ಹೂಸ್ಟನ್: ಅಮೆರಿಕದ ಟೆಕ್ಸಾಸ್‌ನ (Texas) ಹೂಸ್ಟನ್‌ನಲ್ಲಿ (Houston) ಕರ್ನಾಟಕ (Karnataka) ಮೂಲದ 50 ವರ್ಷದ ಚಂದ್ರ ಮೌಳಿ ನಾಗಮಲ್ಲಯ್ಯ ಎಂಬ ಕನ್ನಡಿಗನನ್ನು ಕ್ಯೂಬಾದ ದಾಖಲೆರಹಿತ ವಲಸಿಗನೊಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂಡೋ-ಅಮೆರಿಕನ್ ಸಮುದಾಯದಲ್ಲಿ ಆತಂಕ ಮೂಡಿಸಿತ್ತು. ಈ ಘಟನೆಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ತಮ್ಮ ಸಾಮಾಜಿಕ ಜಾಲತಾಣ ‘ಟ್ರುಥ್'ನಲ್ಲಿ ಮಾಜಿ ಅಧ್ಯಕ್ಷ ಜೋ ಬೈಡನ್ (Joe Biden) ಅವರ ವಲಸೆ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಸೆಪ್ಟೆಂಬರ್ 10ರಂದು ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಯನ್ನು 37 ವರ್ಷದ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್ ಎಂದು ಗುರುತಿಸಲಾಗಿದೆ. 18 ವರ್ಷದ ಮಗ ಹಾಗೂ ಪತ್ನಿಯ ಎದರಲ್ಲೇ ದುರ್ಘಟನೆ ನಡೆದಿತ್ತು
ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ವಲಸೆ ನೀತಿಯನ್ನು ತೀವ್ರವಾಗಿ ಟೀಕಿಸಿರುವ ಟ್ರಂಪ್ ಕೊಲೆ ಆರೋಪಿಯನ್ನು 'ಕಾನೂನುಬಾಹಿರ ಏಲಿಯನ್' ಎಂದು ಕರೆದಿದ್ದಾರೆ. "ಅಕ್ರಮ ವಲಸೆ ಕ್ರಿಮಿನಲ್‌ಗಳ ಬಗ್ಗೆ ಸೌಮ್ಯವಾಗಿರುವ ಕಾಲ ಮುಗಿಯಿತು" ಎಂದು ಟ್ರಂಪ್ ಹೇಳಿದ್ದಾರೆ. ಆರೋಪಿಯನ್ನು ಈ ಹಿಂದೆ ಬಂಧಿಸಲಾಗಿತ್ತಾದರೂ, ಕ್ಯೂಬಾ ಸರ್ಕಾರ ಆತನನ್ನು ಸ್ವೀಕರಿಸಲು ನಿರಾಕರಿಸಿದ ಕಾರಣ 2025ರ ಜನವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ‘ಹೂವಿನ ಬಾಣದಂತೆ’ ಹಾಡಿನಿಂದ ಫೇಮಸ್ ಆದ ಹುಡುಗಿಯ ಇನ್‌ಸ್ಟಾದಲ್ಲಿ ಫಾಲೋವರ್ಸ್ ಸಂಖ್ಯೆ 150ರಿಂದ 40 ಸಾವಿರಕ್ಕೆ!
ಈ ಕೃತ್ಯದಿಂದ ಚಂದ್ರ ಮೌಳಿ ಅವರ ಕುಟುಂಬ ಹಾಗೂ ಇಂಡೋ-ಅಮೆರಿಕನ್ ಸಮುದಾಯ ಆಘಾತಕ್ಕೊಳಗಾಗಿದೆ. ಸೆಪ್ಟೆಂಬರ್ 13ರಂದು ಟೆಕ್ಸಾಸ್‌ನ ಫ್ಲವರ್ ಮೌಂಡ್‌ನಲ್ಲಿ ನಾಗಮಲ್ಲಯ್ಯ ಅವರ ಅಂತ್ಯಕ್ರಿಯೆ ನಡೆಯಿತು. ಕುಟುಂಬಸ್ಥರು, ಸ್ನೇಹಿತರು ಹಾಗೂ ಸಮುದಾಯದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೃತರಿಗೆ ಗೌರವ ಸಲ್ಲಿಸಿದರು.
ಈ ಘಟನೆಯು ಅಮೆರಿಕದ ವಲಸೆ ನೀತಿಯ ಕುರಿತಾದ ಚರ್ಚೆಗೆ ಮತ್ತಷ್ಟು ಆಯಾಮ ನೀಡಿದೆ. ಟ್ರಂಪ್ ಅವರ ಆಡಳಿತವು ಅಕ್ರಮ ವಲಸೆಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತು ನೀಡಿದ್ದು, ಈ ಪ್ರಕರಣವು ಆ ನೀತಿಯ ಬಗ್ಗೆ ಚರ್ಚೆಯನ್ನು ತೀವ್ರಗೊಳಿಸಿದೆ.