ನವದೆಹಲಿ: ಸಸ್ಯಾಹಾರಿಗಳಿಗೆ ಪ್ರೊಟೀನ್ ಸಾಲುವುದಿಲ್ಲ ಎಂಬ ದೂರು ಸಾಮಾನ್ಯ. ನಿಯಮಿತ ವಾಗಿ ಪನೀರ್, ತೋಫು (Soya Milk Tofu) ಸೇವನೆಯನ್ನು ರೂಢಿಸಿಕೊಂಡರೆ ಸಸ್ಯಾಹಾರಿಗಳೂ ಪ್ರೊಟೀನ್ ಕೊರತೆ ಯನ್ನು ನೀಗಿಸಿಕೊಳ್ಳಬಹುದು. ಸೋಯಾ ಹಾಲಿನಿಂದ ತಯಾರಾಗುವ, ನೋಡುವುದಕ್ಕೆ ಪನೀರ್ ನಂತೆಯೇ ಕಾಣುವ, ತೋಫು ಈಗ ಮೊದಲಿನಷ್ಟು ಅಪರಿಚಿತವಲ್ಲ. ಇದೊಂದು ಸಂಪೂರ್ಣ ಪ್ರೊಟೀನ್ ಆಹಾರ ಎಂಬುದು ಪ್ರಚಾರ ಪಡೆಯುತ್ತಿದೆ. ರುಚಿಯಲ್ಲಿ ಪನೀರ್‌ನಂತೆ ಅಲ್ಲವಾದರೂ, ಅಂತೆಯೇ ಬಳಕೆ ಮಾಡಬಹುದು. ಅರ್ಧ ಕಪ್ ತೋಫುವಿನಲ್ಲಿ 181 ಕ್ಯಾಲೊರಿಗಳು, 21.8ಗ್ರಾಂನಷ್ಟು ಪ್ರೊಟೀನ್, 11ಗ್ರಾಂ ಕೊಬ್ಬು ಪ್ರಮುಖವಾಗಿ ದೊರೆಯುತ್ತದೆ. ಇದರಲ್ಲಿ ಅಗತ್ಯವಾದ ಎಲ್ಲ 9 ಅಮೈನೊ ಆಮ್ಲಗಳು ಸಮೃದ್ಧವಾಗಿ ದೊರೆಯುತ್ತವೆ. ಸ್ನಾಯುಗಳ ದುರಸ್ತಿ ಮಾಡಿ, ಬೆಳವಣಿಗೆಗೆ ಅಗತ್ಯವಾದಂಥ ಸಂಪೂರ್ಣ ಪ್ರೊಟೀನ್ ತೋಫುವಿನಲ್ಲಿ ದೊರೆ ಯುತ್ತದೆ.
ಹೇಗೆ ಮಾಡುವುದು?: ನಮಗೆ ಪನೀರ್ ಮಾಡುವುದು ಗೊತ್ತು. ಆದರೆ ತೋಫು ಮಾಡುವುದು ಹೇಗೆ? ಮನೆಯಲ್ಲೇ ಮಾಡಿ ಕೊಳ್ಳಲು ಸಾಧ್ಯವೇ? ಅಂಗಡಿಯಿಂದ ತರುವುದಕ್ಕೆ ಏನೆಲ್ಲಾ ಮಿಶ್ರ ಮಾಡಿರುತ್ತಾರೊ ಎಂದು ಕಳವಳಿಸುವವರಿರುತ್ತಾರೆ. ನಾವೇ ಮನೆಯಲ್ಲಿ ಮಾಡಿಕೊಳ್ಳು ವುದಾದರೆ ತೋಫು ಮಾಡುವುದು ಹೇಗೆ? ಇದನ್ನು ಹಂತ-ಹಂತವಾಗಿ ಇಲ್ಲಿ ವಿವರಿಸಲಾಗಿದೆ.
