ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದಲ್ಲಿ ಜೀವನ ಶೈಲಿಯಲ್ಲಿ ಬದಲಾವಣೆ ಮತ್ತು ಹೃದಯ ವೈಫಲ್ಯ ಹೆಚ್ಚಳ: ನೀವು ತಿಳಿದಿರಬೇಕಾದ ಸಂಗತಿಗಳು

ಹೃದಯ ವೈಫಲ್ಯದ ಪ್ರಕರಣಗಳು ಭಾರತದಲ್ಲಿ ಪ್ರತಿ ವರ್ಷ 5 ಲಕ್ಷದಿಂದ 18 ಲಕ್ಷದವರೆಗೆ ವರದಿ ಯಾಗುತ್ತಿವೆ. ಹೃದಯ ವೈಫಲ್ಯಕ್ಕೆ ತುತ್ತಾಗುತ್ತಿರುವ ಜನ ಅತಿಹೆಚ್ಚಿನ ಸಂಖ್ಯೆಯಲ್ಲಿ ಇರುವ ದೇಶಗಳ ಸಾಲಿನಲ್ಲಿ ಭಾರತ ಕೂಡ ಒಂದು. ಹೃದಯ ವೈಫಲ್ಯದ ಪ್ರಕರಣಗಳು ಈ ರೀತಿ ಹೆಚ್ಚಾಗು ತ್ತಿರುವುದಕ್ಕೂ ಕಳೆದ ಕೆಲವು ದಶಕಗಳಲ್ಲಿ ನಮ್ಮ ಜೀವನ ಶೈಲಿಯು ಬದಲಾವಣೆ ಕಂಡಿರುವ ಬಗೆಗೂ ನೇರವಾದ ಸಂಬಂಧ ಇದೆ.

ಡಾ. ಪ್ರಭಾಕರ ಸಿ. ಕೊರೆಗೋಳ್‌, ಹೃದ್ರೋಗತಜ್ಞ, ಫೋರ್ಟಿಸ್‌ ಆಸ್ಪತ್ರೆ, ಬೆಂಗಳೂರು

ಧೈರ್ಯ, ಪ್ರೀತಿ ಮತ್ತು ಅನುಕಂಪದ ಬಗ್ಗೆ ನಾವು ಮಾತನಾಡುವಾಗಲೆಲ್ಲ ಹೃದಯದ ಬಗ್ಗೆ ಉಲ್ಲೇಖ ಬರುತ್ತದೆ. ನಮ್ಮ ಕಾಳಜಿಯನ್ನು ತೋರಿಸಲು ನಾವು ಹೃದಯದ ಆಕಾರದ ಇಮೊಜಿ ಗಳನ್ನು ಕಳುಹಿಸುತ್ತೇವೆ. ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ʼಹೃದಯದ ಮಾತು ಕೇಳಿದೆʼ ಎಂಬ ಮಾತು ಆಡುತ್ತೇವೆ.

ಆದರೆ ಸಾಂಕೇತಿಕವಾಗಿ ಇರುವ ಇವುಗಳೆಲ್ಲದರ ಆಚೆಗೆ ನಿಜವಾದ, ಭೌತಿಕವಾದ ಹೃದಯ ಇದೆ. ನಾವು ಹೃದಯಕ್ಕೆ ಅದೆಷ್ಟು ಭಾವನೆಗಳನ್ನು ಜೋಡಿಸುತ್ತೇವೆಯೋ ಅಷ್ಟರಮಟ್ಟಿಗೆ ಆರೈಕೆಯನ್ನು ಕೇಳುವ ಒಂದು ಅಂಗ ಇದು. ನಮ್ಮನ್ನು ಜೀವಂತವಾಗಿ ಇರಿಸುವ ಪಂಪ್‌ ಇದು, ನಮ್ಮ ದೇಹದ ಪ್ರತಿ ಮೂಲೆಗೂ ರಕ್ತ ಮತ್ತು ಆಮ್ಲಜನಕವನ್ನು ಪೂರೈಕೆ ಮಾಡುತ್ತಿರುತ್ತದೆ ಇದು.

