ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಮಲಗುವ ಭಂಗಿ ಹೇಗಿದ್ದರೆ ಒಳ್ಳೆಯದು?

ನಿದ್ರಿಸುವ ಭಂಗಿಯು ನಮ್ಮ ಆರೋಗ್ಯದ ಮೇಲೆ ಮತ್ತು ನಿದ್ರೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲದು. ಅಂಗಾತ ಬಿದ್ದು ಕೊಳ್ಳುವವರು, ಮಗ್ಗುಲಾಗಿ ಮಲಗುವವರು, ಮಗುಚಿ ನಿದ್ರಿಸುವವರು- ಹೀಗೆ ಬಗೆಬಗೆಯ ಭಂಗಿಗಳು ಸುಖ ನಿದ್ರೆಯನ್ನು ತರಿಸಬಹುದು ಅಥವಾ ನಿದ್ರೆಯ ಸುಖವನ್ನೇ ಹಾಳು ಮಾಡಬಹುದು. ಯಾವ ಭಂಗಿಯಲ್ಲಿ ನಿದ್ರಿಸಿದರೆ ಏನು ಲಾಭ ಅಥವಾ ಏನು ನಷ್ಟ?

sleeping position

ನವದೆಹಲಿ: ಕೆಲವೊಂದು ಸಣ್ಣ ವಿಷಯಗಳು ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರಬಲ್ಲವು. ನಿದ್ದೆ (Sleeping) ಎಂಬುದು ನಮ್ಮ ಜೀವನದ ಮೂರರಲ್ಲಿ ಒಂದು ಭಾಗವನ್ನು ಆವರಿಸಿಕೊಂಡಿರುವ ಮಹತ್ವದ ವಿಷಯ. ಇಂಥ ನಿದ್ದೆಯು ಚೆನ್ನಾಗಿರುವುದಕ್ಕೆ ಅಥವಾ ಹಾಳಾಗುವುದಕ್ಕೆ ಹಲವಾರು ವಿಷಯಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ. ಅವುಗಳಲ್ಲಿ ನಾವು ನಿದ್ರೆ ಮಾಡುವ ಭಂಗಿಯೂ ಒಂದು ಎಂಬುದು ಗೊತ್ತೆ? ಹೌದು, ನಿದ್ರಿಸುವ ಭಂಗಿಯು ನಮ್ಮ ಆರೋಗ್ಯ ದ ಮೇಲೆ ಮತ್ತು ನಿದ್ರೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಬಲ್ಲದು. ಅಂಗಾತ ಬಿದ್ದು ಕೊಳ್ಳುವವರು, ಮಗ್ಗುಲಾಗಿ ಮಲಗುವವರು, ಮಗುಚಿ ನಿದ್ರಿಸುವವರು- ಹೀಗೆ ಬಗೆಬಗೆಯ ಭಂಗಿ ಗಳು ಸುಖ ನಿದ್ರೆಯನ್ನು ತರಿಸಬಹುದು ಅಥವಾ ನಿದ್ರೆಯ ಸುಖವನ್ನೇ ಹಾಳು ಮಾಡಬಹುದು. ಯಾವ ಭಂಗಿಯಲ್ಲಿ ನಿದ್ರಿಸಿದರೆ ಏನು ಲಾಭ ಅಥವಾ ಏನು ನಷ್ಟ?

