ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ (Terrorist) ಮೂಲ ಸೌಕರ್ಯ ಕಲ್ಪಿಸಲು ಐಎಸ್‌ಐ ಹಣಕಾಸು ಒದಗಿಸುತ್ತಿರುವುದಕ್ಕೆ ಮತ್ತೆ ಸಾಕ್ಷಿ ಲಭ್ಯವಾಗಿದೆ. ಲಷ್ಕರ್-ಎ-ತೈಬಾ (Lashkar-e-Taiba) ಮತ್ತು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (Islamic State Khorasan Province) ನಡುವೆ ಮೈತ್ರಿಗೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (Inter-Services Intelligence) ಸಹಕಾರ ನೀಡುತ್ತಿರುವುದು ಗುಪ್ತಚರ ದಾಖಲೆಗಳು ಬಹಿರಂಗಪಡಿಸಿವೆ. ಈ ಮೂಲಕ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಮೂಲ ಸೌಕರ್ಯ ಒದಗಿಸುವಲ್ಲಿ ಐಎಸ್‌ಐ ಪಾತ್ರವಿರುವುದು ಸ್ಪಷ್ಟವಾಗಿದೆ. ಬಲೂಚಿಸ್ತಾನದಲ್ಲಿರುವ ಪಾಕಿಸ್ತಾನದ ಮಿಲಿಟರಿ (Pakistan military) ಸ್ಥಾಪನೆಯು ಭಯೋತ್ಪಾದಕ ಗುಂಪುಗಳನ್ನು ತನ್ನ ರಕ್ಷಣೆಗೆ ಹೇಗೆ ಬಳಸುತ್ತಿದೆ ಎಂಬುದು ಕೂಡ ಇದರಿಂದ ಸಾಬೀತಾಗಿದೆ.
ಇಸ್ಲಾಮಿಕ್ ಸಂಘಟನೆಯಲ್ಲ ಎಂದು ಅಫ್ಘಾನ್ ತಾಲಿಬಾನ್ ತಿರಸ್ಕರಿಸಿರುವ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯವನ್ನು (ಐಎಸ್‌ಕೆಪಿ) ಪಾಕಿಸ್ತಾನ ಭಯೋತ್ಪಾದಕ ನೆಲೆಯಾಗಿ ಪರಿವರ್ತಿಸಿದೆ. ಈ ಮೂಲಕ ಕಾಶ್ಮೀರದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳುತ್ತಿದೆ. ಇದು ದಕ್ಷಿಣ ಏಷ್ಯಾವನ್ನೇ ಅಸ್ಥಿರಗೊಳಿಸಲು ರೂಪಿಸುತ್ತಿರುವ ಆತಂಕಕಾರಿ ಭಯೋತ್ಪಾದನೆಯ ಕೃತ್ಯ ಎಂದು ವರದಿಯೊಂದು ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ)ದ ಬಲೂಚಿಸ್ತಾನ್ ಸಂಯೋಜಕ ಮೀರ್ ಶಫೀಕ್ ಮೆಂಗಲ್, ಲಷ್ಕರ್-ಎ-ತೈಬಾದ ನಾಯಕ ನಜೀಮ್-ಎ-ಅಲಾ ರಾಣಾ ಮೊಹಮ್ಮದ್ ಅಶ್ಫಾಕ್‌ಗೆ ಪಿಸ್ತೂಲ್ ಹಸ್ತಾಂತರಿಸುತ್ತಿರುವುದು ಛಾಯಾಚಿತ್ರದಲ್ಲಿ ಸೆರೆಯಾಗಿದೆ. ಇದು ಇತ್ತೀಚಿನ ಚಿತ್ರವಾಗಿದ್ದು, ಇದೊಂದು ಬಲವಾದ ಪುರಾವೆ ಎನಿಸಿಕೊಂಡಿದೆ. ಈ ಚಿತ್ರವು ಎರಡು ಭಯೋತ್ಪಾದಕ ಗುಂಪುಗಳ ನಡುವಿನ ಸಹಕಾರಕ್ಕೆ ಸಾಕ್ಷಿಯಾಗಿದೆ. ಇದು ಐಎಸ್‌ಐ ಸಹಕಾರದಲ್ಲೇ ನಡೆದಿವೆ ಎಂಬುದನ್ನು ಗುಪ್ತಚರ ಮೂಲಗಳು ತಿಳಿಸಿವೆ.
ಬಲೂಚಿಸ್ತಾನ್ ಮಾಜಿ ಮುಖ್ಯಮಂತ್ರಿ ನಾಸಿರ್ ಮೆಂಗಲ್ ಪುತ್ರ ಮೆಂಗಲ್ ಐಎಸ್‌ಐಯೊಂದಿಗೆ ನಂಟು ಹೊಂದಿದ್ದು, ಬಲೂಚ್ ರಾಷ್ಟ್ರೀಯವಾದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದರಲ್ಲಿ ಕುಖ್ಯಾತಿ ಗಳಿಸಿದ್ದಾನೆ. ಈತ 2015ರಿಂದ ಐಎಸ್‌ಕೆಪಿಯ ಪ್ರಮುಖ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಈತ ಐಎಸ್‌ಕೆಪಿಗೆ ಹಣಕಾಸು, ಶಸ್ತ್ರಾಸ್ತ್ರಮತ್ತು ಸುರಕ್ಷಿತ ಆಶ್ರಯಗಳನ್ನು ಒದಗಿಸುತ್ತಿದ್ದಾನೆ ಎನ್ನಲಾಗಿದೆ.
