ಟೋಕಿಯೊ: 2 ದಿನಗಳ ಪ್ರವಾಸಕ್ಕಾಗಿ ಜಪಾನ್‌ನ ಟೋಕಿಯೊಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Modi Japan Visit) ಮೊದಲ ದಿನವೇ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದರು. ಜತೆಗೆ ಅವರು ಜಪಾನ್ ಪ್ರಧಾನಿ ಶಿಗೇರು ಇಶಿಬಾ (Shigeru Ishiba) ಅವರೊಂದಿಗೆ ಟೋಕಿಯೊದಿಂದ ಸೆಂಡೈಗೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದರು. ಇಬ್ಬರೂ ನಾಯಕರು ತಮ್ಮ ರೈಲು ಪ್ರಯಾಣದ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊ ಗಮನ ಸೆಳೆದಿದೆ.
"ಪ್ರಧಾನಿ ಮೋದಿ ಅವರೊಂದಿಗೆ ಸೆಂಡೈಗೆ ಪಯಣ. ಶುಕ್ರವಾರ ರಾತ್ರಿಯಿಂದ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆʼʼ ಎಂದು ಶಿಗೇರು ಇಶಿಬಾ ಎಕ್ಸ್‌ನಲ್ಲಿ ಬರೆದಿದ್ದಾರೆ. ಪ್ರಧಾನಿ ಮೋದಿ ಕೂಡ ಫೋಟೊ ಹಂಚಿಕೊಂಡಿದ್ದಾರೆ. ಈ ಮೂಲಕ ಸೆಂಡೈಗೆ ತಲುಪಿರುವುದಾಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: PM Modi Japan visit: ಭಾರತದಲ್ಲಿ 60 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಜಪಾನ್
ನಂತರ ಇಬ್ಬರು ನಾಯಕರು ಪೂರ್ವ ಜಪಾನ್ ರೈಲ್ವೆ ಕಂಪನಿಯಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ಲೋಕೋ ಪೈಲಟ್‌ಗಳನ್ನು ಭೇಟಿಯಾದರು. ಜತೆಗೆ ಹೊಸ ಆಲ್ಫಾ-ಎಕ್ಸ್ (ALFA-X) ರೈಲನ್ನು ಸಹ ವೀಕ್ಷಿಸಿದರು. ರೈಲು ನಿರ್ವಾಹಕ 'ಜೆಆರ್ ಈಸ್ಟ್' ಎಂದೂ ಕರೆಯಲ್ಪಡುವ ಪೂರ್ವ ಜಪಾನ್ ರೈಲ್ವೆ ಕಂಪನಿಯ ಅಧ್ಯಕ್ಷರು ಬುಲೆಟ್ ರೈಲಿನ ಬಗ್ಗೆ ವಿವರಿಸಿದರು.
15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಾಗಿ ತೆರಳಿರುವ ಪ್ರಧಾನಿ ಮೋದಿ, ಸೆಂಡೈಗೆ ಭೇಟಿ ನೀಡಿದ್ದು, ಸೆಮಿಕಂಡಕ್ಟರ್ ಸ್ಥಾವರ ಮತ್ತು ಬುಲೆಟ್-ಟ್ರೈನ್ ಕೋಚ್ ಉತ್ಪಾದನಾ ತಾಣ ಸೇರಿದಂತೆ ಪ್ರಮುಖ ಕೈಗಾರಿಕಾ ಸೌಲಭ್ಯಗಳನ್ನು ವೀಕ್ಷಿಸಿದ್ದಾರೆ.
