ವಾಷಿಂಗ್ಟನ್: ರಷ್ಯಾದಿಂದ ಭಾರತ ತೈಲ ಖರೀದಿ ಮಾಡುವುದು ಅಮೆರಿಕದ ಕಣ್ಣು ಕೆಂಪಗಾಗುವಂತೆ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಯಾಕೆಂದರೆ ಇದಕ್ಕೆ ಅಮೆರಿಕ ಭಾರತದ ಮೇಲೆ ಶೇ. 25ರಷ್ಟು ತೆರಿಗೆ ವಿಧಿಸಿ ತನ್ನ ಆಕ್ರೋಶವನ್ನು ಹೊರಹಾಕಿತ್ತು. ಆದರೆ ಇದು ಈಗ ದೃಢಪಟ್ಟಂತಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅದನ್ನು ಈಗ ಎಲ್ಲರ ಮುಂದೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಹೇಳಿದ್ದಾರೆ.
ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿದೆ ಎನ್ನಲಾಗುತ್ತಿದೆ. ಆದರೆ ಇದು ದೃಢಪಟ್ಟರೆ ಒಳ್ಳೆಯದು. ಇದೊಂದು ಭಾರತದ ಒಳ್ಳೆಯ ಹೆಜ್ಜೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.
ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನಗೆ ಅರ್ಥವಾಗಿದೆ. ಅದನ್ನೇ ನಾನು ಕೇಳಿದ್ದೆ. ಅದು ಸರಿಯೋ ಅಲ್ಲವೋ ಎಂಬುದು ನನಗೆ ತಿಳಿದಿಲ್ಲ. ಆದರೆ ಇದು ಒಳ್ಳೆಯ ಹೆಜ್ಜೆ. ಏನಾಗುತ್ತದೆ ಎಂದು ನಾವು ನೋಡುತ್ತೇವೆ ಎಂದು ತಿಳಿಸಿದರು.
ಅಮೆರಿಕವು ನವದೆಹಲಿಯಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ. 25ರಷ್ಟು ಹೆಚ್ಚುವರಿ ಆಮದು ಸುಂಕದ ಜತೆಗೆ ರಷ್ಯಾದಿಂದ ಕಚ್ಚಾ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಿದ್ದಕ್ಕಾಗಿ ಭಾರತಕ್ಕೆ ದಂಡ ವಿಧಿಸಲುನಿರ್ಧರಿಸಿದ ಕೆಲವು ದಿನಗಳ ಬಳಿಕ ಇದೀಗ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
#WATCH | "I understand that India is no longer going to be buying oil from Russia. That's what I heard, I don't know if that's right or not. That is a good step. We will see what happens..." says, US President Donald Trump on a question by ANI, if he had a number in mind for the… pic.twitter.com/qAbGUkpE12
— ANI (@ANI) August 1, 2025
ಉಕ್ರೇನ್ ಮೇಲಿನ ಯುದ್ಧದ ಬಳಿಕ ನಿರ್ಬಂಧಗಳ ಹೊರತಾಗಿಯೂ ಭಾರತವು ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದನ್ನು ಟ್ರಂಪ್ ಮತ್ತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಟೀಕಿಸಿದ್ದರು.
ಟ್ರಂಪ್ ಹೇಳಿಕೆ ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, ರಷ್ಯಾದಿಂದ ತೈಲ ಆಮದು ನಿಲ್ಲಿಸುವ ಬಗ್ಗೆ ಸಚಿವಾಲಯಕ್ಕೆ ಮಾಹಿತಿ ಇಲ್ಲ. ಇಂಧನ ಖರೀದಿಯು ಭಾರತದ ರಾಷ್ಟ್ರೀಯ ಮತ್ತು ಮಾರುಕಟ್ಟೆ ಹಿತಾಸಕ್ತಿಗಳಿಂದ ನಡೆಸಲ್ಪಡುತ್ತವೆ ಎಂದು ತಿಳಿಸಿದ್ದಾರೆ.
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿರುವ ಭಾರತ ಸಮುದ್ರದಾಚೆಗಿನ ಕಚ್ಚಾ ತೈಲ ಖರೀದಿಯಲ್ಲಿ ರಷ್ಯಾದ ಅತಿದೊಡ್ಡ ಖರೀದಿದಾರ ರಾಷ್ಟ್ರವಾಗಿದೆ. ರಷ್ಯಾ ತೈಲಕ್ಕೆ ರಿಯಾಯಿತಿ ಕಡಿಮೆಯಾಗಿರುವ ಕಾರಣ ಮತ್ತು ಮಾಸ್ಕೋದಿಂದ ತೈಲ ಖರೀದಿಸದಂತೆ ಅಮೆರಿಕ ಎಚ್ಚರಿಕೆ ನೀಡಿದ್ದರಿಂದ ಕಳೆದ ವಾರ ಭಾರತೀಯ ರಾಜ್ಯ ಸಂಸ್ಕರಣಾಗಾರರು ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಕಳೆದ ವಾರದಿಂದ ದೇಶದ ರಾಜ್ಯ ಸಂಸ್ಕರಣಾಗಾರಗಳಾದ ಇಂಡಿಯನ್ ಆಯಿಲ್ ಕಾರ್ಪ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್, ಭಾರತ್ ಪೆಟ್ರೋಲಿಯಂ ಕಾರ್ಪ್ ಮತ್ತು ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ ಲಿಮಿಟೆಡ್ ರಷ್ಯಾದಿಂದ ಕಚ್ಚಾ ತೈಲಕ್ಕೆ ಬೇಡಿಕೆ ಸಲ್ಲಿಸಿಲ್ಲ ಎನ್ನಲಾಗಿದೆ.