ಬೇಕಾಗುವ ವಸ್ತುಗಳು: ಒಣಗಿದ ಸೋಯಾ ಕಾಳುಗಳು- 2 ಕಪ್, ನೀರು- 10 ಕಪ್, ವಿನೇಗರ್ ಅಥವಾ ನಿಂಬೆರಸ- 3ದೊಡ್ಡ ಚಮಚ
ವಿಧಾನ: ಸುಮಾರು 10-12 ತಾಸುಗಳಷ್ಟು ಕಾಲ ಸೋಯಾ ಕಾಳುಗಳನ್ನು ನೆನೆಸಿಡಿ. ಅವು ಉಬ್ಬಿ ದಂತಾಗಿ ಇರುವ ಗಾತ್ರಕ್ಕೆ ದುಪ್ಪಟ್ಟಾಗುತ್ತವೆ. ಅದನ್ನು ನೆನೆಸಿದ ನೀರನ್ನು ಚೆಲ್ಲಿ, ಕಾಳು ಗಳನ್ನು ಚೆನ್ನಾಗಿ ತೊಳೆಯಿರಿ. ಇದಕ್ಕೆ ಒಂದೊಂದೇ ಕಪ್ ನೀರು ಹಾಕುತ್ತಾ ಮಿಕ್ಸಿಯಲ್ಲಿ ರುಬ್ಬುತ್ತಾ ಬನ್ನಿ. ಸಣ್ಣ ಗ್ರೈಂಡರ್ ಇದ್ದರೆ, ಅದನ್ನೂ ಉಪಯೋಗಿಸಬಹುದು. ಇದಿಷ್ಟೂ ಕಾಳು ಗಳು ನಯವಾದ ಪೇಸ್ಟ್ ಆಗಿ, ಹಾಲಿನಂತಾಗುವುದಕ್ಕೆ ಸುಮಾರು 8- 10 ಕಪ್‌ಗಳಷ್ಟು ನೀರು ಬೇಕಾಗುತ್ತದೆ.
ಈ ಹಾಲನ್ನು ಅಗಲ ಬಾಯಿಯ ಕಡಾಯಿಗೆ ಹಾಕಿ ಕುದಿ ಯುವುದಕ್ಕೆ ಇಡಿ. ಆಗಾಗ ಕೈಯಾಡಿ ಸದಿದ್ದರೆ ತಳ ಸೀದು ಹೋಗಬಹುದು. ಕುದಿಯಲು ಪ್ರಾರಂಭಿಸಿದ 10 ನಿಮಿಷಗಳ ನಂತರ, ಇದನ್ನು ತೆಳುವಾದ ಮಲ್ಲಿನಂಥ ಬಟ್ಟೆಗೆ ಹಾಕಿ ಶೋಧಿಸಿಕೊಳ್ಳಿ. ಇದರಿಂದ ಸೋಯಾ ಕಾಳು ಗಳ ಪಲ್ಪ್ ಬೇರೆ ಯಾಗುತ್ತದೆ. ಬಿಳಿ ಬಣ್ಣದ ದ್ರವ ಮಾತ್ರವೇ ಉಳಿದುಕೊಳ್ಳುತ್ತದೆ. ಇದನ್ನೇ ಸೋಯಾ ಹಾಲು ಎಂದು ಕರೆಯಲಾಗುತ್ತದೆ. ಪಲ್ಪ್‌ನಲ್ಲಿ ಉಳಿದ ಹಾಲನ್ನು ಸಹ ಹಿಂಡಿ ತೆಗೆದುಕೊಳ್ಳಿ. ಹೀಗೆ ಶೋಧಿಸಿ ತೆಗೆದ ಹಾಲನ್ನು ಮತ್ತೆ ಉರಿಯಲ್ಲಿಡಿ. ಆದರೆ ಕುದಿಯಲು ಪ್ರಾರಂಭಿಸುವ ಮುನ್ನವೇ ಇದಕ್ಕೆ ವಿನೇಗರ್ ಅಥವಾ ನಿಂಬೆ ರಸ ಸೇರಿಸಿ. ಚೆನ್ನಾಗಿ ಕೈಯಾ ಡಿಸಿ, ಉರಿಯಿಂದ ಪಾತ್ರೆಯನ್ನು ತೆಗೆಯಿರಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಈಗ ಪನೀರ್ ಮಾಡುವುದಕ್ಕೆ ಹಾಲು ಒಡೆಸಿದಂತೆಯೇ ಸೋಯಾ ಹಾಲು ಸಹ ಒಡೆದು ನೀರು ಪ್ರತ್ಯೇಕವಾಗಿರುತ್ತದೆ. ಇದರ ನೀರು ತೆಗೆಯುವುದಕ್ಕೆ ಬಟ್ಟೆಯಲ್ಲಿ ಕಟ್ಟಿ ನೇತಾಡಿಸಬಹುದು ಅಥವಾ ಇತರ ಯಾವುದೇ ಕ್ರಮ ಸೂಕ್ತವಾಗಿದ್ದಲ್ಲಿ ಅನುಸರಿಸಬಹುದು. ನಂತರ ಥೇಟ್ ಪನೀರ್ ನಂತೆಯೇ ತಟ್ಟೆಯಲ್ಲಿ ಹರವಿ, ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬಹುದು. ಮನೆಯಲ್ಲೇ ಮಾಡಿದ ತೋಫು ಈಗ ಸಿದ್ಧ. ಇದು ಹಲವು ರೀತಿಯಲ್ಲಿ ದೇಹಕ್ಕೆ ಉಪಕಾರಿ.