ಆದರೆ ಈ ಪ್ರಮುಖ ಕೆಲಸದಲ್ಲಿ ಅಡಚಣೆ ಉಂಟಾದಾಗ, ಹೃದಯ ವೈಫಲ್ಯಕ್ಕೆ ಅದು ದಾರಿ ಮಾಡಿಕೊಡುತ್ತದೆ. ಹೃದಯ ವೈಫಲ್ಯ ಅಂದರೆ ಅದು ದೀರ್ಘಾವಧಿಯಿಂದ ಇರುವ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಹೃದಯವು ಕೆಲಸ ಮಾಡುತ್ತಿರುತ್ತದೆಯಾದರೂ, ಅದಕ್ಕೆ ದೇಹದ ಅಗತ್ಯಗಳಿಗೆ ಅನುಗುಣವಾಗಿ ರಕ್ತವನ್ನು ಪಂಪ್‌ ಮಾಡಲು ಆಗುವುದಿಲ್ಲ.

ಹೃದಯ ವೈಫಲ್ಯದ ಪ್ರಕರಣಗಳು ಭಾರತದಲ್ಲಿ ಪ್ರತಿ ವರ್ಷ 5 ಲಕ್ಷದಿಂದ 18 ಲಕ್ಷದವರೆಗೆ ವರದಿಯಾಗುತ್ತಿವೆ. ಹೃದಯ ವೈಫಲ್ಯಕ್ಕೆ ತುತ್ತಾಗುತ್ತಿರುವ ಜನ ಅತಿಹೆಚ್ಚಿನ ಸಂಖ್ಯೆಯಲ್ಲಿ ಇರುವ ದೇಶಗಳ ಸಾಲಿನಲ್ಲಿ ಭಾರತ ಕೂಡ ಒಂದು. ಹೃದಯ ವೈಫಲ್ಯದ ಪ್ರಕರಣಗಳು ಈ ರೀತಿ ಹೆಚ್ಚಾಗು ತ್ತಿರುವುದಕ್ಕೂ ಕಳೆದ ಕೆಲವು ದಶಕಗಳಲ್ಲಿ ನಮ್ಮ ಜೀವನ ಶೈಲಿಯು ಬದಲಾವಣೆ ಕಂಡಿರುವ ಬಗೆಗೂ ನೇರವಾದ ಸಂಬಂಧ ಇದೆ.

ಇದನ್ನೂ ಓದಿ: Heart Attack: ಕಾರ್‌ನಲ್ಲಿದ್ದಾಗಲೇ ಹೃದಯಾಘಾತ; ಬೆಂಗಳೂರು ಮೂಲದ ಸೇನಾಧಿಕಾರಿ ಸಾವು

ಸೂಕ್ತವಾದ ವ್ಯಾಯಾಮ, ದೈಹಿಕ ಕೆಲಸ ಇಲ್ಲದ ಜೀವನಶೈಲಿ, ಅತಿಯಾದ ಒತ್ತಡ ಮತ್ತು ಅನಾರೋಗ್ಯಕರವಾದ ಆಹಾರ ಸೇವನೆ ನಮ್ಮಲ್ಲಿ ತೀರಾ ಸಾಮಾನ್ಯವಾಗಿದೆ. ಹೀಗಾಗಿ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಾದ ಬೊಜ್ಜು, ಅತಿಯಾದ ಏರೊತ್ತಡ, ಮಧುಮೇಹ ಕೂಡ ಹೆಚ್ಚಾಗು ತ್ತಿವೆ. ಇವೆಲ್ಲವೂ ಹೃದಯ ವೈಫಲ್ಯದ ಅಪಾಯ ಎದುರಾಗುವ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚುಮಾಡುತ್ತವೆ.