ಪಾಕಿಸ್ತಾನದ ಜಂಟಿ ತನಿಖಾ ತಂಡದ (ಜೆಐಟಿ) 2015ರಲ್ಲಿ ವರದಿಯಲ್ಲಿ ಆತನ ಹೆಸರು ಕೂಡ ಪ್ರಕಟವಾಗಿತ್ತು. ಐಎಸ್ಐ ಸಹಯೋಗದೊಂದಿಗೆ ಮೆಂಗಲ್ ಮಸ್ತುಂಗ್ ಮತ್ತು ಖುಜ್ದಾರ್‌ನಲ್ಲಿ ಐಎಸ್‌ಕೆಪಿ ನೆಲೆಗಳನ್ನು ಆತ ಸ್ಥಾಪಿಸಿದ್ದ. ಇದನ್ನು ಬಲೂಚ್ ರಾಷ್ಟ್ರೀಯವಾದಿಗಳ ವಿರುದ್ದ ಮತ್ತು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಲು ಬಳಸಲಾಗುತ್ತಿತ್ತು.
ಕಾಬೂಲ್ ಅನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ಐಎಸ್ಐ ಬಲೂಚಿಸ್ತಾನದಲ್ಲಿ ಐಎಸ್‌ಕೆಪಿಯನ್ನು ಮರು ರಚನೆ ಮಾಡಿತ್ತು. ಕಳೆದ ಮಾರ್ಚ್‌ನಲ್ಲಿ ಬಲೂಚ್ ಹೋರಾಟಗಾರರು ಐಎಸ್‌ಕೆಪಿಯ ಮಸ್ತುಂಗ್ ನೆಲೆಯ ಮೇಲೆ ದಾಳಿ ನಡೆಸಿ ಮೂವತ್ತು ಭಯೋತ್ಪಾದಕರನ್ನು ಹತ್ಯೆ ಮಾಡಿದ ಬಳಿಕ ಐಎಸ್‌ಐ ಲಷ್ಕರ್-ಎ-ತೈಬಾದಿಂದ ಐಎಸ್‌ಕೆಪಿಗೆ ಮರು ನೇಮಕ ಮಾಡಿತ್ತು. ಜೂನ್ ವೇಳೆಗೆ ಎಲ್‌ಇಟಿ ಮುಖ್ಯಸ್ಥ ರಾಣಾ ಮೊಹಮ್ಮದ್ ಅಶ್ಫಾಕ್ ಮತ್ತು ಉಪ ಸೈಫುಲ್ಲಾ ಕಸೂರಿ ಬಲೂಚಿಸ್ತಾನದಲ್ಲಿ ಜಿಗ್ರಾವನ್ನು ಕರೆದು, "ಪಾಕಿಸ್ತಾನ ವಿರೋಧಿ" ಪಡೆಗಳ ವಿರುದ್ಧ ಜಿಹಾದ್ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದರು.
ಇದನ್ನೂ ಓದಿ: Chirag Paswan: ಬಿಹಾರ ಚುನಾವಣೆ; ಎಲೆಕ್ಷನ್ ಹೊಸ್ತಿಲಲ್ಲಿ ಉಲ್ಟಾ ಹೊಡೆದ್ರಾ ಚಿರಾಗ್ ಪಾಸ್ವಾನ್..?
ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ಮೈತ್ರಿಕೂಟವು ಪಾಕಿಸ್ತಾನದ ಭಯೋತ್ಪಾದಕ ಯುದ್ಧ ತಂತ್ರದಲ್ಲಿ ಅಪಾಯಕಾರಿ ನಡೆಯಾಗಿದೆ. ಇದು ಸೈದ್ಧಾಂತಿಕವಾಗಿ ವಿಭಿನ್ನವಾಗಿರುವ ಭಯೋತ್ಪಾದಕ ಗುಂಪುಗಳನ್ನು ಒಂದೇ ಸಂಘಟನೆಯಾಗಿ ವಿಲೀನಗೊಳಿಸುವ ತಂತ್ರವಾಗದೆ. ಈ ಎರಡು ಸಂಘಟನೆಗಳು ಕಾಶ್ಮೀರದಲ್ಲೂ ಭಯೋತ್ಪಾದನೆಯನ್ನು ಹೆಚ್ಚಿಸಬಹುದು, ಬಲೂಚಿಸ್ತಾನ್ ಮತ್ತು ಅಫ್ಘಾನಿಸ್ತಾನದಲ್ಲಿ ಅಸ್ಥಿರತೆಯನ್ನು ಮಾಡಬಹುದು ಎನ್ನುತ್ತಾರೆ ವಿಶ್ಲೇಷಕರು.