಕೃತ ಮೂಲಗಳಿಂದ ನವೀಕರಣಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ" ಎಂದು ಭಾರತೀಯ ರಾಯಭಾರ ಕಚೇರಿ ತನ್ನ ಅಧಿಕೃತ X ಹ್ಯಾಂಡಲ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದೆ.
ಈ ಸುದ್ದಿಯನ್ನೂ ಓದಿ: ಕದನ ವಿರಾಮಕ್ಕೆ ಇಸ್ರೇಲ್-ಸಿರಿಯಾ ನಾಯಕರ ನಡುವೆ ಒಮ್ಮತ; ಶಾಂತಿಗೆ ಅಮೆರಿಕ ಕರೆ
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಕ್ಕೆ ಪ್ರಾಚೀನ ಪ್ರಿಯಾ ವಿಹಾರ ಮತ್ತು ತಾ ಮೊನ್ ಥಮ್ ದೇವಾಲಯಗಳ ಸುತ್ತಲಿನ 800 ಕಿಮೀ ಗಡಿಯ ವಿವಾದಿತ ಪ್ರದೇಶಗಳು ಕಾರಣ. 2008 ರಲ್ಲಿ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ನೋಂದಾಯಿಸಿದಾಗ ಉದ್ವಿಗ್ನತೆ ಹೆಚ್ಚಿತು, 2011 ರಲ್ಲಿ ಘರ್ಷಣೆಯಲ್ಲಿ 28 ಜನರು ಸಾವನ್ನಪ್ಪಿದ್ದರು.