ಅದರಲ್ಲೂ ಮುಖ್ಯವಾಗಿ, ಮಧುಮೇಹ ಹಾಗೂ ಹೃದಯ ವೈಫಲ್ಯದ ನಡುವಿನ ಸಂಬಂಧವು ಕಳವಳ ಮೂಡಿಸುವಂಥದ್ದು. ಮಧುಮೇಹದ ಸಮಸ್ಯೆ ಇರುವವರು ಹೃದಯ ವೈಫಲ್ಯಕ್ಕೆ ತುತ್ತಾಗುವ ಸಂಭವನೀಯತೆಯು, ಮಧುಮೇಹದ ಸಮಸ್ಯೆ ಇಲ್ಲದಿರುವವರಿಗಿಂತ ಹೆಚ್ಚು. ಹಲವು ಪ್ರಕರಣಗಳಲ್ಲಿ ಮಧುಮೇಹವು ಅವರಲ್ಲಿ ಕಾಣಿಸಿಕೊಳ್ಳುವ ಹೃದಯ ಹಾಗೂ ರಕ್ತನಾಳ ಸಂಬಂಧಿ ಮೊದಲ ಸಮಸ್ಯೆ ಕೂಡ ಆಗಬಹುದು. ಮಧುಮೇಹವು ಹೃದಯದ ಮೇಲೆ ಹಲವು ಬಗೆಗಳಲ್ಲಿ ಪರಿಣಾಮ ಉಂಟುಮಾಡುತ್ತದೆ. ಮಧುಮೇಹವು ರಕ್ತನಾಳಗಳನ್ನು ಬಿಗಿಗೊಳಿಸುತ್ತದೆ, ಅವುಗಳ ಉರಿಯೂತಕ್ಕೆ ಕಾರಣವಾಗುತ್ತದೆ. ಜೀವಕೋಶಗಳು ತಮ್ಮನ್ನು ತಾವು ಸರಿಪಡಿಸಿಕೊಳ್ಳುವ ಸಹಜ ಪ್ರಕ್ರಿಯೆಯನ್ನು ಹಾಳು ಮಾಡುತ್ತದೆ, ಹೃದಯದ ಸ್ನಾಯುಗಳ ಕೆಲಸವನ್ನು ದುರ್ಬಲ ಗೊಳಿಸುತ್ತದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಿದಂತೆಲ್ಲ, ಹೃದಯ ವೈಫಲ್ಯದ ಸಮಸ್ಯೆಯೂ ಹೆಚ್ಚಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. 20245ರ ವೇಳೆಗೆ ಭಾರತದಲ್ಲಿ 12.5 ಕೋಟಿ ಮಂದಿಗೆ ಮಧುಮೇಹ ಕಾಡಲಿದೆ ಎಂಬ ಅಂದಾಜು ಇದೆ.

ಅದೇ ರೀತಿ, ಅತಿಯಾದ ರಕ್ತದ ಏರೊತ್ತಡದ ಸಮಸ್ಯೆಯು ಆ ಸಮಸ್ಯೆ ಇರುವ ವ್ಯಕ್ತಿಗಳ ಹೃದಯದ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಸ್ನಾಯು ಒಂದು ದಿನ ಕೆಲಸ ಮಾಡಲು ಸಾಧ್ಯವಾಗದೆ ಕೈಚೆಲ್ಲುತ್ತದೆ. ಭಾರತದಲ್ಲಿ ಹಿರಿಯ ವಯಸ್ಕರಲ್ಲಿ 50 ಶೇಕಡ ಮಂದಿ ರಕ್ತದ ಏರೊತ್ತಡದ ಸಮಸ್ಯೆ ಎದುರಿಸುತ್ತಿದ್ದಾರೆ. ದೀರ್ಘಾವಧಿಯ ರಕ್ತದ ಏರೊತ್ತಡವು ಕೊನೆಯಲ್ಲಿ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ.

ಹೃದಯ ವೈಫಲ್ಯದ ಸಮಸ್ಯೆಯು ಕಾಲ ಸರಿದಂತೆಲ್ಲ ಹೆಚ್ಚು ತೀವ್ರವಾಗುತ್ತದೆ. ಇದು ಕ್ರಮೇಣ ತೀವ್ರವಾಗುವ ಖಾಯಿಲೆ. ಹೀಗಾಗಿ ಇದು ಭಾರತದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುವವರಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುತ್ತಿದೆ. ಹೃದಯ ವೈಫಲ್ಯ ದಿಂದ ಆಸ್ಪತ್ರೆಗೆ ದಾಖಲಾದ ನಂತರದಲ್ಲಿ ಸಾವನ್ನಪ್ಪುವ ಸಾಧ್ಯತೆಯು ಆರು ಪಟ್ಟು ಹೆಚ್ಚಿರುತ್ತದೆ.