ಅಂಗಾತ ಮಲಗುವುದು: ಈ ಭಂಗಿಯಲ್ಲಿ ಮಲಗುವುದರಿಂದ ತಲೆ, ಕುತ್ತಿಗೆ, ಬೆನ್ನುಗಳನ್ನು ನೇರವಾಗಿ ಒಂದು ರೇಖೆಯಲ್ಲಿ ಇರಿಸಿಕೊಳ್ಳಲು ಸಾಧ್ಯವಿದೆ. ಮಾತ್ರವಲ್ಲ, ಕೀಲುಗಳ ಮೇಲಿನ ಒತ್ತಡವನ್ನೂ ಕಡಿಮೆ ಮಾಡುವುದು ಈ ಭಂಗಿಯಿಂದ ಸಾಧ್ಯ. ಬೆನ್ನು ಹುರಿಯ ಆರೋಗ್ಯಕ್ಕೆ ಈ ಭಂಗಿ ಕ್ಷೇಮ. ಮುಖದ ಮೇಲೆ ಸುಕ್ಕು ಬರುವುದನ್ನೂ ಇದು ಕಡಿಮೆ ಮಾಡುವುದಂತೆ. ಹಾಗಾದರೆ ಸುಖನಿದ್ರೆಗೆ ಎಲ್ಲಕ್ಕಿಂತ ಒಳ್ಳೆಯ ಭಂಗಿ ಇದೇ ಹೌದೇ? ಹಾಗೆನ್ನುವಂತಿಲ್ಲ! ಸ್ಲೀಪ್‌ ಅಪ್ನಿಯ ಇರುವ ವರಿಗೆ ಅಥವಾ ಗೊರೆಯುವವರಿಗೆ ಇದು ಹೇಳಿಸಿದ ಭಂಗಿಯಲ್ಲ. ಗರ್ಭಿಣಿಯರಿಗೆ ಮೊದಲು ನಾಲ್ಕೈದು ತಿಂಗಳ ನಂತರ ಈ ಭಂಗಿ ಸೂಕ್ತವಲ್ಲ. ಇದರಿಂದ ಶಿಶುವಿಗೆ ರಕ್ತ ಸಂಚಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.



ಮಗ್ಗುಲಾಗಿ ಮಲಗುವುದು: ಜೋರಾಗಿ ಗೊರಕೆ ಹೊಡೆದು ಆಚೀಚೆ ಮಲಗಿದವರ ನಿದ್ರೆ ಹಾಳು ಮಾಡುವವರಿಗೆ ಇದು ಅತ್ಯಂತ ಸೂಕ್ತವಾದ ಭಂಗಿ. ಅಂದರೆ ಗೊರಕೆಯನ್ನು ಕಡಿಮೆ ಮಾಡ ಬೇಕೆಂದರೆ ಮಗ್ಗುಲಾಗಿ ಮಲಗುವುದು ನೆರವಾಗುತ್ತದೆ. ಸರಿಯಾದ ರೀತಿಯಲ್ಲಿ ದಿಂಬುಗಳನ್ನು ಆಧರಿಸಿಕೊಂಡರೆ, ಬೆನ್ನು ಹುರಿಯ ತೊಂದರೆಗಳಿಗೂ ನೆರವಾಗಬಲ್ಲದು. ಹೀಗೆ ಮಲಗುವುದರಿಂದ ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಸಾಧ್ಯ. ಹಾಗಾದರೆ ಇದೇ ಎಲ್ಲಕ್ಕಿಂತ ಒಳ್ಳೆಯ ಭಂಗಿಯೇ? ಹಾಗೆನ್ನುವುದು ಕಷ್ಟ! ಕಾರಣ ಎಷ್ಟೋ ವರ್ಷಗಳ ಕಾಲ ಸದಾ ಈ ಭಂಗಿಯನ್ನೇ ಅನುಸರಿ ಸುವುದರಿಂದ ಭುಜ, ಕುತ್ತಿಗೆ ಮತ್ತು ಪೃಷ್ಠಗಳ ಕೀಲುಗಳ ಮೇಲೆ ಒತ್ತಡ ಹೆಚ್ಚಬಹುದು. ಮುಖದ ನೆರಿಗೆಗಳಿಗೂ ಕಾರಣವಾಗಬಹುದು.

ಇದನ್ನು ಓದಿ: Health Tips: ಖಿನ್ನತೆ: ಗುರುತಿಸುವುದು ಹೇಗೆ?

