ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಉಗ್ರರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದು ಪಾಕ್‌ ಸೇನೆಯ ಮುಖ್ಯಸ್ಥ; ರಹಸ್ಯ ಬಹಿಂಗಪಡಿಸಿದ ಜೈಶ್‌ ಕಮಾಂಡರ್‌

ಭಾರತದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯ ವೇಳೆ ಅಸುನೀಗಿದ ಉಗ್ರರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದು ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್‌ ಮಸೂದ್‌ ಇಲ್ಯಾಸ್‌ ಕಾಶ್ಮೀರಿ ತಿಳಿಸಿದ್ದಾನೆ. ಆ ಮೂಲಕ ಪಾಕಿಸ್ತಾನದ ಕಳ್ಳಾಟ ಮತ್ತೊಮ್ಮೆ ಬಯಲಾಗಿದೆ.

ಇಸ್ಲಾಮಾಬಾದ್‌: ಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯತಾಣ ಎನ್ನುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ಭಾರತ ಪದೇ ಪದೆ ಹೇಳುತ್ತಲೇ ಬಂದಿದೆ. ಇದೀಗ ಜೈಶ್‌-ಎ-ಮೊಹಮ್ಮದ್‌ (Jaish-e-Mohammad) ಉಗ್ರ ಸಂಘಟನೆಯ ಕಮಾಂಡರ್‌ ಮಸೂದ್‌ ಇಲ್ಯಾಸ್‌ ಕಾಶ್ಮೀರಿ (Masood Ilyas Kashmiri) ನೀಡಿದ ಹೇಳಿಕೆ ಭಾರತದ ಈ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಭಾರತದ ಆಪರೇಷನ್‌ ಸಿಂದೂರ್‌ (Operation Sindoor) ಕಾರ್ಯಾಚರಣೆಯ ವೇಳೆ ಅಸುನೀಗಿದ ಉಗ್ರರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ (Asim Munir) ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದಿದ್ದಾನೆ. ಸತ್ತ ಉಗ್ರರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಪಾಕ್‌ ಸೈನಿಕರ ಫೋಟೊ ಹೊರ ಬಿದ್ದ ಬೆನ್ನಲ್ಲೇ ಮಸೂದ್‌ ಇಲ್ಯಾಸ್‌ ಕಾಶ್ಮೀರಿ ಈ ಹೇಳಿಕೆ ನೀಡಿದ್ದಾನೆ. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕಳ್ಳಾಟ ಮತ್ತೊಮ್ಮೆ ಬಯಲಾಗಿದೆ.

ʼʼಆಪರೇಷನ್ ಸಿಂದೂರ್‌ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಬಹಾವಲ್ಪುರ್ ನಗರದ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಶಿಬಿರದಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸೇನಾ ಮುಖ್ಯಸ್ಥರು ನೇರವಾಗಿ ತಮ್ಮ ಜನರಲ್‌ಗಳಿಗೆ ಆದೇಶ ನೀಡಿದ್ದರುʼʼ ಎಂದು ಇಲ್ಯಾಸ್ ಕಾಶ್ಮೀರಿ ತಿಳಿಸಿದ್ದಾನೆ.



ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್‌ ಸಿಂದೂರ್‌ನಲ್ಲಿ ಮಸೂದ್‌ ಅಜರ್‌ ಕುಟುಂಬ ನಾಶ; ಕೊನೆಗೂ ಬಾಯ್ಬಿಟ್ಟ ಉಗ್ರ

ಪಾಕಿಸ್ತಾನ ಸೇನೆಯ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಮಹಾನಿರ್ದೇಶಕರು, ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಭಯೋತ್ಪಾದಕ ಗುಂಪು ಮತ್ತು ಬಹಾವಲ್ಪುರದ ಶಿಬಿರಗಳ ನಡುವಿನ ಸಂಪರ್ಕವನ್ನು ಮರೆಮಾಡಲು ಪ್ರಯತ್ನಿಸಿದ್ದಾರೆ ಎಂದೂ ಹೇಳಿದ್ದಾನೆ.

ತಮ್ಮ ನೆಲದಲ್ಲಿ ಯಾವುದೇ ಉಗ್ರ ಸಂಘಟನೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪಾಕಿಸ್ತಾನ ವಾದಿಸುತ್ತಿರುವ ಮಧ್ಯೆಯೇ ಈ ಹೇಳಿಕೆ ಹೊರಬಿದ್ದಿದೆ. ಪಾಕ್‌ ಸೇನೆಯೂ ಬಹಾವಲ್ಪುರ್‌ದಲ್ಲಿ ಜೈಶ್‌ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಸಂಗತಿಯನ್ನು ನಿರಾಕರಿಸುತ್ತಲೇ ಬಂದಿದೆ.

ಮೇ 7ರಂದು ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯಲ್ಲಿ ಅಸುನೀಗಿದ 100ಕ್ಕೂ ಹೆಚ್ಚು ಉಗ್ರರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಪಾಕ್‌ ಸೇನೆ, ಪೊಲೀಸ್‌ ಅಧಿಕಾರಿಗಳ ಹೆಸರನ್ನು ಭಾರತೀಯ ಸೇನೆ ಈಗಾಗಲೇ ಬಹಿರಂಗಪಡಿಸಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್‌ ಮೇಲೆ ಏಪ್ರಿಲ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಭಾರತೀಯರು ಮೃತಪಟ್ಟ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶ ಪಡಿಸಿದೆ.

9 ಭಯೋತ್ಪಾದಕ ತಾಣಗಳಾದ ಸವಾಯಿ ನಲ್ಲ, ಸರ್ಜಲ್, ಮುರಿಡ್ಕೆ, ಕೊಟ್ಲಿ, ಕೊಟ್ಲಿ ಗುಲ್ಪುರ್, ಮೆಹಮೂನಾ ಜೋಯಾ, ಭಿಂಬರ್ ಮತ್ತು ಬಹವಾಲ್ಪುರ್‌ ಅನ್ನು ಗುರಿಯಾಗಿಸಿ ಭಾರತೀಯ ಸೇನೆ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಹತರಾಗಿದ್ದಾರೆ.

ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ ಕೆಲವು ತಿಂಗಳ ನಂತರ, ಜೈಶ್-ಎ-ಮೊಹಮ್ಮದ್ ಕಮಾಂಡರ್, ಬಹಾವಲ್ಪುರದ ಮೇಲಿನ ದಾಳಿಯಲ್ಲಿ ಜೈಶ್‌ ಉನ್ನತ ಕಮಾಂಡರ್ ಮಸೂದ್ ಅಜರ್ ಕುಟುಂಬ ಸಾವನ್ನಪ್ಪಿದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ, ಜೆಇಎಂ ಕಮಾಂಡರ್ ಮಸೂದ್ ಭಾರತೀಯ ಸೇನೆ ತಮ್ಮ ಅಡಗುತಾಣಕ್ಕೆ ಹೇಗೆ ಪ್ರವೇಶಿಸಿ ದಾಳಿ ಮಾಡಿದವು ಎಂಬುದನ್ನು ವಿವರಿಸುವುದು ಕಂಡು ಬಂದಿದೆ.