ಹೃದಯದ ವೈಫಲ್ಯ ಹಾಗೂ ಅದರ ವ್ಯಾಪಕತೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಉಸಿರಾಡಲು ಸಮಸ್ಯೆ ಆಗುವುದು, ಹಿಮ್ಮಡಿಯ ಊತ, ವ್ಯಾಯಾಮ ಮಾಡಲು ಕಷ್ಟವಾಗುವುದು, ಸುಸ್ತು, ವ್ಯಾಯಾಮ ಮಾಡಿದ ನಂತರ ಸುಸ್ತು ಕಡಿಮೆ ಆಗಲು ಬಹಳ ಹೊತ್ತು ಬೇಕಾಗುವುದು, ಹಸಿವು ಇಲ್ಲದಿರುವುದು, ಹೊಟ್ಟೆ ತೊಳಸುವುದು, ಹೃದಯದ ಬಡಿತ ಹೆಚ್ಚಾಗುವುದು,  ದೇಹದಲ್ಲಿ ದ್ರವದ ಅಂಶ ಹೆಚ್ಚಾಗಿ ತೂಕ ಜಾಸ್ತಿ ಆಗುವುದು, ತಲೆ ಸುತ್ತುವುದು ಮುಂತಾದ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿದರೆ ಬಹಳಷ್ಟು ಬದಲಾವಣೆ ಗಳನ್ನು ತಂದುಕೊಳ್ಳಲು ಆಗುತ್ತದೆ.

ಸಮಸ್ಯೆಯನ್ನು ಗುರುತಿಸಿ ಆದ ನಂತರದಲ್ಲಿ, ಹೃದಯ ವೈಫಲ್ಯದ ಸಮಸ್ಯೆಯನ್ನು ನಿಭಾಯಿಸಲು ಆಗುತ್ತದೆ. ಆ ಸಮಸ್ಯೆಯು ಇನ್ನಷ್ಟು ತೀವ್ರಗೊಳ್ಳುವುದಕ್ಕೆ ಬ್ರೇಕ್‌ ಹಾಕಬಹುದು. ಹೃದಯ ವೈಫಲ್ಯದ ಸಮಸ್ಯೆ ಇರುವವರಿಗೆ ಮತ್ತೆ ಮತ್ತೆ ಆಸ್ಪತ್ರೆಗೆ ದಾಖಲಾಗಬೇಕಾದ ಸಂಭವನೀಯತೆ ಯನ್ನು ಕಡಿಮೆ ಮಾಡಲು, ಸಾವಿನ ಅಪಾಯವನ್ನು ತಗ್ಗಿಸಲು ಅಗತ್ಯವಿರುವ ಆಧುನಿಕ ಚಿಕಿತ್ಸಾ ಕ್ರಮಗಳು ಲಭ್ಯವಿವೆ.

ಇದಲ್ಲದೆ, ಜೀವನಶೈಲಿಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ತಂದುಕೊಳ್ಳಬೇಕು. ನಿಯಮಿತವಾದ ವ್ಯಾಯಾಮ ಇರಬೇಕು, ಆರೋಗ್ಯಕರವಾದ ಆಹಾರ ಸೇವನೆ, ಒತ್ತಡ ನಿರ್ವಹಣೆ, ತಂಬಾಕು ಮತ್ತು ಮದ್ಯಪಾನದಿಂದ ದೂರ ಇರುವುದು, ಮಧುಮೇಹ ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಂದರೆ ಹೃದಯ ವೈಫಲ್ಯದ ಸಮಸ್ಯೆಯನ್ನು ತಡೆಯುವುದಷ್ಟೇ ಅಲ್ಲ ಎಂಬುದನ್ನು ವಿಶ್ವ ಹೃದಯ ದಿನವು ಅರ್ಥ ಮಾಡಿಸಿಕೊಡುತ್ತದೆ. ಆರಂಭಿಕ ಎಚ್ಚರಿಕೆಗಳಿಗೆ ಸ್ಪಂದಿಸಿ, ಸಕಾಲದಲ್ಲಿ ವೈದ್ಯಕೀಯ ನೆರವು ಪಡೆಯಿರಿ, ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ತಂದುಕೊಳ್ಳಿ.