ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Greater Bengaluru: ಇತಿಹಾಸದ ಪುಟ ಸೇರಿದ ಬಿಬಿಎಂಪಿ, ಇಂದಿನಿಂದ ‘ಗ್ರೇಟರ್‌ ಬೆಂಗಳೂರುʼ‌

ಇಷ್ಟು ದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಎಂದು ಗುರುತಿಸಲ್ಪಡುತ್ತಿದ್ದದ್ದು ಇದೀಗ ಇತಿಹಾಸದ ಪುಟ ಸೇರಲಿದೆ. ಅದಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ನಾಮಫಲಕಗಳು ಮಂಗಳ ವಾರವೇ ಬದಲಾಗಲಿವೆ.

ಬೆಂಗಳೂರು : ಗ್ರೇಟರ್ ಬೆಂಗಳೂರು (Greater Bengaluru) ಪ್ರಾಧಿಕಾರ (GBA) ಆಡಳಿತ ಮಂಗಳವಾರದಿಂದ ಚಾಲನೆಗೆ ಬರುತ್ತಿದ್ದು, ಬಿಬಿಎಂಪಿ (BBMP) ಎಂಬ ಪದ ಬಳಕೆ ಇನ್ನು ಇತಿಹಾಸದ ಪುಟ ಸೇರಲಿದೆ. ಈ ಹಿನ್ನೆಲೆಯಲ್ಲಿ, ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ನಿಯಮ ರೂಪಿಸಿರುವ ರಾಜ್ಯ ಸರ್ಕಾರ (Karnataka government) ಅಧಿಸೂಚನೆ ಪ್ರಕಟಿಸಿದೆ. ಬಿಬಿಎಂಪಿ ಆಡಳಿತ ವ್ಯಾಪ್ತಿಯನ್ನು 5 ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ ಈ ನಗರ ಪಾಲಿಕೆಗಳ ಮೇಲೆ ನಿಗಾ ವಹಿಸಲು ಜಿಬಿಎ ರಚಿಸಲಾಗಿದ್ದು, ಮಂಗಳವಾರದಿಂದ ಬಿಬಿಎಂಪಿ ರದ್ದಾಗಿ ಜಿಬಿಎ ಆಡಳಿತ ಆರಂಭವಾಗಲಿದೆ.

ಹೀಗಾಗಿ ಇಷ್ಟು ದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಎಂದು ಗುರುತಿಸಲ್ಪಡುತ್ತಿದ್ದದ್ದು ಇದೀಗ ಇತಿಹಾಸದ ಪುಟ ಸೇರಲಿದೆ. ಅದಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ನಾಮಫಲಕಗಳು ಮಂಗಳ ವಾರವೇ ಬದಲಾಗಲಿವೆ.

ಅದಕ್ಕೂ ಮುನ್ನ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಲ್ಲಿ ಕೈಗೊಳ್ಳಲಾಗುವ ಚುನಾವಣೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಿ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವವರ ವೆಚ್ಚದ ಮಿತಿಯನ್ನು 5 ಲಕ್ಷ ರು.ಗೆ ನಿಗದಿ, ಚುನಾವಣೆ ನಡೆಯುವ ಸಂದರ್ಭದಲ್ಲಿ ನಕಲಿ ಮತದಾರರ ಕುರಿತಂತೆ ದೂರು ಬಂದಾಗ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಮತ್ತಿತರ ಅಂಶಗಳು ಅಧಿಸೂಚನೆ ಒಳಗೊಂಡಿದೆ.