ಜಪಾನ್ ಪ್ರಧಾನಿಯೊಂದಿಗಿನ ಭೇಟಿಯ ಸಂದರ್ಭದಲ್ಲಿ ಮೋದಿ ಭಾರತ ಮತ್ತು ಜಪಾನ್ ನಡುವಿನ ಬಲವಾದ ಮತ್ತು ಸ್ನೇಹಪರ ಸಂಬಂಧಗಳನ್ನ ಮುಂದುವರಿಸುವ ತಮ್ಮ ಬದ್ಧತೆಯನ್ನ ಒತ್ತಿ ಹೇಳಿದರು. ಸಂಸದೀಯ ವಿನಿಮಯವನ್ನು ಆಳಗೊಳಿಸುವುದು, ಮಾನವ ಸಂಪನ್ಮೂಲ ಅಭಿವೃದ್ಧಿಯನ್ನ ಹೆಚ್ಚಿಸುವುದು ಮತ್ತು ದ್ವಿಪಕ್ಷೀಯ ಸೌಹಾರ್ದತೆಯನ್ನ ಬಲಪಡಿಸುವ ಸಾಂಸ್ಕೃತಿಕ ಸಂಪರ್ಕಗಳನ್ನ ಬೆಳೆಸುವ ಬಗ್ಗೆ ನಾಯಕರು ಅಭಿಪ್ರಾಯಗಳನ್ನ ವಿನಿಮಯ ಮಾಡಿಕೊಂಡರು. ಚಂದ್ರಯಾನ-5 ಕಾರ್ಯಾಚರಣೆಯ ಅನುಷ್ಠಾನ ವ್ಯವಸ್ಥೆಗೆ ಎರಡೂ ದೇಶಗಳು ಸಹಿ ಹಾಕಿದವು.
ಶನಿವಾರ ಬೆಳಗ್ಗೆ ಪ್ರಧಾನಿ ಮೋದಿ ಟೋಕಿಯೊದಲ್ಲಿ ಜಪಾನ್‌ನ 16 ಪ್ರಾಂತ್ಯಗಳ ಗವರ್ನರ್‌ಗಳೊಂದಿಗೆ ಚರ್ಚೆ ನಡೆಸಿದರು. ಪ್ರಧಾನಿ ಮೋದಿ ಶಾಂಘೈ ಸಹಕಾರ ಸಂಸ್ಥೆ (SCO)ಗಾಗಿ ಚೀನಾಕ್ಕೆ ಪ್ರಯಾಣಿಸಲಿದ್ದಾರೆ.
ಚಂದ್ರಯಾನ-5 ಮಿಷನ್‌ನ ಗುರಿ
ಚಂದ್ರಯಾನ-5 ಮಿಷನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಶಾಶ್ವತವಾಗಿ ನೆರಳಿನ ಪ್ರದೇಶದ (PSR) ಸುತ್ತಮುತ್ತಲಿನಲ್ಲಿರುವ ನೀರು ಸೇರಿದಂತೆ ಚಂದ್ರನ ಬಾಷ್ಪಶೀಲ ವಸ್ತುಗಳನ್ನು ಅಧ್ಯಯನ ಮಾಡುವ ಗುರಿ ಹೊಂದಿದೆ. ಈ ಕಾರ್ಯಾಚರಣೆಯು ಜಪಾನ್‌ನ H3 ರಾಕೆಟ್ ಅನ್ನು ಬಳಸಿಕೊಳ್ಳಲಿದ್ದು, 2027-28ರ ವೇಳೆಗೆ ಉಡಾವಣೆಗೆ ಯೋಜಿಸಲಾಗಿದೆ. ನೀರಿನ ಮಂಜುಗಡ್ಡೆಯನ್ನು ಪತ್ತೆಹಚ್ಚಲು ಮತ್ತು ವಿಶ್ಲೇಷಿಸಲು ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವ ಗುರಿಯನ್ನು ಇದು ಹೊಂದಿದೆ. ಪಾಲುದಾರಿಕೆಯ ಭಾಗವಾಗಿ, JAXA ರೋವರ್ ಅನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಇಸ್ರೋ ಲ್ಯಾಂಡರ್ ಅನ್ನು ಕೊಡುಗೆಯಾಗಿ ನೀಡುತ್ತದೆ.