ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಭಾರತದ ಸ್ವಾತಂತ್ರ ದಿನಾಚರಣೆ ನಿಮಿತ್ತವಾಗಿ ಭಾತೀಯರು ನಡೆಸಿದ್ದ ಕಾರ್ಯಕ್ರಮಕ್ಕೆ ಖಲಿಸ್ತಾನಿ ಪರ (Khalistani Terrorist) ವ್ಯಕ್ತಿಗಳು ಅಡ್ಡಿಪಡಿಸಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಕಾನ್ಸುಲ್ ಜನರಲ್ ಹೊರಗೆ ಕಾರ್ಯಕ್ರಮ ನಡೆಯುತ್ತಿತ್ತು. ಸ್ವಾತಂತ್ರ್ಯ ದಿನವನ್ನು ಶಾಂತಿಯುತವಾಗಿ ಆಚರಿಸಲು ಭಾರತೀಯ ಪ್ರಜೆಗಳು ಕಾನ್ಸುಲೇಟ್ ಹೊರಗೆ ಸೇರಿದ್ದರು. ಆಗ "ಗೂಂಡಾಗಳು" ಖಲಿಸ್ತಾನಿ ಧ್ವಜಗಳೊಂದಿಗೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಪ್ರತ್ಯೇಕತಾವಾದಿ ಗುಂಪು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿತು. ಇದಕ್ಕೆ ಪ್ರತಿಯಾಗಿ, ಭಾರತೀಯರು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಅವರಿಗೆ ಟಕ್ಕರ್ ನೀಡಿದ್ದಾರೆ. ಆಸ್ಟ್ರೇಲಿಯಾದ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಸ್ಥಿತಿ ದೈಹಿಕ ಘರ್ಷಣೆಗೆ ತಿರುಗುವುದನ್ನು ತಡೆದರು. ನಂತರ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಭಾರತ್ ಮಾತಾ ಕಿ ಜೈ" ಮತ್ತು "ವಂದೇ ಮಾತರಂ" ಘೋಷಣೆಗಳ ನಡುವೆ ತ್ರಿವರ್ಣ ಧ್ವಜವನ್ನು ಕಾನ್ಸುಲೇಟ್‌ನಲ್ಲಿ ಹಾರಿಸಲಾಯಿತು.
#BREAKING: Khalistani goons create ruckus disrupting India’s Independence Day function at India’s Consulate in Melbourne, Australia. Indians had gathered to peacefully celebrate India’s 79th Independence Day. Australian Police protected the Indian Mission.pic.twitter.com/DScZmr0etD
— Aditya Raj Kaul (@AdityaRajKaul) August 15, 2025
ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಪರ ಚಟುವಟಿಕೆಗಳು ಹೆಚ್ಚುತ್ತಿರುವ ನಡುವೆಯೇ ಸ್ವಾತಂತ್ರ್ಯ ದಿನಾಚರಣೆಯ ಗದ್ದಲ ಆರಂಭವಾಗಿದ್ದು, ಉದ್ದೇಶಿತ ದ್ವೇಷ ಅಪರಾಧಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಕಳೆದ ತಿಂಗಳು, ಖಲಿಸ್ತಾನ್ ಪರ ಪ್ರತ್ಯೇಕತಾವಾದಿಗಳು ಆಸ್ಟ್ರೇಲಿಯಾದ ಬೊರೋನಿಯಾದಲ್ಲಿರುವ ಸ್ವಾಮಿನಾರಾಯಣ ದೇವಾಲಯವನ್ನು ವಿರೂಪಗೊಳಿಸಿದ್ದರು. ಕಪ್ಪು ಮಸಿಯಿಂದ ಅವಹೇಳನಕಾರಿ ಬರಹವನ್ನು ಬರೆಯಲಾಗಿತ್ತು. ಅಷ್ಟೇ ಅಲ್ಲದೆ, ಏಷ್ಯನ್ ರೆಸ್ಟೋರೆಂಟ್‌ಗಳನ್ನು ಸಹ ಇದೇ ರೀತಿಯ ಸಂದೇಶ ಮತ್ತು ಅಡಾಲ್ಫ್ ಹಿಟ್ಲರ್‌ನ ಭಾವಚಿತ್ರದಿಂದ ವಿರೂಪಗೊಳಿಸಲಾಗಿತ್ತು.
ಇದಕ್ಕೂ ಮುನ್ನ, ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿದಂತೆ ಅಡಿಲೇಡ್‌ನಲ್ಲಿ 23 ವರ್ಷದ ಭಾರತೀಯ ಮೂಲದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿತ್ತು. ಇಂತಹ ಘಟನೆಗಳು ಹೆಚ್ಚುತ್ತಿರುವ ಕೆನಡಾ, ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಖಲಿಸ್ತಾನಿ ಉಗ್ರಗಾಮಿಗಳಿಗೆ ಸ್ಥಳಾವಕಾಶ ನೀಡಬೇಡಿ ಎಂದು ಭಾರತ ಒತ್ತಾಯಿಸಿದೆ.
ಅಮೆರಿಕದಲ್ಲಿ ದೇವಾಲಯ ಧ್ವಂಸ
ಅಮೆರಿಕದ ಇಂಡಿಯಾನಾ ನಗರದಲ್ಲಿನ ಹಿಂದೂ ದೇವಾಲಯದ ಫಲಕವನ್ನು ವಿರೂಪಗೊಳಿಸಲಾಗಿದೆ. ಈ ಘಟನೆಯನ್ನು ಭಾರತೀಯ ದೂತವಾಸ ಖಂಡಿಸಿದೆ. ಗ್ರೀನ್‌ವುಡ್ ನಗರದ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯದಲ್ಲಿ 'ದ್ವೇಷಪೂರಿತ ಕೃತ್ಯ' ನಡೆದಿದೆ ಎಂದು ದೇವಾಲಯ ತಿಳಿಸಿದೆ .ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ BAPS ದೇವಾಲಯವನ್ನು ನಾಲ್ಕು ಬಾರಿ ಗುರಿಯಾಗಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.