ಐಎಎಸ್‌, ಐಪಿಎಸ್‌ ಮರುಹಂಚಿಕೆ

ಬಿಬಿಎಂಪಿಗೆ ಮಂಜೂರಾಗಿರುವ ಐಎಎಸ್‌, ಐಪಿಎಸ್‌ ವೃಂದದ ಹುದ್ದೆಗಳನ್ನು ನೂತನವಾಗಿ ರಚನೆಯಾದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಐದು ನಗರ ಪಾಲಿಕೆಗಳಿಗೆ ಮರುಹಂಚಿಕೆ ಮತ್ತು ಪದನಾಮಗಳನ್ನು ಮರುವಿನ್ಯಾಸಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಬಿಬಿಎಂಪಿಗೆ 16 ಐಎಎಸ್‌, 2 ಐಪಿಎಸ್‌ ಹುದ್ದೆಗಳು ಮಂಜೂರು ಮಾಡಲಾಗಿತ್ತು. ಈಗ 15 ಐಎಎಸ್‌ ಹಾಗೂ 2 ಐಪಿಎಸ್‌ ವೃಂದದ ಹುದ್ದೆಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮತ್ತು ಐದು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿ, ಪದನಾಮಗಳನ್ನು ಮರು ವಿನ್ಯಾಸಗೊಳಿಸಿದೆ.

17 ಕೆಎಎಸ್‌ 1 ಕೆಎಸ್‌ಪಿಎಸ್ ಹುದ್ದೆ

ಬಿಬಿಎಂಪಿಗೆ ಮಂಜೂರಾಗಿರುವ 19 ಕರ್ನಾಟಕ ಆಡಳಿತ ಸೇವೆ (ಕೆಎಎಸ್‌) ಹುದ್ದೆಗಳಲ್ಲಿಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಆಯ್ಕೆ ಶ್ರೇಣಿ, ಹಿರಿಯ ಶ್ರೇಣಿ ಹಾಗೂ ಕಿರಿಯ ಶ್ರೇಣಿ ಸೇರಿದಂತೆ ಒಟ್ಟು 17 ಕೆಎಎಸ್‌ ಹಾಗೂ 1 ಕರ್ನಾಟಕ ರಾಜ್ಯ ಪೊಲೀಸ್‌ ಸೇವೆ (ಕೆಎಸ್‌ಪಿಎಸ್‌) ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ. ನೂತನ ಹುದ್ದೆಗಳನ್ನು ಐದು ನಗರ ಪಾಲಿಕೆಗಳ ಕುರಿತು ಹೊರಡಿಸುವ ಅಂತಿಮ ಅಧಿಸೂಚನೆ ದಿನಾಂಕದಿಂದ ಅನ್ವಯವಾಗುವಂತೆ ಹಂಚಿಕೆ ಮಾಡಲಾಗಿದೆ.

ಜಿಬಿಎಗೆ ಆಯ್ಕೆ ಶ್ರೇಣಿಯಲ್ಲಿ ಒಂದು ಉಪ ಆಯುಕ್ತರ ಹುದ್ದೆ (ಆಡಳಿತ, ಚುನಾವಣೆ ಮತ್ತು ಐಟಿ) ಹಾಗೂ ಕಿರಿಯ ಶ್ರೇಣಿಯಲ್ಲಿಸಹಾಯಕ ಆಯುಕ್ತರ ಒಂದು ಹುದ್ದೆಯನ್ನು ಹಂಚಿಕೆ ಮಾಡಲಾಗಿದೆ. ಉಳಿದಂತೆ ಐದು ನಗರ ಪಾಲಿಕೆಗಳಿಗೆ ತಲಾ ಒಂದರಂತೆ ಹೆಧಿಚ್ಚುಧಿವಧಿರಿ ಆಯುಕ್ತರ ಹುದ್ದೆ, ನಗರ ಪಾಲಿಕೆಗಳ ಪ್ರತಿ ಎರಡು ವಲಯಗಳಿಗೆ ತಲಾ ಎರಡು ಹಿರಿಯ ಶ್ರೇಣಿಯ ವಲಯ ಜಂಟಿ ಆಯುಕ್ತರ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಇವೆಲ್ಲವೂ ಕೆಎಎಸ್‌ ವೃಂದದ ಹುದ್ದೆಗಳಾಗಿವೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ)ಕ್ಕೆ ಪ್ರಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಉನ್ನತ ಸ್ಥಾನದ ಐಎಎಸ್‌ ಅಧಿಕಾರಿ ಮುಖ್ಯ ಆಯುಕ್ತರಾಗಲಿದ್ದಾರೆ. ಇನ್ನು, ಆಡಳಿತ, ಕಂದಾಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ, ಆರೋಗ್ಯ ಮತ್ತು ಶಿಕ್ಷಣ, ಎಫ್‌ಇಸಿಸಿ, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಮತ್ತು ಸಮನ್ವಯ ವಿಭಾಗ ಮತ್ತು (ಹಣಕಾಸು) ಹಾಗೂ ಮುಖ್ಯ ಹಣಕಾಸು ವಿಭಾಗದ ಮೇಲ್ವಿಚಾರಣೆಗೆ ನಾಲ್ಕು ವಿಶೇಷ ಆಯುಕ್ತರ ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ.