ಲಾಭವೇನು?: ತೋಫುವಿನಲ್ಲಿ ಸಾಕಷ್ಟು ನಾರಿನಂಶವಿದೆ. ಇದು ಮಲಬದ್ಧತೆಯ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ, ನಾರು ಹೆಚ್ಚಿರುವ ಆಹಾರಗಳಿಂದ ಜೀರ್ಣಾಂಗ ಗಳ ಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಬಹುದು. ಇದಲ್ಲದೆ, ಕೆಲವು ಬಗೆಯ ತೋಫುಗಳ ತಯಾರಿಕೆಯ ಪ್ರಕ್ರಿಯೆಯಲ್ಲಿ ಒಂದಿಷ್ಟು ಪ್ರೊಬಯಾಟಿಕ್ ಬ್ಯಾಕ್ಟೀರಿಯಗಳು ಸೇರಿಕೊಳ್ಳುತ್ತವೆ. ಈ ಎಲ್ಲದರಿಂದ ಜೀರ್ಣಾಂಗಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ.
ಇದನ್ನು ಓದಿ:Health Tips: ಹಬ್ಬದ ಸಿಹಿ ಇಷ್ಟವೇ? ಹಲ್ಲುಗಳಿಗೆ ಕಷ್ಟವಾಗಬಹುದು!
ತೋಫುವಿನ ಗ್ಲೈಸೆಮಿಕ್ ಸೂಚಿ ಕಡಿಮೆಯಿದೆ. ಅಂದರೆ ರಕ್ತದಲ್ಲಿರುವ ಸಕ್ಕರೆಯಂಶ ದಿಢೀರ್ ಏರಿಕೆಯಾಗಲು ಇದು ಅವಕಾಶ ನೀಡುವುದಿಲ್ಲ. ದೇಹದ ಚಯಾಪಚಯವನ್ನು ಹೆಚ್ಚಿಸುವ ಇದು, ನಾರು ಮತ್ತು ಪ್ರೊಟೀನನ್ನು ಸಾಂದ್ರವಾಗಿ ಹೊಂದಿದೆ. ಕಡಿಮೆ ಕ್ಯಾಲರಿ ಮತ್ತು ಹೆಚ್ಚು ಪ್ರೊಟೀನ್ ಹೊಂದಿರುವ ಕಾರಣದಿಂದ, ತೂಕ ಇಳಿಸುವವರಿಗೆ ಹೇಳಿ ಮಾಡಿಸಿದ ಆಹಾರವಿದು. ಮೂಳೆಗಳ ಸಾಂದ್ರತೆಯ ರಕ್ಷಣೆಗೆ ಮತ್ತು ಆಸ್ಟಿಯೊಪೊರೊಸಿಸ್ ಇರುವಂಥವರಿಗೆ ಇದು ಒಳ್ಳೆಯ ಆಹಾರ. ಜೊತೆಗೆ, ಋತುಬಂಧದ ಸಮೀಪದಲ್ಲಿರುವವರು, ಯಾವುದೇ ರೀತಿಯ ಕ್ಯಾಲ್ಶಿಯಂ ಕೊರತೆ ಇರು ವವರಿಗೂ ಇದು ಸೂಕ್ತ. ಮಿತ ಪ್ರಮಾಣದಲ್ಲಿ ಎಲ್ಲರೂ ಇದನ್ನು ಸೇವಿಸುವುದು ಒಳ್ಳೆಯದೆ.