ಇಸ್ಲಾಮಾಬಾದ್: ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, (Masood Azar) ಪಾಕ್ ಆಕ್ರಮಿತ ಕಾಶ್ಮೀರದ (POK) ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಆತನ ಬಹಾವಲ್ಪುರ್ ಭದ್ರಕೋಟೆಯಿಂದ 1,000 ಕಿ.ಮೀ ದೂರದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಅಜರ್ ಇತ್ತೀಚೆಗೆ ಸ್ಕಾರ್ಡುವಿನಲ್ಲಿ, ವಿಶೇಷವಾಗಿ ಸದ್ಪರಾ ರಸ್ತೆ ಪ್ರದೇಶದ ಸುತ್ತಮುತ್ತ ಕಾಣಿಸಿಕೊಂಡಿದ್ದಾನೆ. ಈ ಪ್ರದೇಶವು ಕನಿಷ್ಠ ಎರಡು ಮಸೀದಿಗಳು, ಅಂಗಸಂಸ್ಥೆ ಮದರಸಾಗಳು ಮತ್ತು ಹಲವಾರು ಖಾಸಗಿ ಮತ್ತು ಸರ್ಕಾರಿ ಅತಿಥಿ ಗೃಹಗಳನ್ನು ಹೊಂದಿದೆ.
ಇತ್ತೀಚೆಗೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಅಜರ್ ಹಾಗೂ ಇತರರ ಉಗ್ರರನ್ನು ಭಾರತಕ್ಕೆ ಒಪ್ಪಿಸಲು ಪಾಕಿಸ್ತಾನದಿಂದ ಯಾವುದೇ ತಕರಾರು ಇಲ್ಲ ಎಂದು ಹೇಳಿದ್ದರು. ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಭುಟ್ಟೊ ಅಪ್ಘಾನ್ ಜಿಹಾದಿಯಲ್ಲಿ ಅಜಾರ್ ತೊಡಗಿಸಿಕೊಂಡಿರುವುದನ್ನು ಗಮನಿಸಿದರೆ, ಆತ ಅಫ್ಘಾನಿಸ್ತಾನದಲ್ಲಿರಬಹುದು ಎಂಬುದು ಪಾಕಿಸ್ತಾನದ ನಂಬಿಕೆಯಾಗಿದೆ ಎಂದಿದ್ದರು. ಅಜಾರ್ ಪಾಕಿಸ್ತಾನದ ನೆಲದಲ್ಲಿದ್ದಾನೆ ಎಂಬುದಕ್ಕೆ ಭಾರತ ಸರ್ಕಾರ ಸೂಕ್ತ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡರೆ ಆತನನ್ನು ಬಂಧಿಸಲು ನಮಗೆ ಹೆಚ್ಚಿನ ಸಂತೋಷವಾಗುತ್ತದೆ ಎಂದು ಹೇಳಿದ್ದರು.
ಭಾರತದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಅಜರ್, 2001 ರ ಸಂಸತ್ ದಾಳಿ, 26/11 ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ವಾಯುನೆಲೆ ದಾಳಿ ಮತ್ತು 2019 ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪ್ರಮುಖ ದಾಳಿಗಳೊಂದಿಗೆ ಸಂಬಂಧ ಹೊಂದಿದ್ದಾನೆ. 2019ರಲ್ಲಿ ಆತನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿತ್ತು. ಕಂದಹಾರ್ ವಿಮಾನ ಅಪಹರಣದ ಭಾಗವಾಗಿ 1999ರಲ್ಲಿ ಆತನನ್ನು ಭಾರತದಿಂದ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿತ್ತು.
ಈ ಸುದ್ದಿಯನ್ನೂ ಓದಿ: Operation Sindoor: ನಿಮ್ಮ ಶೌರ್ಯಕ್ಕೆ ನನ್ನ ಸಲಾಂ: ಆಪರೇಷನ್ ಸಿಂದೂರ್ ಯಶಸ್ಸಿಗೆ ಯೋಧರನ್ನು ಶ್ಲಾಘಿಸಿದ ಪ್ರಧಾನಿ
ಆಪರೇಷನ್ ಸಿಂದೂರ್‌ನ ಸಮಯದಲ್ಲಿ ಜೈಶ್ ಸಂಘಟನೆಯ ಪ್ರಧಾನ ಕಚೇರಿಯಾಗಿದ್ದ ಜಾಮಿಯಾ ಸುಭಾನ್ ಅಲ್ಲಾ ಮತ್ತು ನಗರದ ಜನನಿಬಿಡ ಭಾಗದಲ್ಲಿರುವ ಜಾಮಿಯಾ ಉಸ್ಮಾನ್ ಓ ಅಲಿ ಮಸೀದಿ ಸಂಪೂರ್ಣ ನಾಶವಾಗಿತ್ತು. ಜಾಮಿಯಾ ಸುಭಾನ್ ಅಲ್ಲಾಹ್ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಅಜರ್ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.