5 ನಗರ ಪಾಲಿಕೆಗಳು ಎಲ್ಲೆಲ್ಲಿ?

ಹೊಸದಾಗಿ ರಚನೆಯಾದ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ನಗರ ಪಾಲಿಕೆಗಳಿವೆ. ಹಾಲಿ ಬಿಬಿಎಂಪಿಯ ವಲಯಗಳ ಪೈಕಿ ಒಂದಿಷ್ಟು ವಿಸ್ತರಣೆಯಾಗುದೆ. ಒಟ್ಟು 10 ಐಎಎಸ್‌ ವೃಂದದ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರತಿಯೊಂದು ನಗರ ಪಾಲಿಕೆಗೂ ಒಬ್ಬರಂತೆ ಐದು ಆಯುಕ್ತರ ಹುದ್ದೆಗಳನ್ನು ಸೃಜಿಸಲಾಗಿದೆ. ಈ ಹುದ್ದೆಗಳು ಕಾರ್ಯದರ್ಶಿ ಶ್ರೇಣಿ ಐಎಎಸ್‌ ಅಧಿಕಾರಿಗಳಿಗೆ ಮೀಸಲಾಗಿವೆ. ಪ್ರತಿ ನಗರ ಪಾಲಿಕೆಗೆ ಒಬ್ಬರಂತೆ ಹೆಚ್ಚುವರಿ ಆಯುಕ್ತರ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಇವು ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಮೀಸಲಾಗಿವೆ.

ಎರಡು ಐಪಿಎಸ್‌ ಹುದ್ದೆ

ಗ್ರೇಟರ್‌ ಬೆಂಗಳೂರು ಬಿಎಂಟಿಎಫ್‌ ವಿಭಾಗಕ್ಕೆ ಎಡಿಜಿಪಿ ಹಾಗೂ ಎಸ್‌ಪಿ ಹುದ್ದೆ ಹಂಚಿಕೆ ಮಾಡಲಾಗಿದೆ. ಬಿಬಿಎಂಪಿ ವಿಸರ್ಜನೆ ಬಳಿಕ ಹೊಸ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಲು ಈ ಹುದ್ದೆಗಳ ಹಂಚಿಕೆ ಅನಿವಾರ್ಯವಾಗಿತ್ತು. ಸರ್ಕಾರದ ಈ ಆದೇಶವು ಜಿಬಿಎ ಮತ್ತು ನಗರ ಪಾಲಿಕೆಗಳ ಆಡಳಿತಾತ್ಮಕ ಕಾರ್ಯಗಳಿಗೆ ಚಾಲನೆ ನೀಡಿದೆ.

ಇದನ್ನೂ ಓದಿ: Greater Bengaluru Authority: ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ ಸರ್ಕಾರ ಆದೇಶ; ಸಿಎಂ ಸಿದ್ದರಾಮಯ್ಯ ಅಧ್ಯಕ್ಷ, ಡಿಸಿಎಂ ಡಿಕೆಶಿ ಉಪಾಧ್ಯಕ್ಷ

ಹರೀಶ್‌ ಕೇರ

View all posts by this author