ಯಾವ ಮಗ್ಗುಲು?: ಈ ಗೊಂದಲವೂ ಹೊಸದಲ್ಲ. ಎಡ ಮಗ್ಗುಲು ಸೂಕ್ತವೋ ಬಲದ್ದೋ? ಎಡ ಮಗ್ಗುಲಲ್ಲಿ ಮಲಗಿದಾಗ ಜೀರ್ಣಕ್ರಿಯೆ ಸರಾಗ ಇರುತ್ತದೆ. ಹುಳಿತೇಗು, ಹೊಟ್ಟೆಯುಬ್ಬರದಂಥ ತೊಂದರೆಗಳು ಶಮನವಾಗುತ್ತವೆ. ಗರ್ಭಿಣಿಯರಿಗೂ ಈ ಭಂಗಿ ಸೂಕ್ತವಾಗಿದ್ದು, ರಕ್ತಸಂಚಾರ ಸುಗಮವಾಗುತ್ತದೆ. ಬಲ ಮಗ್ಗುಲಲ್ಲಿ ಮಲಗುವುದರಿಂದ ಹುಳಿತೇಗಿನ ತೊಂದರೆ ಕಂಡು ಬಂದರೆ ಅಚ್ಚರಿಯಿಲ್ಲ. ಅದರಲ್ಲೂ ಹೊಟ್ಟೆ ತುಂಬಿದಾಗ ಬಲಮಗ್ಗಲಲ್ಲಿ ಮಲಗುವುದು ಅಷ್ಟೇನೂ ಹಿತ ಅನಿಸುವುದಿಲ್ಲ. ಜಿಇಆರ್‌ಡಿ ( GERD) ಇರುವವರಿಗಂತೂ ಇದು ಸಾಕಷ್ಟು ತೊಂದರೆ ಕೊಡಬಲ್ಲದು.

ಮಗುಚಿ ಮಲಗುವುದು: ಆದಷ್ಟೂ ಕಡಿಮೆ ಮಾಡಿ. ಕಾರಣ, ಕುತ್ತಿಗೆ ಮತ್ತು ಬೆನ್ನುಹುರಿಯ ಮೇಲೆ ಅತ್ಯಧಿಕ ಒತ್ತಡವನ್ನಿದು ತಂದೊಡ್ಡುತ್ತದೆ. ಗರ್ಭಿಣಿಯರಿಗೆ ಈ ಭಂಗಿ ಹೇಳಿಸಿದ್ದಲ್ಲವೇ ಅಲ್ಲ. ಹಾಗೆಂದು ಮಗುಚಿ ಮಲಗುವುದರಿಂದ ಯಾವುದೇ ಪ್ರಯೋಜನ ಇಲ್ಲವೇ ಇಲ್ಲ ಎಂದು ಹೇಳಿದರೆ, ಅದೂ ಸುಳ್ಳು! ಗೊರಕೆಯ ಜನರಿಗೆ ಇದು ಒಳ್ಳೆಯ ಭಂಗಿ. ಇದರಿಂದ ಬೇಗ ನಿದ್ದೆಯೂ ಬರುತ್ತದೆ. ಇಷ್ಟಾಗಿ ಮಗುಚಿ ಮಲಗದಿದ್ದರೆ ಸುಖ ನಿದ್ದೆ ಬರುವುದಿಲ್ಲ ಎನ್ನುವಂತಿದ್ದರೆ, ಅತಿ ತೆಳುವಾದ ದಿಂಬನ್ನು ಬಳಸಿ ಅಥವಾ ದಿಂಬನ್ನೇ ಬಳಸಬೇಡಿ. ಇದರಿಂದ ಕುತ್ತಿಗೆ ಮತ್ತು ಬೆನ್ನಿನ ಮೇಲಿನ ಒತ್ತಡ ಸ್ವಲ್ಪ ಕಡಿಮೆಯಾಗಬಹುದು.