ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಂಡ ಜಾರ್ಜಿಯಾ ಅಧಿಕಾರಿಗಳು; ಸಂತ್ರಸ್ತೆಯಿಂದ ಆಘಾತಕಾರಿ ಅಂಶ ಬಯಲು

ಮಾನ್ಯವಾದ ಇ-ವೀಸಾ, ದಾಖಲೆಗಳು ಇದ್ದರೂ ಅರ್ಮೇನಿಯಾದ ಸಡಖ್ಲೋ ಗಡಿಯಿಂದ ಜಾರ್ಜಿಯಾಕ್ಕೆ ಪ್ರವೇಶಿಸುತ್ತಿದ್ದ 56 ಭಾರತೀಯರನ್ನು ಜಾರ್ಜಿಯಾ ಅಧಿಕಾರಿಗಳು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಈ ಕುರಿತು ಭಾರತೀಯ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್ ಪೋಸ್ಟ್‌ ಮಾಡಿದ್ದು ಭಾರಿ ವೈರಲ್ ಆಗಿದೆ.

ಅಟ್ಲಾಂಟ: ಭಾರತೀಯರನ್ನು ಜಾರ್ಜಿಯಾದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬರು ದೂರಿದ್ದಾರೆ. ಆರ್ಮೇನಿಯಾದಿಂದ ಸಡಖ್ಲೋ ಗಡಿಯ ಮೂಲಕ ಜಾರ್ಜಿಯಾಕ್ಕೆ ಪ್ರವೇಶಿಸಿದ 56 ಭಾರತೀಯರನ್ನು ದನಗಳಂತೆ ಪಾದಚಾರಿ ಮಾರ್ಗದಲ್ಲಿ ಕುಳಿತುಕೊಳ್ಳಲು ಒತ್ತಾಯಿಸಲಾಗಿದೆ. ಇದರಲ್ಲಿ ತಾನು ಇದ್ದೆ ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮಹಿಳೆ ತಿಳಿಸಿದ್ದು, ಇದು ಭಾರಿ ವೈರಲ್ (Viral Video) ಆಗಿದೆ.

ಮಾನ್ಯವಾದ ಇ-ವೀಸಾ, ದಾಖಲೆಗಳು ಇದ್ದರು ಕೂಡ ಅರ್ಮೇನಿಯಾದ ಸಡಖ್ಲೋ ಗಡಿಯಿಂದ ಜಾರ್ಜಿಯಾಕ್ಕೆ ಪ್ರವೇಶಿಸಲು ಪ್ರಯತ್ನಿಸುವಾಗ 56 ಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಈ ಕುರಿತು ಭಾರತೀಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಗಡಿಯಲ್ಲಿ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಯಾವುದೇ ರೀತಿಯ ಸಂವಹನವನ್ನು ಮಾಡಲು ಬಿಡದೆ ಗಂಟೆಗಟ್ಟಲೆ ದಾರಿಯಲ್ಲಿ ಕಾಯುವಂತೆ ಮಾಡಲಾಯಿತು ಎಂದು ಅವರು ದೂರಿದ್ದಾರೆ. ಅರ್ಮೇನಿಯಾದಿಂದ ಸಡಖ್ಲೋ ಗಡಿಯ ಮೂಲಕ ಜಾರ್ಜಿಯಾ ಪ್ರವೇಶಿಸಿದ ಭಾರತೀಯರಿಗೆ ಆಹಾರ ನೀಡದೆ, ಶೌಚಾಲಯದ ವ್ಯವಸ್ಥೆ ಇಲ್ಲದೆ ಐದು ಗಂಟೆಗಳಿಗಿಂತ ಹೆಚ್ಚು ಕಾಲ ಶೀತ ವಾತಾವರಣದಲ್ಲಿ ಕಾಯಿಸಲಾಯಿತು. ನಮ್ಮ ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾಯುವಂತೆ ಮಾಡಿದರು ಎಂದು ಅವರು ಹೇಳಿದ್ದಾರೆ.

ʼʼನಮ್ಮನ್ನು ದನಗಳಂತೆ ಫುಟ್‌ಪಾತ್‌ನಲ್ಲಿ ಕುಳಿತುಕೊಳ್ಳಲು ಒತ್ತಾಯಿಸಲಾಗಿದೆ. ಅಪರಾಧಿಗಳಂತೆ ನಡೆಸಿಕೊಂಡರು. ನಮ್ಮ ಕ್ಯಾಮರಾ ಪಡೆದು ನಾವು ಯಾವುದೇ ರೀತಿಯ ಚಿತ್ರೀಕರಣ ಮಾಡದಂತೆ ತಡೆದರು. ನಮ್ಮ ದಾಖಲೆಗಳನ್ನು ಕೂಡ ಪರಿಶೀಲಿಸಲಿಲ್ಲ, ವೀಸಾಗಳು ಸುಳ್ಳು ಎಂದು ಹೇಳಿಕೊಂಡರುʼʼ ಎಂಬುದಾಗಿ ಅವರು ವಿವರಿಸಿದ್ದಾರೆ.



ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಟ್ಯಾಗ್ ಮಾಡಿರುವ ಅವರು, ಜಾರ್ಜಿಯಾ ಭಾರತೀಯರನ್ನು ಹೀಗೆ ನಡೆಸಿಕೊಳ್ಳುತ್ತಾರೆ. ನಾಚಿಕೆಗೇಡಿನ ಮತ್ತು ಸ್ವೀಕಾರಾರ್ಹವಲ್ಲದ ವರ್ತನೆ ಎಂದು ತಿಳಿಸಿದ್ದಾರೆ.

ಮಹಿಳೆಯ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ವ್ಯಕ್ತಿಯೊಬ್ಬರು, ಜಾರ್ಜಿಯನ್ ಅಧಿಕಾರಿಗಳು ತುಂಬಾ ಅವಮಾನಕರ ಮತ್ತು ತುಂಬಾ ಅಸಭ್ಯ ಎಂದು ತಿಳಿಸಿದ್ದಾರೆ.

ಇವರೊಂದಿಗೆ ಇನ್ನು ಅನೇಕರು ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ, ಈ ವಾರ ಜಾರ್ಜಿಯನ್ ಅಧಿಕಾರಿಗಳು ಭಾರತೀಯರನ್ನು ಕೆಟ್ಟದಾಗಿ ನಡೆಸಿಕೊಂಡ ಬಗ್ಗೆ ನಾನು ಕಂಡ ಎರಡನೇ ಘಟನೆ ಇದು ಎಂದು ತಿಳಿಸಿದ್ದಾರೆ.

ಇನ್ನೊಬ್ಬರು 2019ರ ತಮ್ಮ ಅನುಭವವನ್ನು ಹಂಚಿಕೊಂಡು, ಜಾರ್ಜಿಯಾಕ್ಕೆ ಹೋಗುವ ಮೊದಲು ನಾನು ಈ ರೀತಿಯ ಕಥೆಗಳನ್ನು ಕೇಳಿದ್ದೆ. ಆದರೆ ಅಲ್ಲಿಗೆ ಬಂದಾಗ ಅವರು ನನ್ನನ್ನು ಕ್ರಿಮಿನಲ್ ನಂತೆ ನಡೆಸಿಕೊಂಡರು. ಅದೃಷ್ಟವಶಾತ್ ನನಗೆ ಪ್ರವೇಶವನ್ನು ನೀಡಿದರು. ವಿಮಾನ ನಿಲ್ದಾಣದಲ್ಲಿ ನನ್ನ ಜಾರ್ಜಿಯನ್ ಕಲಾವಿದ ಸ್ನೇಹಿತರು ಇದ್ದರು. ಅವರು ಅತ್ಯಂತ ಕಾಳಜಿಯಿಂದ ನೋಡಿಕೊಂಡರು ಎಂದು ತಿಳಿಸಿದ್ದಾರೆ.

ಮತ್ತೊಬ್ಬರು ನಾನು 60ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದೇನೆ. ಆದರೆ ನನಗೆ ಹೆಚ್ಚು ಕಷ್ಟದ ಅನುಭವವಾಗಿರುವುದು ಜಾರ್ಜಿಯಾದಲ್ಲಿ. ಇಲ್ಲಿ ಅನೇಕ ಭಾರತೀಯರನ್ನು ಗಡೀಪಾರು ಮಾಡಲಾಗಿದೆ ಎಂದು ಕೇಳಿದ್ದೇನೆ. ಇಲ್ಲಿಗೆ ಹೋಗುವವರು ಕೆಟ್ಟ ಅನುಭವ ಪಡೆಯಲು ಸಿದ್ಧರಾಗಿರಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Farmers Protest: ಕಲಬುರಗಿಯಲ್ಲಿ ಸಿಎಂಗೆ ಮುತ್ತಿಗೆ ಎಚ್ಚರಿಕೆ ನೀಡಿದ ರೈತ ಮುಖಂಡರ ಬಂಧನ

ಇನ್ನೊಬ್ಬರು ಭಾರತೀಯ ಮತ್ತು ಪಾಕಿಸ್ತಾನಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಕೆಲವು ದೇಶಗಳಲ್ಲಿ ಗಡೀಪಾರು ಮಾಡುವಿಕೆ ತೀವ್ರವಾಗಿ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದಾರೆ. ಕತಾರ್‌ನಿಂದ ಜಾರ್ಜಿಯಾದಲ್ಲಿ ಅಧ್ಯಯನ ಮಾಡಲು ಸ್ಥಳಾಂತರಗೊಂಡ ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿಯನ್ನು ಆತನ ಮೈಬಣ್ಣದ ಕಾರಣದಿಂದ ಕೈಗಳಿಗೆ ಕೋಳ ಹಾಕಿ, ದೈಹಿಕವಾಗಿ ಹಲ್ಲೆ ನಡೆಸಿ ಯಾವುದೇ ಕಾರಣವಿಲ್ಲದೆ ಗಡೀಪಾರು ಮಾಡಲಾಯಿತು ಎಂದು ತಾಯಿಯೊಬ್ಬರು ಹೇಳಿಕೊಂಡಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author